Site icon Vistara News

Mobile Phone Safety: ಮಲಗುವಾಗ ಹಾಸಿಗೆ ಮೇಲೆ ಮೊಬೈಲ್‌ ಫೋನ್‌ ಇಟ್ಟುಕೊಳ್ಳಲೇಬೇಡಿ, ಏಕೆಂದರೆ…

Mobile Phone Safty

ಮೊಬೈಲ್‌ ಫೋನುಗಳನ್ನು (mobile phone safety) ಬಳಿಯಲ್ಲಿರಿಸಿಕೊಂಡು ಮಲಗುವುದರ ದುಷ್ಪರಿಣಾಮಗಳ ಬಗ್ಗೆ ಬಹಳಷ್ಟು ಅಧ್ಯಯನಗಳು ಈಗಾಗಲೇ ನಡೆದಿದ್ದು, ಇದು ಆರೋಗ್ಯಕ್ಕೆ ಮಾರಕ ಎಂಬುದು ಸಾಬೀತಾಗಿದೆ. ಆಪಲ್‌ ಸಂಸ್ಥೆ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿದ್ದು, ಸ್ಮಾರ್ಟ್‌ ಫೋನುಗಳನ್ನು ಹಿಡಿದು ನಿದ್ದೆ ಮಾಡುವುದು ಸಲ್ಲದು ಎಂದು ಹೇಳಿದೆ. ಅದರಲ್ಲೂ, ಫೋನ್‌ಗಳನ್ನು ಚಾರ್ಜಿಗೆ ಹಾಕಿದ್ದಾಗ ಹತ್ತಿರದಲ್ಲಿ ಇರಿಸಿಕೊಳ್ಳಬೇಡಿ ಎಂದು ತನ್ನ ಬಳಕೆದಾರರಿಗಾಗಿ ಆನ್‌ಲೈನ್‌ ಪ್ರಕಟಿಸಿರುವ ಮಾರ್ಗದರ್ಶನದಲ್ಲಿ ಹೇಳಿದೆ.

ಸ್ಮಾರ್ಟ್‌ ಫೋನ್‌ಗಳನ್ನು ಚಾರ್ಜಿಗೆ ಹಾಕುವಾಗ ಸರಿಯಾಗಿ ಗಾಳಿ, ಬೆಳಕು ಇರುವಂಥ ಸ್ಥಳವನ್ನು ಆಯ್ದುಕೊಳ್ಳಿ. ಅದರಲ್ಲೂ ಟೇಬಲ್ಲಿನಂಥ ಸಮತಟ್ಟಾದ ಮೇಲ್ಮೈಯಲ್ಲೇ ಚಾರ್ಜಿಗೆ ಹಾಕಿ. ದೇಹ, ದಿಂಬು, ಬ್ಲಾಂಕೆಟ್‌, ಹಾಸಿಗೆಯಂಥ ವಸ್ತುಗಳ ಮೇಲೆ ಚಾರ್ಜ್‌ ಮಾಡಬೇಡಿ ಎಂದು ಸ್ಪಷ್ಟಪಡಿಸಿದೆ.

ಐಫೋನ್‌ ಮತ್ತಿತರ ಸ್ಮಾರ್ಟ್‌ ಫೋನ್‌ಗಳು ಚಾರ್ಜ್‌ ಆಗುವಾಗ ಶಾಖ ಉತ್ಪತ್ತಿ ಮಾಡುತ್ತವೆ. ಇಂಥ ಸಂದರ್ಭದಲ್ಲಿ ಶಾಖ ಹೊರಹೋಗಲು ಅವಕಾಶ ಇಲ್ಲದಂಥ ಮೇಲ್ಮೈ ಆದರೆ ಅಪಾಯವಾಗಬಹುದು. ಸುಟ್ಟ ಗಾಯಗಳಾಗಬಹುದು ಅಥವಾ ಬೆಂಕಿ ಹತ್ತಲೂಬಹುದು. ಅದರಲ್ಲೂ ಸ್ಮಾರ್ಟ್‌ ಫೋನ್‌ಗಳನ್ನು ದಿಂಬಿನಡಿಗೆ ಇಟ್ಟುಕೊಳ್ಳುವುದು ನಿಜಕ್ಕೂ ಅಪಾಯಕಾರಿ ಎಂದು ಆಪಲ್‌ ತನ್ನ ಬಳಕೆದಾರರಿಗೆ ಸೂಚಿಸಿದೆ.

ಆಪಲ್‌ ಹೇಳಿಕೆಯಂತೆ, “ಯಾವುದೇ ಗೆಜೆಟ್‌, ಪವರ್‌ ಅಡಾಪ್ಟರ್‌ ಅಥವಾ ವೈರ್‌ಚಾರ್ಜರ್‌ಗಳನ್ನು ದಿಂಬು, ಬ್ಲಾಂಕೆಟ್ ಅಥವಾ ದೇಹದಡಿ ಇರಿಸಿಕೊಂಡು ಮಲಗಬೇಡಿ. ಚಾರ್ಜ್‌ ಆಗುತ್ತಿರುವಾಗ ಇದನ್ನು ಮಾಡಲೇಬೇಡಿ. ನಿಮ್ಮ ಐಫೋನ್‌ ಮತ್ತಿತರ ಉಪಕರಣಗಳನ್ನು ಸರಿಯಾದ ಗಾಳಿ-ಬೆಳಕು ಇರುವಲ್ಲಿ ಇರಿಸಿ ಅಥವಾ ಚಾರ್ಜ್‌ ಮಾಡಿ. ಅದರಲ್ಲೂ ದೇಹಕ್ಕೆ ಬಿಸಿಯನ್ನು ಗ್ರಹಿಸುವ ಸಾಮರ್ಥ್ಯ ಕಡಿಮೆ ಇರುವಂಥ ಸಮಸ್ಯೆ ಇದೆಯೆಂದಾದರೆ ಇನ್ನಷ್ಟು ಎಚ್ಚರಿಕೆ ವಹಿಸಿ” ಎಂದು ಸಂಸ್ಥೆ ತನ್ನ ಬಳಕೆದಾರರಿಗೆ ತಿಳಿಸಿದೆ.

ಇದನ್ನೂ ಓದಿ: How To Get Kids To Eat Healthy Food: ತಿನ್ನಿಸುವಾಗ ಮಕ್ಕಳು ಹಟ ಮಾಡುತ್ತಾರಾ? ಹೀಗೆ ಮಾಡಿ

Exit mobile version