ಬದಲಾಗುತ್ತಿರುವ ವಾತಾವರಣಕ್ಕೆ ಸರಿಯಾಗಿ ವ್ಯತ್ಯಾಸವಾಗುವ ನಮ್ಮ ಜೀರ್ಣಾಂಗಗಳ ಸೂಕ್ಷ್ಮಾಣುಗಳಿಂದಾಗಿ ಕೆಲವೊಮ್ಮೆ ಹೊಟ್ಟೆ ಹಾಳಾಗುವುದಿದೆ. ಅಜೀರ್ಣ, ಆಸಿಡಿಟಿ, ಹೊಟ್ಟೆ ಉಬ್ಬರ, ಇವುಗಳಿಂದಾಗಿ ಮೂಡ್ ಬದಲಾವಣೆ ಮುಂತಾದವು ಎದುರಾದರೆ- ಅಸಹಜವೇನಲ್ಲ. ಇವುಗಳನ್ನು ಸರಿ ಮಾಡಿಕೊಳ್ಳುವುದಕ್ಕೂ (Season Transition) ಉಪಾಯಗಳಿವೆ. ಚಳಿ ಮತ್ತು ಶುಷ್ಕ ದಿನಗಳು ಮರೆಯಾಗುತ್ತಿವೆ. ರಥಸಪ್ತಮಿ ಮುಗಿದ ಮೇಲೆ ಬಿಸಿಲಿನ ತಾಪ ಏರತೊಡಗುತ್ತದೆ. ಈವರೆಗೆ ಚಳಿಯ ದಿನಗಳಿಗೆ ಹೊಂದಿಕೊಂಡಿದ್ದ ದೇಹ ಈಗ ಸೆಕೆಗೆ ಹೊಂದಿಕೊಳ್ಳಬೇಕು. ಆದರೆ ಚಳಿಯಲ್ಲಿ ಬೇಕಾಗುವ ವಸ್ತ್ರಗಳ ಬದಲಿಗೆ ಬೇಸಿಗೆಯ ವಸ್ತ್ರಗಳನ್ನು ಹೊಂದಿಸಿಕೊಳ್ಳುವ ಬಗ್ಗೆಯೆ ನಾವು ಯೋಚಿಸುವುದು. ಅಷ್ಟೇ ಆದರೆ ಸಾಲದಲ್ಲ. ನಮ್ಮ ಕರುಳಿನಲ್ಲಿರುವ ಕೋಟಿಗಟ್ಟಲೆ ಸಂಖ್ಯೆಯ ಒಳ್ಳೆಯ ಬ್ಯಾಕ್ಟೀರಿಯಗಳಲ್ಲೂ (gut microbiome) ಬದಲಾವಣೆಗಳು ಆಗುತ್ತಿರುತ್ತವೆ.
ಇವುಗಳಿಗಿದೆ ಉಪಾಯ
ಬದಲಾಗುತ್ತಿರುವ ವಾತಾವರಣಕ್ಕೆ ಸರಿಯಾಗಿ ವ್ಯತ್ಯಾಸವಾಗುವ ನಮ್ಮ ಜೀರ್ಣಾಂಗಗಳ ಸೂಕ್ಷ್ಮಾಣುಗಳಿಂದಾಗಿ ಕೆಲವೊಮ್ಮೆ ಹೊಟ್ಟೆ ಹಾಳಾಗುವುದಿದೆ. ಅಜೀರ್ಣ, ಆಸಿಡಿಟಿ, ಹೊಟ್ಟೆ ಉಬ್ಬರ, ಇವುಗಳಿಂದಾಗಿ ಮೂಡ್ ಬದಲಾವಣೆ ಮುಂತಾದವು ಎದುರಾದರೆ- ಅಸಹಜವೇನಲ್ಲ. ಇವುಗಳನ್ನು ಸರಿ ಮಾಡಿಕೊಳ್ಳುವುದಕ್ಕೂ ಉಪಾಯಗಳಿವೆ. ನಮ್ಮ ಆಹಾರ ಮತ್ತು ಜೀವನಶೈಲಿಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಿಕೊಂಡರೆ ಈ ಸಂಕ್ರಮಣದ ಕಾಲದಲ್ಲಿ ಆರೋಗ್ಯ ಹಾಳಾಗದಂತೆ ಕಾಪಾಡಿಕೊಳ್ಳಬಹುದು.
ಖಾರ ಪದಾರ್ಥ ಅಗತ್ಯವಿಲ್ಲ
ಚಳಿಗಾಲದಲ್ಲಿ ಹೆಚ್ಚಾಗಿ ಸೇವಿಸುತ್ತಿದ್ದ ಮಸಾಲೆ, ಖಾರದ ಆಹಾರಗಳು ಈಗ ಅಗತ್ಯವಿಲ್ಲ. ಅತಿ ಬಿಸಿಯಾದ, ಉಷ್ಣ ಹೆಚ್ಚಿಸುವಂಥ, ಕೊಬ್ಬು ಹೆಚ್ಚಿರುವ ಆಹಾರಗಳು ಬೇಸಿಗೆಯಲ್ಲಿ ಆರೋಗ್ಯ ಹಾಳುಗೆಡವುತ್ತವೆ. ಕರಿದ ತಿಂಡಿಗಳನ್ನೂ ಇದೇ ಸಾಲಿಗೆ ಸೇರಿಸಬಹುದು. ಈಗ ರಸಭರಿತ, ತಂಪಾದ, ಗಿಡ ಮೂಲಿಕೆಗಳು ಸೇರಿದಂಥ, ದೇಹದ ಉಷ್ಣತೆ ತಗ್ಗಿಸುವಂಥ ಆಹಾರಗಳು ಹಿತ ನೀಡುತ್ತವೆ. ಹಾಗೆಂದು ತಣ್ಣಗಿನ ಐಸ್‌ಕ್ರೀಮ್, ಫ್ರಿಜ್‌ನಲ್ಲಿರುವ ಸೋಡಾ, ಫ್ರೂಟ್‌ಜ್ಯೂಸ್‌ಗಳನ್ನು ಗಂಟಲಿಗೆ ಬಗ್ಗಿಸಿದಿರೊ, ಆರೋಗ್ಯ ಮಗುಚೀತು, ಜೋಕೆ!
ನೀರು ಹೆಚ್ಚಿಸಿ
ಚಳಿಗಾಲದಲ್ಲಿ ಹೆಚ್ಚು ಬಾಯಾರಿಕೆ ಆಗುವುದಿಲ್ಲ ಎಂಬ ನೆವವೊಡ್ಡಿ ನೀರು ಕುಡಿಯುವ ಪ್ರಮಾಣವನ್ನು ಕಡಿಮೆ ಮಾಡಿದ್ದರೆ, ಇದೀಗ ಅದನ್ನು ಹೆಚ್ಚಿಸಿಕೊಳ್ಳುವ ಸಮಯ. ಜೀರ್ಣಾಂಗಗಳು ಸಮರ್ಪಕವಾಗಿ ಕಾರ್ಯ ನಿರ್ವಹಿಸುವುದಕ್ಕೆ ನೀರಿನ ಪ್ರಮಾಣ ಸಾಕಷ್ಟು ದೊರೆಯಬೇಕಾದ್ದು ಅಗತ್ಯ. ಕರುಳಿನಲ್ಲಿ ಸತ್ವಗಳನ್ನು ಹೀರಿಕೊಳ್ಳುವ ಲೋಳೆಯ ಪದರಗಳಿಗೆ ಹದವಾಗಿ ದ್ರವಾಹಾರಗಳು ಬೇಕು. ಅದರಲ್ಲೂ ಉಷ್ಣತೆ ಹೆಚ್ಚಾಗಿ ಬೆವರಲಾರಂಭಿಸಿದರೆ, ನೀರಿನ ಪ್ರಮಾಣ ಹೆಚ್ಚಿಸಿದಷ್ಟೂ ಸಾಕಾಗುವುದಿಲ್ಲ. ಹಾಗಾಗಿ ಸೌತೆಕಾಯಿ, ಕಲ್ಲಂಗಡಿ, ಕಿತ್ತಳೆಯಂಥ ರಸಭರಿತ ಆಹಾರಗಳ ಪ್ರಮಾಣ ಹೆಚ್ಚಿಸಬಹುದು.
ಪ್ರೊಬಯಾಟಿಕ್
ಇದರಲ್ಲಿರುವ ಸತ್ವಗಳ ನಮ್ಮ ಜೀರ್ಣಾಂಗಗಳಿಗೆ ಅಮೃತವಿದ್ದಂತೆ. ಇದರ ಬ್ಯಾಕ್ಟೀರಿಯಗಳು ಕರುಳಿಗೆ ಅಗತ್ಯವಾದ ಒಳ್ಳೆಯ ಸೂಕ್ಷ್ಮಾಣುಗಳ ಪೂರಕೆಯಲ್ಲಿ ಗಣನೀಯ ಪಾತ್ರ ವಹಿಸುತ್ತವೆ. ಹಾಗಾಗಿ ಹುದುಗು ಬಂದಂಥ ಆಹಾರಗಳಲ್ಲಿ ಹೆಚ್ಚಿನ ಪ್ರೊಬಯಾಟಿಕ್ ಸತ್ವಗಳಿದ್ದು, ದೇಹಕ್ಕೆ ಪೂರಕವಾಗಿ ಕೆಲಸ ಮಾಡುತ್ತವೆ. ಮೊಸರು, ಮಜ್ಜಿಗೆ, ಗ್ರೀಕ್ ಯೋಗರ್ಟ್‌ಗಳು. ಕಿಮ್ಚಿ ಮುಂತಾದವು ಎಲ್ಲಾ ಕಾಲಕ್ಕೂ ನಮಗೆ ಅಗತ್ಯ.
ನಾರು
ನೀರಿನಷ್ಟೇ ನಾರು ಸಹ ಮುಖ್ಯ. ಆಹಾರದಲ್ಲಿ ನಾರು ಹೆಚ್ಚಿದಂತೆ ಕರುಳಿನ ಸೂಕ್ಷ್ಮಾಣುಗಳ ಸಮತೋಲನ ಸಾಧಿಸುವಲ್ಲಿ ಸುಲಭವಾಗುತ್ತದೆ. ಕರಗದಿರುವಂಥ ನಾರುಗಳು ಜೀರ್ಣಾಂಗಗಳ ಆರೋಗ್ಯ ಸುಧಾರಿಸಿ, ಮಲಬದ್ಧತೆ ನಿವಾರಿಸುತ್ತವೆ. ಹಾಗಾಗಿ ಋತು ಬದಲಾಗುವ ಸಮಯದಲ್ಲಿ ನಾರುಭರಿತ ಆಹಾರ ಅಗತ್ಯವಾಗಿ ಬೇಕು. ಬೇಸಿಗೆಯಲ್ಲಿ ದೊರೆಯುವ ಹಣ್ಣು-ತರಕಾರಿಗಳು, ಇಡಿ ಧಾನ್ಯಗಳು, ಮೊಳಕೆ ಕಾಳುಗಳು ಮುಂತಾದವು ದೇಹದ ಸ್ವಾಸ್ಥ್ಯ ಕಾಪಾಡುವಲ್ಲಿ ನೆರವಾಗುತ್ತವೆ.
ತಿನ್ನುವುದೆಷ್ಟು?
ಸಹಜವಾಗಿ ದೇಹದ ಚಯಾಪಚಯ ಚಳಿಗಾಲದಷ್ಟು ಹೆಚ್ಚು ಬೇಸಿಗೆಯಲ್ಲಿ ಇರುವುದಿಲ್ಲ. ಹಾಗಾಗಿ ತಿನ್ನುವ ಪ್ರಮಾಣವನ್ನು ಮೊದಲಿನಷ್ಟೇ ಇರಿಸಿಕೊಂಡರೆ ಈಗ ಕಷ್ಟವಾಗಬಹುದು. ಯಾವುದು ಬೇಕು ಎನ್ನುವುದರ ಜೊತೆಗೆ ಎಷ್ಟು ಬೇಕು ಎನ್ನುವುದರತ್ತಲೂ ಗಮನ ಅಗತ್ಯ. ಒಂದಿಷ್ಟು ಹೊಟ್ಟೆಗೆ ಹಾಕಿದರಾಯಿತು ಎನ್ನುವ ಬದಲು, ತಿನ್ನುವ ಆಹಾರದ ರುಚಿ, ಘಮ ಇತ್ಯಾದಿಗಳ ಬಗ್ಗೆ ಲಕ್ಷ್ಯ ಕೊಡಿ. ತಿಂದ ಆಹಾರ ರುಚಿಸಿದರೆ, ದೇಹಕ್ಕೆ ಹೀರಿಕೊಳ್ಳುವುದು ಸುಲಭ.
ನಿಯಮಿತವಾಗಿರಲಿ
ನಮ್ಮ ಜೀರ್ಣಾಂಗಗಳು ಸಂತೃಪ್ತವಾಗಿ ಇರಬೇಕೆಂದರೆ ನಿಯಮಿತವಾದ ಆಹಾರ ಪದ್ಧತಿಯನ್ನು ರೂಢಿಸಿಕೊಳ್ಳುವುದು ಅಗತ್ಯ. ಒಂದು ಊಟ ಅಥವಾ ತಿಂಡಿಯಿಂದ ಇನ್ನೊಂದಕ್ಕೆ ಕನಿಷ್ಟ 3-4 ತಾಸುಗಳ ಅಂತರ ಇರಲಿ. ರಾತ್ರಿಯ ನಿದ್ದೆಯನ್ನೂ ನಿಯಮಿತವಾಗಿ ಇರಿಸಿಕೊಳ್ಳುವುದು ಮುಖ್ಯ. ಈ ಎಲ್ಲ ಅಭ್ಯಾಸಗಳಿಂದ ನಮ್ಮ ಜೀರ್ಣಾಂಗಗಳ ಆರೋಗ್ಯವನ್ನು ಹೆಚ್ಚಿಸಿಕೊಳ್ಳಬಹುದು. ಇದರಿಂದ ಯಾವುದೇ ಋತು ಬದಲಾವಣೆಗೂ ನಮ್ಮ ಸ್ವಾಸ್ಥ್ಯ ಬದಲಾಗದಂತೆ ಕಾಪಾಡಿಕೊಳ್ಳಬಹುದು.
ಇದನ್ನೂ ಓದಿ: Weight Loss Tips: ಬಾಯಲ್ಲಿ ನೀರೂರಿಸುವ ಚಟ್ನಿಗಳ ಮೂಲಕ ತೂಕ ಇಳಿಸಿ!