Site icon Vistara News

Monsoon diet | ಮಳೆಗಾಲದಲ್ಲಿ ಈ ತರಕಾರಿಗಳನ್ನು ತ್ಯಜಿಸಿದರೆ ಆರೋಗ್ಯ

monsoon

ಮಳೆಗಾಲ ಬಂದಾಗ ದೇಹ ಮನಸ್ಸು ಎರಡೂ ತಂಪಾಗುತ್ತದೆ. ಆಗಷ್ಟೇ ಇದ್ದ ಬೇಸಗೆಯ ಬಿಸಿ ಮಾಯವಾಗಿ, ಮನಸ್ಸಿಗೆ ಉಲ್ಲಾಸ ತರುವ ಈ ಮಳೆಗಾಲ ತನ್ನೊಂದಿಗೆ ಸಹಜವಾಗಿ ಶೀತ, ನೆಗಡಿ, ಜ್ವರ ಇನ್ನಿತರ ಸಣ್ಣಪುಟ್ಟ ಆರೋಗ್ಯ ಸಮಸ್ಯೆಗಳನ್ನೂ ತರುತ್ತದೆ. ಉತ್ತಮ ಆರೋಗ್ಯಕ್ಕೆ, ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ಕೆಲವು ತರಕಾರಿಗಳನ್ನು ಬಳಸುವುದು ಮುಖ್ಯವಾದರೆ, ಇನ್ನೂ ಕೆಲವದರ ಬಳಕೆಯನ್ನು ಬಿಡುವುದು. ಅಂತಹ ತರಕಾರಿಗಳ ಬಗ್ಗೆ ತಿಳಿಯೋಣ.

೧. ಸೊಪ್ಪು: ಸೊಪ್ಪಿನಲ್ಲಿರುವಷ್ಟು ಪೋಷಕಾಂಶಗಳನ್ನು ನಾವು ಇತರ ಆಹಾರಗಳಿಂದ ಪಡೆಯುದು ಕಷ್ಟ ಎಂಬ ಸತ್ಯ ನಮಗೆಲ್ಲ ಗೊತ್ತೇ ಇದೆ. ಆದರೆ ಮಳೆಗಾಲದಲ್ಲಿ ಸೊಪ್ಪು ಒಳ್ಳೆಯದಲ್ಲ ಎಂಬ ವಿಚಾರ ನಿಮಗೆ ಗೊತ್ತೇ? ಹೌದು. ಮಳೆಗಾಲದಲ್ಲಿ ಹೆಚ್ಚು ತೇವಾಶ ಇರುವುದರಿಂದ ಬ್ಯಾಕ್ಟೀರಿಯಾಗಳ ಸಂತತಿಯೂ ಬಹಳಷ್ಟು ವೃದ್ಧಿಯಾಗುತ್ತವೆ. ಹಸಿರು ಸೊಪ್ಪುಗಳೂ ಇಂತಹ ಬ್ಯಾಕ್ಟೀರಿಯಾಗಳ ತಾಣವಾಗಿರುವ ಸಾಧ್ಯತೆ ಹೆಚ್ಚಿರುವುದರಿಂದ ಮಳೆಗಾಲದಲ್ಲಿ ಸೊಪ್ಪು ತಿನ್ನುವುದನ್ನು ಅವಾಯ್ಡ್‌ ಮಾಡಬಹುದು.

೨. ದೊಣ್ಣೆ ಮೆಣಸಿನಕಾಯಿ: ದೊಣ್ಣೆ ಮೆಣಸಿನಕಾಯಿ/ಕ್ಯಾಪ್ಸಿಕಂ ಕೂಡಾ ಮಳೆಗಾಲದಲ್ಲಿ ಒಳ್ಳೆಯದಲ್ಲ. ಇದರಲ್ಲಿ ಗ್ಲುಕೋಸಿನೊಲೇಟ್ಸ್‌ಗಳು ಹೆಚ್ಚಿರುವುದರಿಂದ ಮಳೆಗಾಲದಲ್ಲಿ ಇದು ವಾಂತಿ, ತಲೆನೋವ ಮತ್ತಿತರ ತೊಂದರೆಗಳನ್ನು ತರಬಹುದು. ಉಸಿರಾಟ ಸಂಬಂಧಿ ತೊಂದರೆಗಳು ಕೂಡಾ ಬರುವ ಸಂಭವ ಇರುವುದರಿಂದ ದೊಣ್ಣೆ ಮೆಣಸಿನಕಾಯಿಯನ್ನು ಮಳೆಗಾಲ ಮುಗಿಯುವವರೆಗೆ ಬಳಸುವುದು ಒಳ್ಳೆಯದಲ್ಲ.

೩. ಹೂಕೋಸು: ಹೂಕೋಸು/ಕಾಲಿಫ್ಲವರ್‌ ಅನ್ನು ಎರಡು ಕಾರಣಗಳಿಗಾಗಿ ಮಳೆಗಾಲದಲ್ಲಿ ಉಪಯೋಗಿಸಬಾರದು. ಮಳೆಗಾಲದಲ್ಲಿ ಇದರ ಹೂವಿನಂಥ ಭಾಗಗಳೆಡೆಯಲ್ಲಿ ಫಂಗಸ್‌ ಕೂರುವುದರಿಂದ ಇದರಿಂದ ಆರೋಗ್ಯದಲ್ಲಿ ಏರುಪೇರುಗಳಾಗಬಹುದು. ಹೊಟ್ಟೆ ಕೆಟ್ಟ ಅನುಭವವಾಗುವುದು ಅಥವಾ ಗ್ಯಾಸ್‌ ತುಂಬಿದಂತನಿಸಿ, ಹೊಟ್ಟೆ ಉಬ್ಬರಿಸಬಹುದು.

೪. ಬದನೆಕಾಯಿ: ಬದನೆಕಾಯಿ ಕೂಡಾ ಮಳೆಗಾಲದಲ್ಲಿ ಬಳಸುವುದು ಒಳ್ಳೆಯದಲ್ಲ. ಮಳೆಗಾಲದಲ್ಲಿ ಬದನೆಕಾಯಿ, ಕೀಟಬಾಧೆಗೆ ಆತ್ಮರಕ್ಷಣೆಗಾಗಿ ತನ್ನೊಳಗೆ ಕೆಟ್ಟ ರಾಸಾಯನಿಕಗಳನ್ನು ಉತ್ಪತ್ತಿ ಮಾಡುತ್ತದೆ. ಈ ರಾಸಾಯನಿಕಗಳಿಂದ ಚರ್ಮದ ಅಲರ್ಜಿ, ಕಜ್ಜಿ, ತುರಿಕೆಗಳಂತ ಚರ್ಮದ ಸಮಸ್ಯೆಗಳು ತಲೆದೋರಬಹುದು.

ಹಾಗಾದರೆ, ಈ ತರಕಾರಿಗಳನ್ನು ಬಿಟ್ಟು ಉಳಿದೆಲ್ಲ ತರಕಾರಿಗಳೂ ಉತ್ತಮವೇ ಆದರೂ ಈ ಕೆಳಗಿನ ನಾಲ್ಕು ತರಕಾರಿಗಳ ಉಪಯೋಗ ಇನ್ನಷ್ಟು ಒಳ್ಳೆಯದು.

೧. ಸೋರೆಕಾಯಿ: ಸೋರೆಕಾಯಿ ಮಳೆಗಾಲದಲ್ಲಿ ನಮ್ಮ ದೇಹಕ್ಕೆ ಅತ್ಯಂತ ಉತ್ತಮವಾದ ತರಕಾರಿ. ಇದರಲ್ಲಿ ನಾರಿನಂಶ ಹೆಚ್ಚಿದ್ದು, ಪೋಷಕಾಂಶಗಳಿಂದಲೂ ಸಮೃದ್ಧವಾಗಿದೆ. ನಮ್ಮ ಹೊಟ್ಟೆಯನ್ನು ತಂಪಾಗಿ, ಆರೋಗ್ಯವಾಗಿ ಇಟ್ಟುಕೊಳ್ಳುವಲ್ಲಿ ಸೋರೆಕಾಯಿಯ ಪಾತ್ರ ದೊಡ್ಡದು. ಇದು ಮಳೆಗಾಲದಲ್ಲಿ ಸದಾ ಕಾಡುವ ಶೀತ, ಕೆಮ್ಮು, ಜ್ವರದಂತ ಸಮಸ್ಯೆಗಳಿಂದ ಬಳಲುವಾಗಲೂ, ಬಹಳ ಉತ್ತಮ ಆಹಾರವಾಗಿದ್ದು, ಇದರಿಂದ ಬಲವರ್ಧನೆಯಾಗಿ, ರೋಗನಿರೋಧಕ ಶಕ್ತಿ ಹೆಚ್ಚುತ್ತದೆ.

ಇದನ್ನೂ ಓದಿ: Food | ನಮ್ಮ ಖಾಲಿ ದೋಸೆ ಅಮೆರಿಕದ ರೆಸ್ಟೋರೆಂಟ್‌ನಲ್ಲಿ ಚಿತ್ರಾನ್ನ!

೨. ಹಾಗಲಕಾಯಿ: ಕಹಿ ಎಂಬ ಕಾರಣಕ್ಕೆ ಹಾಗಲಕಾಯಿಯ ಹೆಸರು ಕೇಳಿದರೆ ಮೂಗು ಮುರಿಯುವವರೇ ಹೆಚ್ಚು. ಆದರೆ, ಇದು ಮಳೆಗಾಲಕ್ಕೆ ಹೇಳಿ ಮಾಡಿಸಿದಂತಹ ತರಕಾರಿ. ಇದರಲ್ಲಿ ಹೇರಳವಾಗಿ ವಿಟಮಿನ್‌ ಸಿ ಹಾಗೂ ಆಂಟಿ ಆಕ್ಸಿಡೆಂಟ್‌ಗಳು ಇರುವುದರಿಂದ, ಮಳೆಗಾಲದ ಸಾಮಾನ್ಯ ತೊಂದರೆಗಳಾದ ಶೀತ, ತಲೆನೋವು, ನೆಗಡಿ, ಕೆಮ್ಮು, ಜ್ವರ ಬಾರದಂತೆ ನೋಡಿಕೊಳ್ಳುತ್ತದೆ. ಮಧುಮೇಹಿಗಳಿಗೂ ಇದು ಅತ್ಯುತ್ತಮ ಆಹಾರವಾಗಿದ್ದು, ರಕ್ತದಲ್ಲಿನ ಸಕ್ಕರೆಯ ಪ್ರಮಾಣವನ್ನು ನಿಯಂತ್ರಣದಲ್ಲಿರಿಸುತ್ತದೆ. ಹೊಟ್ಟೆಯಲ್ಲಿ ಬಾಧಿಸುವ ಹುಳದ ಸಮಸ್ಯೆ, ಬ್ಯಾಕ್ಟೀರಿಯಾ ತೊಂದರೆಗಳಿಗೂ ಇದರ ಸೇವನೆ ಉತ್ತಮ. ಜೀರ್ಣಾಂಗ ವ್ಯವಸ್ಥೆಯ ಆರೋಗ್ಯದಲ್ಲೂ ಹಾಗಲಕಾಯಿಗೆ ಪಾಲಿದೆ.

೩. ಬೀಟ್‌ರೂಟ್:‌ ರಕ್ತದಲ್ಲಿ ಹಿಮೋಗ್ಲೋಬಿನ್‌ ಕೊರತೆ ಅನುಭವಿಸುವ, ಅನೀಮಿಯಾ ತೊಂದರೆ ಇರುವ ಮಂದಿಗೆ ಬೀಟ್‌ರೂಟ್‌ ಬಹಳ ಅಗತ್ಯದ ತರಕಾರಿ. ಯಾವುದೇ ಇತರ ತರಕಾರಿಯೂ ಬೀಟ್‌ರೂಟ್‌ನಷ್ಟು ಮಟ್ಟದಲ್ಲಿ ಹಿಮೋಗ್ಲೋಬಿನ್‌ ಮಟ್ಟವನ್ನು ಏರಿಸುವಲ್ಲಿ ಸಹಾಯ ಮಾಡುವುದಿಲ್ಲ. ಇದಲ್ಲದೆ, ಇದರಲ್ಲಿ ಹೇರಳವಾಗಿ ಪೋಷಕಾಂಶಗಳಿದ್ದು ನಿತ್ಯವೂ, ಸಲಾಡ್‌, ಜ್ಯೂಸ್‌, ಪಲ್ಯ ಹಾಗೂ ಇನ್ನಿತರ ಮಾದರಿಯ ಮೂಲಕ ಸೇವಿಸುವುದರಿಂದ ರಕ್ತ ಪರಿಚಲನೆ ಸರಾಗವಾಗಿ, ರಕ್ತದೊತ್ತಡವನ್ನೂ ನಿಯಂತ್ರಣದಲ್ಲಿಡಲು ಸಹಾಯ ಮಾಡುತ್ತದೆ. ಇದರಿಂದ ರೋಗನಿರೋಧಕ ಶಕ್ತಿ ಹೆಚ್ಚಾಗುವುದರಿಂದ ಮಳೆಗಾಲಕ್ಕೆ ತಿನ್ನಲೇಬೇಕಾದ ತರಕಾರಿಗಳಲ್ಲಿ ಇದೂ ಒಂದಾಗಿದೆ.

೪. ಸೌತೆಕಾಯಿ: ಬಹಳಷ್ಟು ಮಂದಿ ಮಳೆಗಾಲದಲ್ಲಿ ತಿನ್ನದ ತರಕಾರಿಯಿದು. ಆದರೆ, ಮಳೆಗಾಲದಲ್ಲೂ ಇದರ ಸೇವನೆ ಒಳ್ಳೆಯದೇ. ಹಸಿಯಾಗಿ ಅಥವಾ ಸ್ಯಾಂಡ್‌ವಿಚ್‌, ಸಲಾಡ್‌ಗಳ ಮೂಲಕ ಸೇವಿಸಬಹುದಾದ ರುಚಿಯಾದ ಈ ತರಕಾರಿಯ ಸೇವನೆಯಿಂದ ದೇಹ ತಂಪಾಗಿರುತ್ತದೆ. ಹೊಟ್ಟೆಯಲ್ಲಿರುವ ಕಲ್ಮಶಗಳನ್ನು ಇದು ಹೊರಗೆ ತಳ್ಳುತ್ತದೆ. ದೇಹವನ್ನು, ಚರ್ಮವನ್ನು ಶುದ್ಧವಾಗಿ ಅರೋಗ್ಯವಾಗಿಟ್ಟುಕೊಳ್ಳುವಲ್ಲಿ ಸಹಾಯ ಮಾಡುತ್ತದೆ.

ಇದನ್ನೂ ಓದಿ: Chromotherapy | ಬಣ್ಣದ ಔಷಧಿಯಲ್ಲ, ಬಣ್ಣವೇ ಔಷಧಿ!

Exit mobile version