Site icon Vistara News

ಮೊಬೈಲ್‌ ಹೆಚ್ಚು ನೋಡಿದರೆ ಆಯುಷ್ಯ ಕಡಿಮೆ ಆಗುತ್ತೆ; ಆತಂಕಕಾರಿ ವರದಿ ನೀಡಿದ ಸಂಶೋಧನೆ

Mobile

ಕ್ಯಾಲಿಫೋರ್ನಿಯಾ: ಜಗತ್ತನ್ನು ಅಂಗೈಯಲ್ಲಿ ತೋರಿಸುವ ಮೊಬೈಲ್‌ ಈಗ ಊಟ-ನಿದ್ದೆಯಷ್ಟೇ ಮುಖ್ಯ ಎಂಬಂತಾಗಿದೆ. ಅದಕ್ಕಿಂತಲೂ ಒಂದು ಪಟ್ಟು ಹೆಚ್ಚೇ ಮಹತ್ವ ಪಡೆದಿದೆ ಎಂದರೂ ತಪ್ಪಿಲ್ಲ. ಬಿಡುವಿನ ಸಮಯದಲ್ಲಿ ಮೊಬೈಲ್‌ ನೋಡುವ ಕಾಲ ಇದಲ್ಲ. ಬಿಡುವು ಇಲ್ಲದಿದ್ದರೂ ಮಧ್ಯೆಮಧ್ಯೆ ಮೊಬೈಲ್‌ ಮೇಲೆ ಕಣ್ಣು-ಕೈ ಆಡಿಸಬೇಕು. ಮೊಬೈಲ್‌ ನೋಡಲೆಂದೇ ಸಮಯ ಎತ್ತಿಡುವವರು, ಮೊಬೈಲ್‌ ನೋಡುತ್ತ ಸಮಯ ಹಾಳು ಮಾಡುವವರು, ಮೊಬೈಲ್‌ನಲ್ಲೇ ದಿನ ಕಳೆಯುವವರು-ಹೀಗೆ ವಿವಿಧ ವರ್ಗಗಳ ಜನರು ಇದ್ದಾರೆ. ಆದರೆ ಈಗೊಂದು ಎಚ್ಚರಿಕೆಯ ಸಂದೇಶವನ್ನು ಸಂಶೋಧನೆಯೊಂದು ನೀಡಿದೆ. ನೀವೂ ಕೂಡ ಹೀಗೆ ಮೊಬೈಲ್‌ ಅಡಿಕ್ಟ್‌ ಆಗಿದ್ದರೆ, ದಿನದಲ್ಲಿ ಬಹುಪಾಲು ಸಮಯ ಮೊಬೈಲ್‌ ಸ್ಕ್ರೀನ್‌ ನೋಡುವವರೇ ಆಗಿದ್ದರೆ ಕೂಡಲೇ ಸರಿಪಡಿಸಿಕೊಳ್ಳಿ. ಇಲ್ಲದಿದ್ದರೆ ಇದು ನಿಮ್ಮ ಆಯುಷ್ಯವನ್ನೇ ಕಡಿಮೆ ಮಾಡಬಹುದು !

ಅತಿಯಾದ ಮೊಬೈಲ್‌ ಬಳಕೆ ಜೀವಿತಾವಧಿಯನ್ನು ಕಡಿತಗೊಳಿಸಬಹುದು ಎಂದು ಹೇಳಿದ್ದು ಯುಎಸ್‌ನ ಕ್ಯಾಲಿಫೋರ್ನಿಯಾದಲ್ಲಿರುವ ಬಕ್ ಇನ್‌ಸ್ಟಿಟ್ಯೂಟ್‌ ಫಾರ್ ರಿಸರ್ಚ್ ಆನ್ ಏಜಿಂಗ್ ಎಂಬ ಸ್ವತಂತ್ರ ಬಯೋಮೆಡಿಕಲ್‌ ಸಂಶೋಧನಾ ಸಂಸ್ಥೆ. ಅತಿಯಾಗಿ ಮೊಬೈಲ್‌ ನೋಡುವುದು ಕಣ್ಣಿನ ನರಗಳ ಮೇಲೆ ದುಷ್ಪರಿಣಾಮ ಬೀರುತ್ತದೆ ಎಂಬುದು ಈಗಾಗಲೇ ಗೊತ್ತಿದೆ. ಹಾಗೇ ಮೊಬೈಲ್‌ ಮೂಲಕ ನಿರಂತರವಾಗಿ ಕಣ್ಣಿನ ಮೇಲೆ ಬೀಳುವ ಬೆಳಕಿನಿಂದಾಗಿ ನಮ್ಮ ಸಿರ್ಕಾಡಿಯನ್‌ ಲಯ ತಪ್ಪುತ್ತದೆ . ಸಿರ್ಕಾಡಿಯನ್‌ ಲಯ ಅಥವಾ ಸಿರ್ಕಾಡಿಯನ್‌ ರಿದಮ್‌ ಎಂಬುದು ಒಂದು ನೈಸರ್ಗಿಕ ಪ್ರಕ್ರಿಯೆಯಾಗಿದ್ದು, 24 ಗಂಟೆಯಲ್ಲಿ ನಮ್ಮ ದೇಹದಲ್ಲಿ ಆಗುವ ಬದಲಾವಣೆಗಳು, ನಿದ್ರೆ ಮತ್ತು ಎಚ್ಚರದ ಸ್ಥಿತಿಯನ್ನು ನಿಯಂತ್ರಿಸುವ ಕ್ರಿಯೆ. ಈ ಲಯ ತಪ್ಪಿದರೆ ದೇಹಕ್ಕೆ ಹಲವು ರೀತಿಯ ಸಮಸ್ಯೆಗಳು ಉಂಟಾಗುತ್ತವೆ. ಗಂಭೀರ ಸ್ವರೂಪದ ಕಾಯಿಲೆಗಳೂ ಬರಬಹುದು. ಅಂಥ ರಿದಮ್‌ ತಪ್ಪಿಸುವ ಕೆಲಸವನ್ನು ಮೊಬೈಲ್‌ ಮಾಡುತ್ತದೆ ಎಂಬುದು ಸಂಶೋಧನೆಯ ಸಾರ.

ಇದನ್ನೂ ಓದಿ: Bicycle Friendly city ಆಗಲಿ ಬೆಂಗಳೂರು, ಆರೋಗ್ಯಕ್ಕೂ ಬೆಸ್ಟ್‌, ಓಡಾಟಕ್ಕೂ ಸುಲಭ

ಬಕ್‌ ಇನ್‌ಸ್ಟಿಟ್ಯೂಟ್‌ನ ಪ್ರಾಧ್ಯಾಪಕರಾದ ಡಾ. ಪಂಕಜ್‌ ಕಪಾಹಿ ಸಂಶೋಧನಾ ವರದಿಯನ್ನು ವಿವರಿಸಿದ್ದಾರೆ. ʼ ಮೊಬೈಲ್‌ ಅಥವಾ ಕಂಪ್ಯೂಟರ್‌ ಸ್ಕ್ರೀನ್‌ಗಳನ್ನು ನಿರಂತರವಾಗಿ ದಿಟ್ಟಿಸಿ ನೋಡುವುದು, ಹಗಲು-ರಾತ್ರಿಯೆನ್ನದೆ ಅವುಗಳ ಬೆಳಕಿಗೆ ಕಣ್ಣನ್ನು ಒಡ್ಡಿಕೊಳ್ಳುವುದರಿಂದ ನಮ್ಮ ದೇಹದೊಳಗಿನ ವಿವಿಧ ಅಂಗಗಳ ಮೇಲೆ ದುಷ್ಪರಿಣಾಮ ಬೀರುತ್ತದೆ. ಆಂತರಿಕವಾಗಿ ನಡೆಯಬೇಕಾದ ಹಲವು ಕ್ರಿಯೆಗಳು ಸರಿಯಾಗಿ ನಡೆಯದೆ, ಶರೀರದ ಲಯ ತಪ್ಪುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ ಮಿದುಳಿನ ಶಕ್ತಿಯನ್ನು ಕುಂದಿಸುತ್ತದೆ. ಇದು ಕ್ರಮೇಣ ನಮ್ಮ ಜೀವಿತಾವಧಿ ಕಡಿಮೆ ಮಾಡುತ್ತದೆʼ ಎಂದು ಎಚ್ಚರಿಕೆ ನೀಡಿದ್ದಾರೆ.

ಇದನ್ನೂ ಓದಿ: World Food Safety Day: ನಿಮ್ಮ ಆಹಾರ ಆರೋಗ್ಯಕರ ಎನಿಸಬೇಕಾದರೆ…

Exit mobile version