Site icon Vistara News

Langya virus | ಕೋವಿಡ್‌ ಬೆನ್ನಿಗೇ ಚೀನಾದಲ್ಲಿ ಹೊಸ ಸೋಂಕು, ಏನಿದರ ಲಕ್ಷಣ?

henipavirus

ಕೋವಿಡ್-19 ಬೇರೆ ಬೇರೆ ರೂಪ ಧರಿಸಿ ಬರುತ್ತಿದೆ. ಮಂಕಿಪಾಕ್ಸ್ ಇತ್ತೀಚೆಗೆ ಕಳವಳ ಉಂಟುಮಾಡುತ್ತಿದೆ. ಇದೆಲ್ಲದರ ನಡುವೆಯೇ ಚೀನಾದಲ್ಲಿ ಹೊಸದೊಂದು ಪ್ರಾಣಿಮೂಲದ ವೈರಸ್ ವರದಿಯಾಗಿದೆ. ಹೆನಿಪಾವೈರಸ್‌ (Henipavirus) ಎಂಬ ಹೆಸರಿನ ಇದು, ಚೀನಾದಲ್ಲಿ ಈಗಾಗಲೇ 35 ಮಂದಿಯನ್ನು ಅಸ್ವಸ್ಥಗೊಳಿಸಿದೆ.

ʼಲಾಂಗ್ಯಾ’ ಎಂದೂ ಕರೆಯಲ್ಪಡುವ ಹೆನಿಪಾವೈರಸ್, ಪೂರ್ವ ಚೀನಾದ ಹೆನಾನ್ ಮತ್ತು ಶಾನ್‌ಡಾಂಗ್ ಪ್ರಾಂತ್ಯಗಳಲ್ಲಿ ಇದುವರೆಗೆ 35 ಜನರಿಗೆ ತಗುಲಿದೆ. ಈ ಪ್ರಾಂತ್ಯಗಳಲ್ಲಿ ಜ್ವರ ರೋಗಿಗಳ ಗಂಟಲಿನ ಮಾದರಿಗಳಲ್ಲಿ ಲಾಂಗ್ಯಾ ವೈರಸ್ ಕಂಡುಬಂದಿದೆ.

ಈ ವೈರಸ್‌, ಮಾರಕ ವೈರಸ್‌ಗಳ ಕುಟುಂಬದಿಂದಲೇ ಬಂದಿದೆ. ಎಷ್ಟು ಮಾರಕ ಎಂದರೆ, ತೀವ್ರ ಸೋಂಕಿನ ಸಂದರ್ಭದಲ್ಲಿ 75% ಮರಣದರ ಹೊಂದಿರುವ ವೈರಸ್‌ಗಳ ಕುಟುಂಬದಿಂದ ಬಂದಿದೆ. ಆದರೂ ಇದುವರೆಗಿನ ಪ್ರಕರಣಗಳಲ್ಲಿ ಯಾವುದೂ ಮಾರಣಾಂತಿಕವಾಗಿಲ್ಲ ಮತ್ತು ಹೆಚ್ಚಿನವು ಸೌಮ್ಯವಾಗಿವೆ. ರೋಗಿಗಳು ಜ್ವರ ತರಹದ ರೋಗಲಕ್ಷಣಗಳಿಂದ ಬಳಲುತ್ತಿದ್ದಾರೆ.

ಲಾಂಗ್ಯಾ ವೈರಸ್‌ಗೆ ಯಾವುದೇ ಲಸಿಕೆ ಅಥವಾ ಚಿಕಿತ್ಸೆ ಲಭ್ಯವಿಲ್ಲ. ಪೋಷಕ ಆರೈಕೆ ಮಾತ್ರ ಇದಕ್ಕೆ ಪರಿಹಾರ.

ವೈರಸ್ ಬಗ್ಗೆ ಗೊತ್ತಿರುವುದೇನು?

2019ರಲ್ಲಿ ಮಾನವರಲ್ಲಿ ಮೊದಲ ಬಾರಿಗೆ ಲಾಂಗ್ಯಾ ವೈರಸ್ ಅನ್ನು ಗುರುತಿಸಲಾಗಿತ್ತು. ಹೆಚ್ಚಿನ ಪ್ರಕರಣಗಳು ವರದಿಯಾಗಿರುವುದು ಈ ವರ್ಷದಲ್ಲೇ ಆಗಿವೆ. ಈ ವೈರಸ್ ಒಬ್ಬ ವ್ಯಕ್ತಿಯಿಂದ ಇನ್ನೊಬ್ಬನಿಗೆ ಹರಡುತ್ತದೆಯೇ ಎಂದು ಕಂಡುಹಿಡಿಯಲು ಚೀನಾದ ತಜ್ಞರು ಪ್ರಯತ್ನಿಸುತ್ತಿದ್ದಾರೆ.

ಬೀಜಿಂಗ್ ಇನ್‌ಸ್ಟಿಟ್ಯೂಟ್ ಆಫ್ ಮೈಕ್ರೋಬಯಾಲಜಿ ಮತ್ತು ಎಪಿಡೆಮಿಯಾಲಜಿ ನೇತೃತ್ವದ ಸಂಶೋಧನೆಯಲ್ಲಿ, 2020ರ ಜನವರಿ ಮತ್ತು ಜುಲೈ ನಡುವಿನ ಕೊರೊನಾ ಸಾಂಕ್ರಾಮಿಕ ರೋಗದ ಅವಧಿಯಲ್ಲಿ ಲಾಂಗ್ಯಾ ವೈರಸ್‌ನ ಯಾವುದೇ ಸೋಂಕುಗಳು ಕಂಡುಬಂದಿರಲಿಲ್ಲ. ಜುಲೈ 2020ರಿಂದ 11 ಲಾಂಗ್ಯಾ ವೈರಸ್ ಪ್ರಕರಣಗಳು ಕಂಡುಬಂದಿವೆ.‌

ಇದನ್ನೂ ಓದಿ: Monkeypox India | ಕೇರಳದಲ್ಲಿ ಭಾರತದ ಮೊದಲ ಮಂಕಿಪಾಕ್ಸ್‌ ಸಾವು

ರೋಗಿಗಳಲ್ಲಿ ವೈರಸ್ ರೋಗಲಕ್ಷಣಗಳನ್ನು ಪರೀಕ್ಷಿಸಿರುವ ಸಂಶೋಧಕರು ಸಾಮಾನ್ಯವಾದ ಜ್ವರದ ಲಕ್ಷಣಗಳನ್ನು ಕಂಡುಕೊಂಡಿದ್ದಾರೆ. ಕೆಮ್ಮು (ಶೇ. 50), ಆಯಾಸ (ಶೇ. 54), ಹಸಿವಿನ ಕೊರತೆ (ಶೇ. 50), ಸ್ನಾಯು ನೋವು (ಶೇ. 46), ಮತ್ತು ವಾಂತಿ (ಶೇ. 38) ರೋಗಿಗಳಲ್ಲಿ ಕಂಡುಬಂದಿದೆ.

ಶ್ರೂ (shrew) ಎಂಬ ಇಲಿಯನ್ನು ಹೋಲುವ ಪುಟ್ಟ ಸಸ್ತನಿಗಳಲ್ಲಿ ಇದರ ಹೆಚ್ಚಿನ ವೈರಸ್‌ಗಳು ಕಂಡುಬಂದಿವೆ. ಚೀನೀ ಸಂಶೋಧಕರು 262 ಶ್ರೂಗಳಲ್ಲಿ 71ರಲ್ಲಿ ವೈರಸ್ ಅನ್ನು ಕಂಡುಹಿಡಿದಿದ್ದಾರೆ. ಹೆನಾನ್ ಮತ್ತು ಶಾಂಡಾಂಗ್ ಪ್ರಾಂತ್ಯಗಳಲ್ಲಿ ಇವು ಕಂಡುಬಂದಿವೆ. ನಾಯಿಗಳು (ಶೇ.5) ಮತ್ತು ಆಡುಗಳಲ್ಲಿ (ಶೇ.2) ಕೂಡ ವೈರಸ್ ಪತ್ತೆಯಾಗಿದೆ.

ಲಾಂಗ್ಯಾ ವೈರಸ್‌ ತೀವ್ರತೆ ಎಷ್ಟು?

ಬಾವಲಿಗಳಲ್ಲಿ ಸಾಮಾನ್ಯವಾಗಿ ಕಂಡುಬರುವ ಮಾರಣಾಂತಿಕ ನಿಪಾ ವೈರಸ್‌ನ ಕುಟುಂಬಕ್ಕೆ ಲಾಂಗ್ಯಾ ಸೇರಿದೆ. ಕೋವಿಡ್-19ನಂತೆ ಉಸಿರಾಟದ ಹನಿಗಳ ಮೂಲಕವೂ ನಿಪಾ ಹರಡುತ್ತದೆ. ನಿಪಾ ಹೆಚ್ಚು ಅಪಾಯಕಾರಿ, ಏಕೆಂದರೆ ಇದು ಸೋಂಕಿದ ಮುಕ್ಕಾಲು ಭಾಗದಷ್ಟು ಜನರನ್ನು ಕೊಲ್ಲುತ್ತದೆ. ವಿಶ್ವ ಆರೋಗ್ಯ ಸಂಸ್ಥೆಯು (WHO) ಮುಂದಿನ ಸಾಂಕ್ರಾಮಿಕವನ್ನು ಸೃಷ್ಟಿಮಾಡುವ ಸಾಧ್ಯತೆಯಿರುವ ಪಟ್ಟಿಯಲ್ಲಿ ನಿಪಾವನ್ನು ಅಗ್ರಸ್ಥಾನದಲ್ಲಿ ಇಟ್ಟಿದೆ.

ಇದನ್ನೂ ಓದಿ: ದೇಶದಲ್ಲಿ 8ನೇ ಮಂಕಿಪಾಕ್ಸ್ ಪ್ರಕರಣ; ಹೆದರಬೇಡಿ ಎಂದು ಧೈರ್ಯ ತುಂಬಿದ ಕೇಂದ್ರ ಆರೋಗ್ಯ ಸಚಿವ

Exit mobile version