Site icon Vistara News

Myths About Asthma: ಇವು ಅಸ್ತಮಾ ಕುರಿತು ಇರುವ 9 ಸುಳ್ಳುಗಳು!

Woman Using an Asthma Inhaler

ಅಸ್ತಮಾ ಎಂಬುದು ಸಾಮಾನ್ಯವಾದ ಕಾಯಿಲೆ ಎಂದುಕೊಂಡರೂ, ಗಂಭೀರ ಸ್ವರೂಪದಲ್ಲಿ ಜೀವನವಿಡೀ ಬಾಧಿಸುವ ಸಮಸ್ಯೆಯೂ ಹೌದು. ಈ ಉಸಿರಾಟದ ಸಮಸ್ಯೆಯ ಸುತ್ತ ಹಲವಾರು ತಪ್ಪು ತಿಳಿವಳಿಕೆಗಳಿವೆ. ಹಲವು ಸುಳ್ಳು ನಂಬಿಕೆಗಳು ಇದರ ಸುತ್ತ ಸುತ್ತಿಕೊಂಡು ಇದನ್ನೊಂದು ಪಿಡುಗನ್ನಾಗಿ ಪರಿವರ್ತಿಸಿರುವುದೂ ಹೌದು. ಅಸ್ತಮಾದ ಲಕ್ಷಣಗಳನ್ನು ಮೊದಲೇ ಅರಿತುಕೊಂಡರೆ ಇದನ್ನು ತೀವ್ರಸ್ವರೂಪಕ್ಕೆ ಬದಲಾಗುವುದನ್ನು ತಡೆಯಬಹುದು. ಬನ್ನಿ, ಅಸ್ತಮಾ ಎಂಬ ಕಾಯಿಲೆಯ ಸುತ್ತ ಹಬ್ಬಿ ನಿಂತಿರುವ ತಪ್ಪು ತಿಳಿವಳಿಕೆಗಳೇನು ಹಾಗೂ ಸತ್ಯ ಏನು (Myths About Asthma) ಎಂಬುದನ್ನು ಅರಿಯೋಣ.

Asthma Treatment

ಅಸ್ತಮಾ ಕೇವಲ ಬಾಲ್ಯದಲ್ಲಿ ಕಾಣಿಸಿಕೊಳ್ಳುವ ಸಮಸ್ಯೆ ಎಂಬ ನಂಬಿಕೆಯಿದೆ. ಆದರೆ ಅದು ಹಾಗಲ್ಲ. ಬಾಲ್ಯದಲ್ಲೇ ಶುರುವಾಗುವ ಸಮಸ್ಯೆ ಇದಾದರೂ, ಯಾವುದೇ ವಯಸ್ಸಿನಲ್ಲೂ ಕಾಣಿಸಿಕೊಳ್ಳಬಹುದಾದ ಆರೋಗ್ಯ ಸಮಸ್ಯೆ. ಹಾಗಾಗಿ, ಯಾವುದೇ ವಯಸ್ಸಿನಲ್ಲಾದರೂ ಬರಬಹುದಾದ ಅಸ್ತಮಾದ ಆರಂಭಿಕ ಲಕ್ಷಣಗಳು ಏನು ಎಂಬ ಬಗ್ಗೆ ಅರಿವು ಅತ್ಯಂತ ಅಗತ್ಯ.

ಅಸ್ತಮಾ ಒಬ್ಬರಿಂದ ಮತ್ತೊಬ್ಬರಿಗೆ ಹರಡುತ್ತದೆ ಎಂಬ ನಂಬಿಕೆಯಿದೆ. ಆದರೆ ಇದು ಹರಡುವ ರೋಗವಲ್ಲ. ಇದು ಪರಿಸರ ಹಾಗೂ ವಂಶವಾಹಿನಿಯಿಂದ ಬರುವ ಸಮಸ್ಯೆ.

Asthma Treatment

ಅಸ್ತಮಾ ಇರುವ ಮಂದಿ ವ್ಯಾಯಾಮ ಮಾಡಬಾರದು ಎಂಬ ನಂಬಿಕೆಯಿದೆ. ಆದರೆ ಇದು ಸುಳ್ಳು. ಕೆಲವು ಅಸ್ತಮಾ ರೋಗಿಗಳಿಗೆ ಕೆಲವು ವ್ಯಾಯಾಮದಿಂದ ಸಮಸ್ಯೆಗಳಾಗಬಹುದು. ಹಾಗಾಗಿ ಅಸ್ತಮಾ ಇದೆ ಅಂದಾಕ್ಷಣ ವ್ಯಾಯಾಮ ಬಿಡುವುದಲ್ಲ. ಕೆಲವು ವ್ಯಾಯಾಮಗಳಿಂದ ಅಸ್ತಮಾ ರೋಗಿಗಳ ಒಟ್ಟು ಆರೋಗ್ಯ ವೃದ್ಧಿಸಿ, ಶ್ವಾಸಕೋಶದ ಕಾರ್ಯವೈಖರಿಯೂ ವೃದ್ಧಿಸುತ್ತದೆ.

ಅಸ್ತಮಾ ಮಾನಸಿಕ ಆರೋಗ್ಯಕ್ಕೆ ಸಂಬಂಧಿಸಿದ್ದು ಎಂಬ ನಂಬಿಕೆ ಇದೆ. ಆದರೆ ಇದು ಸುಳ್ಳು. ಅಸ್ತಮಾ ಒಂದು ದೈಹಿಕವಾದ ಸಮಸ್ಯೆ. ಇದು ಉಸಿರಾಟದ ಸಮಸ್ಯೆ. ಆದರೆ, ಒತ್ತಡ, ಉದ್ವೇಗದಂತಹ ಸಮಸ್ಯೆಗಳು ಅಸ್ತಮಾವನ್ನು ಇನ್ನಷ್ಟು ಹೆಚ್ಚಿಸಬಹುದು.

ಅಸ್ತಮಾದ ಔಷಧಿಗೂ ಚಟವಾಗುತ್ತದೆ ಎಂಬ ಮಾತಿದೆ. ಆದರೆ ಇದೂ ಕೂಡಾ ಸುಳ್ಳೇ. ಅಸ್ತಮಾಕ್ಕೆ ಬಹಳಷ್ಟು ಮಂದಿ ಬಳಸುವ ಇನ್‌ಹೇಲ್‌ ಮಾಡುವ ಔಷಧಿಗಳು ಚಟವಾಗುವುದಿಲ್ಲ. ಬದಲಾಗಿ ಇದು ಅಸ್ತಮಾದಿಂದ ಹೊರಗೆ ಬರಲು, ಆರಾಮ ನೀಡಲು ಸಾಕಷ್ಟು ಸಹಾಯ ಮಾಡುತ್ತದೆ.

ಅಸ್ತಮಾ ಗಂಭೀರವಾದ ಸಮಸ್ಯೆಯಲ್ಲ ಎಂಬ ನಂಬಿಕೆಯಿದೆ. ಆದರೆ ಕೆಲವೊಮ್ಮೆ ಅಸ್ತಮಾ ಗಂಭೀರವಾಗಿ ಮಾರಣಾಂತಿಕವಾಗಿಯೂ ಪರಿಣಮಿಸಬಹುದು. ಹಾಗಾಗಿ ಅಸ್ತಮಾಕ್ಕೆ ಸರಿಯಾದ ಚಿಕಿತ್ಸೆ ಬೇಕೇ ಬೇಕು.

ಅಸ್ತಮಾ ಅಟ್ಯಾಕ್‌ ಆದಾಗ ಮಾತ್ರ ಇನ್‌ಹೇಲರ್‌ ಬೇಕಾಗುತ್ತದೆ ಎಂಬ ತಪ್ಪುತಿಳುವಳಿಕೆ ಇದೆ. ಅಸ್ತಮಾ ಸಮಸ್ಯೆ ಇರುವ ಮಂದಿಗೆ ಇದನ್ನು ಕಂಟ್ರೋಲ್‌ನಲ್ಲಿ ಇಟ್ಟುಕೊಳ್ಳಲು ನಿತ್ಯವೂ ಇನ್‌ಹೇಲರ್‌ನ ಉಪಯೋಗವಿರುತ್ತದೆ. ಅಟ್ಯಾಕ್‌ ಆದಾಗ ಒಡನೆಯೇ ಸಮಾಧಾನ ಸಿಗಲು ಇನ್‌ಹೇಲರ್‌ ಅವಶ್ಯವಾಗಿ ಬೇಕಾಗುತ್ತದೆ.

ಬೇರೆ ವಾತಾವರಣ/ಹವಾಮಾನ ಪರಿಸ್ಥಿತಿ ಇರುವ ಜಾಗಕ್ಕೆ ಹೋಗುವದರಿಂದ ಅಸ್ತಮಾ ಕಡಿಮೆಯಾಗುತ್ತದೆ ಎಂಬ ನಂಬಿಕೆ ಇಂದಿಗೂ ಇದೆ. ಸ್ಥಳ ಬದಲಾವಣೆಯಿಂದ ಅಸ್ತಮಾ ಗುಣವಾಗದು. ಕೆಲವು ಮಂದಿಗೆ ಇದರ ಲಕ್ಷಣಗಳು ಕಡಿಮೆಯಾಗಬಹುದು. ಆದರೆ, ಅಸ್ತಮಾ ಸಮಸ್ಯೆ ಸ್ಥಳಕ್ಕೆ ಹೊಂದಿಕೊಂಡ ಸಮಸ್ಯೆಯಲ್ಲ.

ಇದನ್ನೂ ಓದಿ: 5 Seeds for Weight Loss: ಈ 5 ಕಿರು ಬೀಜಗಳು ತೂಕ ಇಳಿಕೆಗೆ ಸಹಕಾರಿ

ಅಸ್ತಮಾದಿಂದ ಶಾಶ್ವತ ಮುಕ್ತಿ ಎಂಬುದಿಲ್ಲ. ಆದರೆ, ಕೆಲವು ಪರ್ಯಾಯ ಚಿಕಿತ್ಸೆಗಳಿಂದ ಇದರ ಲಕ್ಷಣಗಳು ಹತೋಟಿಗೆ ಬರಬಹುದೇ ಹೊರತು, ಪರ್ಯಾಯ ಚಿಕಿತ್ಸೆಗಳಿಂದ ಸಂಪೂರ್ಣವಾಗಿ ಅಸ್ತಮಾದಿಂದ ಹೊರಬರಬಹುದು ಎಂದು ಹೇಳಲಾಗುವುದಿಲ್ಲ.

Exit mobile version