Site icon Vistara News

World No Tobacco Day: ವ್ಯಸನಮುಕ್ತರಾಗುವುದರಿಂದಲೇ ಬದುಕು ಸುರಕ್ಷಿತ

World No Tobacco Day

World No Tobacco Day

ನಮ್ಮ ದೇಹಗಳನ್ನು ಜೀವಂತವಿಡುವ ಪ್ರಾಣವಾಯು ತುಂಬುವ ‍ಶ್ವಾಸಕೋಶಗಳೀಗ ಹೊಗೆಗೂಡುಗಳಂತಾಗಿವೆ. ಸುತ್ತಮುತ್ತಲಿನ ವಾಯುಮಾಲಿನ್ಯ ಒಂದು ಮಟ್ಟದಲ್ಲಿ ಇದಕ್ಕೆ ಕಾರಣವಾದರೆ, ನಾವೇ ಅಂಟಿಸಿಕೊಳ್ಳುವ ಚಟಗಳಿಗೆ ಇದರ ಉಳಿದ ಶ್ರೇಯಸ್ಸು ಸಲ್ಲುತ್ತದೆ. ಈ ಚಟಗಳ ಪೈಕಿ ಸಿಗರೇಟ್‌ ಮತ್ತು ತಂಬಾಕಿನ ವ್ಯಸನ ಕೋಟ್ಯಂತರ ಜನರ ಜೀವ ಹಿಂಡುತ್ತಿದೆ. ತಂಬಾಕಿನ ಬಳಕೆ ಮತ್ತು ಅದರ ದುಷ್ಪರಿಣಾಮಗಳ ಬಗ್ಗೆ ಜನಜಾಗೃತಿ ಮೂಡಿಸುವ ನಿಟ್ಟಿನಲ್ಲಿ, ಜಾಗತಿಕ ತಂಬಾಕು ರಹಿತ ದಿನವನ್ನಾಗಿ (World No Tobacco Day) ಮೇ ತಿಂಗಳ ಕಡೆಯ ದಿನವನ್ನು ಗುರುತಿಸಲಾಗಿದೆ.

ಚಲನಚಿತ್ರಗಳ ನಾಯಕನೋ ಅಥವಾ ಖಳನೋ ಸುರುಳಿಯಾಗಿ ಹೊಗೆ ಬಿಡುತ್ತಾ ಕಾಲಿನ ಮೇಲೆ ಕಾಲು ಹಾಕಿ ಕುಳಿತುಕೊಂಡ ದೃಶ್ಯಗಳನ್ನು ನಾವೆಷ್ಟೊಂದು ನೋಡಿದ್ದೇವಲ್ಲ. ಸಿಗರೇಟ್‌ ಸೇದುವುದೆಂದರೆ, ಸುರುಳಿಯಾಗಿ ಹೊಗೆ ಬಿಡುವುದೆಂದರೆ ಅದೊಂದು ಷೋಕಿಯ ಕೆಲಸ ಎಂಬಂತೆ ಎಲ್ಲೆಡೆ ಬಿಂಬಿತವಾಗಿದೆ. ಆದರೆ ಇದರೊಂದಿಗೆ ತಳುಕು ಹಾಕಿಕೊಂಡಿರುವ ಹಲವಾರು ರೀತಿಯ ಕ್ಯಾನ್ಸರ್‌ಗಳ ಬಗ್ಗೆ ಪ್ರಸ್ತಾಪ ಆಗದಿರುವುದು ದುರದೃಷ್ಟಕರ. ತಂಬಾಕಿನಲ್ಲಿ ಕ್ಯಾನ್ಸರ್‌ಕಾರಕ ಬೆನ್‌ಜೀನ್‌, ಫಾರ್ಮಲ್‌ಡಿಹೈಡ್‌ ಮತ್ತು ಆರ್ಸೆನಿಕ್‌ಗಳು ಹೇರಳವಾಗಿವೆ (World No Tobacco Day). ಸಿಗರೇಟ್‌ ಪ್ರತಿಯೊಂದು ಪಫ್‌ನಿಂದ ಸಾವಿರಾರು ರೀತಿಯ ರಾಸಾಯನಿಕಗಳು ದೇಹ ಸೇರುತ್ತವೆ. ಈ ಪೈಕಿ ಸುಮಾರು ೭೦ ರಾಸಾಯನಿಕಗಳು ಕ್ಯಾನ್ಸರ್‌ ತರುವುದು ನಿಶ್ಚಿತ.

ಭಾರತದಲ್ಲಿ ಪ್ರಸ್ತುತ ೧೦ ಕೋಟಿಗೂ ಹೆಚ್ಚು ಮಂದಿ ಸಿಗರೇಟ್‌ಗೆ ದಾಸರಾಗಿದ್ದರೆ, ೨೮ ಲಕ್ಷಕ್ಕೂ ಅಧಿಕ ಮಂದಿ ವೇಪಿಂಗ್‌ ಅಂದರೆ ಇ-ಸಿಗರೇಟ್‌ ಚಟ ಅಂಟಿಸಿಕೊಂಡ ಅಂದಾಜಿದ್ದರೆ, ೧.೩ ಕೋಟಿಗೂ ಹೆಚ್ಚಿನ ಜನಕ್ಕೆ ಹುಕ್ಕಾ ಸೇದುವುದು ಪ್ರಿಯ. ಇವರೆಲ್ಲಾ ನೇರವಾಗಿ ಸಿಗರೇಟ್‌ ಮತ್ತಿತರ ಚಟಗಳನ್ನು ಅಂಟಿಸಿಕೊಂಡವರು. ಆದರೆ ವ್ಯಸನಿಗಳಲ್ಲದವರೂ ಪರ್ಯಾಯವಾಗಿ ಇದರ ದುಷ್ಪರಿಣಾಮಗಳಿಗೆ ತುತ್ತಾಗಿ ಸಾವನ್ನಪ್ಪುತ್ತಿರುವುದು ಘೋರ ದುರಂತ. ಇದೇ ಕಾರಣದಿಂದಾಗಿ ನಾನಾ ರೀತಿಯ ಕ್ಯಾನ್ಸರ್‌ಗಳಿಗೆ ತುತ್ತಾಗುತ್ತಿರುವವರ ಸಂಖ್ಯೆಯಲ್ಲಿ ತೀವ್ರ ಹೆಚ್ಚಳ ಕಂಡುಬಂದಿದೆ.

ಈ ಚಟಗಳ ಮಾರಕ ಪರಿಣಾಮಗಳ ಬಗ್ಗೆ ತಿಳಿದಿದ್ದರೂ, ಇನ್ನೊಮ್ಮೆ ಅರಿತುಕೊಳ್ಳುವ ದಿನವಿದು. ಸಿಗರೇಟ್‌ ಚಟದಿಂದ ಶ್ವಾಸಕೋಶಗಳು ಮಾತ್ರವಲ್ಲ, ಬಾಯಿ, ಅನ್ನನಾಳ, ಗಂಟಲು, ಹೊಟ್ಟೆ, ಮೂತ್ರಪಿಂಡ ಮತ್ತು ಯಕೃತ್ತು ಸಹ ಹಾನಿಗೊಳಗಾಗುತ್ತವೆ. ಈ ಯಾವುದೇ ಅಂಗಗಳು ಕ್ಯಾನ್ಸರ್‌ಗೆ ತುತ್ತಾಗುವ ಅಪಾಯದ ಜೊತೆಗೆ, ಉಸಿರಾಟದ ತೊಂದರೆ, ಅಸ್ತಮಾ, ಬ್ರಾಂಕೈಟಿಸ್‌ ಮುಂತಾದವು ಕಟ್ಟಿಟ್ಟಿದ್ದು. ಇದಲ್ಲದೆ, ಮಧುಮೇಹ ಮತ್ತು ಹೃದ್ರೋಗಗಳು ಆಪ್ತವಾಗುತ್ತವೆ. ಧೂಮಪಾನಿಯ ವಂಶವಾಹಿಗಳು ಸಹ ಹಾನಿಗೊಳಗಾಗುತ್ತವೆ. ಧೂಮಪಾನಿಗಳು ಮಹಿಳೆಯರಾದರೆ ಹುಟ್ಟಲಿರುವ ಮಕ್ಕಳಿಗೂ ಆಪತ್ತು.

ಸಿಗರೇಟ್‌ನಷ್ಟು ಹಾನಿಕಾರಕವಲ್ಲ ಎಂಬ ಹಣೆಪಟ್ಟಿಯಿಂದಲೇ ಹೆಚ್ಚಿನ ಜನಪ್ರಿಯತೆ ಗಳಿಸಿದೆ ಹುಕ್ಕಾ ಸೇದುವುದು. ಆದರೆ ಇದು ನಿಜವಲ್ಲ. ನಿಕೋಟಿನ್‌, ಕಾರ್ಬನ್‌ ಮೊನಾಕ್ಸೈಡ್‌ ಮುಂತಾದ ಹಾನಿಕಾರಕ ರಾಸಾಯನಿಕಗಳು ಹುಕ್ಕಾ ಸೇದುವುದರಿಂದಲೂ ದೇಹ ಸೇರುತ್ತವೆ. ಹುಕ್ಕಾ ಸೇದುವ ಸಾಮಾಜಿಕ ಪರಿಸರದಲ್ಲಂತೂ ಸಿಗರೇಟ್‌ಗಿಂತ ಹೆಚ್ಚಿನ ಜನ ಪರ್ಯಾಯವಾಗಿ ಇದನ್ನು ಸೇದುವುದರಿಂದ, ಸಾಮಾಜಿಕವಾಗಿ ಹೆಚ್ಚು ಹಾನಿ ಮಾಡುತ್ತದೆ ಈ ಚಟ. ಹುಕ್ಕಾ ವ್ಯಸನಿಗಳಲ್ಲೂ ಬಾಯಿ, ಗಂಟಲು, ಶ್ವಾಸಕೋಶ, ಅನ್ನನಾಳದ ಕ್ಯಾನ್ಸರ್‌ಗಳು ಕಂಡುಬಂದಿವೆ. ಫಲವಂತಿಕೆಯ ಸಮಸ್ಯೆಯಂತೂ ಬಿಟ್ಟೂಬಿಡದಂತೆ ಕಾಡುತ್ತದೆ.

ಯುವ ಜನತೆಯಲ್ಲಿ ಇತ್ತೀಚೆಗೆ ಟ್ರೆಂಡ್‌ ಎನಿಸಿರುವುದು ವೇಪಿಂಗ್‌ ಅಥವಾ ಇ-ಸಿಗರೇಟ್‌ ಚಟ. ಸಿಗರೇಟ್‌ಗೆ ಸುರಕ್ಷಿತ ಪರ್ಯಾಯವಿದು ಎಂಬಂತೆ ಬಿಂಬಿತವಾಗುತ್ತಿರುವ ಇದು, ಸಿಗರೇಟಿಗಿಂತ ಯಾವುದೇ ರೀತಿಯಲ್ಲೂ ಸುರಕ್ಷಿತವಲ್ಲ. ಇದರ ಏರೋಸೋಲ್‌ ಅಥವಾ ಮಂಜು ಅಥವಾ ಹೊಂಜು ನಿಕೋಟಿನ್‌ ಮತ್ತು ಘನ ಲೋಹದ ಸೂಕ್ಷ್ಮ ಕಣಗಳಿಂದ ಸಾಂದ್ರಿತವಾಗಿದೆ. ಯುವಕರಲ್ಲಿ ದೀರ್ಘಕಾಲೀನ ವ್ಯಸನವನ್ನು ಉಂಟುಮಾಡುತ್ತಿರುವ ಇದು ಥೇಟ್‌ ಸಿಗರೇಟ್‌ನಂತೆ ಬಹಳಷ್ಟು ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತಿದೆ.

ಇದನ್ನೂ ಓದಿ: Thyroid health: ಥೈರಾಯ್ಡ್‌ ಗ್ರಂಥಿಯನ್ನು ಆರೋಗ್ಯವಾಗಿಟ್ಟುಕೊಳ್ಳಲು ಈ ಮೂಲಿಕೆಗಳು ಬೇಕು!

ಇದಲ್ಲದೆ ಹಲವಾರು ರೀತಿಯ ತಂಬಾಕಿನ ಉತ್ಪನ್ನಗಳು ಮಾರುಕಟ್ಟೆಯಲ್ಲಿ ಲಭ್ಯವಿವೆ. ಈ ಎಲ್ಲ ಹಿನ್ನೆಲೆಯಲ್ಲಿ, ʻನಮಗೆ ಬೇಕಿರುವುದು ಆಹಾರ, ತಂಬಾಕು ಅಲ್ಲʼ ಎಂಬ ಘೋಷವಾಕ್ಯವನ್ನು ಈ ವರ್ಷ ವಿಶ್ವ ಆರೋಗ್ಯ ಸಂಸ್ಥೆ ಹೊರಡಿಸಿದೆ. ಆಹಾರ ಬೆಳೆಗಳ ಬದಲಿಗೆ, ಹೆಚ್ಚಾಗಿ ತಂಬಾಕಿನಂಥ ವಾಣಿಜ್ಯ ಬೆಳೆಗಳು ರೈತರಿಗೆ ಮೆಚ್ಚಾಗುತ್ತಿರುವುದು ಸಮಸ್ಯೆ ಇನ್ನಷ್ಟು ಬಿಗಡಾಯಿಸುವಂತಾಗಿದೆ.

Exit mobile version