ಮಳೆಗಾಲವೆಂದರೆ ಕೇವಲ ಶೀತ-ನೆಗಡಿಗಳ ಕಾಲ ಮಾತ್ರವಲ್ಲ, ಚರ್ಮ-ಕೂದಲುಗಳಿಗೂ ಮೋಡ ಮುಸುಕಬಲ್ಲದು. ಚಳಿಗಾಲದಲ್ಲಿ ಮಾತ್ರವೇ ಕೂದಲು ಉದುರುತ್ತದೆ ಎಂದು ಭಾವಿಸಿದರೆ, ಹಾಗೇನಿಲ್ಲ. ಮಳೆಗಾಲವೂ ಕೂದಲು ಉದುರುವುದಕ್ಕೆ ಸಾಕಷ್ಟು ಕೊಡುಗೆಯನ್ನು ನೀಡಬಲ್ಲದು. ಮಳೆಗಾಲ ಮಾತ್ರವೇ ಅಲ್ಲ, ಅದರೊಂದಿಗೆ ಆಹಾರದಲ್ಲಿನ ಅಪೌಷ್ಟಿಕತೆ, ಕೂದಲಿಗೆ ಬಳಸುವ ರಾಸಾಯನಿಕಗಳು ಮತ್ತು ಕೃತಕ ಬಣ್ಣಗಳು, ಹಾರ್ಮೋನಿನ ವ್ಯತ್ಯಾಸಗಳೆಲ್ಲ ಕೂದಲು ಉದುರುವುದಕ್ಕೆ ಕಾರಣವಾಗುತ್ತವೆ. ವಾತಾವರಣದಲ್ಲಿರುವ ತೇವಾಂಶವು ತಲೆಯ ಚರ್ಮದ ಮೇಲೂ ಪರಿಣಾಮ ಬೀರಿ, ಸಮಸ್ಯೆಗಳನ್ನು ತರುತ್ತದೆ. ಹಾಗಾಗಿ ಮಳೆಗಾಲದಲ್ಲಿ ಉಂಟಾಗುವ ಕೂದಲಿನ ತೊಂದರೆಗಳ ಬಗ್ಗೆ (Monsoon Hair care) ಇಲ್ಲಿದೆ ಮಾಹಿತಿ. ವಾತಾವರಣದಲ್ಲಿ ತೇವಾಂಶ ಹೆಚ್ಚಾದಂತೆ ಬೆವರುವುದು ಹೆಚ್ಚು. ಇದರಿಂದಾಗಿ ತಲೆಯ ಚರ್ಮಕ್ಕೆ ಉಸಿರಾಡಲಾಗದಂತೆ ಕಟ್ಟಿಕೊಳ್ಳುತ್ತದೆ. ಒಮ್ಮೆ ಈ ಸೂಕ್ಷ್ಮ ಗ್ರಂಥಿಗಳು ಕಟ್ಟಿಕೊಂಡರೆ, ಕೂದಲಿನ ಬುಡವೆಲ್ಲ ಸಡಿಲವಾಗಿ ಉದುರುವುದಕ್ಕೆ ಪ್ರಾರಂಭವಾಗುತ್ತದೆ. ಜೊತೆಗೆ ಮಳೆಯಲ್ಲಿ ತಲೆಗೂದಲು ನೆನೆದರೂ ಸಂಕಟ ತಪ್ಪಿದ್ದಲ್ಲ. ಈ ಎಲ್ಲವುಗಳ ಫಲವಾಗಿ ತಲೆಯ ಚರ್ಮದಲ್ಲಿರುವ ನೈಸರ್ಗಿಕ ತೈಲದಂಶ ಹೊರಟುಹೋಗಿ, ಕೂದಲು ಉದುರುವುದು, ತುಂಡಾಗುವುದು ಸಾಮಾನ್ಯವಾಗುತ್ತದೆ. ಹೀಗಾಗದಂತೆ ತಡೆಯುವುದು ಹೇಗೆ? ಇಲ್ಲಿವೆ ಸಲಹೆಗಳು.
ಒದ್ದೆಗೂದಲು
ಎಲ್ಲಕ್ಕಿಂತ ಮೊದಲು, ಒದ್ದೆ ಕೂದಲಿನ ಕಾಳಜಿ ಮಾಡುವುದು ಹೇಗೆ ಎನ್ನುವುದನ್ನು ಅರಿಯುವುದು ಮುಖ್ಯ. ಸ್ನಾನ ಮಾಡಿದ ನಂತರ ಕೂದಲು ಒದ್ದೆಯಿರಲಿ ಅಥವಾ ಮಳೆಯಲ್ಲಿ ನೆನೆದು ಒದ್ದೆಯಾಗಿರಲಿ, ಒಣಗಿಸಿಕೊಳ್ಳುವುದಕ್ಕೆಂದು ತಾರಾಮಾರಿ ಉಜ್ಜಬೇಡಿ. ಒದ್ದೆಯಾಗಿರುವ ಚರ್ಮದಿಂದ ಕೂದಲು ಕಿತ್ತು ಬರುವುದಕ್ಕೆ ಇಷ್ಟು ಕಾರಣ ಸಾಕಾಗುತ್ತದೆ. ಅದರಲ್ಲೂ ಒದ್ದೆಗೂದಲನ್ನು ಬಾಚಲೇಬೇಡಿ. ಮೊದಲು ಸ್ವಚ್ಛ ಬಟ್ಟೆಯಲ್ಲಿ ಹಗುರವಾಗಿ ಒರೆಸಿ, ಒಣಗಿಸಿಕೊಳ್ಳಿ. ಇದಕ್ಕಾಗಿ ಸಿಕ್ಕಾಪಟ್ಟೆ ಡ್ರೈಯರ್ ಉಪಯೋಗಿಸಿದರೆ ಸಮಸ್ಯೆಗಳು ಹೆಚ್ಚುತ್ತವೆ. ಕೂದಲು ಸುರುಳಿಯಾಗಿ ಸಿಕ್ಕಾಗಿದೆ ಎಂದಾದರೆ, ತುದಿಯಿಂದ ಸಿಕ್ಕುಗಳನ್ನು ಬಿಡಿಸುತ್ತಾ ಬುಡದತ್ತ ಬನ್ನಿ. ಬಾಚಣಿಕೆಯಲ್ಲಿ ಬಲಪ್ರಯೋಗಿಸಿದರೆ ಕೂದಲು ಹೇಗೆಂದರೆ ಹಾಗೆ ಕಿತ್ತು ಬರುತ್ತದೆ. ಮಳೆಯಲ್ಲಿ ನೆನೆದಾಗಲೂ ಕೂದಲನ್ನು ಗಾಳಿಗೆ ಆರಿಸಿಕೊಂಡು ನಂತರವೇ ಬಾಚಿ.
ಸ್ವಚ್ಛ ಮಾಡಿ
ಬೇಸಿಗೆಯಲ್ಲಿ ಬೆವರಿ ಕೊಳೆಯಾಗುವಂತೆ, ಮಳೆಯಲ್ಲೂ ಕೂದಲು ಕೊಳೆಯಾಗುತ್ತದೆ. ಹಾಗಾಗಿ ವಾರಕ್ಕೆರಡು ಬಾರಿ ತಲೆಸ್ನಾನ ಮಾಡುವ ಅಭ್ಯಾಸವನ್ನು ಮುಂದುವರೆಸಿ; ಈವರೆಗೆ ಆ ಅಭ್ಯಾಸ ಇಲ್ಲದಿದ್ದರೆ, ಈಗ ಪ್ರಾರಂಭಿಸಿ. ಇದರಿಂದ ಕೂದಲ ಬುಡಕ್ಕೆ ಮತ್ತು ತಲೆಯ ಚರ್ಮಕ್ಕೆ ತೊಂದರೆ ಕೊಡುವ ಸೂಕ್ಷ್ಮಾಣುಗಳನ್ನು ತೆಗೆಯಬಹುದು. ವಾತಾವರಣದ ಧೂಳು, ಹೊಗೆಯಂಥ ಮಾಲಿನ್ಯವನ್ನು ದೂರ ಮಾಡಬಹುದು. ಹೆಚ್ಚುವರಿ ತೈಲವನ್ನೂ ಸ್ವಚ್ಛ ಮಾಡಿ, ಕೂದಲಿನ ಆರೋಗ್ಯ ಕಾಪಾಡಿಕೊಳ್ಳಬಹುದು.
ಇದನ್ನೂ ಓದಿ: Sleep After Lunch: ಊಟದ ನಂತರ ನಮಗೆ ಆಕಳಿಕೆ, ನಿದ್ದೆ ಬರುವುದೇಕೆ?
ಕೇಶ ವಿನ್ಯಾಸಗಳು
ಬಿಗಿಯಾಗಿ ಕಟ್ಟಿದಂಥ ಕೇಶ ವಿನ್ಯಾಸಗಳು ಕೂದಲಿಗೆ ಹಾನಿ ಮಾಡುತ್ತವೆ. ಕೂದಲನ್ನು ತುಂಡರಿಸಿ, ಬುಡದಿಂದ ಬೇರ್ಪಡಿಸಿ, ಹೆಚ್ಚು ಸಿಕ್ಕಾಗಿಸುತ್ತವೆ. ಇವೆಲ್ಲವುಗಳ ಫಲವೆಂದರೆ ಹೆಚ್ಚೆಚ್ಚು ಕೂದಲು ಉದುರುವುದು. ಜೊತೆಗೆ, ಅತಿಯಾಗಿ ಹೀಟ್‌ಸ್ಟೈಲಿಂಗ್ ಮಾಡುವುದು ಸಹ ಹಾನಿಕರ. ಹೇರ್ ಡ್ರೈಯರ್ ಹೆಚ್ಚಾಗಿ ಬಳಸುವುದು, ಕೂದಲು ನೇರವಾಗಿಸಲು ಅಥವಾ ಸುರುಳಿ ಮಾಡಿಸಲು ಬಿಸಿ ಮಾಡುವುದು- ಇವೆಲ್ಲ ಸಮಸ್ಯೆಗಳಿಗೆ ನಾಂದಿ ಹಾಡುತ್ತವೆ.
ಕೂದಲನ್ನು ಡೈ ಮಾಡುವಾಗಲೂ ಹೆಚ್ಚಿನ ಎಚ್ಚರಿಕೆ ಅಗತ್ಯ. ಬಣ್ಣ ಹಾಕುವುದಕ್ಕಾಗಿ ಕಠಿಣವಾದ ರಾಸಾಯನಿಕಗಳನ್ನು ಬಳಸುವುದು ತೊಂದರೆ ತರಬಹುದು. ಮಳೆಗಾಲದಲ್ಲಿ ಕೂದಲಿಗೆ ಬಣ್ಣ ಹಾಕುವುದು ಅಗತ್ಯ ಎನಿಸಿದರೆ, ಅಮೋನಿಯ ರಾಸಾಯನಿಕ ಇಲ್ಲದಂಥ ಬಣ್ಣಗಳನ್ನು ಬಳಸಿ. ಇವು ಕೂದಲಿಗೆ ಹಾನಿ ಆಗದಂತೆ ನಾಜೂಕಾಗಿ ಕೆಲಸವನ್ನು ಮಾಡುತ್ತವೆ. ಜೊತೆಗೆ ಕೇಶಾರೈಕೆಗೆ ಈವರೆಗೆ ಏನೆಲ್ಲವನ್ನೂ ಮಾಡುತ್ತಿದ್ದಿರೊ, ಅವೆಲ್ಲವನ್ನೂ ಮುಂದುವರಿಸಿ.
ಆಹಾರ
ಮಳೆಯಲ್ಲಿ ಕರುಂಕುರುಂ ತಿನ್ನುವ ಬಯಕೆಯಾಗುವುದು ಸಹಜ. ಹಾಗೆಂದು ಶರೀರಕ್ಕೆ ಬೇಕಾದ ಸತ್ವಗಳನ್ನು ಬಿಟ್ಟು ಅತಿಯಾಗಿ ಜಿಡ್ಡಿನ, ಕರಿದ ತಿಂಡಿಗಳನ್ನು ತಿನ್ನುವುದು ಕೂದಲಿನ ಆರೋಗ್ಯಕ್ಕೆ ಹೇಳಿಸಿದ್ದಲ್ಲ. ಮಳೆಗಾಲದ ಋತುವಿನಲ್ಲಿ ದೊರೆಯುವ ಹಣ್ಣು-ತರಕಾರಿಗಳಿಗೆ ಆದ್ಯತೆ ನೀಡಿ. ಚೆನ್ನಾಗಿ ನೀರು ಕುಡಿಯಿರಿ. ಸತ್ವಯುತ ಆಹಾರ ಸೇವಿಸಿ. ಅಹಾರದಲ್ಲಿ ವಿಟಮಿನ್ ಬಿ12, ಫೋಲೇಟ್, ಬಯೋಟಿನ್, ಪ್ರೊಟೀನ್‌ನಂಥವು ಹೇರಳವಾಗಿರಲಿ. ಇದರಿಂದ ಕಾಲ ಯಾವುದಾದರೂ, ಸುಂದರ ಕೂದಲು ನಿಮ್ಮದಾಗಲಿದೆ.