Site icon Vistara News

National Mango Day: ಮಾವಿಗೊಂದು ದಿನವೇಕೆ?: ಸುಲಿದು ಸವಿದರೆ ಸಾಲದೇ!

National Mango Day

ಎಲ್ಲದಕ್ಕೂ ಒಂದೊಂದು ದಿನವುಂಟು ಎನ್ನುವಾಗ ಮಾವಿಗೇಕೆ ನೋವು ಎಂದು ಅದಕ್ಕೂ ಒಂದು ದಿನವನ್ನು ಮೀಸಲಿರಿಸಿದ್ದಾರೆ ಎಂದುಕೊಂಡರೆ, ಹಾಗಲ್ಲ. ಆದರೆ ಇದಕ್ಕೊಂದು ದಿನವನ್ನೇಕೆ ಆಚರಿಸುತ್ತಿದ್ದಾರೆ (National Mango Day) ಎಂದು ಕೇಳಿದರೆ- ಅದಕ್ಕೆ ಒಂದೇ ಕಾರಣ ಎಂಬುದಿಲ್ಲ. ಭಾರತೀಯ ಸಂಸ್ಕೃತಿಯಲ್ಲಿ ಹಾಸುಹೊಕ್ಕಾಗಿರುವ ಈ ಹಣ್ಣಿನ ಹೆಸರಿನಲ್ಲಿ, ಸಂಭ್ರಮಿಸುವುದಕ್ಕೆ ಮತ್ತೊಂದು ಕಾರಣ ಎಂದು ಭಾವಿಸಿದರೆ ತಪ್ಪೇನಿಲ್ಲ.

ಬಾಯಿ ಖಾರ ಮಾಡುವುದಕ್ಕೆ ಉಪ್ಪಿನಕಾಯಿ, ಚಟ್ಣಿ, ತೊಕ್ಕು, ಮೊರಬ್ಬ ಮತ್ತು ಖಾರದ ಗೊಜ್ಜುಗಳು ಕಾಯುತ್ತಿದ್ದರೆ, ಸಿಹಿ ಪ್ರಿಯರಿಗಾಗಿ ಸೀಕರಣೆ, ಜ್ಯಾಮ್‌, ಶೇಕ್‌, ಕುಲ್ಫಿ, ಕಸ್ಟರ್ಡ್‌, ಹಲ್ವಾ ಮತ್ತು ಸಿಹಿ ಶ್ಯಾವಿಗೆ ಮಾಡುವವರೂ ಇದ್ದಾರೆ. ನಿತ್ಯದ ಊಟಕ್ಕೆ ಚಿತ್ರಾನ್ನ, ತಂಬುಳಿ, ಸಾಸಿವೆ, ಅಪ್ಪೆಸಾರುಗಳು, ಇದ್ಯಾವುದೂ ಬೇಡ ಎನಿಸಿದರೆ, ಹಣ್ಣಾದ ಮಾವನ್ನು ಹಾಗೆಯೇ ಹೊಟ್ಟೆಗಿಳಿಸಿ, ಕಾಯಿ ಮಾವಿಗೆ ಉಪ್ಪ-ಖಾರ ಹಾಕಿದರೆ… ಸ್ವರ್ಗಕ್ಕೆ ಕಿಚ್ಚು! ಮಾವಿನ ದಿನ (National Mango Day) ಆಚರಣೆಗೆ ಇದಕ್ಕಿಂತ ದೊಡ್ಡ ಪ್ರವರ ಇನ್ನೇನು ಬೇಕು?

ಮಾವಿನ ಇತಿಹಾಸ

ಹೊಟ್ಟೆ ಸೇರುವ ಹಣ್ಣಿಗೆಂಥಾ ಇತಿಹಾಸ ಎನ್ನುವಂತಿಲ್ಲ. ಸುಮಾರು ೫೦೦೦ ವರ್ಷಗಳಿಂದ ಭಾರತದ ಜನಪದದ ಭಾಗವಾಗಿಯೇ ಇರುವಂಥ ಹಣ್ಣಿನ ಪ್ರವರವನ್ನು ಒಂದಿಷ್ಟಾದರೂ ತಿಳಿಯದಿದ್ದರೆ ಹೇಗೆ? ಮಾಂಗಿಫೆರಾ ಇಂಡಿಕಾ (Mangifera indica) ಎಂಬ ವೈಜ್ಞಾನಿಕ ಹೆಸರಿನ ಈ ಹಣ್ಣಿನ ಕೃಷಿ ಮೊದಲಿಗೆ ಪ್ರಾರಂಭವಾಗಿದ್ದು ಭಾರತದಲ್ಲೇ. ಪೋರ್ಚುಗೀಸರು ಮೊದಲು ಭಾರತಕ್ಕೆ ಬಂದಾಗ ಇದರ ರುಚಿಗೆ ಮಾರುಹೋಗಿ, ತಮಗೆ ತಿಳಿದಂತೆ ಇದನ್ನು ಮ್ಯಾಂಗ ಎಂದು ಕರೆದರಂತೆ. ಅದೇ ಕಡೆಗೆ ಮ್ಯಾಂಗೊ ಎನಿಸಿಕೊಂಡಿದೆ. ಭಾರತದಿಂದಲೇ ವಿಶ್ವದ ಬಹಳಷ್ಟು ಉಷ್ಣವಲಯದ ದೇಶಗಳಿಗೆ ಮಾವು ಸೀಮೋಲ್ಲಂಘನ ಮಾಡಿದೆ. ಇದೀಗ ಭಾರತ ಮಾತ್ರವಲ್ಲ, ಪಾಕಿಸ್ತಾನ, ಫಿಲಿಪ್ಪೀನ್ಸ್‌ ದೇಶಗಳಲ್ಲೂ ಈ ಹಣ್ಣಿಗೆ ರಾಷ್ಟ್ರಫಲದ ಮಾನ್ಯತೆ ನೀಡಲಾಗಿದೆ. ಆದರೆ ಭಾರತವೇ ವಿಶ್ವದ ಅಗ್ರಗಣ್ಯ ಮಾವು ಕೃಷಿಕ.

ತಳಿಗಳು

ಭಾರತದಲ್ಲಿ ಸುಮಾರು ಸಾವಿರಕ್ಕೂ ಹೆಚ್ಚಿನ ಪ್ರಭೇದಗಳಿವೆ ಎಂದು ಅಂದಾಜಿಸಲಾಗಿದೆ. ಮೊದಲಿಗೆ ಭಾರತದಿಂದಲೇ ಇತರ ದೇಶಗಳಿಗೆ ಹೋಗಿದ್ದರೂ, ಸ್ಥಳೀಯವಾಗಿ ನೂರಾರು ಪ್ರಭೇದಗಳು ಅಲ್ಲಿನ ಮಣ್ಣಿಗೆ ಹೊಂದುವಂತೆ ಸೃಷ್ಟಿಯಾಗಿವೆ. ಏಷ್ಯಾದಲ್ಲಿ ಬೆಳೆಯುವ ತಳಿಗಳಿಗೂ, ಅಮೆರಿಕ ಮತ್ತು ಆಸ್ಟ್ರೇಲಿಯಾದಲ್ಲಿ ಬೆಳೆಯುವ ತಳಿಗಳಿಗೂ ಅಂತರವಿದೆ. ಭಾರತದಲ್ಲಿ ಆಲ್ಫಾನ್ಸೋ, ಆಮ್ರಪಾಲಿ, ಬಾದಾಮಿ, ಬಂಗನಪಲ್ಲಿ, ಬೆನೆಟ್‌, ದಶೇರಿ, ಹಿಮಸಾಗರ್‌, ಕೇಸರ್‌, ಮಲ್ಲಿಕಾ, ಮನೋಹರ್‌, ನೀಲಂ, ರಸಪುರಿ, ತೋತಾಪುರಿ ಮುಂತಾದ ಬಹಳಷ್ಟು ತಳಿಯ ಮಾವುಗಳು ಮಾವುಪ್ರಿಯರ ಮನ ತಣಿಸುತ್ತವೆ.

ಸೂಪರ್‌ ಫುಡ್

ಹೌದು. ಪೌಷ್ಟಿಕಾಂಶಗಳ ಆಗರವೇ ಆದಂಥ ಮಾವಿನ ಹಣ್ಣು ಸೂಪರ್‌ ಫುಡ್‌ಗಳ ಸಾಲಿಗೆ ಸೇರುತ್ತದೆ. ಇದರಲ್ಲಿ ವಿಟಮಿನ್‌ ಸಿ ಹೆಚ್ಚಾಗಿದ್ದು, ರೋಗನಿರೋಧಕ ಶಕ್ತಿಯನ್ನು ಜಾಗೃತಗೊಳಿಸುತ್ತದೆ. ಉತ್ಕರ್ಷಣ ನಿರೋಧಕಗಳು ಹೇರಳವಾಗಿದ್ದು, ಮಾರಕ ರೋಗಗಳನ್ನು ದೂರ ಮಾಡುತ್ತದೆ. ವಿಟಮಿನ್‌ ಎ ಅಂಶ ಧಾರಾಳವಾಗದ್ದು, ದೃಷ್ಟಿಯನ್ನು ಚುರುಕಾಗಿಸುತ್ತದೆ ಮತ್ತು ಚರ್ಮಕ್ಕೆ ಹೊಳಪು ನೀಡುತ್ತದೆ. ಫೈಬರ್‌ ಭರಪೂರ ಇರುವುದರಿಂದ ಹೆಚ್ಚಿಗೆ ಸಮಯ ಹೊಟ್ಟೆಯನ್ನು ತುಂಬಿದಂತಿರಿಸಿ, ಕಳ್ಳ ಹಸಿವನ್ನು ನಿಯಂತ್ರಿಸುತ್ತದೆ; ಆದರೆ ಅತಿಯಾಗಿ ತಿಂದರೆ ತೂಕ ಏರಿಸುತ್ತದೆ. ಹೊಟ್ಟೆಯ ಆರೋಗ್ಯ ಸುಧಾರಿಸಿ, ಮಲಬದ್ಧತೆಯನ್ನು ನಿವಾರಿಸುತ್ತದೆ. ಸಿಹಿಯಂಶ ಹೆಚ್ಚಿದ್ದರೂ ಮಧುಮೇಹಿಗಳಿಗೆ ಈ ಹಣ್ಣು ವರ್ಜ್ಯವಲ್ಲ. ನಿಯಂತ್ರಿತ ಪ್ರಮಾಣದಲ್ಲಿ ಅವರೂ ಮಾವಿನ ಹಣ್ಣನ್ನು ತಿನ್ನಬಹುದು.

ಸಾಂಸ್ಕೃತಿಕವಾಗಿ

ಹಬ್ಬ ಬಂತೆಂದರೆ- ಹೊರಗೆ ತೋರಣ, ಒಳಗೆ ಹೂರಣ! ತೋರಣವೆಂದರೆ ಅದು ಮಾವಿನದ್ದೇ ಆಗಬೇಕು. ಯಾವುದೇ ಸಂಭ್ರಮಕ್ಕೆ ತೋರಣವಿಲ್ಲದೆ ಕಳೆಯೇ ಇಲ್ಲ. ಹೊಸಫಲವನ್ನು ಬಂಧುಮಿತ್ರರಿಗೆಲ್ಲಾ ಹಂಚುವುದರಿಂದ ಹಿಡಿದು ಬಾಂಧವ್ಯ ವೃದ್ಧಿಗೂ ಮಾವಿಗೂ ಅಂಟು-ನಂಟು. ಮಿಡಿ ಉಪ್ಪಿನ ಕಾಯಿ ವಿನಿಮಯವೂ ಈ ಬಾಂಧವ್ಯವೃದ್ಧಿಯ ಭಾಗವೇ ಆಗಿದೆ.

ಭಾರತದ ಯಾವುದೇ ಭಾಷೆ, ಪ್ರಾಂತ್ಯಗಳಲ್ಲಿ ಮಾವಿನ ಬಳಕೆ ಇದ್ದೇಇರುವ ಹಿನ್ನೆಲೆಯಲ್ಲಿ, ದೇಶೀಯ ಸಾಹಿತ್ಯದಲ್ಲಿ ಮಾವು ನಾನಾ ರೂಪದಲ್ಲಿ ಕಾಣಿಸಿಕೊಂಡಿದೆ. ವಸಂತಾಗಮನದ ವರ್ಣನೆಗಳಲ್ಲಿ, ಬೇಸಿಗೆ ಸಂಭ್ರಮಗಳ ವಿಸ್ತಾರಗಳಲ್ಲಿ, ಹಬ್ಬ-ಹರಿದಿನ ಬಣ್ಣಿಸುವಲ್ಲಿ, ಮದುವೆ-ಶುಭಕಾರ್ಯಗಳ ಸಂದರ್ಭದಲ್ಲಿ- ಹೀಗೆ ಸಂಸ್ಕೃತಿಯ ಭಾಗವೇ ಆಗಿರುವ ಮಾವು, ಸಾಹಿತ್ಯಕ್ಕೂ ಹಲವು ರೀತಿಯಲ್ಲಿ ಸಂದಿದೆ. ನಮ್ಮ ಕನ್ನಡದ ಆದಿಕವಿ ಪಂಪನಂತೂ, “ನೀನೆ ಭುವನಕ್ಕಾರಾಧ್ಯನಯ್‌ ಚೂತರಾಜ ತರುಗಳ್‌ ನಿನ್ನಂತೆ ಚೆನ್ನಂಗಳೇ” ಎಂದು ಮಾವನ್ನು ಹಾಡಿ ಕೊಂಡಾಡಿದ್ದಾನೆ.

ಇದನ್ನೂ ಓದಿ: Foods For Healthy Joints And Muscles: ಬಲವಾದ ಕೀಲು, ಸ್ನಾಯುಗಳು ಬೇಕೆ? ಈ ಆಹಾರಗಳು ಬೇಕು!

Exit mobile version