Site icon Vistara News

National Nutrition Week 2023: ರಾತ್ರಿ ಊಟ ಬೇಗ ಮಾಡುವುದರಿಂದಲೂ ಆರೋಗ್ಯ ಹಾಳು?

National Nutrition Week 2023

ರಾತ್ರಿಯೂಟ ಬೇಕೆ-ಬೇಡವೇ? ಮಾಡಿದರೂ ಎಷ್ಟು ಪ್ರಮಾಣದಲ್ಲಿ? ಎಷ್ಟು ಹೊತ್ತಿಗೆ ಊಟ ಮಾಡಿದರೆ ಸರಿ ಅಥವಾ ತಪ್ಪು? ಇಂಥ ಹಲವಾರು ವಿಷಯಗಳ (dinner myths) ಬಗ್ಗೆ ವಿಭಿನ್ನ ಅಭಿಪ್ರಾಯಗಳಿವೆ. ದಿನದ ಕೆಲಸವನ್ನೆಲ್ಲಾ ಮುಗಿಸಿ, ಮಲಗುವ ಮೊದಲು ದೇಹಕ್ಕೇನು ಬೇಕು (Nutrition Awareness) ಎಂಬ ಕೆಲವು ಮಾಹಿತಿಗಳಿವು.

ದಿನಕ್ಕೆ ಒಂದೆರಡೇ ಹೊತ್ತು ಉಣ್ಣುವವರು ಯೋಗಿಗಳೆನಿಸಿದರೆ, ಮೂರು ಹೊತ್ತು ಉಣ್ಣುವವರು ರೋಗಿಗಳು ಎನ್ನುತ್ತದೆ ಹಳೆಯ ಗಾದೆ. ಆದರೆ ಕಾಲ ಬದಲಾಗುತ್ತಿದ್ದಂತೆ ನಮ್ಮ ಅಗತ್ಯಗಳೂ ಬದಲಾಗುತ್ತಿವೆ. ಹಾಗಾಗಿ ಮೂರೂ ಹೊತ್ತು ತುತ್ತಿನ ಚೀಲ ತುಂಬಿಸುವುದು ಅನಿವಾರ್ಯ. ಬೆಳಗಿನ ತಿಂಡಿಗೆ ಇರುವ ನಿಯಮವು ರಾತ್ರಿಯೂಟಕ್ಕೆ ಅನ್ವಯಿಸುವುದಿಲ್ಲ. ಹಾಗೆ ನೋಡಿದರೆ ಒಂದೊಂದು ಹೊತ್ತಿನ ಆಹಾರಕ್ಕೂ ಒಂದೊಂದು ಕಲ್ಪನೆಗಳು (ಅಥವಾ ಮಿಥ್ಯೆಗಳು) ಥಳುಕು ಹಾಕಿಕೊಂಡಿವೆ. ಹಾಗಾದರೆ ರಾತ್ರಿಯೂಟಕ್ಕೆ (dinner myths) ಅಂಟಿಕೊಂಡಿರುವ ಮಿಥ್ಯೆಗಳೇನು?

ರಾತ್ರಿಯೂಟ ಬೇಗ ಮಾಡಬೇಕು

ಈ ಮಾತನ್ನು ಮಿಥ್ಯೆ ಎಂದರೆ ರಾತ್ರಿ ಹನ್ನೊಂದು ಗಂಟೆಗೆ ಊಟ ಮಾಡುವವರು ಪಾರ್ಟಿ ಮಾಡಿಯಾರು! ವಿಷಯ ಅದಲ್ಲ. ಆದರೆ ರಾತ್ರಿ ಬೇಗ ಊಟ ಮಾಡುವ ಆತುರದಲ್ಲಿ ಸಂಜೆ ಏಳರೊಳಗೆ ತಿನ್ನುವುದು ಸಮಸ್ಯೆಗೆ (dinner myths) ಮೂಲವಾಗಬಹುದು. ಸಾಮಾನ್ಯವಾಗಿ ಒಂದು ಹೊತ್ತಿನಿಂದ ಇನ್ನೊಂದು ಹೊತ್ತಿನ ಊಟಕ್ಕೆ ಅಥವಾ ತಿಂಡಿಗೆ ಮೂರರಿಂದ ನಾಲ್ಕು ತಾಸುಗಳ ಅಂತರ ಇರಬೇಕೆಂಬುದು ನಿಯಮ. ಅಂದರೆ, ಬೆಳಗ್ಗೆ ಎಂಟಕ್ಕೆ ತಿಂಡಿ ತಿಂದರೆ, ಮಧ್ಯಾಹ್ನ 12ರ ಸುಮಾರಿಗೆ ಊಟ, ಸಂಜೆ 4ರ ಆಜೂಬಾಜು ತಿಂಡಿ, ರಾತ್ರಿ ಎಂಟಕ್ಕೆ ಊಟ, 10ರ ಎಡ-ಬಲಕ್ಕೆ ನಿದ್ದೆ- ಇದು ಆದರ್ಶದ ಸ್ಥಿತಿ. ಇದನ್ನೆಷ್ಟು ಪಾಲಿಸಲಾಗುತ್ತದೆ ಎನ್ನುವ ಆಧಾರ ಮೇಲೆ ನಮ್ಮ ಊಟದ ಸಮಯ ಮಿತಿಗಳನ್ನು ನಿರ್ಧರಿಸಿಕೊಳ್ಳಬಹುದು. ಅಂದರೆ, ರಾತ್ರಿ 12ಕ್ಕೆ ಮಲಗುವವರು ನೀವಾಗಿದ್ದರೆ, 9ಕ್ಕಿಂತ ಮೊದಲೇ ಊಟ ಮಾಡಿದರೆ ನಡುರಾತ್ರಿಗೆ ಹಸಿವಾಗುವುದು ಖಚಿತ. ಹಾಗಾಗಿ ರಾತ್ರಿಯೂಟದ ಸಮಯವನ್ನು ನೀವು ಮಲಗುವ ಸಮಯಕ್ಕಿಂತ 2-3 ತಾಸು ಮೊದಲು ಮಾಡಿದರೆ ಸಾಕು.

ರಾತ್ರಿಯೂಟ ಲಘುವಾಗಿರಬೇಕು

ಇದನ್ನೂ ಮಿಥ್ಯೆ ಎಂದರೆ ವಿವಾದಕ್ಕೆ ಎಡೆಯಾದೀತು. ನಿಜ, ರಾತ್ರಿಯೂಟ ಹೊಟ್ಟೆಬಿರಿ ತಿನ್ನುವುದು ಸರಿಯಲ್ಲ. ಆದರೆ ರಾತ್ರಿಯೂಟ ಲಘುವಾಗಬೇಕೆಂಬ ಉದ್ದೇಶದಿಂದ ಕೇವಲ ಸೂಪ್‌, ಸಲಾಡ್‌ ತಿನ್ನುವವರೆಷ್ಟೋ ಮಂದಿ. ತೀರಾ ಕಡಿಮೆ ಉಣ್ಣುವುದು ಅಥವಾ ಕ್ಯಾಲರಿ ಕಡಿಮೆ ಇರುವಂಥ ಆಹಾರ ತಿನ್ನುವುದರಿಂದ ರಾತ್ರಿ ಹಸಿವಾಗಿ ನಿದ್ದೆ ಬಾರದೆ ಇರಬಹುದು. ಬೆಳಗ್ಗೆ ಏಳುವಷ್ಟರಲ್ಲಿ ಹಸಿವಾಗಿ ತಲೆನೋವು, ಸುಸ್ತು ಕಾಣಿಸಬಹುದು. ಇದರಿಂದ ಮಾರನೇ ದಿನದ ಕೆಲಸಗಳು ಏರುಪೇರಾಗಬಹುದು; ಅಥವಾ ರಾತ್ರಿಯ ಹಸಿವು ತಣಿಸಲು ಸಿಕ್ಕಿದ್ದೆಲ್ಲಾ ತಿನ್ನುವ ಅಗತ್ಯವೂ ಬರಬಹುದು. ಹೀಗಾಗಬಾರದೆಂದರೆ ರಾತ್ರಿ ಊಟವೂ ಹದವಾಗಿರಬೇಕು; ಹೆಚ್ಚೂ ಅಲ್ಲ- ಕಡಿಮೆಯೂ ಅಲ್ಲ. ಊಟ ಚಿಕ್ಕದಾದರೂ ಸಮತೋಲಿತವಾಗಿರಬೇಕು- ಕೇವಲ ಸಲಾಡ್‌ ಅಲ್ಲ.

ರಾತ್ರಿಯೂಟ ಮಾಡಿದರೆ ತೂಕ ಹೆಚ್ಚುತ್ತದೆ

ಅದರಲ್ಲೂ ಪಿಷ್ಟ ಹೆಚ್ಚಿರುವ ಆಹಾರವನ್ನು ಸೇವಿಸಿದರೆ ದೇಹ ಊದಿಕೊಳ್ಳುತ್ತದೆ ಎಂಬ ಕಲ್ಪನೆ ಢಾಳಾಗಿದೆ. ದಿನವಿಡೀ ದುಡಿದು ದಣಿದ ದೇಹಕ್ಕೆ ವಿಶ್ರಾಂತಿಯ ಹೊತ್ತಿಗೆ ಅಗತ್ಯವಾದ ಪೌಷ್ಟಿಕಾಂಶಗಳನ್ನು ಒದಗಿಸುವುದು ಅಗತ್ಯ. ಇಡೀ ದಿನದ ಕೆಲಸಗಳಿಗೆ ಇಂಧನ ಬೇಕೆಂಬ ಉದ್ದೇಶದಿಂದ ಬೆಳಗಿನ ತಿಂಡಿಯನ್ನು ತಿಂದಂತೆಯೇ, ರಾತ್ರಿಯೂ ಸರಿಯಾದ ಸತ್ವಗಳನ್ನು ಒದಗಿಸಬೇಕು. ದೇಹದಲ್ಲಿ ಹೆಚ್ಚಿನ ರಿಪೇರಿ ಕೆಲಸಗಳು ನಡೆಯುವುದು ರಾತ್ರಿಯ ಸಮಯದಲ್ಲಿ. ದೇಹದ ಹೆಚ್ಚಿನ ಕೆಲಸಗಳು ನಿಂತು, ದೊರೆಯುವ ಶಕ್ತಿಯನ್ನೆಲ್ಲಾ ರಿಪೇರಿ ಕೆಲಸಕ್ಕೆ ದೇಹ ಬಳಸಬಹುದು ಎನ್ನುವಾಗ ಊಟವನ್ನೇ ಮಾಡದಿದ್ದರೆ ಹೇಗೆ?

ರಾತ್ರಿ ತಿನ್ನುವ ಆಹಾರವೆಲ್ಲಾ ಕೊಬ್ಬಾಗಿ ಪರಿವರ್ತನೆಯಾಗುತ್ತದೆ

ಬೆಳಗಿನ ತಿಂಡಿ ಮತ್ತು ಮಧ್ಯಾಹ್ನದ ಊಟಕ್ಕಿಂತ ಕಡಿಮೆ ಪ್ರಮಾಣದಲ್ಲಿ ರಾತ್ರಿಯೂಟ ಮಾಡುವ ವಾಡಿಕೆ ಒಳ್ಳೆಯದೆ. ಹಾಗೆಂದು ರಾತ್ರಿ ತಿಂದಿದ್ದೆಲ್ಲಾ ಕೊಬ್ಬಾಗಿ ಶೇಖರವಾಗುತ್ತದೆ ಎನ್ನುವುದಕ್ಕೆ ವೈಜ್ಞಾನಿಕವಾಗಿ ಹೆಚ್ಚಿನ ಆಧಾರಗಳು ಇದ್ದಂತಿಲ್ಲ. ಆದರೆ ರಾತ್ರಿಯ ಊಟವನ್ನು ಸರಿಯಾಗಿ ಮಾಡದೆ, ನಡುರಾತ್ರಿ ಹಸಿವಾಗಿ, ಅಡುಗೆಮನೆ ನುಗ್ಗಿ ಸಿಕ್ಕಿದ ಕುರುಕಲುಗಳನ್ನೆಲ್ಲಾ ತಿಂದರೆ ಕೊಬ್ಬು ಶೇಖರವಾಗುವುದು ಹೌದು. ಹಾಗಾಗಿ ರಾತ್ರಿಯ ಕಳ್ಳ ಹಸಿವೆಗೆ ಕಡಿವಾಣ ಹಾಕಲು, ಪ್ರೊಟೀನ್‌ ಜೊತೆಗೆ ತರಕಾರಿ, ಇಡಿ ಧಾನ್ಯಗಳಂಥ ಸಂಕೀರ್ಣ ಪಿಷ್ಟಗಳನ್ನು ರಾತ್ರಿಯೂಟಕ್ಕೆ ಸೇವಿಸಿ.

ರಾತ್ರಿಯೂಟ ಬಿಡುವುದು ಒಳ್ಳೆಯದೆ?

ಎಲ್ಲೊ ಒಂದು ಏಕಾದಶಿಗೆ ರಾತ್ರಿಯೂಟ ಬಿಟ್ಟರೆ ದೊಡ್ಡದಲ್ಲ; ದಿನವೂ ಏಕಾದಶಿಯಾದರೆ ಕಷ್ಟ! ರಕ್ತದೊತ್ತಡ, ಸಕ್ಕರೆಮಟ್ಟಗಳೆಲ್ಲಾ ಕ್ರಮೇಣ ಏರುಪೇರಾಗುತ್ತವೆ. ಜೀರ್ಣಾಂಗಗಳ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ದೇಹದ ಚಯಾಪಚಯ ವ್ಯತ್ಯಾಸವಾಗಿ ಕೊಬ್ಬು ಶೇಖರಣೆ ಆದರೂ ಅಚ್ಚರಿಯಿಲ್ಲ. ಅದರಲ್ಲೂ ತೂಕ ಇಳಿಸುವ ಉದ್ದೇಶದಿಂದ ರಾತ್ರಿಯೂಟ ಬಿಟ್ಟರಂತೂ, ಫಲಿತಾಂಶ ವ್ಯತಿರಿಕ್ತವಾಗಬಹುದು. ಪೋಷಕಾಂಶಗಳ ಕೊರತೆಯೂ ಕಾಡಬಹುದು. ರಾತ್ರಿಯೂಟ ಬೇಕು- ಬೇಕೇಬೇಕು.

ಇದನ್ನೂ ಓದಿ: National Nutrition Week 2023 : ಸಿರಿ ಧಾನ್ಯಗಳ ಉತ್ತೇಜನಕ್ಕೇ ಮೀಸಲು ಐಐಎಂಆರ್‌ ಸಂಸ್ಥೆ

Exit mobile version