ನೀವು ಮೋಮೋಸ್ ಪ್ರಿಯರಾ? ದಿನವೂ ಎಲ್ಲಾದರೂ ಬೀದಿಬದಿಯಲ್ಲಿ ಹೋಗಿ ಮೋಮೋಸ್ ತಿನ್ನದಿದ್ದರೆ ಕಣ್ಣಿಗೆ ಸೊಂಪಾಗಿ ನಿದ್ದೆ ಹತ್ತುವುದಿಲ್ಲ ಎಂಬ ಪರಿಸ್ಥಿತಿ ತಲುಪಿದ್ದೀರಾ? ಅಥವಾ ವಾರದಲ್ಲಿ ಮೂರ್ನಾಲ್ಕು ಬಾರಿಯಾದರೂ ಸಂಜೆ ಕಚೇರಿ ಮುಗಿಸಿ ಮನೆಗೆ ಮರಳುವ ಸಮಯ ಒಂದು ಪ್ಲೇಟ್ ಮೋಮೋಸ್ ಸ್ವಾಹಾ ಮಾಡುತ್ತೀರೋ? ಮೋಮೋಸ್ ರುಚಿಯನ್ನು ಮನಸ್ಸಿಗೂ ಹೃದಯಕ್ಕೂ ಹೀಗೆ ಹಚ್ಚಿಕೊಂಡವರು ನೀವಾಗಿದ್ದರೆ, ಖಂಡಿತ ಒಂದಲ್ಲ, ಎರಡು ಮೂರು ಬಾರಿ ಯೋಚಿಸಿ. ಇದು ಪಿಜ್ಜಾ ಬರ್ಗರ್‌ನಂತೆ ಕೆಟ್ಟದ್ದಲ್ಲ ಎಂದು ಯೋಚಿಸುವವರಿಗೊಂದು ಶಾಕಿಂಗ್ ಸುದ್ದಿಯಿದೆ!
ಯುವ ಜನತೆಯನ್ನು ಮೋಡಿ ಮಾಡಿರುವ ಮೋಮೋಸ್ ಈಗ ಭಾರೀ ಟ್ರೆಂಡ್‌ನಲ್ಲಿರುವ ಸ್ಟ್ರೀಟ್ ಫುಡ್. ಹಬೆಯಲ್ಲಿ ಬೇಯಿಸಿದ, ಅಥವಾ ತಂದೂರಿ ಮಾಡಿದ ನಾನಾ ಬಗೆಯ ಮೋಮೋಸ್ ಅಥವಾ ಡಂಪ್ಲಿಂಗ್‌ಗಳು ಇಂದು ರುಚಿರುಚಿಯಾಗಿ ಸವಿಯಲು ಬೀದಿಬದಿಯಲ್ಲೇ ಸಾಕಷ್ಟು ಕಡಿಮೆ ಬೆಲೆಯಲ್ಲೇ ಲಭ್ಯವಿವೆ. ಇಂಥ ಮೋಮೋಗಳು ಹಾಗೂ ಡಂಪ್ಲಿಂಗ್‌ಗಳನ್ನು ದಿನವೂ ಸವಿದು ಹೊಟ್ಟೆ ತುಂಬಿಸಿಕೊಳ್ಳುವುದು ಬಹಳಷ್ಟು ಮಂದಿಗೆ ಇಂದು ಚಟವೂ ಆಗಿದೆ. ಇಂದು ರಾಜ್ಯ, ಭಾಷೆಗಳ ಹಂಗಿಲ್ಲದೆ ಎಲ್ಲಡೆ ದೊರೆಯುವ ಈ ಟಿಬೆಟಿಯನ್ ಸ್ಟ್ರೀಟ್ ಫುಡ್, ನಿಜಕ್ಕೂ ಆರೋಗ್ಯಕ್ಕೆ ಒಳ್ಳೆಯದಾ? ಅಥವಾ ಎಲ್ಲ ಜಂಕ್‌ಗಳಂತೆ ಇದೂ ಕೂಡಾ ದೇಹದ ಮೇಲೆ ಕೆಟ್ಟ ಪರಿಣಾಮ ಬೀರುವ ಆಹಾರ ಸಾಲಿನಲ್ಲಿ ನಿಲ್ಲುತ್ತದೆಯೋ ಅಂತ ಒಮ್ಮೆಯಾದರೂ ಯೋಚಿಸಿದ್ದೀರಾ?
ಚಿಕನ್, ಫಿಶ್, ಪೋರ್ಕ್ ಹೀಗೆ ವೆಜ್ ಹಾಗೂ ನಾನ್‌ವೆಜ್ ವೆರೈಟಿಗಳಲ್ಲಿ ಸಿಗುವ ಹೀಗೆ ಮೋಮೋಸ್‌ಗಳು ಬಗೆಬಗೆಯ ಫ್ಲೇವರ್‌ಗಳಲ್ಲಿ ಇಂದು ಸವಿಯಲು ಸಿಗುತ್ತದೆ. ಟೊಮೇಟೋ ಹಾಗೂ ಮೆಣಸು ಹಾಕಿ ಮಾಡಲಾದ ಸ್ಪೈಸೀ ಡಿಪ್‌ಗಳ ಜೊತೆಗೆ ಮುಳುಗಿಸಿ ಮುಳುಗಿಸಿ ಆಹಾ ಎಂದು ಸವಿದು ತಿನ್ನಬಹುದಾದ ಈ ಮೋಮೋಸ್ ಎಂಬ ಸಮಕಾಲೀನ ಆಹಾರಕ್ಕೆ ಸಾಟಿಯೆಲ್ಲಿದೆ ಎಂದು ವಾದ ಮಂಡಿಸುವ ಮಂದಿಯೂ ಇಲ್ಲದಿಲ್ಲ. ಅಷ್ಟು ಜನಪ್ರಿಯವಾಗಿರುವ ಈ ಟಿಬೆಟಿಯನ್ ಡಿಶ್ ಅತಿಯಾದರೆ ಖಂಡಿತವಾಗಿಯೂ ನಾನಾ ಬಗೆಯ ತೊಂದರೆ ತಪ್ಪಿದ್ದಲ್ಲ. ಅಷ್ಟಕ್ಕೂ, ಬೀದಿಬದಿಯ ಬಹುತೇಕ ಮೋಮೋಸ್ ತಯಾರಾಗುವುದು ಮೈದಾದಿಂದಲೇ. ದಿನವೂ ಸಂಜೆ ಹೊತ್ತು, ಯಾವ ಪೋಷಕಾಂಶವೂ ಇಲ್ಲದ ಮೈದಾ ನಮ್ಮ ಹೊಟ್ಟೆ ಸೇರಿದರೆ, ಆಗುವ ಪರಿಣಾಮ ಖಂಡಿತ ಸಣ್ಣದಲ್ಲ.
ಹೌದು. ಒಳಗೆ, ಬಗೆಬಗೆಯ ತರಕಾರಿಗಳೋ, ಮೀನೋ, ಚಿಕನ್ನೋ ಹಾಕಿ ಇರುವ ಮೋಮೋಸ್ ಒಳ್ಳೆಯದೇ ತಾನೇ ಎಂಬ ವಾದ ಮಂಡಿಸುವ ಮಂದಿಯೂ ಇಲ್ಲದಿಲ್ಲ. ಆದರೆ, ಪ್ರತಿನಿತ್ಯ ಈ ತರಕಾರಿಯ ಜೊತೆಗೆ ಹೊಟ್ಟೆ ಸೇರುವ ಮೈದಾದಿಂದ ದೇಹದ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರದೆ ಇರದು ಎನ್ನುತ್ತಾರೆ ಆರೋಗ್ಯ ತಜ್ಞರು. ಯುಎಸ್‌ನ ಕೃಷಿ, ಆರೋಗ್ಯ ಹಾಗೂ ಮಾನವ ಸೇವೆಗಳ ವಿಭಾಗವು ನಡೆಸಿದ ಅಧ್ಯಯನವೊಂದು, ಹೆಚ್ಚುತ್ತಿರುವ ಮೋಮೋ ಪ್ರೇಮದ ಕುರಿತು ಈ ಆಘಾತಕಾರಿ ಅಂಶಗಳನ್ನು ಬಯಲು ಮಾಡಿದೆ.
ಇದನ್ನೂ ಓದಿ | Avocado benefits | ಹಲವು ಕ್ಯಾನ್ಸರ್‌ಗಳಿಗೆ ಮದ್ದು ಈ ಬೆಣ್ಣೆ ಹಣ್ಣು
ಮೋಮೋಸ್‌ಗಳನ್ನು ಮಾಡಲು ವ್ಯಾಪಕವಾಗಿ ಬಳಕೆಯಾಗುವುದು ಮೈದಾ. ಇಂದು ಆಹಾರಗಳಲ್ಲಿ ಯಥೇಚ್ಛವಾಗಿ ಮೈದಾ ಬಳಕೆಯಾಗುತ್ತಿದ್ದು, ಯಾವುದೇ ಪೋಷಕಾಂಶಗಳಿಲ್ಲದೆ ಇರುವ ಈ ಮೈದಾ ಆರೋಗ್ಯಕ್ಕೆ ಬಹಳಷ್ಟು ಹಾನಿಯನ್ನು ಉಂಟು ಮಾಡುತ್ತದೆ ಎಂದು ಈ ಸಂಶೋಧನಾ ವರದಿ ಹೇಳಿದೆ. ಇತ್ತೀಚಿನ ವರ್ಷಗಳಲ್ಲಿ ನಮ್ಮ ಆಹಾರ ಕ್ರಮದಲ್ಲಿ ಸಾಕಷ್ಟು ಬದಲಾವಣೆಗಳಾಗಿದ್ದು, ಬೀದಿಬದಿಯ ತಿಂಡಿಗಳು ನಮ್ಮ ಇನನಿತ್ಯದ ಆಹಾರ ಪದ್ಧತಿಯೊಂದಿಗೆ ಸೇರಿಕೊಂಡಿದೆ. ಇವುಗಳ ಪೈಕಿ ಮೋಮೋಸ್ ಕೂಡಾ ಒಂದು. ಮೋಮೋಸ್‌ನಲ್ಲೂ ವ್ಯಾಪಕವಾಗಿ ಮೈದಾ ಬಳಕೆಯಿದ್ದು, ರಸ್ತೆಬದಿಯ ಮೋಮೋ ಸ್ಟಾಲ್‌ಗಳು, ಯಾವ ರೀತಿಯಲ್ಲೂ, ಸ್ವಚ್ಛತೆ ಹಾಗೂ, ಪೋಷಕಾಂಶಗಳ ಬಗ್ಗೆ ತಲೆ ಕೆಡಿಸಿಕೊಳ್ಳುವ ಪ್ರಯತ್ನ ಮಾಡುವುದಿಲ್ಲ. ಹೀಗಾಗಿ ಹೊಟ್ಟೆಗೆ ಮೈದಾವಷ್ಟೇ ಸೇರುತ್ತಿದೆ ಎಂದು ಅದು ಹೇಳಿದೆ.
ಅತಿಯಾದ ಮೈದಾ ಬಳಕೆಯಿಂದ ದೇಹಕ್ಕೆ ಪಿಷ್ಟದ ಅಂಶ ಹೆಚ್ಚು ಸೇರುತ್ತಿದ್ದು, ನಾರಿನಂಶದ ಕೊರತೆಯಾಗುತ್ತಿದೆ. ರಕ್ತದಲ್ಲಿ ಸಕ್ಕರೆಯ ಅಂಶ ಹೆಚ್ಚು ಮಾಡಲು ಇದು ಪ್ರೇರಣೆ ನೀಡುತ್ತಿದ್ದು, ಸಣ್ಣ ವಯಸ್ಸಿನಲ್ಲಿಯೇ ಮಧುಮೇಹದಂತಹ ಆರೋಗ್ಯ ಸಮಸ್ಯೆಗಳನ್ನೂ ತಂದೊಡ್ಡುತ್ತದೆ. ಹೃದಯ ಸಂಬಂಧೀ ಕಾಯಿಲೆಗಳಿಗೂ ಬುನಾದಿ ಹಾಕುತ್ತದೆ ಎಂದು ವರದಿ ಹೇಳಿದೆ.
ಮೈದಾ ತಯಾರು ಮಾಡುವ ಸಂದರ್ಭ ಗೋಧಿಯಲ್ಲಿರುವ ಎಲ್ಲ ಒಳ್ಳೆಯ ಪೋಷಕಾಂಶಗಳೂ ನಷ್ಟವಾಗುತ್ತಿದ್ದು, ವಿಟಮಿನ್, ಬಿ, ಇ, ಕಬ್ಬಿಣಾಂಶ, ಮೆಗ್ನೀಶಿಯಂ, ನಾರಿನಂಶ ಯಾವುದೂ ಇದರಲ್ಲಿಲ್ಲ. ಹಾಗಾಗಿ, ತೂಕದಲ್ಲಿ ಏರಿಕೆ, ಬೊಜ್ಜು, ಅಧಿಕ ರಕ್ತದೊತ್ತಡ ಹಾಗೂ ಕ್ಯಾನ್ಸರ್‌ನಂತಹ ತೊಂದರೆಗಳಿಗೂ ಆಹ್ವಾನ ನೀಡುತ್ತವೆ ಎನ್ನಲಾಗಿದೆ.
ಇದನ್ನೂ ಓದಿ | Skin Care | ಕಾಂತಿಯುಕ್ತ ತ್ವಚೆ ಬೇಕೆ?: ಈ ಆಹಾರಗಳು ನಿಮ್ಮ ಹೊಟ್ಟೆ ಸೇರಲಿ