Site icon Vistara News

National Nutrition Week 2023: ಮಕ್ಕಳಿಗೆ ಸಿರಿಧಾನ್ಯದ ಆಹಾರ ಕೊಡಬಹುದೆ?

National Nutrition Week 2023

ಸಿರಿಧಾನ್ಯ ಆರೋಗ್ಯಕ್ಕೆ ಒಳ್ಳೆಯದು. ಹಿಂದಿನ ಕಾಲದಲ್ಲಿ ಸಿರಿಧಾನ್ಯಗಳ (National Nutrition Week 2023) ಬಳಕೆ ಅತ್ಯಂತ ಹೆಚ್ಚಾಗಿತ್ತು. ತದನಂತರದಲ್ಲಿ ಗೋಧಿ ಮತ್ತು ಅಕ್ಕಿಯ ಬಳಕೆ ಹೆಚ್ಚಾಯಿತು. ಆದರೆ ಇಂದಿಗೂ ಹೆಚ್ಚಿನ ಪೌಷ್ಟಿಕಾಂಶ ಬೇಕೆಂದರೆ ಸಿರಿಧಾನ್ಯ ಬಳಕೆ ಮಾಡಬೇಕು ಎನ್ನುತ್ತದೆ ಆಹಾರ ಶಾಸ್ತ್ರ. ಸಿರಿಧಾನ್ಯ ಬಳಕೆಯಿಂದ ಮಧುಮೇಹ ನಿಯಂತ್ರಣ ಮಾಡುವುದರಿಂದ ಹಿಡಿದು ದೇಹದ ತೂಕ ಇಳಿಸಿಕೊಳ್ಳುವವರೆಗೆ ಅನೇಕ ರೀತಿಯಲ್ಲಿ ಆರೋಗ್ಯವನ್ನು ನಿಯಂತ್ರಣದಲ್ಲಿಟ್ಟುಕೊಳ್ಳಬಹುದು. ಅಂದ ಹಾಗೆ ಈ ಸಿರಿಧಾನ್ಯಗಳನ್ನು ಮಕ್ಕಳಿಗೆ ಕೊಡಬಹುದೇ ಎನ್ನುವ ಅನುಮಾನ ಎಲ್ಲರಲ್ಲೂ ಇರುತ್ತದೆ.

ನಿಧಾನವಾಗಿ ಆರಂಭಿಸಿ

ಶಿಶುಗಳಿಗೆ ಕನಿಷ್ಠ 6-8 ತಿಂಗಳುಗಳವರೆಗೆ ತಾಯಿಯ ಹಾಲನ್ನು ಕೊಡಬೇಕು. ನಂತರದ ದಿನಗಳಲ್ಲಿ ಅವರಿಗೆ ಸ್ವಲ್ಪಮಟ್ಟಿಗಿನ ಘನ ಆಹಾರವನ್ನು ಕೊಡಬಹುದು. ಆ ಸಮಯದಲ್ಲಿ ನೀವು ಅವರಿಗೆ ಸಿರಿಧಾನ್ಯ ಕೊಡುವ ಅಭ್ಯಾಸವನ್ನು ಆರಂಭಿಸಬಹುದು. ಸಿರಿಧಾನ್ಯ ಕೊಡಬಹುದು ಎಂದ ಮಾತ್ರಕ್ಕೆ ಒಮ್ಮೆಲೆ ಕೇವಲ ಸಿರಿಧಾನ್ಯಗಳನ್ನೇ ಕೊಡುವುದು ತಪ್ಪಾಗುತ್ತದೆ. ಮಕ್ಕಳಿಗೆ ಯಾವುದೇ ಆಹಾರವನ್ನಾದರೂ ನಿಧಾನವಾಗಿ ಅಭ್ಯಾಸ ಮಾಡಿಸಬೇಕು. ಮೊದಲು ಚಮಚದಷ್ಟು ಆಹಾರವನ್ನು ತಿನಿಸಿ, ನಂತರದ ದಿನಗಳಲ್ಲಿ ಅದನ್ನು ಜಾಸ್ತಿ ಮಾಡುತ್ತಾ ಹೋಗಬೇಕು. ಅದೇ ರೀತಿಯಲ್ಲಿ ಸಿರಿಧಾನ್ಯದ ಅಭ್ಯಾಸವನ್ನು ಕೂಡ ನಿಧಾನವಾಗಿ ಆರಂಭಿಸಿ.

ವೈದ್ಯರ ಸಲಹೆ ಕೇಳಿ

ಸಿರಿಧಾನ್ಯ ಅಭ್ಯಾಸ ಮಾಡಿಸುವುದಕ್ಕೂ ಮೊದಲು ಒಮ್ಮೆ ನಿಮ್ಮ ವೈದ್ಯರನ್ನು ಕೇಳಿ ಮಾಹಿತಿ ಪಡೆದುಕೊಳ್ಳಿ. ಸಿರಿಧಾನ್ಯವು ಉತ್ತಮ ಪೌಷ್ಟಿಕಾಂಶವನ್ನು ಹೊಂದಿರುತ್ತದೆ. ಆದರೆ ಕೆಲವೊಮ್ಮೆ ಮಕ್ಕಳಲ್ಲಿ ಅಯೋಡಿನ್‌ ಕೊರತೆಯಿದ್ದರೆ ಅಥವಾ ಥೈರಾಯ್ಡ್‌ನಂತಹ ಕಾಯಿಲೆಯಿದ್ದರೆ ಅಂತಹ ಮಕ್ಕಳಿಗೆ ಸಿರಿಧಾನ್ಯ ಕೊಡುವುದು ಸೂಕ್ತವಾಗಿರುವುದಿಲ್ಲ. ಹಾಗಾಗಿ ನೀವು ಸಿರಿಧಾನ್ಯದ ಅಭ್ಯಾಸ ಮಾಡಿಸುವುದಕ್ಕೂ ಮೊದಲು ವೈದ್ಯರಿಂದ ಸಲಹೆಯನ್ನು ತಪ್ಪದೇ ಪಡೆದುಕೊಳ್ಳಿ. ಸಿರಿಧಾನ್ಯ ಆರೋಗ್ಯಕ್ಕೆ ಅತ್ಯಂತ ಉತ್ತಮ ಆಹಾರವೇ ಆಗಿದ್ದರೂ ಕೆಲವೊಮ್ಮೆ ವೈದ್ಯರು ನಿರ್ದಿಷ್ಟ ಕಾರಣಗಳಿಂದಾಗಿ ಅದನ್ನು ಮಕ್ಕಳಿಗೆ ನೀಡುವುದು ಬೇಡ ಎನ್ನುವ ಸಾಧ್ಯತೆಯೂ ಇರುತ್ತದೆ.

ಇದರ ಜತೆ ಹಣ್ಣುಗಳೂ ಇರಲಿ

ಸಿರಿಧಾನ್ಯ ಒಳ್ಳೆಯದು ಎನ್ನುವ ಮಾತ್ರಕ್ಕೆ ಶಿಶುಗಳಿಗೆ ಅಥವಾ ಬೆಳೆಯುವ ಮಕ್ಕಳಿಗೆ ಅದನ್ನೇ ಕೊಡುವುದು ಸೂಕ್ತವಲ್ಲ. ಕೆಲವು ಸಿರಿಧಾನ್ಯಗಳು ಅತ್ಯಂತ ಉಷ್ಣಾಂಶವನ್ನು ಹೊಂದಿರುತ್ತವೆ. ಅಂತವನ್ನು ಪ್ರತಿನಿತ್ಯ ಮಕ್ಕಳಿಗೆ ಕೊಡುವುದರಿಂದ ಮಕ್ಕಳಲ್ಲಿ ಬೇರೆ ರೀತಿಯ ಆರೋಗ್ಯ ಸಮಸ್ಯೆ ಉಂಟಾಗಬಹುದು. ಹಾಗಾಗಿ ನೀವು ಸಿರಿಧಾನ್ಯದ ಜತೆ ಬೇರೆ ಬೇರೆ ರೀತಿಯ ಹಣ್ಣುಗಳು, ತರಕಾರಿ, ಗೋಧಿ, ಅಕ್ಕಿಯ ಖಾದ್ಯಗಳನ್ನೂ ಕೊಡುವುದನ್ನು ಅಭ್ಯಾಸ ಮಾಡಿಕೊಳ್ಳಿ.

ಗಂಜಿ ರೀತಿಯಲ್ಲಿ ಕೊಡಿ

ಚಿಕ್ಕ ಮಕ್ಕಳಿಗೆ ನೀವು ಸಿರಿಧಾನ್ಯವನ್ನು ಅಂಬಲಿ ಅಥವಾ ಗಂಜಿ ರೀತಿಯಲ್ಲಿ ಮಾಡಿ ತಿನ್ನಿಸಬಹುದು. ಮಕ್ಕಳು ಸ್ವಲ್ಪ ದೊಡ್ಡವರಾಗಿ ಘನ ಆಹಾರವನ್ನು ತಿನ್ನುವಂತವರಾದ ಮೇಲೆ ಅವರಿಗೆ ರಾಗಿ ರೊಟ್ಟಿ, ಸಿರಿಧಾನ್ಯಗಳ ದೋಸೆ ಹೀಗೆ ತರೇವಾರು ಖಾದ್ಯಗಳನ್ನು ಸಿರಿಧಾನ್ಯಗಳಿಂದ ಮಾಡಿಕೊಡಬಹುದು.

ಭಾರತದಲ್ಲಿ ಸಿಗುವ ಸಿರಿಧಾನ್ಯಗಳು

ವಿಶ್ವದಾದ್ಯಂತ ಒಟ್ಟು 60ಕ್ಕೂ ಅಧಿಕ ಜಾತಿಯ ಸಿರಿಧಾನ್ಯಗಳನ್ನು ಬೆಳೆದು ಆಹಾರದಲ್ಲಿ ಬಳಸಲಾಗುತ್ತದೆ. ಭಾರತದಲ್ಲಿ ಪ್ರಮುಖವಾಗಿ ಎಂಟು ರೀತಿಯ ಸಿರಿಧಾನ್ಯಗಳನ್ನು ಬೆಳೆಯಲಾಗುತ್ತಿದೆ. ಅವುಗಳೆಂದರೆ ಜೋಳ, ರಾಗಿ, ನವಣೆ, ಅರ್ಕಾ, ಸಾಮೆ, ಸಜ್ಜೆ, ಬರಗು ಮತ್ತು ಊದಲು. ಈ ಸಿರಿಧಾನ್ಯಗಳನ್ನು ಪೂರ್ವಜರ ಕಾಲದಿಂದಲೂ ಭಾರತದಲ್ಲಿ ಬಳಸಲಾಗುತ್ತಿದೆ.

ಸಿರಿಧಾನ್ಯಗಳ ಉಪಯೋಗವೇನು?

ಜೋಳ

ಜೋಳವು ಹೆಚ್ಚು ಪ್ರೋಟೀನ್‌, ಫೈಬರ್‌, ರಂಜಕ, ಪೊಟ್ಯಾಶಿಯಂ, ಕ್ಯಾಲ್ಶಿಯಂ ಮತ್ತು ಕಬ್ಬಿಣಾಂಶವನ್ನು ಹೊಂದಿರುತ್ತದೆ. ಇದರಲ್ಲಿ ಆಂಟಿ ಆಕ್ಸಿಡೆಂಟ್‌ ಕೂಡ ಇರುತ್ತದೆ.

ರಾಗಿ

ರಾಗಿಯು ಹೆಚ್ಚಾಗಿ ಕ್ಯಾಲ್ಶಿಯಂ ಮತ್ತು ಕಬ್ಬಿಣಾಂಶವನ್ನು ಹೊಂದಿರುತ್ತದೆ. ಇದನ್ನು ಗಂಜಿ ರೂಪದಲ್ಲಿ ಶಿಶುಗಳಿಗೆ ಮತ್ತು ತಾಯಂದಿರಿಗೆ ನೀಡುವುದು ಉತ್ತಮ.

ನವಣೆ

ಇದು ಅತ್ಯಧಿಕ ಖನಿಜಾಂಶ ಹೊಂದಿರುವ ಸಿರಿಧಾನ್ಯವಾಗಿದೆ. ಪ್ರೋಟೀನ್‌ ಕೂಡ ಸಮೃದ್ಧವಾಗಿರುವ ಇದು ಮೂತ್ರಪಿಂಡದ ಕಾರ್ಯವನ್ನು ಹೆಚ್ಚಿಸುತ್ತದೆ. ಹಾರ್ಮೋನ್‌ ಅಸಮತೋಲನವನ್ನು ಸರಿಪಡಿಸುವಲ್ಲೂ ಇದು ಸಹಾಯಕಾರಿ.

ಅರ್ಕಾ

ಇದರಲ್ಲಿ ಹೆಚ್ಚಿನ ನಾರಿನಾಂಶವಿರುತ್ತದೆ. ಇದು ಮಧುಮೇಹವಿರುವವರಿಗೆ ಸೂಕ್ತ ಆಹಾರ. ಇದನ್ನು ಕಿಚಡಿ ರೂಪದಲ್ಲಿ ಅಥವಾ ಪೊಂಗಲ್‌ ಮಾಡಿಕೊಂಡು ಸೇವಿಸಬಹುದು.

ಸಾಮೆ

ಅತ್ಯಧಿಕ ಕೊಬ್ಬಿನಾಂಶ ಹೊಂದಿರುವ ಸಿರಿಧಾನ್ಯ ಇದಾಗಿದೆ. ಪ್ರೋಟೀನ್‌ ಸಮೃದ್ಧವಾಗಿರುವ ಇದನ್ನು ದೋಸೆ ಮಾಡಿಕೊಂಡು ತಿನ್ನಬಹುದು.

ಸಜ್ಜೆ

ಪ್ರೋಟೀನ್‌ ಮತ್ತು ಶಕ್ತಿಯ ಅಂಶವನ್ನು ಹೊಂದಿರುವ ಇದು ಗೋಧಿಗಿಂತ ಆರು ಪಟ್ಟು ಹೆಚ್ಚು ಪೌಷ್ಟಿಕವಾಗಿದೆ. ಇದನ್ನು ರೊಟ್ಟಿ, ಗಂಜಿ ಮಾಡಬಹುದು.

ಬರಗು

ಪ್ರೋಟೀನ್‌ ಅಧಿಕವಿರುವ ಇದರಲ್ಲಿ ಕಾರ್ಬೋಹೈಡ್ರೇಟ್‌ಗಳು ಹೆಚ್ಚಾಗಿರುತ್ತವೆ. ಈ ಸಿರಿಧಾನ್ಯದಿಂದಲೂ ವಿವಿಧ ರೀತಿಯ ಖಾದ್ಯಗಳನ್ನು ತಯಾರಿಸಿ ಮಕ್ಕಳಿಗೆ ಕೊಡಬಹುದಾಗಿದೆ.

ಊದಲು

ಈ ಸಿರಿಧಾನ್ಯದಲ್ಲಿ ಫೈಬರ್‌ ಅಂಶ ಮತ್ತು ಕಬ್ಬಿಣದ ಅಂಶ ಹೆಚ್ಚಾಗಿರುತ್ತದೆ. ಈ ಸಿರಿಧಾನ್ಯ ಹೆಚ್ಚು ಬಳಕೆಯಲ್ಲಿ ಇಲ್ಲವಾದರೂ ಇದರಿಂದ ಹಲವು ರೀತಿಯ ಖಾದ್ಯಗಳನ್ನು ಮಾಡಿ, ಸೇವಿಸಬಹುದಾಗಿದೆ.

ಇದನ್ನೂ ಓದಿ: National Nutrition Week 2023: ಸತ್ವಯುತ ಆಹಾರಗಳನ್ನು ಎಷ್ಟು ಸುಲಭವಾಗಿ ಮಾಡಬಹುದು ನೋಡಿ!

Exit mobile version