ಬಹಳಷ್ಟು ಪುರುಷರ ಸೌಂದರ್ಯ ಸಮಸ್ಯೆ ಎಂದರೆ ಬೊಕ್ಕತಲೆ (baldness problem). ಮಹಿಳೆಯರಿಗಿಂತ ಹೆಚ್ಚು ಸೌಂದರ್ಯದ ವಿಚಾರದಲ್ಲಿ ತಲೆಕೆಡಿಸಿಕೊಳ್ಳುವುದು ಎಂದರೆ ಕೂದಲಿನ ವಿಚಾರಕ್ಕೇ. ಕೂದಲು ಉದುರುವ ಸಮಸ್ಯೆ ಆರಂಭವಾದರೆ ಬಹುತೇಕ ಪುರುಷರು ಇನ್ನಿಲ್ಲದಂತೆ ಚಿಂತಾಕ್ರಾಂತರಾಗಿಬಿಡುತ್ತಾರೆ. ಸಿಕ್ಕಸಿಕ್ಕ ಎಣ್ಣೆಗಳಿಂದ ಮಸಾಜ್, ಶಾಂಪೂಗಳು, ಸೀರಂಗಳು, ಸಲೂನ್‌ನಲ್ಲಿ ಸಲಹೆ ನೀಡಿದ ವಿಧವಿಧ ತಂತ್ರಗಳನ್ನು ಬಳಸಿ ತಮ್ಮ ಕೂದಲನ್ನು ಸಂರಕ್ಷಿಸಲು ಪ್ರಯತ್ನ ಪಡುತ್ತಾರೆ. ಆದರೆ, ಕುಟುಂಬದ ಹಿನ್ನೆಲೆ ಸೇರಿದಂತೆ, ನಾನಾ ಕಾರಣಗಳು ಈ ಬೊಕ್ಕತಲೆಗೆ ಇದ್ದರೂ, ಬಹುತೇಕರು ಕಾರಣ ಹುಡುಕಿ ಮೂಲ ಕಾರಣಕ್ಕೆ ಸರಿಯಾದ ಉತ್ತರ ಹುಡುಕುವಲ್ಲಿ ಸೋಲುತ್ತಾರೆ.
ಥೈರಾಯ್ಡ್ ಸಮಸ್ಯೆ
ಪುರುಷರ ಸೌಂದರ್ಯಕ್ಕೆ ಕಳಶಪ್ರಾಯವಾದ ಕೂದಲಿನ ಸೌಂದರ್ಯ ಕಳೆದುಕೊಳ್ಳಲು ಮುಖ್ಯ ಕಾರಣಗಳಲ್ಲಿ ಒಂದು ಎಂದರೆ ಥೈರಾಯ್ಡ್ ಸಮಸ್ಯೆ ಎಂಬುದನ್ನೂ ನೀವು ಅರಿತುಕೊಳ್ಳಬೇಕು. ಬಹುತೇಕ ಪುರುಷರು ಥೈರಾಯ್ಡ್ ಸಮಸ್ಯೆಯಿಂದ ಬಳಲುತ್ತಿರುವುದು ಸ್ವತಃ ಅವರಿಗೇ ಅರಿವಿರುವುದಿಲ್ಲ. ಹೈಪೋ ಥೈರಾಯ್ಡ್ ಸಮಸ್ಯೆ, ಅಂದರೆ, ಥೈರಾಯ್ಡ್ ಮಟ್ಟ ಕಡಿಮೆಯಿರುವ ಸಮಸ್ಯೆಯಿಂದ ಕೂದಲುದುರುವ ಸಮಸ್ಯೆಯೂ ಹೆಚ್ಚಾಗುತ್ತದೆ. ಇದರಿಂದ ಬೊಕ್ಕತಲೆಯೂ ಆಗಬಹುದು. ಬಹಳಷ್ಟು ಮಂದಿ ಈ ಸಮಸ್ಯೆ ಕೇವಲ ಮಹಿಳೆಯರಿಗಷ್ಟೇ ಬರುವುದು ಎಂದುಕೊಂಡರೂ, ಇದು ಪುರುಷರಲ್ಲಿಯೂ ಕಾಣುವ ಸಾಮಾನ್ಯ ಸಮಸ್ಯೆಯಾಗಿದೆ. ಹಾಗೂ ಇತ್ತೀಚೆಗೆ ಈ ಸಮಸ್ಯೆ ಹೆಚ್ಚಾಗುತ್ತಿದೆ. ಬದಲಾದ ಜೀವನಶೈಲಿ, ಜೀವನದಲ್ಲಿ ಹೆಚ್ಚಿದ ಒತ್ತಡ ಹಾಗೂ ಅತಿಯಾದ ಕೆಲಸಗಳೂ ಕೂಡಾ ಈ ಸಮಸ್ಯೆಗೆ ಕಾರಣವಾಗಿರಬಹುದು.
ಮಹಿಳೆಯರು, ಮರೆವಿನ, ಕೂದಲುದುರುವ, ಸುಸ್ತಾಗುವುದು, ಚಳಿಯೆನಿಸುವ ಸಮಸ್ಯೆಗಳನ್ನು ಎದುರಿಸುವುದು ಹೆಚ್ಚು. ಪುರುಷರೂ ಕೂಡಾ ಈ ಸಮಸ್ಯೆಗಳನ್ನು ಎದುರಿಸುತ್ತಾರೆ. ಆದರೆ, ಪುರುಷರು ಎದುರಿಸುವ ಈ ಸಮಸ್ಯೆಗಳು ಬಹಳಷ್ಟು ಸಂದರ್ಭಗಳಲ್ಲಿ ನಿರ್ಲಕ್ಷ್ಯಕ್ಕೆ ಒಳಗಾಗುವುದೇ ಹೆಚ್ಚು. ಇದು ಕೆಲವು ಸಂದರ್ಭಗಳಲ್ಲಿ ಪರೀಕ್ಷೆಗಳ ಮುಖಾಂತರ ಬಯಲಾದರೂ, ಪುರುಷರು ಇದಕ್ಕೆ ಔಷಧಿಗಳನ್ನು ಸೇವಿಸುವುದು ಕಡಿಮೆಯೇ. ಪರಿಣಾಮವಾಗಿ ಕೂದಲುದುರುವುದೂ ಸೇರಿದಂತೆ ಹಲವು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.
ಪುರುಷರಾಗಲೀ, ಮಹಿಳೆಯರಾಗಲೀ, ಆರೋಗ್ಯವಾಗಿರಬೇಕಾದರೆ ಥೈರಾಯ್ಡ್ ಮಟ್ಟ ಸಮತೋಲನದಲ್ಲಿರಬೇಕು. ದೇಹದಲ್ಲಿ ತಲೆಯಿಂದ ಪಾದದವರೆಗೆ ಎಲ್ಲ ಅಂಗಗಳೂ ಸಮರ್ಪಕವಾಗಿ ಕೆಲಸ ಮಾಡಬೇಕೆಂದರೆ ಥೈರಾಯ್ಡ್ ಮಟ್ಟ ಸಮತೋಲನದಲ್ಲಿಡುವುದು ಬಹಳ ಮುಖ್ಯ.
ವೈದ್ಯರನ್ನು ಸಂಪರ್ಕಿಸಿ
ಸುಸ್ತು, ಚಳಿಯಾದಂತೆ ಅನುಭವ, ಮಲಬದ್ಧತೆ, ತೂಕ ಹೆಚ್ಚಾಗುವುದು, ಚರ್ಮ ಹಾಗೂ ಕೂದಲ ಆರೋಗ್ಯ ಹದಗೆಡುವುದು, ಮಾಂಸಖಂಡಗಳಲ್ಲಿ ಸೆಳೆತ ಹಾಗೂ ಸುಸ್ತು, ಕೂದಲು ಉದುರುವುದು, ಮಾನಸಿಕವಾಗಿ ಒತ್ತಡ ಖಿನ್ನತೆ ಮತ್ತಿತರ ಸಮಸ್ಯೆಗಳು ಕಂಡು ಬಂದರೆ ಕೂಡಲೇ ವೈದ್ಯರನ್ನು ಸಂಪರ್ಕಿಸಿ. ವೈದ್ಯರ ಸಲಹೆಯ ಮೇರೆಗೆ ಸಾಮಾನ್ಯ ಪರೀಕ್ಷೆಗಳನ್ನು ಮಾಡಿಸಿಕೊಂಡು ಚಿಕಿತ್ಸೆ ಪಡೆಯಿರಿ.
ಪರೀಕ್ಷೆಗಳಲ್ಲಿ ಥೈರಾಯ್ಡ್ ಮಟ್ಟ ಸಮತೋಲನದಲ್ಲಿರುವುದು ಕಂಡು ಬಂದರೆ, ಹಾಗೂ ಈ ಎಲ್ಲ ಸಮಸ್ಯೆಗಳೂ ಮುಂದುವರಿದರೆ, ಥೈರೋ ಪೆರಾಕ್ಸಿಡೇಟ್ ಆಂಟಿ ಬಾಡಿ ಟೆಸ್ಟ್ ಮೂಲಕವೂ ಥೈರಾಯ್ಡ್ ಆರೋಗ್ಯವನ್ನು ಪರೀಕ್ಷಿಸಬಹುದು. ಇದಕ್ಕಾಗಿ ವೈದ್ಯರ ಸಲಹೆ ಪಡೆಯಿರಿ. ಈ ಸಮಸ್ಯೆ ಅಲ್ಲವಾದರೆ, ಬೇರೆ ಕಾರಣಗಳನ್ನು ಹುಡುಕಿ.
ಬಹಳಷ್ಟು ಸಂದರ್ಭಗಳಲ್ಲಿ ಜೀವನಶೈಲಿಯನ್ನು ಬದಲಾಯಿಸುವುದು, ಆರೋಗ್ಯಕರ ಆಹಾರ ಅಭ್ಯಾಸ, ಒತ್ತಡರಹಿತ ಜೀವನ ಶೈಲಿ ಇತ್ಯಾದಿಗಳ ಅಭ್ಯಾಸದಿಂದ ಈ ಸಮಸ್ಯೆಗಳು ಸಾಕಷ್ಟು ಕಡಿಮೆಯಾಗುತ್ತದೆ. ಪರ್ಯಾಯ ವೈದ್ಯಪದ್ಧತಿಗಳು ಹಾಗೂ ಆಯುರ್ವೇದದಂತಹ ಪ್ರಾಚೀನ ವೈದ್ಯ ಪದ್ಧತಿಗಳಲ್ಲಿಯೂ ಸಾಕಷ್ಟು ನೈಸರ್ಗಿಕ ಮಾರ್ಗಗಳಿಂದ ಥೈರಾಯ್ಡ್ ಸಮಸ್ಯೆಗಳಿಗೆ ಉತ್ತರವೂ ಇದೆ. ಹಾಗಾಗಿ. ಮೂಲಕಾರಣವನ್ನು ಹುಡುಕಿಕೊಂಡು, ಸಮಸ್ಯೆಗೆ ಉತ್ತರ ಹುಡುಕುವುದು ಅತ್ಯಂತ ಮುಖ್ಯ. ಎಷ್ಟೇ, ಶಾಂಪೂ, ಎಣ್ಣೆಗಳ ಬದಲಾವಣೆಗಳನ್ನು ಮಾಡಿದರೂ ಬೊಕ್ಕತಲೆ ಸೇರಿದಂತೆ ಹಲವು ಸಮಸ್ಯೆಗಳಿಗೆ ಉತ್ತರ ಸುಲಭವಾಗಿ ದಕ್ಕದು ಕೂಡ.
ಇದನ್ನೂ ಓದಿ: Health Tips for Winter: ಚಳಿಗಾಲದಲ್ಲಿ ನ್ಯುಮೋನಿಯಾ, ಶ್ವಾಸಕೋಶದ ಸಮಸ್ಯೆಗಳಿಂದ ದೂರ ಇರಲು ಹೀಗೆ ಮಾಡಿ…