Site icon Vistara News

Weight Loss Tips: ತುಂಬಾ ಕಷ್ಟಪಡದೆ ಹೀಗೆ ತೂಕ ಇಳಿಸಿ!

weight loss

ತೂಕ ಇಳಿಸಬೇಕು ಎಂದರೆ ಅರೆಹೊಟ್ಟೆ ತಿನ್ನಬೇಕು, ಉಪವಾಸ ಸಾಯಬೇಕೆಂದಿಲ್ಲ. ಹೀಗೆ ಹೊಟ್ಟೆಯ ಮೇಲೆ ತಣ್ಣೀರು ಬಟ್ಟೆ ಹಾಕಿಕೊಂಡು ಇಳಿಸಿದ ತೂಕದಿಂದ ಶರೀರ ಬೆಂಡಾಗಿ ಬಸವಳಿದು ಹೋಗುತ್ತದೆ. ನಿಶ್ಶಕ್ತಿ ಆವರಿಸುತ್ತದೆ. ನಂತರ ಆಹಾರವನ್ನು ಸಹಜ ಸ್ಥಿತಿಗೆ ತರುತ್ತಿದ್ದಂತೆ ಮತ್ತೆ ತೂಕ ಏರತೊಡಗುತ್ತದೆ. ಇದರಿಂದ ಉಪವಾಸ-ವನವಾಸ ಮಾಡಿ ಏನು ಮಾಡಿದಂತಾಯ್ತು? ಬದಲಿಗೆ, ನಿಗದಿತ ವ್ಯಾಯಾಮಗಳ ಜೊತೆಯಲ್ಲಿ ಸರಿಯಾದ ಆಹಾರಕ್ರಮವನ್ನೂ ಅನುಸರಿಸಿದರೆ, ಸಪೂರಕ್ಕೆ ಗಟ್ಟಿಮುಟ್ಟಾದ ದೇಹ ನಿಮ್ಮದಾಗಬಹುದು. ಹೀಗೆ ಬೊಜ್ಜಿಲ್ಲದ ಕಟ್ಟಿಗೆಯಂಥ ಶರೀರವನ್ನು ಹೊಂದುವುದಕ್ಕೆ ಅಗತ್ಯವಾದ ಆಹಾರ ಪದ್ಧತಿ ಯಾವುದು? ನಮ್ಮ ಊಟದ ತಟ್ಟೆಯಲ್ಲಿ ಏನಿರಬೇಕು?

ಪ್ರೊಟೀನ್

ನಮ್ಮ ದೇಹದ ಯಾವುದೇ ರಿಪೇರಿ ಕೆಲಸಗಳಿಗೆ ಪ್ರೊಟಿನ್‌ ಅಗತ್ಯ. ತೂಕ ಇಳಿಸುವುದಕ್ಕಾಗಿ ಮಾಡುತ್ತಿರುವ ವ್ಯಾಯಾಮಗಳಿಂದ ದೇಹ ಸೊರಗಬಾರದು, ಬದಲಿಗೆ ಸ್ನಾಯು ದೃಢವಾಗಬೇಕು ಎಂದರೆ ಸಾಕಷ್ಟು ಪ್ರೊಟೀನ್‌ ಬೇಕು. ದೇಹದ ಪ್ರತಿಯೊಂದು ಕೆ.ಜಿ. ತೂಕಕ್ಕೆ 0.8 ರಿಂದ 1 ಗ್ರಾಂವರೆಗೆ ಪ್ರೊಟೀನ್‌ ಬೇಕಾಗುತ್ತದೆ. ಇದಕ್ಕಾಗಿ ಲೀನ್‌ ಪ್ರೊಟೀನ್‌ಗಳ ಮೊರೆ ಹೋಗುವುದು ಜಾಣತನ. ಅಂದರೆ, ಚಿಕನ್‌, ಮೀನು, ತೋಫು, ಪನೀರ್‌, ಮೊಟ್ಟೆ, ಮೊಳಕೆ ಕಾಳುಗಳು, ಗ್ರೀಕ್‌ ಯೋಗರ್ಟ್‌ ಮುಂತಾದವು ನಮ್ಮ ತಟ್ಟೆ ಮತ್ತು ಹೊಟ್ಟೆ ಸೇರಲಿ.

ಸಂಪೂರ್ಣ ಆಹಾರಗಳು

ಯಾವುದೇ ಆಹಾರಗಳಲ್ಲಿ ಮಾನವನ ಹಸ್ತಕ್ಷೇಪ ಕಡಿಮೆ ಆದಷ್ಟೂ ಆ ಆಹಾರ ಸೇವನೆಗೆ ಹೆಚ್ಚು ಸುರಕ್ಷಿತವಾಗುತ್ತದೆ. ಹೆಚ್ಚು ಸಂಸ್ಕಾರಗೊಂಡಷ್ಟಕ್ಕೂ ಅದರ ಸತ್ವಗಳು ನಶಿಸುತ್ತಾ ಹೋಗುತ್ತದೆ. ರಾಸಾಯನಿಕಗಳು ಸೇರಿದಷ್ಟೂ ಹಾನಿಯೇ ಹೆಚ್ಚಾಗುತ್ತದೆ. ಹಾಗಾಗಿ ಸೇವಿಸುವ ಆಹಾರಗಳು ಆದಷ್ಟೂ ತಾಜಾ ಇರಲಿ, ಇಡಿಯಾಗಿರಲಿ. ಅದರ ಹೊಟ್ಟು, ನಾರು ಇಂಥವನ್ನೆಲ್ಲಾ ತೆಗೆದು ಸತ್ವಹೀನ ಮಾಡುವುದು ಸರಿಯಲ್ಲ. ಹಣ್ಣು, ತರಕಾರಿಗಳು, ಇಡೀ ಧಾನ್ಯಗಳು, ಆರೋಗ್ಯಕರ ಕೊಬ್ಬು, ಲೀನ್‌ ಪ್ರೊಟೀನ್‌ಗಳು ಸ್ವಾಸ್ಥ್ಯ ಹೆಚ್ಚಳಕ್ಕೆ ಬೇಕು.

ಪ್ರಮಾಣದ ಬಗ್ಗೆ ನಿಗಾ

ಒಂದೇ ಬಾರಿಗೆ ಹೊಟ್ಟೆ ಬಿರಿಯುವಷ್ಟು ತಿನ್ನುವುದು ಸಹ ಚಯಾಪಚಯದ ಮೇಲೆ ಪರಿಣಾಮ ಬೀರುತ್ತದೆ. ಹಾಗಾಗಿ ತಿನ್ನುವ ಪ್ರಮಾಣವನ್ನು ಕಡಿಮೆ ಮಾಡಿ. ಅಂದರೆ ಅರೆಹೊಟ್ಟೆ ತಿನ್ನಬೇಕೆಂದಲ್ಲ. ಇದರ ಹಿಂದಿನ ಉದ್ದೇಶವೆಂದರೆ ದೇಹಕ್ಕೆ ದೊರೆಯುವ ಶಕ್ತಿಯು ಖರ್ಚಾಗುವ ಶಕ್ತಿಗಿಂತ ಕಡಿಮೆ ಇರಬೇಕು ಎಂಬುದು. ಆತ ಮಾತ್ರ ದೇಹದಲ್ಲಿ ಜಮೆಯಾಗಿರುವ ಕೊಬ್ಬನ್ನು ಶಕ್ತಿಯಾಗಿ ಪರಿವರ್ತಿಸಿ ಶರೀರ ಬಳಸಲಾರಂಭಿಸುತ್ತದೆ. ಕೊಬ್ಬು ಕರಗಬೇಕೆಂದರೆ ತಿನ್ನುವ ಆಹಾರದ ಪ್ರಮಾಣವನ್ನು ಕೊಂಚ ಕಡಿಮೆ ಮಾಡುವುದು ಅಗತ್ಯ.

ಸಕ್ಕರೆ ಕಡಿಮೆಯಿರಲಿ

ನೈಸರ್ಗಿಕ ಸಕ್ಕರೆಯನ್ನು ಸೇವಿಸುವುದು, ಅಂದರೆ ಸಿಹಿಯಾದ ಹಣ್ಣುಗಳು, ಅಲ್ಲೊಂದಿಲ್ಲೊಂದು ಅಂಜೂರ, ಖರ್ಜೂರಗಳನ್ನು ಸೇವಿಸುವುದು ಸಮಸ್ಯೆ ತರುವುದಿಲ್ಲ. ಬದಲಿಗೆ ಸಕ್ಕರೆ ಭರಿತ ಸೋಡಾ, ಚಹಾ, ಕಾಫಿ, ಜಿಲೇಬಿ, ಪಾಯಸದಂಥ ಯಾವುದೇ ಸಿಹಿ ತಿಂಡಿಗಳು ತೂಕ ಹೆಚ್ಚಿಸಬಲ್ಲವು. ತೂಕ ಇಳಿಸುವ ಪ್ರಕ್ರಿಯೆಗೆ ತೊಡಕನ್ನಂತೂ ಖಂಡಿತವಾಗಿ ಉಂಟುಮಾಡಬಲ್ಲವು. ಹಾಗಾಗಿ ಸಕ್ಕರೆ ಸೇವನೆಯನ್ನು ನಿರ್ದಯವಾಗಿ ಕಡಿಮೆ ಮಾಡಿ.

ಚೆನ್ನಾಗಿ ನೀರು ಬೇಕು

ನೀರೆಂದರೆ ಜೀವದ್ರವ ಎಂದೆಲ್ಲ ಶಾಲೆಯ ದಿನಗಳಲ್ಲಿ ಓದಿದ್ದು, ನಂತರ ಮರೆಯುವುದಕ್ಕಲ್ಲ. ದೇಹಕ್ಕೆ ತನ್ನ ಕೆಲಸವನ್ನು ಸುಗಮವಾಗಿ ಮಾಡುವುದಕ್ಕೆ ನೀರು ಬೇಕೇಬೇಕು. ಇವೆಲ್ಲ ನಮಗೆ ತಿಳಿಯದ ವಿಷಯ ಎಂದಲ್ಲ, ಆದರೆ ತೂಕ ಇಳಿಸುವಾಗ ಇವೆಲ್ಲವನ್ನು ಮರೆಯುವಂತೆಯೇ ಇಲ್ಲ. ದಿನಕ್ಕೆ 8-10 ಗ್ಲಾಸ್‌ ನೀರು ಕಡ್ಡಾಯವಾಗಿ ಬೇಕು. ಹೆಚ್ಚು ವ್ಯಾಯಾಮ ಮಾಡಿದಂತೆ, ಬಿಸಿಲು ಹೆಚ್ಚಾದಂತೆ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ನೀರು ಬೇಕಾಗಬಹುದು.

ಇದನ್ನೂ ಓದಿ: Preterm Birth: ಅವಧಿಪೂರ್ವ ಮಗುವಿನ ಜನನ; ಅರಿವು ಇದ್ದರೆ ಆತಂಕವೆಲ್ಲವೂ ಶಮನ

Exit mobile version