Site icon Vistara News

National nutrition week | ಊಟ, ತಿಂಡಿಗೆ ಮೊದಲು ಅರಗಿಸಿಕೊಳ್ಳಿ ಈ ಸಂಗತಿ!

nutrition

ಆರೋಗ್ಯವೇ ಭಾಗ್ಯ ಎಂಬ ನಂಬಿಕೆ ನಮ್ಮದು. ಬರೀ ನಂಬಿದರೆ ಸಾಲದಲ್ಲ, ಅದು ಆಚರಣೆಯಲ್ಲೂ ಇರಬೇಕು. ಆರೋಗ್ಯವನ್ನು ಹೆಚ್ಚಿಸುವ ಮತ್ತು ಇರುವುದನ್ನು ಕಾಪಾಡಿಕೊಳ್ಳುವಂಥ ಸ್ವಸ್ಥ ಅಭ್ಯಾಸಗಳನ್ನು ರೂಢಿಸಿಕೊಂಡರೆ ಬದುಕು ಸ್ವರ್ಗ. ಇಂಥದ್ದೇ ಆಶಯದಿಂದ, ಸೆಪ್ಟೆಂಬರ್‌ ಮೊದಲ ವಾರವನ್ನು ರಾಷ್ಟ್ರೀಯ ಪೋಷಣಾ ಸಪ್ತಾಹ (National nutrition week) ಎಂದು ಆಚರಿಸಲಾಗುತ್ತಿದೆ.

ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಲು ಅಗತ್ಯವಾದಂಥ ಶುಚಿಯಾದ ಮತ್ತು ಆರೋಗ್ಯಕರ ಆಹಾರ ಪದ್ಧತಿಯನ್ನು ಪ್ರಚುರಪಡಿಸುವುದು ಈ ಸಪ್ತಾಹದ ಉದ್ದೇಶ. ಊಟ-ತಿಂಡಿ ಮಾಡುವುದು ಎಲ್ಲರಿಗೂ ಗೊತ್ತಿರುವಂಥದ್ದೇ, ಹೊಸತೇನಿದೆ ಅದರಲ್ಲಿ ಎಂಬ ಪ್ರಶ್ನೆ ಮೂಡಬಹುದು. ರೂಢಿಸಿಕೊಳ್ಳುವ ಆಹಾರ ಪೌಷ್ಟಿಕ ಮತ್ತು ಸಮತೋಲಿತವಾಗಿದ್ದರೆ ಮಾತ್ರವೇ ಆರೋಗ್ಯಕ್ಕೆ ಪೂರಕವಾಗಿರಲು ಸಾಧ್ಯ. ಈ ನಿಟ್ಟಿನಲ್ಲಿ ಒಂದಿಷ್ಟು ಸರಳ ಸೂತ್ರಗಳು ಇಲ್ಲಿವೆ-

ಅಗಿದು ತಿನ್ನಿ: ನಮ್ಮ ಜೀರ್ಣಾಂಗ ಆರಂಭವಾಗುವುದು ಹೊಟ್ಟೆಯಲ್ಲಲ್ಲ, ಬಾಯಲ್ಲಿಯೇ. ಗಂಟಲಿಗೆ ಸುರಿಯುವ ಅಥವಾ ಮುಕ್ಕುವ ಬದಲು, ಚನ್ನಾಗಿ ಅಗಿದು ತಿನ್ನಿ. ಆಹಾರದ ಪಚನಕ್ರಿಯೆ ಆರಭವಾಗುವುದೇ ಇಲ್ಲಿ. ಎಷ್ಟು ತಿನ್ನುತ್ತೀರಿ ಎನ್ನುವುದಕ್ಕಿಂತ ಹೇಗೆ ತಿನ್ನುತ್ತೀರಿ ಎಂಬುದು ಮುಖ್ಯ.

ಸಾವಧಾನ ಇರಲಿ: ಕುಳಿತು ತಿನ್ನುವ ಅಭ್ಯಾಸವೇ ಹೊಸದು ಎನ್ನುವಂತಾಗಿದೆ. ನಿಂತು, ಓಡಾಡಿಕೊಂಡು, ಬಿದ್ದುಕೊಂಡು ಅಥವಾ ಹೇಗೆಂದರೆ ಹಾಗೆ ತಿನ್ನುವುದು ಮಾಮೂಲಿ. ವಾಕಿಂಗ್‌ ಮಾಡಲು, ಪುಸ್ತಕ ಓದಲು, ಕೆಲಸ ಮಾಡಲು- ಹೀಗೆ ಯಾವುದಕ್ಕಾದರೂ ಒಂದು ಮನಸ್ಥಿತಿ ಬೇಡವೇ? ಊಟಕ್ಕೂ ಹಾಗೆಯೇ. ಉಣ್ಣುವ ಮನಸ್ಥಿತಿ ಮತ್ತು ಹಸಿವೆ, ಎರಡೂ ಮುಖ್ಯವಾಗುತ್ತದೆ. ಹಸಿದ ಹೊಟ್ಟೆಗೆ ಸಾವಧಾನವಾಗಿ ಆಹಾರ ಕೊಡಿ.

ಅಳತೆಯಿರಲಿ: ವಸ್ತ್ರವನ್ನು ತೊಡುವಾಗ ನಮ್ಮ ಅಳತೆಗೆ ತಕ್ಕಂತೆ ಹಾಕಿಕೊಳ್ಳುತ್ತೇವಲ್ಲ. ಆಹಾರವೂ ಹಾಗೆಯೇ, ಅಳತೆ ಮೀರಿ ತಿನ್ನುವುದು ಅಥವಾ ತೀರಾ ಕಡಿಮೆ ತಿನ್ನುವುದು ಸರಿಯಲ್ಲ. ಹಾಗಾದರೆ ತಿನ್ನುವುದಕ್ಕೆ ಅಳತೆ ಯಾವುದು? ನಮ್ಮ ಚಟುವಟಿಕೆಯೇ ಅದಕ್ಕೆ ಅಳತೆ. ಮಾತ್ರವಲ್ಲ, ಅತಿ ಒತ್ತಡದಲ್ಲಿದ್ದಾಗ ಬಿಡುಗಡೆಯಾಗುವ ಕಾರ್ಟಿಸೋಲ್‌ ಚೋದಕದಿಂದಾಗಿ ಅತಿಯಾಗಿ ತಿನ್ನುವಂತಾಗುತ್ತದೆ. ಹಾಗಾಗಿ ಯಾವುದೂ ಅಳತೆ ಮೀರದಿರಲಿ.

ನಾಲ್ಕು ಹೆಜ್ಜೆ ಹಾಕಿ: ʻಉಂಡು ನೂರಡಿ ಇಟ್ಟು, ಕೆಂಡದಲಿ ಕೈಕಾಸಿ, ಗಂಡು ಮೇಲಾಗಿ ಮಲಗಿದರೆ ವೈದ್ಯನೇ ದಂಡನಾಗಿರಲಕ್ಕುʼ ಎಂಬುದು ಸರ್ವಜ್ಞನ ಹಿತನುಡಿ. ಊಟದ ನಂತರ ಜಡವಾಗಬೇಡಿ, ಸ್ವಲ್ಪ ಓಡಾಡಿ; ಚಟುವಟಿಕೆಯಿಂದಿರಿ. ಜೊತೆಗೆ ಮೈ ಬೆಚ್ಚಗಿಟ್ಟುಕೊಳ್ಳಿ; ಮಲಗುವಾಗ ಬಲ ಮೇಲಾಗಿ, ಅಂದರೆ ಎಡ ಮಗ್ಗುಲಲ್ಲಿ ಮಲಗಿ- ಇದಿಷ್ಟು ಮಾಡಿದರೆ ವೈದ್ಯರು ದಂಡಕ್ಕೆ ಎನ್ನುವುದು ಕ(ಕಿ)ವಿಮಾತು.

ನೀರು ಕುಡಿಯಬೇಡಿ: ಅಂದರೆ ಹಾಗಲ್ಲ! ಊಟದ ಜೊತೆಗೆ ಸಿಕ್ಕಾಪಟ್ಟೆ ನೀರು ಕುಡಿಯಬೇಡಿ ಎಂದಷ್ಟೇ ಹೇಳಿದ್ದು. ಶುದ್ಧ ನೀರು ಎಲ್ಲರಿಗೂ ಬೇಕೇ ಬೇಕು. ನೀರಿಲ್ಲದೆ ಬದುಕಿಲ್ಲ. ಆದರೆ ಊಟ ಮಾಡುವಾಗ ಮೇಲಿಂದ ಮೇಲೆ ನೀರು ಕುಡಿಯುತ್ತಿದ್ದರೆ ಸರಿಯಾಗಿ ಜೀರ್ಣವಾಗುವುದಿಲ್ಲ.

ಇದನ್ನೂ ಓದಿ | Healthy food | ಒಳ್ಳೆಯ ಬಾದಾಮಿಯಿಂದ ಕೆಟ್ಟ ಪರಿಣಾಮವೂ ಇದೆ ಅಂದರೆ ನಂಬ್ತೀರಾ?

ಇದರಿಂದ ದೂರವಿರಿ: ಕೃತಕವಾಗಿ ಬಣ್ಣ, ರುಚಿ, ಪರಿಮಳ ಸೇರಿಸಿದ ಆಹಾರಗಳು, ಬಾಳಿಕೆ ಹೆಚ್ಚಿಸುವ ರಾಸಾಯನಿಕ ಸೇರಿಸಿದ ಸಂಸ್ಕರಿತ ಆಹಾರ, ಒಮೇಗಾ-೬ ಕೊಬ್ಬು ಹೊಂದಿರುವ ಆಹಾರಗಳು, ಅತಿಯಾದ ಉಪ್ಪು ಮತ್ತು ಸಕ್ಕರೆಯುಕ್ತ ಪದಾರ್ಥಗಳು- ಇಂಥವು ಕಡಿಮೆ ಇದ್ದಷ್ಟೂ ಆರೋಗ್ಯ ಹೆಚ್ಚುತ್ತದೆ.

ಯಾಕೆ ಈ ಸಪ್ತಾಹ ?

ಸೆಪ್ಟೆಂಬರ್‌ ಮೊದಲ ವಾರವನ್ನು ರಾಷ್ಟ್ರೀಯ ಪೌಷ್ಟಿಕತಾ ಸಪ್ತಾಹ (National nutrition week) ಎಂದು ಆಚರಿಸಲಾಗುತ್ತಿದೆ. ಆದರೆ, ʻಊಟ ತನ್ನಿಚ್ಛೆ, ನೋಟ ಪರರಿಚ್ಛೆʼ ಎನ್ನುವ ಸಂಸ್ಕೃತಿಯಲ್ಲಿ ಇಂಥದ್ದೇ ತಿನ್ನಿ, ಹೀಗೆಯೇ ತಿನ್ನಿ ಎಂದು ಹೇಳುತ್ತಿರುವುದೇಕೆ ಎಂಬ ಗೊಂದಲ ಸಹಜವಾಗಿರಬಹುದು. ಈ ಸಪ್ತಾಹದ ಬಗ್ಗೆ ಒಂದಿಷ್ಟು ಮಾಹಿತಿ ಇಲ್ಲಿದೆ.

ಜನರಲ್ಲಿ ಪೌಷ್ಟಿಕತೆಯ ಬಗ್ಗೆ ಅರಿವು ಮೂಡಿಸಲು ಪ್ರತ್ಯೇಕ ಸಪ್ತಾಹದ ಅಗತ್ಯವಿದೆ ಎಂದು ಭಾವಿಸಿದ್ದು ಅಮೆರಿಕ. ೧೯೭೫ರಲ್ಲಿ ಮೊದಲ ಬಾರಿಗೆ ರಾಷ್ಟ್ರೀಯ ಪೋಷಣಾ ಸಪ್ತಾಹವನ್ನು ಅಮೆರಿಕದಲ್ಲಿ ಆಚರಿಸಲಾಯಿತು. ಭಾರತದಲ್ಲಿ ಇದು ಮೊದಲಾಗಿದ್ದು ೧೯೮೨ರಲ್ಲಿ. ಸ್ವಚ್ಛ ಮತ್ತು ಸಮತೋಲಿತ ಆಹಾರದ ಅಗತ್ಯದ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಈ ಸಪ್ತಾಹವನ್ನು ಆರಂಭಿಸಲಾಯಿತು. ಇದಕ್ಕಾಗಿ ಕೆಲವು ಕಾರ್ಯಕ್ರಮಗಳನ್ನೂ ಸರಕಾರ ಆರಂಭಿಸಿತ್ತು.

ಹೃದ್ರೋಗ, ಕ್ಯಾನ್ಸರ್‌, ಪಾರ್ಶ್ವವಾಯು, ಬೊಜ್ಜು, ಮಧುಮೇಹದಂಥ ಸಮಸ್ಯೆಗಳು ಸಿಕ್ಕಾಪಟ್ಟೆ ಹೆಚ್ಚುತ್ತಿರುವ ಈ ದಿನಗಳಲ್ಲಿ, ʻಆರೋಗ್ಯಪೂರ್ಣ ಆಹಾರ- ಆಹಾರದಿಂದ ಪೂರ್ಣಾರೋಗ್ಯʼ ಎಂಬ ಕಲ್ಪನೆ ಪ್ರತಿಯೊಬ್ಬರಲ್ಲೂ ಇರಲೇಬೇಕಾದ್ದು ಅತಿಮುಖ್ಯ. ಹಳೆಯ ತಲೆಮಾರುಗಳ ಜನರ ಆರೋಗ್ಯ ಮತ್ತು ದೀರ್ಘಾಯಸ್ಸಿನ ಗುಟ್ಟು ಅವರ ಆಹಾರ ಮತ್ತು ಜೀವನಶೈಲಿ ಎಂಬುದು ನಾವು ತಿಳಿಯದ್ದೇನಲ್ಲ. ಆದರೆ ನಾವು ಅರಿತೂ ಆಚರಿಸುವವರಲ್ಲ! ಈ ಹಿನ್ನೆಲೆಯಲ್ಲಿ, ಈ ಬಾರಿಯ ಸಪ್ತಾಹದ ಘೋಷವಾಕ್ಯ ʻCelebrate a World of Flavoursʼ ಎಂಬುದು. ಅಂದರೆ ಸತ್ವಯುತ ಆಹಾರದ ರುಚಿ ಮತ್ತು ಗುಣಮಟ್ಟದ ಮಹತ್ವವನ್ನು ಒತ್ತಿ ಹೇಳುವಂಥ ಮಾತಿದು.

ಇದನ್ನೂ ಓದಿ | ಯುವಪೀಳಿಗೆಯಲ್ಲಿ ಟ್ರೆಂಡ್‌ ಆದ Vegan Diet | ತಪ್ಪು ಕಲ್ಪನೆ ನಿವಾರಿಸಿಕೊಳ್ಳಿ

ಜಾಗತಿಕ ಹಸಿವು-ಆರೋಗ್ಯ ಸೂಚ್ಯಂಕದ ಪ್ರಕಾರ, ೧೧೬ ದೇಶಗಳ ಪೈಕಿ ಭಾರತದ ೧೦೧ನೇ ಸ್ಥಾನದಲ್ಲಿದೆ. ಎಂಬಲ್ಲಿಗೆ, ನಮ್ಮ ದೇಶದ ಆರೋಗ್ಯ ಸ್ಥಿತಿ-ಗತಿ ಗಂಭೀರವಾಗಿಯೇ ಇದೆ ಎನ್ನಬಹುದು. ಭಾರತದ ಒಂದು ಭಾಗದಲ್ಲಿ ಹಸಿವು ಎಷ್ಟು ತೀವ್ರವಾಗಿದೆಯೋ, ಇನ್ನೊಂದು ಭಾಗದಲ್ಲಿ ಬೊಜ್ಜಿನ ಸಮಸ್ಯೆಯೂ ಅಷ್ಟೇ ಗಂಭೀರವಾಗಿದೆ. ಸಂಸ್ಕರಿತ, ಕರಿದ, ಕೃತಕ ಆಹಾರಗಳಲ್ಲಿ ಸತ್ವ-ಪೋಷಣೆ ಹೇಗೆ ಮತ್ತು ಎಷ್ಟಿರಲು ಸಾಧ್ಯ? ಇಂಥ ಅಪಸವ್ಯಗಳನ್ನು ದೂರಮಾಡುವ ಉದ್ದೇಶದಿಂದ, ಪೌಷ್ಟಿಕ ಆಹಾರದ ಬಗ್ಗೆ ಸೂಕ್ತ ತಿಳಿವಳಿಕೆ ನೀಡಲು ರಾಷ್ಟ್ರೀಯ ಪೌಷ್ಟಿಕತಾ ಸಪ್ತಾಹಕ್ಕೆ ಹೆಚ್ಚಿನ ಮಹತ್ವ ಮತ್ತು ಪ್ರಚಾರ ನೀಡಲಾಗುತ್ತಿದೆ.

Exit mobile version