Site icon Vistara News

Morning Nutrition: ಆರೋಗ್ಯಕರ ಆಗಿರಬೇಕಿದ್ದರೆ ನಮ್ಮ ಬೆಳಗಿನ ತಿಂಡಿ ಹೇಗಿರಬೇಕು?

Morning Nutrition

ಹೆಚ್ಚಿನ ಜನಕ್ಕೆ ಬೆಳಗಿನ ತಿಂಡಿಯ ಮಹತ್ವವೇ ತಿಳಿದಿರುವುದಿಲ್ಲ. ಈ ಮಾತನ್ನು ಹೇಳುವುದಕ್ಕೂ ಕಾರಣವಿದೆ. ಬೆಳಗ್ಗೆ (Morning Nutrition) ತಿಂಡಿಯನ್ನು ಎದ್ದ ನಾಲ್ಕು ತಾಸುಗಳ ನಂತರ ತಿನ್ನುವುದು, ಕೆಲವೊಮ್ಮೆ ತಿಂಡಿಯನ್ನೇ ತಿನ್ನದಿರುವುದು, ದಿನದ ಪ್ರಾರಂಭಕ್ಕೆ ಸೂಕ್ತ ಅಲ್ಲದ್ದನ್ನು ತಿನ್ನುವುದು, ಕೇವಲ ಕಾಫಿ/ಟೀ ಕುಡಿದು ಮಧ್ಯಾಹ್ನ ಊಟ ಮಾಡುವುದು- ಇಂಥ ಉದಾಹರಣೆಗಳು ಕಡಿಮೆಯೇನಿಲ್ಲ. ಆದರೆ ಬೆಳಗಿನ ತಿಂಡಿಯನ್ನು ದಿನದ ಅತ್ಯಂತ ಆರೋಗ್ಯಕರ ಊಟವನ್ನಾಗಿ ಮಾಡುವುದು ಮಹತ್ವದ್ದು ಎನ್ನುತ್ತಾರೆ ಪೌಷ್ಟಿಕಾಂಶ ತಜ್ಞರು. ರಾತ್ರಿಡೀ ದೇಹಕ್ಕೆ ಅಗತ್ಯವಾದ ವಿಶ್ರಾಂತಿಯನ್ನು ನೀಡಿದ್ದಾಗಿದೆ. ಇನ್ನೀಗ ಮುಂಜಾನೆದ್ದು ದಿನವನ್ನು ಪ್ರಾರಂಭಿಸಬೇಕು ಎನ್ನುವಾಗ, ದೇಹಕ್ಕೆ ನೀಡುವಂಥ ಗ್ರಾಸ ಹೇಗಿರಬೇಕು? ಅಧಿಕ ಸತ್ವಗಳನ್ನು ಹೊಂದಿದ ಆಹಾರವನ್ನೇ ತಿನ್ನಬೇಕು ಎಂದಾದರೆ, ಏಕೆ ಹಾಗೆ? ಬೆಳಗ್ಗೆ ತಿಂಡಿ ತಿನ್ನದಿದ್ದರೆ ತೂಕ ಇಳಿಸುವುದು ಸಾಧ್ಯವಿಲ್ಲವೇ? ಇಂತಹ ಹಲವಾರು ಪ್ರಶ್ನೆಗಳು ಮನದಲ್ಲಿದ್ದರೆ, ಅವಕ್ಕೆಲ್ಲ ಉತ್ತರ ಹುಡುಕುವ ಪ್ರಯತ್ನ ಇಲ್ಲಿದೆ. ಬೆಳಗಿನ ತಿಂಡಿಗೆ ಆರೋಗ್ಯಕರ ಕೊಬ್ಬುಗಳು, ಸಂಕೀರ್ಣ ಪಿಷ್ಟ ಮತ್ತು ಪ್ರೊಟೀನ್‌ ಇರುವಂಥ ಆಹಾರ ಅಗತ್ಯ. ಈ ಸತ್ವಗಳ ಮಿಶ್ರಣವು ದೇಹವು ದೀರ್ಘಕಾಲದವರೆಗೆ ಬಳಲದಂತೆ ನೋಡಿಕೊಳ್ಳುತ್ತದೆ. ದಿನವಿಡೀ ಅಗತ್ಯವಾದ ಚೈತನ್ಯವನ್ನು ದೇಹಕ್ಕೆ ನೀಡುತ್ತದೆ ಮತ್ತು ಆಹಾರ ತಿಂದ ತೃಪ್ತಿಯನ್ನು ಒದಗಿಸುತ್ತದೆ. ಜೊತೆಗೆ, ಬೇಗ ಹಸಿವಾಗುವುದನ್ನು ತಡೆಯುತ್ತದೆ. ಇಂಥ ಆಹಾರವು ದೇಹಕ್ಕೆ ಮಾತ್ರವಲ್ಲ, ಮನಸ್ಸಿಗೂ ಬೇಕಾದ ಗ್ರಾಸವನ್ನು ಒದಗಿಸಿಕೊಡುತ್ತದೆ. ಈ ಬಗ್ಗೆ ವಿವರಣೆ ಇಲ್ಲಿದೆ.

ಸಂಕೀರ್ಣ ಪಿಷ್ಟಗಳು

ನಮ್ಮೆಲ್ಲ ಚಟುವಟಿಕೆಗಳನ್ನು ಮಾಡುವುದಕ್ಕೆ ನಮಗೆ ಪಿಷ್ಟ ಅಥವಾ ಕಾರ್ಬೊಹೈಡ್ರೇಟ್‌ಗಳು ಬೇಕು. ಆದರೆ ಮೈದಾ ಅಥವಾ ಸಂಸ್ಕರಿತ ತಿನಿಸುಗಳಿಂದ ಬರುವಂಥ ಸರಳ ಪಿಷ್ಟವಲ್ಲ, ದೀರ್ಘ ಕಾಲದವರೆಗೆ ಶಕ್ತಿಯನ್ನು ಉಣಿಸುವಂಥ ಸಂಕೀರ್ಣವಾದ ಪಿಷ್ಟಗಳು ಬೇಕು. ಇದನ್ನು ಇಡೀ ಧಾನ್ಯಗಳು, ಓಟ್ಸ್‌, ಸಿರಿ ಧಾನ್ಯಗಳು, ಕಿನೊವಾ, ರಾಗಿ ಮುಂತಾದ ನಾರುಭರಿತ ಅಂದರೆ ತೌಡು ಸಹಿತವಾದ ಧಾನ್ಯಗಳಿಂದ ಪಡೆಯಬಹುದು. ಈ ಧಾನ್ಯಗಳಿಂದ ಉಪ್ಪಿಟ್ಟು, ಅವಲಕ್ಕಿ, ದೋಸೆ, ಇಡ್ಲಿ, ಚಿತ್ರಾನ್ನ… ನಿಮಗೆ ಇಷ್ಟವಾದ ಯಾವುದನ್ನಾದರೂ ಮಾಡಿ.

ಪ್ರೊಟೀನ್‌

ಬೆಳಗಿನ ತಿಂಡಿಗೆ ಹೆಚ್ಚಿನ ಪ್ರಮಾಣದ ಪ್ರೊಟೀನ್‌ ಅಗತ್ಯ. ಇದರಿಂದ ದೇಹದ ರಿಪೇರಿ ಕೆಲಸ, ಹಾರ್ಮೋನುಗಳ ಕ್ಷಮತೆ, ಕಿಣ್ವಗಳ ಉತ್ಪಾದನೆ ಮುಂತಾದ ಮಹತ್ವದ ಕೆಲಸಗಳೆಲ್ಲವೂ ಮಟ್ಟಸವಾಗಿ ಇರುತ್ತದೆ. ಇದಕ್ಕಾಗಿ ಹಾಲು, ಮೊಸರು, ಗ್ರೀಕ್‌ ಯೋಗರ್ಟ್‌, ಪನೀರ್‌, ತೋಫು, ಮೊಟ್ಟೆ, ಕಾಳುಗಳು, ಸೋಯಾ, ಕಾಯಿ ಮತ್ತು ಬೀಜಗಳು ಬೆಳಗಿನ ಆಹಾರದಲ್ಲಿ ಇರಬೇಕು. ಆಮ್ಲೆಟ್‌ ಜೊತೆಗೆ ಇಡೀಧಾನ್ಯದ ಬ್ರೆಡ್‌ ಅಥವಾ ಚಪಾತಿಯಂಥವು ಬೇಕು ಎನ್ನುವುದು ಸ್ಪಷ್ಟವಾಗಿದೆಯಲ್ಲವೇ?

ಇದನ್ನೂ ಓದಿ: World Blood Donor Day: ರಕ್ತದಾನ ಯಾರು ಮಾಡಬಹುದು? ಯಾರು ಮಾಡಬಾರದು?

ಆರೋಗ್ಯಕರ ಕೊಬ್ಬು

ಇದು ಸಹ ಅತಿ ಮುಖ್ಯವಾದ ಸತ್ವ. ದೇಹದ ತೂಕವನ್ನು ನಿಯಂತ್ರಿಸಲು, ಹೆಚ್ಚಿನ ಕೊಬ್ಬು ದೇಹದಲ್ಲಿ ಜಮೆಯಾಗದಂತೆ ಕಾಯ್ದುಕೊಳ್ಳಲು ಇದು ಅಗತ್ಯ. ದೇಹದ ಅಂಗಾಂಗಗಳೆಲ್ಲ ಸರಿಯಾಗಿ ಕೆಲಸ ಮಾಡಲು ಈ ಕೊಬ್ಬು ಬೇಕೇಬೇಕು. ಇದಕ್ಕಾಗಿ ಅವಕಾಡೊ, ಕಾಯಿ-ಬೀಜಗಳು, ತುಪ್ಪ, ಕೊಬ್ಬರಿ ಎಣ್ಣೆಯಂಥ ಆರೋಗ್ಯಕರ ತೈಲಗಳು, ಪೀನಟ್‌ಬಟರ್‌ ಅಥವಾ ಇನ್ನಾವುದಾದರೂ ಬೀಜಗಳ ತುಪ್ಪ- ಇವೆಲ್ಲ ಶರೀರಕ್ಕೆ ಬೇಕು. ಮೆದುಳಿನ ಆರೋಗ್ಯ ರಕ್ಷಣೆಗಂತೂ ಇವು ತೀರಾ ಅಗತ್ಯವಾದವು. ಇವುಗಳಲ್ಲಿರುವ ಒಮೇಗಾ ೩ ಕೊಬ್ಬಿನಾಮ್ಲವು ಇಡೀ ದೇಹದ ಸ್ವಾಸ್ಥ್ಯಕ್ಕೆ ಅಗತ್ಯವಾಗಿದ್ದು.

ನೀರು

ಇದಿಷ್ಟರ ಜೊತೆಗೆ ದಿನಕ್ಕೆ ಮೂರು ಲೀ. ನೀರು ಕುಡಿಯುವುದು ಬಹುಮುಖ್ಯ. ರಾತ್ರಿಡೀ ನೀರಿಲ್ಲದೆ ಇರುವಂಥ ದೇಹಕ್ಕೆ ಬೆಳಗಿನ ಹೊತ್ತು ಒಂದೆರಡು ಗ್ಲಾಸ್‌ ನೀರು ಕುಡಿಸಿ. ಬರೀ ನೀರು ಕುಡಿಯುವುದು ಕಷ್ಟ ಎನಿಸಿದರೆ, ಸಕ್ಕರೆ ರಹಿತವಾದ ಯಾವುದೇ ರಸಗಳನ್ನು ಸೇರಿಸಿಕೊಳ್ಳಬಹುದು. ಜೊತೆಗೆ, ದಿನವಿಡೀ ಹರ್ಬಲ್‌ ಚಹಾಗಳು, ಎಳನೀರು, ರಸಭರಿತ ಹಣ್ಣು-ತರಕಾರಿಗಳು, ಮಜ್ಜಿಗೆ- ಇಂಥವೆಲ್ಲ ದಿನದ ಮೂರು ಲೀ. ನೀರು ಕುಡಿಯುವ ಗುರಿಯನ್ನು ಪೂರ್ಣಗೊಳಿಸಲು ನೆರವಾಗುತ್ತವೆ.

Exit mobile version