Site icon Vistara News

Magnesium Deficiency: ಮೆಗ್ನೀಶಿಯಂ ಕೊರತೆಯಾದರೆ ಏನಾಗುತ್ತದೆ?

Magnesium Deficiency

ದೇಹಕ್ಕೆ ಸೂಕ್ಷ್ಮ ಪೋಷಕಾಂಶಗಳ ಕೊರತೆಯಾದರೆ ಅದನ್ನು ಶರೀರ ಹಲವು ರೀತಿಯಲ್ಲಿ ತೋರ್ಪಡಿಸುತ್ತದೆ. ಈ ಲಕ್ಷಣಗಳು ಕೆಲವೊಮ್ಮೆ ಸೌಮ್ಯವಾಗಿ ಇರಬಹುದು ಅಥವಾ ತೀವ್ರವಾಗಿಯೂ ಕಾಣಬಹುದು. ಆದರೆ ಹೆಚ್ಚಿನ ಸಂದರ್ಭಗಳಲ್ಲಿ ಆಯಾಸದಂಥ ಚಿಹ್ನೆಗಳು ಅಥವಾ ರೋಗ ನಿರೋಧಕ ಶಕ್ತಿ ಕುಂದಿದಂಥ ಲಕ್ಷಣಗಳು ಕಂಡುಬರುತ್ತವೆ. ಅಂಥದ್ದೇ ವಿಷಯವೊಂದನ್ನು ಗಮನಿಸುವುದಾದರೆ, ಮೆಗ್ನೀಶಿಯಂ ನಮಗೆ ಅಗತ್ಯವಾದಂಥ ಖನಿಜಗಳಲ್ಲಿ ಒಂದು. ಇದು ದೇಹಕ್ಕೆ ಕೊರತೆಯಾದರೆ ಕಂಡು ಬರುವ ಸೂಚನೆಗಳೇನು?

ಏಕೆ ಬೇಕು?

ದೇಹದಲ್ಲಿನ ನೂರಾರು ಜೈವಿಕ ಮತ್ತು ರಾಸಾಯನಿಕ ಕ್ರಿಯೆಗಳು ನಡೆಯುವುದಕ್ಕೆ ಮೆಗ್ನೀಶಿಯಂ ಖನಿಜ ಅಗತ್ಯ. ಸ್ನಾಯುಗಳು ಬಲಗೊಳ್ಳುವುದಕ್ಕೆ, ದೇಹ ಪ್ರತಿರೋಧಕ ಶಕ್ತಿ ಪ್ರಬಲವಾಗಿರುವುದಕ್ಕೆ, ರಕ್ತದೊತ್ತಡ ನಿಯಂತ್ರಣಕ್ಕೆ- ಹೀಗೆ ಹತ್ತು ಹಲವು ಕೆಲಸಗಳು ಸಾಂಗವಾಗಿ ನೆರವೇರುವುದಕ್ಕೆ ಮೆಗ್ನೀಶಿಯಂ ಬೇಕೆಬೇಕು. ಇದನ್ನು ತನ್ನಷ್ಟಕ್ಕೆ ತಾನೇ ಸಿದ್ಧಪಡಿಸಿಕೊಳ್ಳುವುದು ದೇಹಕ್ಕೆ ಸಾಧ್ಯವಿಲ್ಲ. ನಾವು ತಿನ್ನುವ ಆಹಾರಗಳ ಮೂಲಕವೇ ಮೆಗ್ನೀಶಿಯಂ ಒದಗಬೇಕು.

ಕೊರತೆಯ ಲಕ್ಷಣಗಳೇನು?

ಮೆಗ್ನೀಶಿಯಂ ಕೊರತೆಯ ಲಕ್ಷಣಗಳು ಕೆಲವೊಮ್ಮೆ ಸೌಮ್ಯವಾಗಿ, ಒಮ್ಮೊಮ್ಮೆ ತೀವ್ರವಾಗಿ ಕಾಣಿಸಿಕೊಳ್ಳಬಹುದು. ಇದು ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾದರೂ ಒಂದಿಷ್ಟು ಸಾಮಾನ್ಯ ಲಕ್ಷಣಗಳು ಇದ್ದೇ ಇರುತ್ತವೆ.

ಸ್ನಾಯು ದೌರ್ಬಲ್ಯ

ನಮ್ಮ ಮಾಂಸಪೇಶಿಗಳು ಸರಿಯಾಗಿ ಕೆಲಸ ಮಾಡುವುದಕ್ಕೆ ಮತ್ತು ಸಬಲಗೊಳ್ಳುವುದಕ್ಕೆ ಮೆಗ್ನೀಶಿಯಂ ಅಗತ್ಯ. ದೇಹಕ್ಕೆ ಇದರ ಕೊರತೆಯಾದರೆ ಸ್ನಾಯು ದುರ್ಬಲಗೊಳ್ಳುವುದು, ಮಾಂಸಖಂಡಗಳಲ್ಲಿ ನೋವು, ಸೆಳೆತ ಕಾಣಬಹುದು. ಕಾಲುಗಳಲ್ಲಿ, ತೋಳಿನಲ್ಲಿ ಸಣ್ಣ-ದೊಡ್ಡ ಸ್ನಾಯುಗಳಲ್ಲಿ ನೋವು, ಸೆಳೆತ ಆಗಾಗ ಕಾಣುತ್ತವೆ. ಕೆಲವೊಮ್ಮೆ ಹೃದಯದ ಸ್ನಾಯುವೂ ದುರ್ಬಲವಾದಂತೆ ಎನಿಸುತ್ತದೆ.

ಸುಸ್ತು, ಆಯಾಸ

ದೇಹದಲ್ಲಿ ಸೂಕ್ತ ಪ್ರಮಾಣದಲ್ಲಿ ಶಕ್ತಿ ಸಂಚಯನವಾಗುವುದಕ್ಕೆ ಮೆಗ್ನೀಶಿಯಂ ಬೇಕು. ತಿಂದ ಆಹಾರ ಶಕ್ತಿಯಾಗಿ ಬದಲಾಗುವ ಹಂತದಲ್ಲಿ ನಡೆಯುವ ರಾಸಾಯನಿಕ ಕ್ರಿಯೆಗೆ ಮೆಗ್ನೀಶಿಯಂನಂಥ ಖನಿಜಗಳು ಮುಖ್ಯವಾಗುತ್ತವೆ. ಅದು ಕಡಿಮೆಯಾದರೆ ದೇಹದಲ್ಲಿ ಸಹಜವಾಗಿ ಆಯಾಸ, ಸುಸ್ತು ತಲೆದೋರುತ್ತದೆ.

ತಲೆ ನೋವು

ಆಗಾಗ ತಲೆ ನೋವು ಬರುತ್ತಿದ್ದರೂ ಮೆಗ್ನೀಶಿಯಂ ಕೊರತೆ ಆಗಿದೆಯೇ ಎಂಬುದರ ತಪಾಸಣೆ ನಡೆಸುವುದು ಸೂಕ್ತ. ಆಯಾಸದಿಂದ, ಶಕ್ತಿಯ ಕೊರತೆಯಿಂದ, ಟೆನ್‌ಶನ್‌ನಿಂದ ಬರುವಂಥ ತಲೆನೋವಿನ ಮಾದರಿಯಲ್ಲಿಯೇ ಇದೂ ಇರುತ್ತದೆ. ಮೈಗ್ರೇನ್‌ ಇರುವವರಲ್ಲಿ, ಅರೆ ತಲೆಶೂಲೆಯ ಪ್ರಕರಣಗಳು ಹೆಚ್ಚಬಹುದು

ಬಡಿತ ಏರಿಳಿತ

ಹೃದಯ ಬಡಿತದ ಲಯ ಸ್ಥಿರವಾಗಿರುವುದಕ್ಕೆ ಮೆಗ್ನೀಶಿಯಂ ಇಲ್ಲದಿದ್ದರಾಗದು. ಈ ಖನಿಜದ ಕೊರತೆಯಾದರೆ ಹೃದಯದ ಬಡಿತ ಏರುಪೇರಾಗುವುದು, ಕೆಲವೊಮ್ಮೆ ಜೋರಾಗಿ ಬಡಿದುಕೊಂಡ ಅನುಭವ- ಇಂಥವೆಲ್ಲ ಕಾಣುತ್ತದೆ. ಇದಲ್ಲದೆ, ರಕ್ತದೊತ್ತಡ ನಿಯಂತ್ರಿಸುವುದಕ್ಕೆ ಮೆಗ್ನೀಶಿಯಂ ಅಗತ್ಯ. ಹಾಗಾಗಿ ಹೃದಯದ ಯೋಗಕ್ಷೇಮಕ್ಕೆ ಇದು ಇರಲೇಬೇಕು.

ಇವಿಷ್ಟೇ ಅಲ್ಲ

ಇದಲ್ಲದೆ, ಮೂಡ್‌ ಏರಿಳಿತದ ಸಮಸ್ಯೆಗೂ ಇದು ಕಾರಣವಾದೀತು. ಕಾರಣ, ಮೆದುಳಿಗೆ ಸಂದೇಶ ಒಯ್ಯುವ ಸಂದೇಶವಾಹಕಗಳ ಕೆಲಸವೂ ಸರಿಯಾಗಿ ಆಗುವುದಿಲ್ಲ. ಜೊತೆಗೆ ಒತ್ತಡ ನಿವಾರಣೆಗೂ ಕಷ್ಟವಾಗಿ ನಿದ್ರಾಹೀನತೆಯೂ ಅಮರಿಕೊಳ್ಳುತ್ತದೆ. ಹಾಗಾಗಿ ಈ ಪೈಕಿ ಯಾವುದೇ ಲಕ್ಷಣಗಳಿದ್ದೂ ಒಮ್ಮೆ ಮೆಗ್ನೀಶಿಯಂ ಮಟ್ಟವನ್ನು ತಪಾಸಣೆ ಮಾಡುವುದೊಳಿತು.

ಯಾವೆಲ್ಲಾ ಆಹಾರಗಳು?

ಇಡೀ ಧಾನ್ಯಗಳು, ಕಾಯಿ-ಬೀಜಗಳು, ಕಾಳುಗಳು, ಹಸಿರು ಸೊಪ್ಪು-ತರಕಾರಿಗಳು, ಬೆಣ್ಣೆ ಹಣ್ಣು, ತೋಫು, ಡಾರ್ಕ್‌ ಚಾಕಲೇಟ್‌, ಕೆಲವು ಕೊಬ್ಬಿನ ಮೀನುಗಳು, ಬಾಳೆಹಣ್ಣು ಮುಂತಾದವುಗಳಲ್ಲಿ ಮೆಗ್ನೀಶಿಯಂ ಹೇರಳವಾಗಿ ದೊರೆಯುತ್ತದೆ.

ಇದನ್ನೂ ಓದಿ: Health Care Of Women After Thirty: ಮೂವತ್ತರ ನಂತರ ಮಹಿಳೆಯರ ಆರೋಗ್ಯ ಕಾಳಜಿ ಹೀಗಿರಲಿ

Exit mobile version