Site icon Vistara News

Red Line on Medicine Strip: ಔಷಧ ಪ್ಯಾಕೇಟ್‌ ಮೇಲೆ ಕೆಂಪು ಗೆರೆ ಏಕಿರುತ್ತದೆ ಅನ್ನೋದು ಗೊತ್ತಾ?

Medicine

ಕೆಲವರು ಔಷಧಗಳ ಮೇಲೆ ಹೆಚ್ಚು ಅವಲಂಬಿತರಾಗಿರುತ್ತಾರೆ. ತಲೆನೋವಿನಿಂದ ಹಿಡಿದು ದೀರ್ಘಕಾಲದ ಕಾಯಿಲೆಗಳವರೆಗೆ ಪರಿಹಾರಕ್ಕಾಗಿ ಔಷಧವನ್ನು (Medicine) ಅವಲಂಬಿಸಿರುವ ಅನೇಕರಿದ್ದಾರೆ. ವೈದ್ಯರ ಸಮಾಲೋಚನೆ (doctors prescription) ಇಲ್ಲದೆ ಯಾವುದೇ ಔಷಧವನ್ನು (Check Medicine) ತೆಗೆದುಕೊಳ್ಳಬಾರದು ಎನ್ನುವ ನಿಯಮವಿದ್ದರೂ ಹೆಚ್ಚಿನವರು ಔಷಧಾಲಯಗಳಿಂದ (Pharmacy) ಔಷಧ ತಂದು ತೆಗೆದುಕೊಳ್ಳುತ್ತಾರೆ. ಬಳಿಕ ಅದರ ಅಡ್ಡ ಪರಿಣಾಮಗಳನ್ನು ಎದುರಿಸುತ್ತಾರೆ. ಕೆಲವೊಮ್ಮೆ ಇದು ಜೀವಕ್ಕೆ ಅಪಾಯ ಉಂಟು ಮಾಡಬಹುದು.

ಈ ಕುರಿತು ಜಾಗೃತಿ ಮೂಡಿಸುವ ಸಲುವಾಗಿ 2016ರಲ್ಲಿ ಭಾರತ ಸರ್ಕಾರದ ಆರೋಗ್ಯ ಸಚಿವಾಲಯವು ಔಷಧದ ಮೇಲೆ ಕೆಂಪು ರೇಖೆಯನ್ನು (Red Line on Medicine Packets) ಹಾಕಿ ಜನರಿಗೆ ಅರಿವು ಮೂಡಿಸುವ ಪ್ರಯತ್ನ ಮಾಡಿತ್ತು. ಈ ಕುರಿತು ಟ್ವಿಟ್ಟರ್‌ನಲ್ಲಿ ಪೋಸ್ಟ್ ಅನ್ನೂ ಹಂಚಿಕೊಂಡಿತ್ತು. ಔಷಧದ ಮೇಲೆ ಕೆಂಪು ಪಟ್ಟಿಯಿರುವ ಯಾವುದೇ ಔಷಧಗಳನ್ನು ವೈದ್ಯರ ಪ್ರಿಸ್ಕ್ರಿಪ್ಷನ್ ಇಲ್ಲದೆ ತೆಗೆದುಕೊಳ್ಳಬಾರದು. ಹೀಗಾಗಿ ಔಷಧದ ಮುಕ್ತಾಯ ದಿನಾಂಕವನ್ನು ಪರಿಶೀಲಿಸುವಾಗ ಪ್ಯಾಕೆಟ್ ಮೇಲಿರುವ ಕೆಂಪು ಪಟ್ಟಿಯನ್ನೂ ಗಮನಿಸುವುದು ಮುಖ್ಯವಾಗಿದೆ ಎಂದು ಸಚಿವಾಲಯ ಈ ಪೋಸ್ಟ್ ನಲ್ಲಿ ತಿಳಿಸಿದೆ.


ಸಾಮಾನ್ಯವಾಗಿ ಈ ಗೆರೆ ಆಂಟಿ ಬಯೋಟಿಕ್ ಔಷಧಗಳ ಮೇಲೆ ಇರುತ್ತದೆ. ಇವುಗಳನ್ನು ಅತಿಯಾಗಿ ತೆಗೆದುಕೊಂಡರೆ ಕೆಲವು ವರ್ಷಗಳ ಅನಂತರ ಅವು ದೇಹದ ಮೇಲೆ ಕೆಲಸ ಮಾಡುವುದನ್ನು ನಿಲ್ಲಿಸುತ್ತದೆ ಎಂದು ಇಲಾಖೆ ಎಚ್ಚರಿಸಿದೆ.

ಔಷದ ಖರೀದಿ ಮಾಡುವಾಗ ಗಮನಿಸಬೇಕಾದ ಸಂಗತಿಗಳು ಇಲ್ಲಿವೆ.


ಡೋಸೇಜ್

ಕೆಂಪು ಔಷಧ ಪಟ್ಟಿಯು ಮಾತ್ರೆಗಳು ಅಥವಾ ಬಾಟಲಿಯಲ್ಲಿ ಗುರುತಿಸಲು ಸುಲಭವಾಗಿದೆ. ಇದು ವಯಸ್ಕರು ಸೇವಿಸಬಹುದಾದ ಡೋಸೇಜ್ ಅನ್ನು ಒಳಗೊಂಡಿದೆ. ಔಷಧವು ವಯಸ್ಕರು ಮತ್ತು ಮಕ್ಕಳಿಗೆ ವಿಭಿನ್ನ ಡೋಸೇಜ್ ಗಳನ್ನು ಒಳಗೊಂಡಿರುತ್ತದೆ. ಔಷಧವನ್ನು ನಿಯಮಿತವಾಗಿ ಸೇವಿಸುತ್ತಿದ್ದರೂ ಖರೀದಿಸುವ ಮೊದಲು ಯಾವಾಗಲೂ ಡೋಸೇಜ್ ಅನ್ನು ಪರಿಶೀಲಿಸಿ.

ಅಡ್ಡಪರಿಣಾಮ

ಔಷಧಗಳು ಅಲರ್ಜಿಯನ್ನು ಉಂಟು ಮಾಡುವ ಅಂಶವನ್ನು ಸೂಚಿಸುವ ಎಚ್ಚರಿಕೆಯ ಲೇಬಲ್ ಅನ್ನು ಹೊಂದಿರುತ್ತವೆ. ಅದನ್ನು ಓದಿ ಮತ್ತು ನಿಮ್ಮ ವೈದ್ಯರಿಗೆ ತಿಳಿಸಿ. ಇದರಿಂದ ಔಷಧವನ್ನು ಬದಲಾಯಿಸಬಹುದು ಮತ್ತು ಅದರ ಬದಲಿಗೆ ಬೇರೆ ಯಾವುದನ್ನಾದರೂ ಶಿಫಾರಸು ಮಾಡಬಹುದು. ರೋಗಿಗಳು ಮತ್ತು ಆರೈಕೆ ಮಾಡುವವರು ಸಂಭಾವ್ಯ ಅಡ್ಡಪರಿಣಾಮಗಳು, ಔಷಧಗಳ ಪರಸ್ಪರ ಕ್ರಿಯೆಗಳು, ಅಲರ್ಜಿಯ ಪ್ರತಿಕ್ರಿಯೆಗಳು ಮತ್ತು ವಿಶೇಷ ಸೂಚನೆಗಳ ಬಗ್ಗೆ ಎಚ್ಚರಿಕೆಯಿಂದ ಗಮನಿಸಬೇಕು.

ಸಂಗ್ರಹ

ಎಲ್ಲ ಔಷಧಗಳು ಹೆಚ್ಚು ಕಾಲ ಸಂಗ್ರಹಕ್ಕೆ ಯೋಗ್ಯವಾಗಿರುವುದಿಲ್ಲ. ಸಂಗ್ರಹಕ್ಕೆ ನಿರ್ದಿಷ್ಟ ಸ್ಥಿತಿಗಳನ್ನು ಸೂಚಿಸಲಾಗಿರುತ್ತದೆ. ಶೇಖರಣಾ ಪರಿಸ್ಥಿತಿಗಳು ಔಷಧೀಯ ಸ್ಥಿರತೆ ಮತ್ತು ಸಾಮರ್ಥ್ಯವನ್ನು ಕಾಪಾಡಿಕೊಳ್ಳಲು ಅಗತ್ಯವಿರುವ ಪರಿಸರ ಅಂಶಗಳನ್ನು ಸೂಚಿಸುತ್ತವೆ. ಅಸಮರ್ಪಕ ಶೇಖರಣೆಯು ಔಷಧಿಗಳ ಪರಿಣಾಮಕಾರಿತ್ವವನ್ನು ಕಡಿಮೆ ಮಾಡಿ ಪ್ರತಿಕೂಲ ಪರಿಣಾಮಗಳ ಅಪಾಯವನ್ನು ಹೆಚ್ಚಿಸಬಹುದು.


ಮುಕ್ತಾಯ ದಿನಾಂಕ

ಯಾವತ್ತೂ ಔಷಧದ ಮುಕ್ತಾಯ ದಿನಾಂಕವನ್ನು ಪರಿಶೀಲಿಸದೆ ಔಷಧ ಖರೀದಿಸಬೇಡಿ. ರೋಗಿಗಳು ಅವಧಿ ಮೀರಿದ ಔಷಧಗಳನ್ನು ಬಳಸಬಾರದು. ಇದು ಪ್ರತಿಕೂಲ ಪರಿಣಾಮ ಅಥವಾ ಚಿಕಿತ್ಸೆಯ ವೈಫಲ್ಯಕ್ಕೆ ಕಾರಣವಾಗಬಹುದು.

ಬ್ಯಾಚ್ ಸಂಖ್ಯೆ

ಇದು ಔಷಧಗಳ ತಯಾರಿಕೆಯ ಇತಿಹಾಸವನ್ನು ಪತ್ತೆಹಚ್ಚಲು ಸಹಾಯ ಮಾಡುತ್ತದೆ. ಕೆಲವು ಔಷಧಗಳು ಎಕ್ಸ್‌ಪೈರಿ ಕೋಡ್ ಅನ್ನು ಸಹ ಒಳಗೊಂಡಿರುತ್ತದೆ. ಇದು ಮುಕ್ತಾಯ ದಿನಾಂಕ ಅಥವಾ ಬ್ಯಾಚ್ ಗುರುತಿನ ಕುರಿತು ಹೆಚ್ಚುವರಿ ಮಾಹಿತಿಯನ್ನು ಒದಗಿಸುತ್ತದೆ.

ಇದನ್ನೂ ಓದಿ: Multivitamins: ನಮಗೆ ವಿಟಮಿನ್‌ ಪೂರಕಗಳು ಅಗತ್ಯವೆಂದು ತಿಳಿಯುವುದು ಹೇಗೆ?

ಕರಪತ್ರ

ಪ್ರತಿಯೊಂದು ಔಷಧದಲ್ಲೂ ಕಾಗದದ ಕರಪತ್ರವಿರುತ್ತದೆ. ಇದನ್ನು ಓದುವುದು ಬಹಳ ಮುಖ್ಯ. ಇದು ಔಷಧಿಯ ಬಳಕೆ, ಅಡ್ಡ ಪರಿಣಾಮ, ಮುನ್ನೆಚ್ಚರಿಕೆಗಳು ಮತ್ತು ಬಳಕೆಗೆ ಸೂಚನೆಗಳನ್ನು ಒಳಗೊಂಡಂತೆ ಸಮಗ್ರ ಮಾಹಿತಿಯನ್ನು ಒದಗಿಸುತ್ತದೆ.

Exit mobile version