Site icon Vistara News

Nandini Milk: ನಂದಿನಿ ಹಾಲಿನ ಯಾವ ಬಣ್ಣದ ಪ್ಯಾಕೆಟ್ ಯಾವುದಕ್ಕೆ ಸೂಕ್ತ? ಖರೀದಿಸುವಾಗ ಈ ಸಂಗತಿ ನೆನಪಿನಲ್ಲಿರಲಿ

Nandini Milk

ನಾವು ದಿನ ನಿತ್ಯ ಬಳಸುವ ನಂದಿನಿ ಹಾಲಿನ (Nandini Milk) ಬಗ್ಗೆ ನಮಗೆಷ್ಟು ಗೊತ್ತಿದೆ ಎನ್ನುವುದನ್ನು ಪರೀಕ್ಷಿಸಬೇಕು. ಯಾಕೆಂದರೆ ಮನೆ (Home) ಬಳಕೆಗೆ ನಾವು ಇಷ್ಟವಾಗುವ ಹಾಲನ್ನು (milk) ಹೊತ್ತುಕೊಂಡು ಬರುತ್ತೇವೆ. ಆದರೆ ಅದರ ಪ್ರಯೋಜನಗಳ ಬಗ್ಗೆ ಹೆಚ್ಚಿನವರಿಗೆ ಗೊತ್ತಿಲ್ಲ. ವಿವಿಧ ಬಣ್ಣದ (different colour) ಪ್ಯಾಕೆಟ್ ನಲ್ಲಿರುವ ನಂದಿನಿ ಹಾಲು ಯಾರಿಗೆ, ಯಾವುದು ಸೂಕ್ತ ಎಂದು ತಿಳಿದುಕೊಂಡು ಬಳಸಿದರೆ ಅದರ ಸಂಪೂರ್ಣ ಪ್ರಯೋಜನ ಪಡೆಯಲು ಸಾಧ್ಯ. ಹಲವಾರು ಕಂಪನಿಗಳ ಹಾಲು ಪ್ಯಾಕೆಟ್ ಗಳು ಮಾರುಕಟ್ಟೆಯಲ್ಲಿ ಲಭ್ಯವಿದ್ದರೂ ಕರ್ನಾಟಕದ ಜನರು ಇಷ್ಟಪಡುವ ಹೆಮ್ಮೆಯ ಬ್ರಾಂಡ್ ನಂದಿನಿ. ಲಕ್ಷಾಂತರ ಮನೆಗಳನ್ನು ತಲುಪುವ ಇದರೊಂದಿಗೆ ನಮ್ಮ ನಂಟು ಕೂಡ ಬಿಡಿಸಲಾಗದ್ದು ಎಂದರೆ ತಪ್ಪಾಗಲಾರದು. ನೀಲಿ, ಹಸಿರು, ಕೇಸರಿ.. ಸೇರಿ ವಿವಿಧ ಬಣ್ಣದ ಪ್ಯಾಕೆಟ್ ನಲ್ಲಿ ಇದು ಲಭ್ಯವಿದ್ದು, ಇದರ ಪ್ರಯೋಜನ ಏನು ಎಂಬುದನ್ನು ತಿಳಿದುಕೊಳ್ಳೋಣ.

Yellow color

ಗುಡ್ ಲೈಫ್ ಪ್ಯಾಕೆಟ್

ಬೆಳಗ್ಗೆ ಎದ್ದು ಹಾಲು ಕಾಯಿಸಲು ಪುರುಸೊತ್ತು ಇಲ್ಲ ಎನ್ನುವವರು ಈ ಹಾಲನ್ನು ಮನೆಗೆ ತರಬಹುದು. ಟೆಟ್ರಾ ಪ್ಯಾಕೆಟ್ ನಲ್ಲಿ ಲಭ್ಯವಿರುವ ಈ ಹಾಲನ್ನು ಕಾಯಿಸದೇ ಕುಡಿಯಬಹುದು. ಯಾಕೆಂದರೆ ಈ ಹಾಲು ಪ್ಯಾಕ್ ಮೊದಲು 137 ಡಿಗ್ರಿ ಸೆಲ್ಶಿಯಸ್ ತಾಪಮಾನದಲ್ಲಿ ನಾಲ್ಕು ನಿಮಿಷಗಳವರೆಗೆ ಕಾಯಿಸಲಾಗುತ್ತದೆ. ಬಳಿಕ ತಕ್ಷಣವೇ ತಣ್ಣಗೆ ಮಾಡಿ ಪ್ಯಾಕ್ ಮಾಡಲಾಗುತ್ತದೆ. ಹೀಗಾಗಿ ಇದರಲ್ಲೂ ಬ್ಯಾಕ್ಟೀರಿಯಾ ಬೆಳೆಯುವುದಿಲ್ಲ. ಟೆಟ್ರಾ ಪ್ಯಾಕ್ ನಲ್ಲಿ ಇರುವುದರಿಂದ ಹಾಲು ಹಾಳಾಗುವುದಿಲ್ಲ. ಪ್ರವಾಸಕ್ಕೆ ಹೋಗ್ಬೇಕು, ಮಕ್ಕಳಿಗೆ ಹಾಲು ಸಿಗೋದಿಲ್ಲ ಎಂಬ ಚಿಂತೆ ಇರುವವರು ಗುಡ್ ಲೈಫ್ ಟೆಟ್ರಾ ಪ್ಯಾಕ್ ಖರೀದಿ ಮಾಡಿ ಹತ್ತು ದಿನದವರೆಗೆ ಇಟ್ಟುಕೊಳ್ಳಬಹುದು. ಕಾಯಿಸದೇ ಹಾಗೇ ಕುಡಿಯಬಹುದು.

ಹಸಿರು ಬಣ್ಣದ ಪ್ಯಾಕೆಟ್

ಕಾಫಿ, ಟೀ ಮಾಡಿ ಕುಡಿಯುವವರು ಹಸಿರು ಬಣ್ಣದ ಪ್ಯಾಕೆಟ್ ಅನ್ನು ಬಳಸಬಹುದು. ಇದು ಹೊಮೊಜಿನೈಸೆಡ್ ಪಾಸ್ಚರೀಕರಿಸಿದ ಹಸುವಿನ ಹಾಲು ಕೊಂಚ ಗಾಢವಾಗಿರುತ್ತದೆ. ಕಾಫಿ, ಟೀ ರುಚಿಯನ್ನು ಹೆಚ್ಚಿಸುತ್ತದೆ. ಈ ಹಾಲನ್ನು ಮನೆಯಲ್ಲಿರುವ ಪುಟ್ಟ ಮಕ್ಕಳಿಗೂ ಕೊಡಬಹುದು. ಯಾಕೆಂದರೆ ಬೇರೆ ಪ್ಯಾಕೆಟ್ ಹಾಲಿನಲ್ಲಿ ಹಸುಗಳ ಹಾಲಿನ ಜೊತೆಗೆ ಎಮ್ಮೆ ಹಾಲು ಸೇರಿಕೊಂಡಿರುತ್ತದೆ. ಕೇವಲ ಹಾಲು ಕುಡಿಯುವವರಿಗೂ ಇದು ಒಳ್ಳೆಯದು. ಗಟ್ಟಿ ಮೊಸರು ಮಾಡಬೇಕಿದ್ದರೆ ಹಸಿರು ಬಣ್ಣದ ಪ್ಯಾಕೆಟ್ ನಲ್ಲಿ ಲಭ್ಯವಿರುವ ಸ್ಪೆಷಲ್ ಟೋನ್ಡ್ ಮಿಲ್ಕ್ ಪ್ಯಾಕೆಟ್ ಖರೀದಿ ಮಾಡುವುದು ಒಳ್ಳೆಯದು.

ನೇರಳೆ ಬಣ್ಣದ ಪ್ಯಾಕೆಟ್

ಕಾಫಿಯಲ್ಲಿ ಕೆನೆ ಸಮೃದ್ದವಾಗಿರಬೇಕು ಎಂದು ಬಯಸುವವರು ನಂದಿನಿಯ ತುಸು ನೇರಳೆ ಬಣ್ಣದ ಪ್ಯಾಕೆಟ್ ಅಂದರೆ ನಂದಿನಿ ಸಮೃದ್ಧಿ ಪಾಸ್ಚರೀಕರಿಸಿದ ಹಾಲು ಖರೀದಿ ಮಾಡಬಹುದು. ಇದರಲ್ಲಿ ಪೂರ್ತಿ ಕೆನೆಯ ಅಂಶ ಇರುತ್ತದೆ. ಆದರೂ ಇದು ಕೆನೆ ಕಟ್ಟಿಕೊಳ್ಳುವುದಿಲ್ಲ. ಯಾಕೆಂದರೆ ಇದನ್ನು ಹೊಮೊಜಿನೈಸ್ಡ್ ಹದಕ್ಕೆ ತಂದು ಪ್ಯಾಕ್ ಮಾಡಲಾಗುತ್ತದೆ. ಇದನ್ನು ಸಿಹಿ ಪದಾರ್ಥ, ಪಾಯಸ ಮಾಡಲು ಬಳಸಬಹುದು. ಯಾಕೆಂದರೆ ಇದು ಖಾದ್ಯದ ಸುವಾಸನೆ ಮತ್ತು ರುಚಿಯನ್ನು ಹೆಚ್ಚಿಸುತ್ತದೆ.

ಕಿತ್ತಳೆ ಬಣ್ಣದ ಪ್ಯಾಕೆಟ್

ಕಿತ್ತಳೆ ಬಣ್ಣದ ಶುಭಂ ಪ್ಯಾಕೆಟ್ ಅಥವಾ ಸಂಪೂರ್ಣ ಸ್ಟ್ಯಾಂಡರ್ಡೈಸ್ಡ್ ಮಿಲ್ಕ್ ಪ್ಯಾಕೆಟ್ ಹಾಲು ಬೆಳೆಯುವ ಮಕ್ಕಳಿಗೆ ಒಳ್ಳೆಯದು. ಇದರಲ್ಲಿ ಮಕ್ಕಳಿಗೆ ಬೇಕಾಗುವ ಕೊಬ್ಬಿನಾಂಶ ಇರತ್ತದೆ. ಮಕ್ಕಳ ನಿತ್ಯದ ಚಟುವಟುಕೆಗಳಿಗೆ ಸಾಕಷ್ಟು ಶಕ್ತಿ ತುಂಬುತ್ತದೆ.

ಹಳದಿ/ಕಿತ್ತಳೆ ಬಣ್ಣದ ಪ್ಯಾಕೆಟ್

ಗುಡ್ ಲೈಫ್ ಸ್ಲಿಮ್ಡ್ ಸ್ಕಿಮ್ ಮಿಲ್ಕ್ ಪ್ಯಾಕೆಟ್ ಹಿರಿಯರಿಗೆ ಒಳ್ಳೆಯದು. ಇದರಲ್ಲಿ ಕೊಬ್ಬಿನಾಂಶ ಕಡಿಮೆ ಇರುವುದರಿಂದ ವಯಸ್ಸಾದವರಿಗೆ ಜೀರ್ಣಿಸಿಕೊಳ್ಳಲು ಸುಲಭವಾಗುತ್ತದೆ. ಹಳದಿ/ಕಿತ್ತಳೆ ಬಣ್ಣದ ಪ್ಯಾಕೆಟ್ ನಲ್ಲಿರುವ ಪಾಸ್ಚರೀಕರಿಸಿದ ಡಬಲ್ ಟೋನ್ಡ್ ಮಿಲ್ಕ್ ಪ್ಯಾಕೆಟ್ ನಲ್ಲೂ ಕೊಬ್ಬಿನಾಂಶ ಕಡಿಮೆ ಇರುತ್ತದೆ. ದೇಹದ ಕೊಬ್ಬು ಕರಗಬೇಕು ಎನ್ನುವವರೂ ಈ ಹಾಲನ್ನು ಬಳಸಬಹುದು. ಹಳದಿ ಬಣ್ಣದ ಪ್ಯಾಕೆಟ್ ನಲ್ಲಿ ಲಭ್ಯವಿರುವ ನಂದಿನಿ ಸ್ಮಾರ್ಟ್ ಡಬಲ್ ಟೋನ್ಡ್ ಹೊಮೊಜಿನೈಸೆಡ್ ಮಿಲ್ಕ್ ಪ್ಯಾಕೆಟ್ ಫಿಟ್ನೆಸ್ ಬಗ್ಗೆ ಹೆಚ್ಚು ಕಾಳಜಿ ಇರುವವರಿಗೆ ಸೂಕ್ತವಾಗಿದೆ. ಹಾಲನ್ನು ಚೆನ್ನಾಗಿ ಕುದಿಸಿ ಕುಡಿಯುವವರು ನಂದಿನಿಯ ಯಾವ ಬಣ್ಣದ ಪ್ಯಾಕೆಟ್ ಹಾಲನ್ನು ಬೇಕಾದರೂ ಬಳಸಬಹುದು.

ಇದನ್ನೂ ಓದಿ: Health Tips: ನೀವು ಕುಡಿಯುವ ಹಾಲಿನಲ್ಲಿ ಕಲಬೆರಕೆಯೇ? ಹೀಗೆ ಸುಲಭವಾಗಿ ಪತ್ತೆ ಹಚ್ಚಿ!

Exit mobile version