ಕ್ಯಾಮರೂನ್: ದಕ್ಷಿಣ ಆಫ್ರಿಕಾದ ಕ್ಯಾಮರೂನ್ (Cameroon) ದೇಶದಲ್ಲಿ ಹೊಸ ಮಲೇರಿಯಾ ನಿರೋಧಕ ಲಸಿಕೆಯನ್ನು (Malaria Vaccine) ನಿಯಮಿತವಾಗಿ ನೀಡುವ ಅಭಿಯಾನಕ್ಕೆ ಚಾಲನೆ ನೀಡಲಾಗಿದೆ. ಆ ಮೂಲಕ ವಿಶ್ವದ ಮಲೇರಿಯಾ ಸಾವುಗಳಲ್ಲಿ ಶೇ. 95ರಷ್ಟು ದಾಖಲಾಗುವ ಆಫ್ರಿಕಾ ಖಂಡದಲ್ಲಿ ಸೊಳ್ಳೆಯ ಮೂಲಕ ಹರಡುವ ಈ ರೋಗವನ್ನು ನಿಗ್ರಹಿಸಲು ಕ್ಯಾಮರೂನ್ ಮಹತ್ವದ ಅಭಿಯಾನ ಕೈಗೊಂಡಿದೆ ಎಂದು ಅಧಿಕಾರಿಗಳು ಬಣ್ಣಿಸಿದ್ದಾರೆ.
“ಲಸಿಕೆ ಜೀವಗಳನ್ನು ಉಳಿಸುತ್ತದೆ. ಇದು ಕುಟುಂಬಗಳಿಗೆ ಮತ್ತು ದೇಶದ ಆರೋಗ್ಯ ವ್ಯವಸ್ಥೆಗೆ ದೊಡ್ಡ ಪರಿಹಾರವನ್ನು ನೀಡಲಿದೆʼʼ ಎಂದು ಕ್ಯಾಮರೂನ್‌ಗೆ ಲಸಿಕೆ ಪಡೆಯಲು ಸಹಾಯ ಮಾಡುತ್ತಿರುವ ಗವಿ ಲಸಿಕೆಗಳ ಒಕ್ಕೂಟದ ಮುಖ್ಯ ಕಾರ್ಯಕ್ರಮ ಅಧಿಕಾರಿ ಔರೆಲಿಯಾ ನ್ಗುಯೆನ್ ತಿಳಿಸಿದ್ದಾರೆ. ಈ ಮಧ್ಯ ಆಫ್ರಿಕಾ ರಾಷ್ಟ್ರವು ಈ ವರ್ಷ ಮತ್ತು ಮುಂದಿನ ವರ್ಷ ಸುಮಾರು 2,50,000 ಮಕ್ಕಳಿಗೆ ಲಸಿಕೆ ಒದಗಿಸುವ ಯೋಜನೆ ಹಾಕಿಕೊಂಡಿದೆ.
ಲಸಿಕೆ ಒದಗಿಸಲು ಸಹಾಯ ಮಾಡಲು ಇತರ 20 ಆಫ್ರಿಕನ್ ದೇಶಗಳೊಂದಿಗೆ ಕೆಲಸ ಮಾಡುತ್ತಿದ್ದೇವೆ ಮತ್ತು ಆ ದೇಶಗಳು 2025ರ ವೇಳೆಗೆ 6 ಕೋಟಿಗೂ ಹೆಚ್ಚು ಮಕ್ಕಳಿಗೆ ರೋಗನಿರೋಧಕ ಶಕ್ತಿಯ ಲಸಿಕೆ ನೀಡಲಿವೆ ಎಂದು ಗವಿ ಅಭಿಪ್ರಾಯಪಟ್ಟಿದೆ. ಆಫ್ರಿಕಾದಲ್ಲಿ ಪ್ರತಿ ವರ್ಷ ಮಲೇರಿಯಾಕ್ಕೆ ತುತ್ತಾಗಿ ಸುಮಾರು 6,00,000 ಮಂದಿ ಮರಣ ಹೊಂದುತ್ತಾರೆ. ಅದರಲ್ಲೂ ಚಿಕ್ಕ ಮಕ್ಕಳ ಸಾವಿನ ಸಂಖ್ಯೆಯೇ ಹೆಚ್ಚು ಎಂದು ಅಂಕಿ-ಅಂಶಗಳು ತಿಳಿಸಿವೆ.
ಯಾವ ಲಸಿಕೆ ?
ಕ್ಯಾಮರೂನ್ ಇತ್ತೀಚೆಗೆ ಎರಡು ಮಲೇರಿಯಾ ನಿರೋಧಕ ಲಸಿಕೆಗಳಿಗೆ ಅನುಮತಿ ನೀಡಿತ್ತು. ಆ ಪೈಕಿ ಮಕ್ಕಳಿಗೆ ಮಾಸ್ಕ್ವಿರಿಕ್ಸ್ (Mosquirix) ಲಸಿಕೆಗೆ ನೀಡಲಾಗುತ್ತದೆ. ವಿಶ್ವ ಆರೋಗ್ಯ ಸಂಸ್ಥೆ ಎರಡು ವರ್ಷಗಳ ಹಿಂದೆ ಈ ಲಸಿಕೆಯನ್ನು ಅನುಮೋದಿಸಿತ್ತು. ಇದು ತೀವ್ರವಾದ ಸೋಂಕಿನಿಂದ ರಕ್ಷಿಸುವುದಷ್ಟೇ ಅಲ್ಲದೆ ಆಸ್ಪತ್ರೆಗೆ ದಾಖಲಾಗುವವರ ಪ್ರಮಾಣವನ್ನು ಕಡಿಮೆ ಮಾಡುತ್ತದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ. ಗ್ಲಾಕ್ಸೊ ಸ್ಮಿತ್ಕ್ಲೈನ್ (GlaxoSmithKline-GSK) ಉತ್ಪಾದಿಸುವ ಈ ಲಸಿಕೆಯ ನಾಲ್ಕು ಡೋಸ್‌ಗಳ ಅಗತ್ಯವಿರುತ್ತದೆ. ಇದನ್ನು ಈ ಹಿಂದೆಯೇ ಆಫ್ರಿಕಾದ ಕೆಲವು ದೇಶಗಳಲ್ಲಿ ಪರೀಕ್ಷಿಸಲಾಗಿತ್ತು.
ಜಿಎಸ್‌ಕೆ ವರ್ಷಕ್ಕೆ ಸುಮಾರು 15 ಮಿಲಿಯನ್ ಡೋಸ್ ಮಾಸ್ಕ್ವಿರಿಕ್ಸ್ ಅನ್ನು ಮಾತ್ರ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಭಾರತದ ಸೀರಮ್ ಇನ್‌ಸ್ಟಿಟ್ಯೂಟ್ ವರ್ಷಕ್ಕೆ 200 ಮಿಲಿಯನ್ ಡೋಸ್ ತಯಾರಿಸಲಿದೆ. ʼʼಯಾವುದೇ ಲಸಿಕೆಗಳು ಮಲೇರಿಯಾವನ್ನು ಸಂಪೂರ್ಣವಾಗಿ ನಿಲ್ಲಿಸಲಾರವು. ಹೀಗಾಗಿ ಸೊಳ್ಳೆ ಉತ್ಪಾದನೆಯಾಗದಂತೆ ನೋಡಿಕೊಳ್ಳಬೇಕು. ನೆಟ್ ಅಳವಡಿಕೆ, ಕೀಟನಾಶಕ ಸಿಂಪಡಣೆಯಂತಹ ಕ್ರಮಗಳು ಈ ನಿಟ್ಟಿನಲ್ಲಿ ಮುಖ್ಯ. ಮಲೇರಿಯಾ ಸೋಂಕಿತ ಸೊಳ್ಳೆಗಳ ಮೂಲಕ ಜನರಿಗೆ ಹರಡುತ್ತದೆ. ಜ್ವರ, ತಲೆನೋವು ಮತ್ತು ಶೀತ ಮುಂತಾದವು ಇದರ ಮುಖ್ಯ ಲಕ್ಷಣಗಳುʼʼ ಎಂದು ಆರೋಗ್ಯ ತಜ್ಞರು ತಿಳಿಸಿದ್ದಾರೆ.
ಇದನ್ನೂ ಓದಿ: Landslide: ಭೂ ಕುಸಿತದಿಂದ 47 ಮಂದಿಯ ಸಾವು; 18 ಮನೆ ಸಂಪೂರ್ಣ ನಾಶ
ಕೀನ್ಯಾ, ಘಾನಾ ಮತ್ತು ಮಾಲವಿ ದೇಶಗಳಲ್ಲಿ ಲಸಿಕೆಯನ್ನು ಪ್ರಾಯೋಗಿಕವಾಗಿ ಜಾರಿಗೊಳಿಸಿ ಯಶಸ್ವಿಯಾದ ಬಳಿಕ ಇದೀಗ ಕ್ಯಾಮರೂನ್‌ನ ಅತೀ ಹೆಚ್ಚು ಭಾದಿತ 42 ಜಿಲ್ಲೆಗಳಲ್ಲಿ ವಿತರಿಸಲಾಗುತ್ತದೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಮೆಂಟ್ ಮೂಲಕ ತಿಳಿಸಿ