ಕಾಲ-ದೇಶವೆನ್ನದೆ ಸಾಂಕ್ರಾಮಿಕ ರೋಗಗಳು ಹರಡುತ್ತಿರುವುದನ್ನು ಕಾಣುತ್ತಿದ್ದೇವೆ. ಹೆಚ್ಚಿನ ಬಾರಿ ಸೊಳ್ಳೆ, ನೊಣದಂಥ ಕೀಟಗಳು (Mosquito Safety) ಈ ರೋಗಗಳ ಪ್ರಸರಣಕ್ಕೆ ಕಾರಣವಾಗುತ್ತವೆ. ಇವುಗಳನ್ನು ನಿಯಂತ್ರಿಸುವುದರಿಂದ ರೋಗಬಾಧೆಯನ್ನೂ ನಿಯಂತ್ರಿಸಲು ಸಾಧ್ಯವಿದೆ. ಸೊಳ್ಳೆಗಳಿಂದ ಹರಡುವ ರೋಗಗಳು ಈಗ ಜಾಗತಿಕ ಸಮಸ್ಯೆ ಎನಿಸಿದ್ದು, ಆಫ್ರಿಕಾ ಮತ್ತು ಏಷ್ಯಾ ಖಂಡಗಳ ಹಲವಾರು ದೇಶಗಳನ್ನು ಈ ಸಮಸ್ಯೆ ಹಲವು ಶತಮಾನಗಳಿಂದ ಕಾಡುತ್ತಿದೆ. ವಿಶ್ವಮಟ್ಟದಲ್ಲಿ ಶೇ. 34ರಷ್ಟು ಡೆಂಗೂ ಪ್ರಕರಣಗಳಿಗೆ ಭಾರತವೇ ತವರು. ಹಾಗಾಗಿ ಸೊಳ್ಳೆಗಳಿಂದ ಹರಡುವ ರೋಗಗಳ ಬಗ್ಗೆ ಗಮನಿಸೋಣ
ಮಲೇರಿಯಾ
ಪ್ಲಾಸ್ಮೋಡಿಯಂ ಎಂಬ ಏಕಕೋಶ ಜೀವಿಯಿಂದ ಹರಡುವ ರೋಗವಿದು. ಭಾರತವೂ ಸೇರಿದಂತೆ ವಿಶ್ವದ ಹಲವು ದೇಶಗಳಲ್ಲಿ ವಾರ್ಷಿಕವಾಗಿ ಲಕ್ಷಾಂತರ ಜನ ಈ ರೋಗಕ್ಕೆ ತುತ್ತಾಗುತ್ತಿದ್ದಾರೆ. ರೋಗಿಗೆ ಕಚ್ಚಿದ ಸೊಳ್ಳೆಯು ಆರೋಗ್ಯವಂತನಿಗೆ ಕಚ್ಚಿದಾಗ ರೋಗಾಣುಗಳು ಪ್ರಸಾರವಾಗುತ್ತವೆ. ಸೊಳ್ಳೆ ಕಚ್ಚಿದ 10 ದಿನಗಳ ನಂತರ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ವಿಪರೀತ ಜ್ವರ, ಮೈಕೈ ನೋವು, ಚಳಿಯಾಗಿ ನಡುಕ, ಜ್ವರ ಕಡಿಮೆಯಾದರೆ ಸಿಕ್ಕಾಪಟ್ಟೆ ಬೆವರುವುದು, ತಲೆನೋವು, ವಾಂತಿ, ಡಯರಿಯದಂಥ ಚಿಹ್ನೆಗಳು, ಸ್ನಾಯು ಸೆಳೆತ ಮತ್ತು ಫ್ಲೂ ಮಾದರಿಯ ರೋಗ ಲಕ್ಷಣಗಳು ಕಂಡುಬರುತ್ತವೆ. ಈ ಯಾವುದೇ ಲಕ್ಷಣಗಳು ಕಂಡರೂ ವೈದ್ಯರೊಂದಿಗೆ ಸಮಾಲೋಚನೆ ಅಗತ್ಯ. ರಕ್ತ ಪರೀಕ್ಷೆಯಿಂದ ಈ ರೋಗ ಪತ್ತೆ ಮಾಡುವುದಕ್ಕೆ ಸಾಧ್ಯವಿದೆ. ಸರಿಯಾದ ಸಮಯಕ್ಕೆ ಚಿಕಿತ್ಸೆ ದೊರೆಯದೆ ರೋಗ ಉಲ್ಬಣಿಸಿದರೆ, ಉಸಿರಾಟದ ತೊಂದರೆ, ಅಂಗಾಗ ವೈಫಲ್ಯ ಮುಂತಾದವು ಕಾಣಿಸಿಕೊಂಡು ರೋಗಿಯ ಪ್ರಾಣಕ್ಕೆ ಎರವಾಗಬಹುದು.
ಡೆಂಗ್ಯೂ
ಏಡಿಸ್ ಹೆಣ್ಣು ಸೊಳ್ಳೆಯಿಂದ ಹರಡುವ ವೈರಸ್ ಸೋಂಕಿದು. ಸೊಳ್ಳೆ ಕಚ್ಚಿದ ನಾಲ್ಕಾರು ದಿನಗಳ ನಂತರ ರೋಗದ ಚಿಹ್ನೆಗಳು ಕಾಣಿಸಿಕೊಳ್ಳುತ್ತವೆ. ಸಾಮಾನ್ಯವಾಗಿ ಫ್ಲೂ ಮಾದರಿಯಲ್ಲಿ ಇರುವ ಈ ಕಾಯಿಲೆಯಲ್ಲಿ ಕೆಲವೊಮ್ಮೆ ರಕ್ತದಲ್ಲಿ ಪ್ಲೇಟ್‌ಲೆಟ್‌ಗಳು ಕುಸಿದು ಜೀವಕ್ಕೆ ಎರವಾಗುವ ಸಾಧ್ಯತೆಯಿದೆ. ಜ್ವರ, ತೀವ್ರವಾದ ತಲೆನೋವು, ಕಣ್ಣಿನ ಹಿಂಭಾಗದಲ್ಲಿ ನೋವು, ಕೀಲು ಮತ್ತು ಸ್ನಾಯುಗಳಲ್ಲಿ ತೀವ್ರವಾದ ನೋವು, ಮೈಮೇಲೆ ದದ್ದುಗಳು, ವಾಂತಿ- ಜ್ವರದೊಂದಿಗೆ ಈ ಪೈಕಿ ಯಾವುದೇ ಎರಡು ಲಕ್ಷಣಗಳನ್ನು ಕಂಡರೂ ವೈದ್ಯರನ್ನು ಸಂಪರ್ಕಿಸಬೇಕು.
ಚಿಕೂನ್‌ಗುನ್ಯಾ
ಸೊಳ್ಳೆ ಕಚ್ಚುವುದರಿಂದ ಹರಡುವ ಚಿಕೂನ್‌ಗುನ್ಯಾ ವೈರಸ್‌ನಿಂದಲೇ ಬರುವ ರೋಗವಿದು. ಜ್ವರದೊಂದಿಗೆ ತೀವ್ರವಾದ ಕೀಲುನೋವು, ತಲೆನೋವು, ಮೈಮೇಲೆ ದದ್ದು ಕಾಣುವುದು ಇದರ ಪ್ರಮುಖ ಲಕ್ಷಣಗಳು. ಸೋಂಕಿತ ಸೊಳ್ಳೆ ಕಚ್ಚಿದ 4-8 ದಿನಗಳ ಅಂತರದಲ್ಲಿ ರೋಗಚಿಹ್ನೆಗಳು ಕಂಡುಬರುತ್ತವೆ. ಈ ಸೊಳ್ಳೆಗಳು ರಾತ್ರಿಯಲ್ಲಿ ಮಾತ್ರವೇ ಅಲ್ಲ, ಹಗಲಿನಲ್ಲೂ ಕಚ್ಚುತ್ತವೆ. ಏಷ್ಯಾ ಮತ್ತು ಭಾರತೀಯ ಉಪಖಂಡದಲ್ಲಿ ಮುಖ್ಯವಾಗಿ ಈ ಕಾಯಿಲೆ ಸದ್ದು ಮಾಡುತ್ತಿದೆ. ಇದರ ಉಳಿದೆಲ್ಲ ರೋಗ ಲಕ್ಷಣಗಳು 8-10 ದಿನಗಳಲ್ಲಿ ಕಡಿಮೆಯಾದರೂ, ಕೀಲು ನೋವು ಮಾತ್ರ ದೀರ್ಘಕಾಲ ಬಾಧಿಸುತ್ತದೆ.
ಜಿಕಾ ವೈರಸ್
ಏಡಿಸ್ ವೈರಸ್‌ನಿಂದ ಹರಡುವ ಈ ರೋಗವು, ನರಸಂಬಂಧಿ ಸಮಸ್ಯೆಗಳು ಮತ್ತು ಶಿಶುಗಳಲ್ಲಿ ಜನ್ಮಜಾತ ದೋಷಗಳನ್ನು ಉಂಟುಮಾಡುತ್ತದೆ. ಹಾಗಾಗಿ ಗರ್ಭಿಣಿಯರು ಈ ಬಗ್ಗೆ ಅತೀವ ಎಚ್ಚರಿಕೆ ವಹಿಸಬೇಕಾದ್ದು ಅಗತ್ಯ. ಜ್ವರ, ತಲೆನೋವು, ಕಣ್ಣು ಕೆಂಪಾಗುವುದು, ದದ್ದು, ಕೀಲುನೋವು ಮುಂತಾದ ಡೆಂಗೂ ಲಕ್ಷಣಗಳನ್ನೇ ಈ ರೋಗವೂ ಬಹುತೇಕ ಹೋಲುತ್ತದೆ.
ಹಳದಿ ಜ್ವರ
ಏಡಿಸ್ ರೋಗಾಣುಯುಕ್ತ ಸೊಳ್ಳೆಗಳು ಕಚ್ಚುವುದರಿಂದ ಬರುವ ರೋಗವಿದು. ಜ್ವರ, ಚಳಿ-ನಡುಕ, ಹಸಿವಿಲ್ಲದಿರುವುದು, ಓಕರಿಕೆ, ವಾಂತಿ, ಬೆನ್ನು ಮತ್ತು ತಲೆ ನೋವು, ಆಯಾಸ, ಕಾಮಾಲೆ ಮತ್ತು ಆಂತರಿಕವಾಗಿ ರಕ್ತಸ್ರಾವವಾಗುವಂಥ ಲಕ್ಷಣಗಳನ್ನು ಈ ರೋಗ ತೋರಿಸುತ್ತದೆ. ಸೂಕ್ತ ಚಿಕಿತ್ಸೆಯಿಂದ ಸಾಮಾನ್ಯವಾಗಿ ಒಂದು ವಾರಕ್ಕೆ ರೋಗಿ ಚೇತರಿಸಿಕೊಂಡರೂ ವಾರ್ಷಿಕವಾಗಿ 30 ಸಾವಿರಕ್ಕೂ ಹೆಚ್ಚು ಮಂದಿ ಈ ರೋಗಕ್ಕೆ ಜಾಗತಿಕವಾಗಿ ಬಲಿಲಯಾಗುತ್ತಿದ್ದಾರೆ.
ಜಪಾನೀಸ್ ಎನ್‌ಸೆಫಲೈಟಿಸ್
ಕ್ಯೂಲೆಕ್ಸ್ ಸೊಳ್ಳೆಗಳಿಂದ ಪ್ರಸರಣವಾಗುವ ಈ ವೈರಸ್‌ಗಳು ಮೆದುಳಿಗೆ ಸೋಂಕು ಹರಡುತ್ತವೆ. ಸಾಮಾನ್ಯವಾಗಿ ಚಿಕಿತ್ಸೆಯಿಂದ ರೋಗಿ ಚೇತರಿಸಿಕೊಳ್ಳುವುದು ಹೌದಾದರೂ, ತೀವ್ರತರನಾದ ಪ್ರಕರಣಗಳಲ್ಲಿ ಮೆದುಳಿನಲ್ಲಿ ಊತ ಕಾಣಿಸಿಕೊಂಡು ಜೀವಕ್ಕೆ ಎರವಾಗಬಹುದು.
ಸೊಳ್ಳೆಗಳನ್ನು ನಿಯಂತ್ರಿಸುವುದು ಹೇಗೆ?
ಸೊಳ್ಳೆಯಿಂದ ಹರಡುವ ಯಾವುದೇ ರೋಗವಾದರೂ, ಅದನ್ನು ತಡೆಯುವ ಕ್ರಮದಲ್ಲಿ ವಿಶೇಷ ವ್ಯತ್ಯಾಸವಿಲ್ಲ. ಮನೆಯ ಸುತ್ತಲೂ ನೀರು ನಿಲ್ಲದಂತೆ ನಿಗಾ ವಹಿಸಿ. ತೆರೆದ ಚರಂಡಿಯೇ ಬೇಕೆಂದಿಲ್ಲ, ಎಳನೀರಿನ ಚಿಪ್ಪುಗಳು, ರಸ್ತೆಗುಂಡಿಗಳಿಂದ ಹಿಡಿದು, ಎಲ್ಲೆಲ್ಲಿ ನೀರಿನ ಪಸೆಯಿದ್ದರೂ ಸೊಳ್ಳೆಗಳು ಸೃಷ್ಟಿ ಕಾರ್ಯ ನಡೆಸುತ್ತವೆ. ಮನೆಯಲ್ಲಿ ನೀರಿರಬಹುದಾದ ಕೂಲರ್‌ಗಳು, ಬಕೆಟ್ ಇತ್ಯಾದಿಗಳ ಬಗ್ಗೆ ಗಮನಕೊಡಿ. ನೀರು ತುಂಬಿಸಿಸುವ ಎಲ್ಲವನ್ನೂ ಮುಚ್ಚಿಡಿ. ನೀರು ನಿಲ್ಲುವಂಥ ಜಾಗಗಳಿದ್ದರೆ ಅವುಗಳ ಮೇಲೆ ಕೀಟನಾಶಕ ಸಿಂಪಡಿಸಿ.
ಮೈ ತುಂಬಾ ವಸ್ತ್ರಗಳನ್ನು ಧರಿಸಿದರೆ, ಸೊಳ್ಳೆಗಳು ಕಚ್ಚುವುದರಿಂದ ತಪ್ಪಿಸಿಕೊಳ್ಳಬಹುದು. ಸೊಳ್ಳೆ ನಿರೋಧಕ ಕ್ರೀಮ್, ಸ್ಪ್ರೇ ಅಥವಾ ಪ್ಯಾಚ್‌ಗಳು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತವೆ. ಸೊಳ್ಳೆಗಳ ಉಪಟಳಕ್ಕೆ ಕೆಲವು ನೈಸರ್ಗಿಕ ಉಪಾಯಗಳೂ ಚಾಲ್ತಿಯಲ್ಲಿವೆ. ರಾತ್ರಿ ಮಲಗುವಾಗ ಕಡ್ಡಾಯವಾಗಿ ಸೊಳ್ಳೆ ಪರದೆ ಉಪಯೋಗಿಸಿ. ಚಿಕ್ಕ ಮಕ್ಕಳಿದ್ದರೆ ಎಲ್ಲಕ್ಕಿಂತ ಹೆಚ್ಚು ಅಪಾಯ ಅವರಿಗೇ ಆಗಬಹುದು, ಎಚ್ಚರವಹಿಸಿ. ಸೊಳ್ಳೆಗಳು ಹೆಚ್ಚು ಚಟುವಟಿಕೆಯಿಂದಿರುವುದು ಮುಂಜಾನೆ ಮತ್ತು ಸಂಜೆಯ ಹೊತ್ತು. ಈ ಸಮಯಗಳಲ್ಲಿ ಮನೆಯೊಳಗೇ ಇರಿ. ಮಕ್ಕಳನ್ನೂ ಹೊರಗೆ ಬಿಡಬೇಡಿ.
FAQ
ಈ ಬಾರಿಯ ವಿಶ್ವ ಸೊಳ್ಳೆ ದಿನದ ಘೋಷಣೆ ಏನಿತ್ತು?
ವಿಶ್ವದೆಲ್ಲೆಡೆ ಮಲೇರಿಯಾ ರೋಗವನ್ನು ನಿರ್ಮೂಲನೆ ಮಾಡಬೇಕೆಂಬದೇ ಈ ಬಾರಿ ಘೋಷಣೆಯಾಗಿತ್ತು.
ಸೊಳ್ಳೆ ದಿನ ಯಾವಾಗಿನಿಂದ ಆಚರಿಸಲಾಗುತ್ತಿದೆ?
1897ರಲ್ಲಿ ಮೊದಲ ಬಾರಿಗೆ ಈ ದಿನ ಆಚರಣೆಗೆ ಬಂತು. ಆನಂತರದಿಂದ ಪ್ರತಿವರ್ಷ ಜಾಗೃತಿ ದಿನವನ್ನು ಆಚರಿಸಲಾಗುತ್ತಿದೆ.
ಇದನ್ನೂ ಓದಿ: How To Get Kids To Eat Healthy Food: ತಿನ್ನಿಸುವಾಗ ಮಕ್ಕಳು ಹಟ ಮಾಡುತ್ತಾರಾ? ಹೀಗೆ ಮಾಡಿ