ಆಧುನಿಕ ಜೀವನದಲ್ಲಿ ಅನುಕೂಲಕ್ಕಾಗಿ ಹಲವಾರು ಉಪಕರಣಗಳನ್ನು ಅವಲಂಬಿಸುವುದು ಅನಿವಾರ್ಯ. ಅದರಲ್ಲೂ, ಹಿಂದಿನವರಂತೆ ದಿನಂಪ್ರತಿ ತಾಸುಗಟ್ಟಲೆ ಅಡುಗೆ ಮನೆಯಲ್ಲೇ ಕಳೆಯುವ ಸಮಯ ಮತ್ತು ವ್ಯವಧಾನ ಕಡಿಮೆ ಇರುವುದರಿಂದ ಚುರುಕಾಗಿ ಅಡುಗೆ ಮುಗಿಸುವ ಧಾವಂತ ಕೂಡ ಇಂದಿನ ಬದುಕಿಗೆ ಸಹಜವೇ. ಅಡುಗೆ ಮಾಡುವುದು ನಾವೇ ಆದರೂ ಅದನ್ನೇ ಕ್ಷಿಪ್ರಗತಿಯಲ್ಲಿ ಮಾಡುವುದಕ್ಕೇನು ಬೇಕು ಎಂಬುದನ್ನು ಹುಡುಕುತ್ತೇವೆ. ಅಂಥ ಉಪಕರಣಗಳಲ್ಲಿ ಮೈಕ್ರೋವೇವ್ ಒವನ್ ಸಹ ಒಂದು. ಇದು ಸಾಂಪ್ರದಾಯಿಕ ಒವನ್‌ಗಳಂತೆ (Microwave cooking) ಎಲೆಕ್ಟ್ರಿಕ್ ಕಾಯಿಲ್‌ಗಳ ಬದಲು ಮೈಕ್ರೋವೇವ್‌ಗಳನ್ನು ಬಳಸಿ ಅಡುಗೆ ಮಾಡುವ ತ್ವರಿತ ವಿಧಾನ. ಆದರೆ ಈ ವಿಧಾನ ಸುರಕ್ಷಿತವೇ?
ಇದೀಗಾಗಲೇ ಬಹು ಚರ್ಚಿತ ವಿಷಯ. ಮೈಕ್ರೋವೇವ್ ಒವನ್ ಬಳಕೆಯಿಂದ ಯಾವುದೇ ಅಡ್ಡ ಪರಿಣಾಮಗಳಿಲ್ಲ ಎನ್ನುವವರದ್ದೊಂದು ಗುಂಪಾದರೆ, ಅದನ್ನು ತಿಂದರೆ ಕ್ಯಾನ್ಸರ್ ಬಂದು ಸಾಯುವುದು ಖಚಿತ ಎನ್ನುವವರದ್ದು ಇನ್ನೊಂದು ಗುಂಪು. ಹಾಗಾದರೆ ಸತ್ಯವೇನು? ಈ ರೀತಿಯಲ್ಲಿ ಅಡುಗೆ ಬೇಯಿಸುವುದು ಆರೋಗ್ಯಕ್ಕೆ ಕ್ಷೇಮವೇ? ಕ್ಯಾನ್ಸರ್ ಅಮರಿಕೊಳ್ಳುತ್ತದೆಯೇ? ಈ ಎಲ್ಲಾ ಪ್ರಶ್ನೆಗಳ ಬಗ್ಗೆ ಒಂದಿಷ್ಟು ಮಾಹಿತಿಯಿದು.
ಸರಳವಾಗಿ ಹೇಳಬೇಕೆಂದರೆ, ವಿದ್ಯುದಯಸ್ಕಾಂತೀಯ ತರಂಗಗಳನ್ನೇ ಉಪಯೋಗಿಸಿಕೊಂಡು ನಮ್ಮ ಅಡುಗೆಯನ್ನು ಬೇಯಿಸುವ ತಂತ್ರಜ್ಞಾನವಿದು. ನಮ್ಮ ಮೊಬೈಲು ಮತ್ತು ಕಂಪ್ಯೂಟರ್ ಮಾದರಿಯಲ್ಲೇ ಹೊರಸೂಸುವ ಈ ಕಿರುತರಂಗಗಳು, ಆಹಾರದಲ್ಲಿರುವ ನೀರಿನ ಕಣಗಳನ್ನು ಬಳಸಿಕೊಂಡು ಆಹಾರವನ್ನು ಬಿಸಿ ಮಾಡುತ್ತವೆ ಅಥವಾ ಬೇಯಿಸುತ್ತವೆ. ಈ ಕಣಗಳು ಕಂಪಿಸಿ, ಒಂದಕ್ಕೊಂದು ಉಜ್ಜಿದಾಗ ಉಂಟಾಗುವ ಶಾಖವೇ ಈ ಅಡುಗೆ ಅಟ್ಟುವ ಮೂಲ ತಂತ್ರಜ್ಞಾನ. ಕೆಲವೊಮ್ಮೆ ಈ ತರಂಗಗಳು ಆಹಾರದಲ್ಲಿರುವ ಕೊಬ್ಬು ಮತ್ತು ಸಕ್ಕರೆಯ ಕಣಗಳನ್ನೂ ಬಿಸಿ ಮಾಡುತ್ತವೆ.
ಇದು ಸುರಕ್ಷಿತವೇ?
ಈ ರೀತಿಯಲ್ಲಿ ಅಡುಗೆ ಮಾಡುವುದು ಸುರಕ್ಷಿತವೇ ಎಂಬುದೀಗ ಪ್ರಶ್ನೆ. ಯಾವುದೇ ರೀತಿಯಲ್ಲಿ ಆಹಾರವನ್ನು ಬೇಯಿಸಿದಾಗಲೂ ಒಂದಿಷ್ಟು ಪೋಷಕಾಂಶಗಳು ನಷ್ಟವಾಗುವುದು ಸಿದ್ಧ. ಅದರಲ್ಲೂ ವಿಟಮಿನ್ ಸಿ ಯಂಥ ಜೀವಸತ್ವಗಳು ಎಲ್ಲಕ್ಕಿಂತ ಮೊದಲು ನಷ್ಟವಾಗುತ್ತವೆ. ಹಾಗಾಗಿ ಅಡುಗೆ ಮಾಡುವ ವಿಧಾನದಲ್ಲಿ ಕಡಿಮೆ ಶಾಖ ಮತ್ತು ಸಮಯ ಬಳಸುವುದು ಮುಖ್ಯ. ಜೊತೆಗೆ ಬೇಯಿಸಿದ ಆಹಾರದಿಂದ ನೀರು ಹೊರಹೋಗುವಂತಿಲ್ಲ. ಹಾಗಾಗಿಯೇ ಕರಿಯುವುದಕ್ಕಿಂತ ಹುರಿಯುವುದು ಒಳಿತು; ನೀರಲ್ಲಿ ಬೇಯಿಸುವುದಕ್ಕಿಂತ ಹಬೆಯಲ್ಲಿ ಬೇಯಿಸುವುದು ಸೂಕ್ತ. ಇದು ಸಾಮಾನ್ಯ ಅಡುಗೆ ಪದ್ಧತಿಯಲ್ಲಾಯಿತು, ಮೈಕ್ರೋವೇವ್ ಒವನ್ನಲ್ಲಿನ ಅಡುಗೆಯ ಹಣೆಬರಹವೇನು?
ಮೈಕ್ರೋವೇವ್ ಒವನ್‌ನಲ್ಲಿ ಬಳಕೆಯಾಗುವ ಶಾಖ ಮತ್ತು ಸಮಯ ಎರಡೂ ಕಡಿಮೆ. ಇದರಿಂದಾಗಿ ಹೆಚ್ಚು ಬೆಂದು ಹೋಗದಂಥ ಆಹಾರದಲ್ಲಿ ಪೋಷಕಾಂಶಗಳು ಉಳಿಯುತ್ತದೆ ಎಂಬುದು ಪರಿಣಿತರ ವಾದ. ಪ್ರೆಷರ್ ಕುಕ್ಕರ್‌ನಲ್ಲಿ ಬೇಯಿಸುವುದಕ್ಕಿಂತ ಮೈಕ್ರೋವೇವ್ ಒವನ್‌ನಲ್ಲಿ ಬೇಯಿಸುವುದು ಹೆಚ್ಚಿನ ಸತ್ವಗಳನ್ನು ಉಳಿಸುತ್ತದೆ ಎನ್ನುವ ಅಧ್ಯಯನಗಳೂ ಇವೆ. ಸಾಮಾನ್ಯವಾಗಿ ಮೈಕ್ರೋವೇವ್ ಒವನ್‌ನಲ್ಲಿ 100 ಡಿಗ್ರಿ ಸೆ.ಗಿಂತ (ಕುದಿಯುವ ಬಿಂದು) ಹೆಚ್ಚಿನ ಶಾಖ ಅಗತ್ಯವಾಗುವುದಿಲ್ಲ. ಆದರೆ ಅಡುಗೆಯಲ್ಲಿ ಉಪಯೋಗಿಸುತ್ತಿರುವ ಆಹಾರಗಳು ಯಾವುವು ಎಂಬುದೂ ಮುಖ್ಯವಾದ ಅಂಶ. ಕೆಲವು ಆಹಾರಗಳನ್ನು ಮೈಕ್ರೋವೇವ್ ಒವನ್‌ನಲ್ಲಾದರೂ ಅತಿಯಾಗಿ ಬೇಯಿಸುವುದು ಸಮಸ್ಯೆಗಳನ್ನು ತಂದೊಡ್ಡಿದೆ.
ಕೆಲವು ಸಮಸ್ಯೆಗಳಿವೆ
ಮೈಕ್ರೋವೇವ್ ಒವನ್ ಬಳಕೆಯಲ್ಲಿರುವ ದೊಡ್ಡ ಸಮಸ್ಯೆಯೆಂದರೆ ಇದಕ್ಕೆಂದು ನಾವು ಉಪಯೋಗಿಸುವ ಪಾತ್ರೆಗಳು. ಹೆಚ್ಚಿನ ಜನ ಪ್ಲಾಸ್ಟಿಕ್ ಪಾತ್ರೆಗಳನ್ನು ಉಪಯೋಗಿಸುವುದು ಆಹಾರವನ್ನು ಕಲುಷಿತಗೊಳಿಸುತ್ತವೆ. ಪ್ಲಾಸ್ಟಿಕ್‌ನ ಬಳಕೆಯಿಂದಾಗಿ ಕ್ಯಾನ್ಸರ್‌ನಿಂದ ಹಿಡಿದು, ಹಾರ್ಮೋನ್ ಅಸಮತೋಲನದವರೆಗೆ ಹಲವು ರೀತಿಯ ಆರೋಗ್ಯ ಸಮಸ್ಯೆಗಳನ್ನು ತರುತ್ತವೆ. ಮೈಕ್ರೋವೇವ್ ಒವನ್ನಲ್ಲಿ ಬಳಕೆಗೆ ಸುರಕ್ಷಿತ ಎಂಬ ಹಣೆಪಟ್ಟಿ ಹೊತ್ತು ಪ್ಲಾಸ್ಟಿಕ್‌ಗಳೂ ಕೆಲವೊಮ್ಮೆ ಕಳಪೆ ಗುಣಮಟ್ಟದಲ್ಲಿರುವುದು ಅಪರೂಪವಲ್ಲ. ಹಾಗಾಗಿ ಪಿಂಗಾಣಿ ಅಥವಾ ಗಾಜಿನಂಥ ಪಾತ್ರೆಗಳು ಮೈಕ್ರೋವೇವ್ ಒವನ್ ಬಳಕೆಗೆ ಸುರಕ್ಷಿತ.
ಇನ್ನೊಂದು ಸಮಸ್ಯೆಯೆಂದರೆ, ಮೈಕ್ರೋವೇವ್‌ನಲ್ಲಿ ಬಿಸಿ ಮಾಡಿದ ಆಹಾರದಲ್ಲಿ ಸೃಷ್ಟಿಯಾಗುವ ಹಾಟ್‌ಸ್ಪಾಟ್ ಅಥವಾ ಬಿಸಿ-ಬಿಂದುಗಳು. ಅಂದರೆ ಪಾತ್ರೆಯಲ್ಲಿರುವ ಆಹಾರದ ಎಲ್ಲಾ ಭಾಗಗಳೂ ಒಂದೇ ಸಮನಾಗಿ ಬಿಸಿಯಾಗುವುದಿಲ್ಲ. ಅದಕ್ಕಾಗಿ ಆಹಾರವನ್ನು ಆಗಾಗ ಮಗುಚಬೇಕಾಗುತ್ತದೆ. ಇದರಲ್ಲಿಯೂ ಅದೇ ಸಮಸ್ಯೆಯಿದೆ. ಮೈಕ್ರೋವೇವ್ ಒವನ್ನಿಂದ ತೆಗೆದ ಆಹಾರವನ್ನು ಮಗುಚದೇ, ನೇರವಾಗಿ ಬಾಯಿಗಿಟ್ಟುಕೊಂಡು, ಸುಟ್ಟಗಾಯಗಳಾದ ಘಟನೆಗಳು ಬಹಳಷ್ಟಿವೆ.
ಮೈಕ್ರೋವೇವ್ ಒವನ್ ಚಾಲ್ತಿಯಲ್ಲಿರುವಾಗ ಅದಕ್ಕೆ ಅಂಟಿಕೊಂಡಂತೆ ನಿಲ್ಲಬೇಡಿ ಎನ್ನುವ ಕಿವಿಮಾತನ್ನೂ ಹಲವು ತಜ್ಞರು ನೀಡುತ್ತಾರೆ. ಕಾರಣ, ಒವನ್‌ನ ಉಳಿದೆಲ್ಲಾ ಕಡೆಗಳಲ್ಲಿ ತರಂಗಗಳು ಹೊರ ಹೋಗದಂತೆ ಲೋಹದ ಕವಚವಿದ್ದರೂ, ಅದರ ಬಾಗಿಲು ಗಾಜಿನದ್ದು. ಈ ಬಾಗಿಲ ಎಡೆಗಳಿಂದ ರೇಡಿಯೇಶನ್ ಹೊರಚೆಲ್ಲುವ ಸಾಧ್ಯತೆಗಳಿವೆ. ಹಾಗಾಗಿ ಮೈಕ್ರೋವೇವ್ ಒವನ್ನಿಂದ ಎರಡಡಿ ದೂರದಲ್ಲಿ ನಿಲ್ಲಿ. ಮಾತ್ರವಲ್ಲ, ಸರಿಯಾಗಿ ಕೆಲಸ ಮಾಡದ ಒವನ್ ಸಹ ಆಹಾರವನ್ನು ಹಾಳುಗೆಡವುತ್ತದೆ.
ಇದನ್ನೂ ಓದಿ: Tips to Keep Joints Healthy: ಹೀಗೆ ಮಾಡಿ, ಕೀಲುಗಳ ಸ್ವಾಸ್ಥ್ಯ ಕಾಪಾಡಿ