Site icon Vistara News

National Nutrition Week 2023: ರಾಷ್ಟ್ರೀಯ ಪೌಷ್ಟಿಕತಾ ಸಪ್ತಾಹ: ಸತ್ವಯುತ ಆಹಾರ ಸೇವಿಸಿ, ಪೂರ್ಣಾವಧಿ ಬದುಕಿ!

National Nutrition Week 2023

ಹಳೆಯದಕ್ಕೆ ಹೊಳಪು ಹೆಚ್ಚಂತೆ… ಅದರಲ್ಲಿ ಕೆಲವು ಹಳೆಯ ಗಾದೆಗಳನ್ನೂ ಸೇರಿಸಬಹುದು. ಉದಾ, ಊಟ ಬಲ್ಲವನಿಗೆ ರೋಗವಿಲ್ಲ ಎಂಬ ಮಾತು ನಾವೆಲ್ಲಾ ಕೇಳಿದ್ದೇವೆ. ಆದರೆ ಎಷ್ಟು ಅಳವಡಿಸಿಕೊಂಡಿದ್ದೇವೆ ಎಂಬುದು ಮುಖ್ಯ. ಆರೋಗ್ಯಪೂರ್ಣ ಜೀವನಕ್ಕೆ ಸತ್ವಯುತ ಆಹಾರ ಮುಖ್ಯ ಎಂಬ ಅರಿವು ಹೆಚ್ಚಿಸಬೇಕೆಂಬ ಉದ್ದೇಶದಿಂದ, ಪ್ರತಿವರ್ಷ ಸೆಪ್ಟೆಂಬರ್‌ 1ರಿಂದ 7ರವರೆಗೆ ರಾಷ್ಟ್ರೀಯ ಪೌಷ್ಟಿಕತಾ ಸಪ್ತಾಹವನ್ನು (National Nutrition Week 2023) ಆಚರಿಸಲಾಗುತ್ತದೆ.

ಆರೋಗ್ಯಪೂರ್ಣ ಜೀವನಕ್ಕೆ ಬೇಕಾಗಿದ್ದು ಎರಡು ವಿಷಯಗಳ ಬಗ್ಗೆ ಕಾಳಜಿ- ಮೊದಲನೆಯದಾಗಿ, ಆಹಾರದಲ್ಲಿ ಸಮತೋಲನೆ; ಇನ್ನೊಂದು, ಚಟುವಟಿಕೆಯ ಜೀವನ. ಈ ಬಗ್ಗೆ ಜಾಗೃತಿ ಮೂಡಿಸಿ, ರೋಗಗಳನ್ನು ದೂರ ಇರಿಸಿ, ನೆಮ್ಮದಿಯ ಜೀವನ ನಡೆಸುವಂತೆ ಜನರನ್ನು ಪ್ರೇರೇಪಿಸಬೇಕೆಂಬ ಉದ್ದೇಶ ಈ ಆಚರಣೆಯ ಹಿಂದಿದೆ. ಆದರೆ ʻಊಟ ತನ್ನಿಚ್ಛೆʼ ಎನ್ನುವ ಮಾತಿದೆಯಲ್ಲ; ನಮಗಿಷ್ಟ ಬಂದಿದ್ದನ್ನು ತಿಂದುಕೊಂಡಿದ್ದರೇನೀಗ ಎಂಬ ಪ್ರಶ್ನೆಯೂ ಬರಬಹುದು. ಇಷ್ಟ ಬಂದಿದ್ದನ್ನೇ ತಿನ್ನುವುದಕ್ಕೆ ಅಭ್ಯಂತರವಿಲ್ಲ, ಆದರೆ ಆರೋಗ್ಯಪೂರ್ಣ ಆಹಾರವನ್ನೇ ಇಷ್ಟಪಡಿ, ತುಂಬು ಜೀವನ ಕಳೆಯಿರಿ ಎಂಬುದು ಇಲ್ಲಿನ ಇಂಗಿತ.

ಅದಕ್ಕಾಗಿಯೇ ಈ ಬಾರಿಯ ಪೌಷ್ಟಿಕತಾ ಸಪ್ತಾಹದ National Nutrition Week ಘೋಷ ವಾಕ್ಯ- “ಆರೋಗ್ಯಕರ ಆಹಾರ ಎಲ್ಲರ ಕೈಯಲ್ಲಿ” (Healthy diet gawing affordable for all). ಅಂದರೆ, ಯಾವುದೇ ಆರ್ಥಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಹಿನ್ನೆಲೆ ಇದ್ದವರಿಗೂ ಸತ್ವಪೂರ್ಣ ಆಹಾರ ದೊರೆಯುವಂತಾಗಬೇಕು. ಇದು ಕೆಲವರಿಗೆ ಮಾತ್ರವೇ ದೊರೆಯುವ ಸವಲತ್ತಲ್ಲ, ಬದಲಿಗೆ ಜನರ ಮೂಲಭೂತ ಹಕ್ಕು ಎಂಬುದನ್ನು ಈ ಬಾರಿಯ ಘೋಷವಾಕ್ಯ ಒತ್ತಿ ಹೇಳುತ್ತಿದೆ.

ಸಪ್ತಾಹದ ಹಿನ್ನೆಲೆ ಏನು?

ಮೊದಲಿಗೆ, 1980ರಲ್ಲಿ ಇಂಥದ್ದೊಂದು ಸಪ್ತಾಹವನ್ನು ಭಾರತದಲ್ಲಿ ಆಚರಿಸಲಾಯಿತು. ಆದರೆ ಈ ಸಪ್ತಾಹವನ್ನು ಆಚರಿಸುವ ಸಂಪ್ರದಾಯ ಊರ್ಜಿತಕ್ಕೆ ಬಂದಿದ್ದು 1982ರಿಂದ. ಪೂರ್ಣಾವಧಿ ಬದುಕಿಗಾಗಿ ಆರೋಗ್ಯಪೂರ್ಣ ಆಹಾರ ಸೇವನೆ ಎಷ್ಟು ಮುಖ್ಯ ಎಂಬುದನ್ನು ಜನರಿಗೆ ಮನದಟ್ಟು ಮಾಡಿಸಲು ಹಲವಾರು ಕಾರ್ಯಕ್ರಮಗಳನ್ನು ಕೇಂದ್ರ ಸರ್ಕಾರ ಹಮ್ಮಿಕೊಂಡಿತ್ತು. ಈ ಜಾಗೃತಿ ಕಾರ್ಯಕ್ರಮ ಇಂದಿಗೂ ಮುಂದುವರಿದಿದ್ದು, ನಾಲ್ಕು ದಶಕಗಳ ನಂತರವೂ ತಿನ್ನುವ ಆಹಾರದ ಮಹತ್ವವನ್ನು, ಅದರ ಗುಣಮಟ್ಟದವನ್ನು ಜನತೆಗೆ ಮನದಟ್ಟು ಮಾಡುವುದು ಅಗತ್ಯವಾಗಿದೆ.

ಹಸಿವಿನ ಜಾಗತಿಕ ಸೂಚ್ಯಂಕವನ್ನು ಗಮನಿಸಿದರೆ, 116 ದೇಶಗಳ ಪೈಕಿ ಭಾರತಕ್ಕೆ 101ನೇ ಸ್ಥಾನ. ಅಂದರೆ ಹಸಿವು, ಅಪೌಷ್ಟಿಕತೆಯ ಸಮಸ್ಯೆ ಒಂದೆಡೆ ತೀವ್ರವಾಗಿದ್ದರೆ, ಇನ್ನೊಂದೆಡೆ ಆಹಾರದ ಕೊರತೆ ಇಲ್ಲದವರಲ್ಲಿ ಅದರ ಗುಣಮಟ್ಟದ ಬಗ್ಗೆ ಅರಿವಿನ ಅತೀವ ಕೊರತೆ ಕಾಣುತ್ತಿದೆ. ಯಾವುದನ್ನು, ಹೇಗೆ ಮತ್ತು ಎಷ್ಟು ತಿನ್ನಬೇಕು ಹಾಗೂ ಯಾವುದು ಸೇವಿಸಲು ಯೋಗ್ಯವಲ್ಲ ಎಂಬ ಪ್ರಾಥಮಿಕ ಮಾಹಿತಿಯೂ ಕೆಲವೊಮ್ಮೆ ಕಂಡುಬರುವುದಿಲ್ಲ. ಕೆಟ್ಟ ಕೊಬ್ಬು, ಸಂಸ್ಕರಿತ ಆಹಾರಗಳ ಭರಾಟೆಯಲ್ಲಿ ಅಗತ್ಯ ಪೋಷಕಾಂಶಗಳಿಂದ ದೇಹ ವಂಚಿತವಾಗಿ, ಬೊಜ್ಜು, ಮಧುಮೇಹದಂಥ ಸಮಸ್ಯೆಗಳು ಆತಂಕಕಾರಿ ಮಟ್ಟಕ್ಕೆ ಏರುತ್ತಿವೆ.

ಅರಿವಿನ ಕೊರತೆ ಎಂಬುದು ಆಹಾರಕ್ಕೆ ಮಾತ್ರವೇ ಸೀಮಿತವಲ್ಲ. ಚಟುವಟಿಕೆಯಿಲ್ಲದ ಜಡ ಜೀವನ ಶೈಲಿಗೂ ಅನ್ವಯಿಸುತ್ತದೆ. ತಿಂದಷ್ಟನ್ನು ಕರಗಿಸಲೇಬೇಕು ಎಂಬುದನ್ನು ಹೆಚ್ಚಿನವರು ಒಪ್ಪುವುದು ಹೌದಾದರೂ ಅದು ಕೃತಿಗಿಳಿಯುವುದಿಲ್ಲ. ಹಾಗಾಗಿ ಜೀವನಶೈಲಿಯ ಬಗ್ಗೆ ಜಾಗೃತಿ ಮೂಡಿಸುವ ಸಪ್ತಾಹವಾಗಿ ಇದು ಮಹತ್ವ ಗಳಿಸುತ್ತಿದೆ.

FAQ

ತಿನ್ನುವುದಕ್ಕೊಂದು ಸಪ್ತಾಹ ಬೇಕೆ?

ತಿನ್ನುವುದಕ್ಕೇ ಮೀಸಲಾದ ಸಪ್ತಾಹವಲ್ಲ ಇದು. ಯಾವುದನ್ನು, ಎಷ್ಟು ತಿನ್ನಬೇಕು ಹಾಗೂ ಯಾವುದು ತಿನ್ನಲು ಯೋಗ್ಯವಲ್ಲ ಎನ್ನುವಂಥ ಹಲವು ವಿಷಯಗಳ ಬಗ್ಗೆ ಜಾಗೃತಿ ಮೂಡಿಸುವ ಸಪ್ತಾಹವಿದು.

ಈ ಬಾರಿ ಯಾವ ವಿಷಯಕ್ಕೆ ಒತ್ತು ನೀಡಲಾಗಿದೆ?

ಆರೋಗ್ಯಯುತ ಆಹಾರ ಎಲ್ಲರನ್ನೂ ತಲುಪಬೇಕು. ಅದು ಮೂಲಭೂತ ಅಗತ್ಯಗಳಲ್ಲಿ ಒಂದು ಎನ್ನುವ ವಿಷಯಕ್ಕೆ ಹೆಚ್ಚಿನ ಮಹತ್ವ ನೀಡಲಾಗಿದೆ.

ಇದನ್ನೂ ಇದು: Foods For Healthy Joints And Muscles: ಬಲವಾದ ಕೀಲು, ಸ್ನಾಯುಗಳು ಬೇಕೆ? ಈ ಆಹಾರಗಳು ಬೇಕು!

Exit mobile version