Site icon Vistara News

mango time: ಮಾವುಪ್ರಿಯರಿಗೆ ಹಣ್ಣು ತಿನ್ನಲು 15 ಕಾರಣಗಳು!

mango

ಮಾವು ಎಂಬ ರುಚಿರುಚಿಯಾದ ಹಣ್ಣುಗಳ ರಾಜ ಬೇಸಿಗೆಯ ವರ. ಜಗತ್ತಿನಲ್ಲೇ ಮಾವಿಗಿಂತ ರುಚಿಯಾದ ಹಣ್ಣು ಇನ್ನೊಂದು ಸಿಕ್ಕೀತೇ ಅಂತ ಪ್ರತಿ ಬಾರಿಯೂ ಹಣ್ಣು ತಿನ್ನುವಾಗ ಯಾರಿಗಾದರೂ ಅನಿಸದೆ ಇರದು. ಆದರೆ, ಬೇಸಗೆಯಲ್ಲಿ ಒಂದು ಹಣ್ಣು ತಿಂದು ಇನ್ನೊಂದಕ್ಕೆ ಕೈಯಿಡುವಾಗ, ಅಷ್ಟು ತಿನ್ನಬೇಡ್ವೋ, ಹೆಚ್ಚುಕಮ್ಮಿಯಾದೀತು ಅಂತ ಸಲಹೆ ನೀಡುವವರಿಗೇನೂ ಕೊರತೆಯಿಲ್ಲ. ಹೀಗಾಗಿ ರುಚಿಯಾಗಿದ್ದರೂ, ಮಾವಿನ ಬಗ್ಗೆ ಸಂಶಯಗಳೇ ಹೆಚ್ಚು. ಹಾಗಾಗಿ, ಮಾವಿನ ಹಣ್ಣಿನಿಂದ ಇಷ್ಟೆಲ್ಲ ಉಪಯೋಗಗಳಿವೆ ಅಂತ ಗೊತ್ತಾದರೆ, ಮಾವಿನ ಮೇಲೆ ಇನ್ನೂ ಒಂದು ಹಿಡಿ ಪ್ರೀತಿ ನಿಮ್ಮಲ್ಲಿ ಹೆಚ್ಚಾದರೆ ಆಶ್ಚರ್ಯವಿಲ್ಲ. ಮಾವು ಹೇಗೆ ಒಳ್ಳೆಯದು ಎಂಬುದಕ್ಕೆ 15 ಕಾರಣಗಳನ್ನು ನೋಡುವ ಬನ್ನಿ.

1.. ಮಾವಿನಹಣ್ಣಿನಲ್ಲಿ ಇರುವ ಆ್ಯಂಟಿ ಆಕ್ಸಿಡೆಂಟ್‌ಗಳು ನಮ್ಮ ದೇಹಕ್ಕೆ ಕ್ಯಾನ್ಸರ್‌ನಂತಹ ರೋಗಗಳಿಂದ ರಕ್ಷಿಸುತ್ತವೆ.

2. ಮಾವಿನಹಣ್ಣಿನಲ್ಲಿ ವಿಟಮಿನ್‌ ಸಿ ಹೇರಳವಾಗಿದ್ದು, ಇದರಲ್ಲಿರುವ ನಾರಿನಂಶ ಕೊಲೆಸ್ಟರಾಲ್‌ ಮಟ್ಟವನ್ನು ಸಮತೋಲನದಲ್ಲಿಡಲು ಸಹಾಯ ಮಾಡುತ್ತದೆ.

3. ಚರ್ಮದ ಆರೋಗ್ಯಕ್ಕೆ ಮಾವಿನಹಣ್ಣು ಬಹಳ ಉತ್ತಮ. ಮುಖದ ಸಾಮಾನ್ಯ ತೊಂದರೆಗಳಿಗೆ ಇದು ಮುಕ್ತಿ ನೀಡುವ ಜೊತೆಗೆ ನಯವಾದ ಹೊಳಪಿನ ಚರ್ಮವನ್ನು ನೀಡಿ, ಆಂತರಿಕವಾಗಿ ಚರ್ಮವನ್ನು ಆರೋಗ್ಯವಾಗಿರಿಸುತ್ತದೆ.

4. ಮಧುಮೇಹಿಗಳಿಗೂ ಮಾವಿನಹಣ್ಣಿನಿಂದ ಉಪಯೋಗವಿದೆ! ಈ ಸಿಹಿಯಾದ ಹಣ್ಣಲ್ಲದಿದ್ದರೇನಂತೆ, ಎಲೆ ಇದೆಯಲ್ಲ! ಸಕ್ಕರೆ ಖಾಯಿಲೆಯಿಂದ ಬಳಲುತ್ತಿದ್ದರೆ, ನಾಲ್ಕೈದು ಮಾವಿನ ಎಲೆಗಳನ್ನು ನೀರಿನಲ್ಲಿ ಚೆನ್ನಾಗಿ ಕುದಿಸಿ, ರಾತ್ರಿಯಲ್ಲಿ ಹಾಗೆಯೇ ಬಿಟ್ಟು ಮರುದಿನ ಬೆಳಗ್ಗೆ ಎದ್ದು ಹಸಿಹೊಟ್ಟೆಯಲ್ಲಿ ಕುಡಿಯುವುದರಿಂದ ಖಾಯಿಲೆಯನ್ನು ಹತೋಟಿಗೆ ತರಬಹುದು. ಜೊತೆಗೆ, ಅಯ್ಯೋ ನಾವು ಮಾವಿನ ಹಣ್ಣು ತಿನ್ನುವಂತಿಲ್ಲ ಎಂದು ಬೇಸರಿಸಿಕೊಳ್ಳುವ ಅಗತ್ಯವಿಲ್ಲ. ಮಿತವಾಗಿ ಹಣ್ಣು ತಿನ್ನುವುದರಿಂದ ಸಕ್ಕರೆ ಪ್ರಮಾಣ ಏರಿಳಿತವಾಗುವುದಿಲ್ಲ. ಆದರೆ, ಹೆಚ್ಚು ತಿಂದರೆ ಖಂಡಿತವಾಗಿ ದಿಢೀರ್‌ ಏರಿಕೆಯಾಗಿ ಆರೋಗ್ಯದಲ್ಲಿ ವ್ಯತ್ಯಯ ಉಂಟಾಗುವ ಸಂಭವವಿದೆ. ಹಾಗಾಗಿ ಎಷ್ಟು ತಿನ್ನಬಹುದು ಎಂಬುದಕ್ಕೆ ವೈದ್ಯರ ಸಲಹೆ ಪಡೆಯುವುದು ಉತ್ತಮ.

5. ಮಾವಿನಹಣ್ಣಿನಲ್ಲಿ ಟಾರ್ಟಾರಿಕ್‌ ಹಾಗೂ ಮಾಲಿಕ್‌ ಆಸಿಡ್‌ ಹೆಚ್ಚಿನ ಪ್ರಮಾಣದಲ್ಲಿರುವುದರಿಂದ ಹಾಗೂ ಸಿಟ್ರಿಕ್‌ ಆಸಿಡ್‌ ಅಂಶವೂ ಇರುವುದರಿಂದ ಇದು ದೇಹದ ಆಮ್ಲೀಯ ಮಟ್ಟವನ್ನೂ ಸಮತೋಲನದಲ್ಲಿರಿಸಲು ಸಹಾಯ ಮಾಡುತ್ತದೆ.

6. ತೂಕ ಹೆಚ್ಚಾಗುತ್ತದೆ ಎಂದು ಅಂದುಕೊಳ್ಳುವವರೂ ಕೂಡಾ ಹೆಚ್ಚಿಗೆ ಚಿಂತಿಸಬೇಕಾಗಿಲ್ಲ. ಸಾಕಷ್ಟು ವಿಟಮಿನ್‌ ಹಾಗೂ ಪೋಷಕಾಂಶಗಳಿಂದ ಸಂಪದ್ಭರಿತವಾಗಿರುವ ಮಾವಿನಹಣ್ಣನ್ನು ಮಿತವಾಗಿ ತಿಂದಲ್ಲಿ ತೂಕ ಇಳಿಕೆಯಲ್ಲಿ ಉಪಯೋಗವಿದೆ. ಒಂದು ಹಣ್ಣು ಒಬ್ಬಾತನ ಒಂದು ಹೊತ್ತಿನ ಹೊಟ್ಟೆ ತುಂಬಿಸುವುದರಿಂದ ಹಾಗೂ ಇದರಲ್ಲಿ ನಾರಿನಂಶವೂ ಇರುವುದರಿಂದ ದೇಹದಲ್ಲಿನ ಅನಗತ್ಯ ಬೊಜ್ಜನ್ನು ಕರಗಿಸುವಲ್ಲಿ ಸಹಾಯ ಮಾಡುತ್ತದೆ.

7. ಮಾವಿನಹಣ್ಣು ಪ್ರೀತಿಯ ಸಂಕೇತ. ಈ ಹಣ್ಣಿನಲ್ಲಿರುವ ಕಾಮೋತ್ತೇಜಕ ಗುಣಗಳು ಪುರುಷತ್ವವನ್ನು ಉದ್ದೀಪನಗೊಳಿಸುವ ಸಾಮರ್ಥ್ಯವನ್ನೂ ಹೊಂದಿದೆ.

ಇದನ್ನೂ ಓದಿ: ಆಕರ್ಷಕ ತ್ವಚೆಗಾಗಿ ಸೀಸನ್‌ ಮ್ಯಾಂಗೋ ಫೇಸ್‌ಪ್ಯಾಕ್‌

8. ವಿಟಮಿನ್‌ ಎ ಹೇರಳವಾಗಿರುವುದರಿಂದ ಮಾವು ಕಣ್ಣಿನ ಆರೋಗ್ಯಕ್ಕೆ ಉತ್ತಮ. ಇರುಳುಗಣ್ಣು ಹಾಗೂ ಒಣ ಕಣ್ಣಿನ ಸಮಸ್ಯೆ ಇರುವವರಿಗೆ ಮಾವು ಬಹಳ ಒಳ್ಳೆಯದು.

9. ಉದರಸಂಬಂಧೀ ಸಮಸ್ಯೆಗಳು ಇರುವವರಿಗೆ ಮಾವು ಒಳ್ಳೆಯದು. ಇದು ಪಚನಕ್ರಿಯೆಯನ್ನು ಚುರುಕಾಗಿಸಿ, ಆಹಾರ ಉತ್ತಮವಾಗಿ ಜೀರ್ಣವಾಗಲು ನೆರವಾಗುತ್ತದೆ.

10. ಆಯಾ ಋತುವಿನಲ್ಲಿ ಪ್ರಕೃತಿ ಸಹಜವಾಗಿ ಸಿಕ್ಕುವ ಹಣ್ಣುಗಳು ಆಯಾ ಕಾಲದ ಆರೋಗ್ಯ ಸಮಸ್ಯೆಗಳಿಗೆ ಖಂಡಿತ ಪರಿಹಾರ ಒದಗಿಸಲೇಬೇಕು. ಒದಗಿಸುತ್ತದೆ ಕೂಡಾ. ಇದು ಪ್ರಕೃತಿ ನಿಯಮ. ಹಾಗಾಗಿ ಬೇಸಿಗೆ ಅತಿಯಾದ ಉಷ್ಣದಿಂದ ಉಂಟಾಗುವ ಸಮಸ್ಯೆಗಳಿಂದ ಮಾವು ನಮ್ಮನ್ನು ದೂರವಿರಿಸುತ್ತದೆ.

11. ದೇಹಕ್ಕೆ ರೋಗನಿರೋಧಕ ಶಕ್ತಿಯನ್ನು ನೀಡುವಲ್ಲಿ ಕೂಡಾ ಮಾವಿನಹಣ್ಣಿನ ಪಾತ್ರ ದೊಡ್ಡದು.

12. ಗರ್ಭಿಣಿಯರಿಗೂ ಇದು ಅತ್ಯತ್ತಮ ಹಣ್ಣಾಗಿದ್ದು, ಭ್ರೂಣದ ಬೆಳವಣಿಗೆಗೆ ಪ್ರಯೋಜನಕಾರಿ.

13. ರಕ್ತಹೀನತೆಯಿಂದ ಬಳಲುವವರಿಗೆ ಮಾವು ಉತ್ತಮ. ಇದರಲ್ಲಿ ಕಬ್ಬಿಣಸತ್ವ ಅಧಿಕವಾಗಿರುವುದರಿಂದ ದೇಹಕ್ಕೆ ಹೆಚ್ಚು ಚೈತನ್ಯ ನೀಡುತ್ತದೆ.

ಇದನ್ನೂ ಓದಿ: ರೈತರನ್ನು ಆಕರ್ಷಿಸುತ್ತಿರುವ ಹೊಸ ಬೆಳೆ ಡ್ರ್ಯಾಗನ್‌ ಫ್ರೂಟ್‌

14. ಮಾವಿನಹಣ್ಣಿನ ನಿಯಮಿತ ಸೇವನೆ ಮಕ್ಕಳಲ್ಲಿ ಜ್ಞಾಪಕಶಕ್ತಿ ಹಾಗೂ ಏಕಾಗ್ರತೆಯನ್ನೂ ಹೆಚ್ಚಿಸುತ್ತದೆ.

15. ಮಾವು ಹೃದಯಕ್ಕೆ ಒಳ್ಳೆಯದು. ರಕ್ತ ಸರಾಗವಾಗಿ ಹರಿಯಲು ಇದು ಸಹಕಾರಿ.

Exit mobile version