Site icon Vistara News

National Safe Motherhood Day: 35 ವರ್ಷ ನಂತರದ ತಾಯ್ತನದಲ್ಲಿ ಯಾವೆಲ್ಲ ಎಚ್ಚರಿಕೆ ಅಗತ್ಯ?

National Safe Motherhood Day

ತಾಯ್ತನವೆಂಬುದು ಬದುಕಿನ ಆಹ್ಲಾದಕರ ಅನುಭವಗಳಲ್ಲಿ ಒಂದು. ಬರಲಿರುವ ಪುಟ್ಟ ಜೀವವನ್ನೇ ನೆನಸುತ್ತಾ ನವಮಾಸಗಳನ್ನು ಕಳೆಯುವುದು ಎಷ್ಟು ಆನಂದದಾಯಕವೋ ಕೆಲವೊಮ್ಮೆ ಅಷ್ಟೇ ತ್ರಾಸದಾಯಕವೂ ಆಗಬಹುದು. ಈ ದಿನಗಳಲ್ಲಿ ಮತ್ತು ಹೆರಿಗೆಯ ನಂತರ ಅಗತ್ಯವಾದ ಆರೈಕೆಯ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ರಾಷ್ಟ್ರೀಯ ಸುರಕ್ಷಿತ ತಾಯ್ತನದ ದಿನವನ್ನು ಏಪ್ರಿಲ್‌ ತಿಂಗಳ 11ನೇ ತಾರೀಕು (National Safe Motherhood Day)ಆಚರಿಸಲಾಗುತ್ತದೆ. ಇತ್ತೀಚಿನ ವರ್ಷಗಳಲ್ಲಿ 30 ಅಥವಾ 35 ವರ್ಷಗಳ ನಂತರ ತಾಯ್ತನಕ್ಕೆ ಸಿದ್ಧವಾಗುವ ಮಹಿಳೆಯರ ಸಂಖ್ಯೆ ತೀವ್ರವಾಗಿ ಹೆಚ್ಚಿದೆ. ಕುಟುಂಬವನ್ನು ಬೆಳೆಸುವ ಯೋಜನೆಗಳು ಆಯಾ ದಂಪತಿಗಳ ವೈಯಕ್ತಿಕ ವಿಚಾರ ಹೌದಾದರೂ, ವಯಸ್ಸು ಹೆಚ್ಚಿದಂತೆ ಭಾವೀ ತಾಯಿಯ ಆರೋಗ್ಯದಲ್ಲಿ ಸಮಸ್ಯೆಗಳು ಹೆಚ್ಚುವುದನ್ನು ವೈದ್ಯರೂ ಒಪ್ಪುತ್ತಾರೆ. ಕೆಲವೊಮ್ಮೆ ಫಲವಂತಿಕೆಯೂ ಕುಸಿದಿರುತ್ತದೆ. ಹಾಗಾಗಿ ಇಪ್ಪತ್ತರ ಹರೆಯದಲ್ಲೇ ʻಎಗ್‌ ಫ್ರೀಜಿಂಗ್ʼ ತಂತ್ರಜ್ಞಾನದ ಮೊರೆ ಹೋಗುವವರೂ ಇದ್ದಾರೆ. ಈ ಎಲ್ಲವುಗಳ ಹಿನ್ನೆಲೆಯಲ್ಲಿ, 35ರ ನಂತರ ಮಾತೃತ್ವಕ್ಕೆ ಅಣಿಯಾಗುವ ತಾಯಂದಿರು ತೆಗೆದುಕೊಳ್ಳಬೇಕಾದ ಎಚ್ಚರಿಕೆಗಳೇನು?

ಮೊದಲೇ ಮಾತಾಡಿ

ತಾಯ್ತನವನ್ನು ತಡವಾಗಿ ಒಪ್ಪಿಕೊಳ್ಳುವ ಬಗ್ಗೆ ಗರ್ಭ ಧರಿಸುವ ಮೊದಲೇ ವೈದ್ಯರಲ್ಲಿ ಮಾತಾಡಿ. ಇದಕ್ಕೆ ಬೇಕಾದ ಆರೋಗ್ಯ ತಪಾಸಣೆಗಳನ್ನು ಮಾಡಿಸಿಕೊಳ್ಳಿ. ಮಾತ್ರವಲ್ಲ, ನಿಮಗಿರುವ ಆರೋಗ್ಯ ಸಮಸ್ಯೆಗಳು, ಅದಕ್ಕಾಗಿ ಯಾವುದಾದರೂ ಮಾತ್ರೆಗಳನ್ನು ತೆಗೆದುಕೊಳ್ಳುತ್ತಿದ್ದರೆ, ಇಂಥ ಎಲ್ಲವನ್ನೂ ವೈದ್ಯರಲ್ಲಿ ತಿಳಿಸಿ. ಸಣ್ಣ ಪ್ರಾಯದವರಿಗೂ ಮಧುಮೇಹ, ಥೈರಾಯ್ಡ್‌ ಸಮಸ್ಯೆಗಳು ವಕ್ಕರಿಸುತ್ತಿರುವುದರಿಂದ ಇದನ್ನೆಲ್ಲ ಮೊದಲೇ ವೈದ್ಯರಲ್ಲಿ ಮಾತಾಡಿಕೊಳ್ಳಿ.
ಒತ್ತಡ ನಿರ್ವಹಣೆ: ೩೫ರ ನಂತರ ವೃತ್ತಿಯಲ್ಲಿ ಮತ್ತು ಬಾಂಧವ್ಯಗಳಲ್ಲಿ ಹೆಚ್ಚಿನ ಸ್ಥಿರತೆ ಇರುತ್ತದೆ. ಆಗಲೇ ತಾಯ್ತನ ಒಪ್ಪಿಕೊಳ್ಳುವುದು ಸೂಕ್ತ ಎಂಬುದು ಒಂದು ವಾದ. ಆದರೆ ವಯಸ್ಸು ಏರುತ್ತಿದ್ದಂತೆ ಒತ್ತಡ ಧಾರಣಾ ಸಾಮರ್ಥ್ಯವೂ ತೀಕ್ಷ್ಣವಾಗಿ ಕುಸಿಯುತ್ತದೆ. ಜೊತೆಗೆ ವೃತ್ತಿಯಲ್ಲಿ ಮೇಲೇರುತ್ತಿದ್ದಂತೆ ಹೊಣೆಗಾರಿಕೆಯೂ ಹೆಚ್ಚಿರುತ್ತದೆ. ಹಾಗಾಗಿ ಒತ್ತಡವನ್ನು ಕಡಿಮೆ ಮಾಡಿಕೊಳ್ಳುವ ಬಗ್ಗೆ ಪರಿಣತರಲ್ಲಿ ಮಾತಾಡಿ, ಅವರ ಸಲಹೆಗಳನ್ನು ಅಳವಡಿಸಿಕೊಳ್ಳಿ. ಪ್ರಿನೇಟಲ್‌ ಯೋಗ, ಧ್ಯಾನ ಮುಂತಾದವು ಖಂಡಿತವಾಗಿ ಸಹಾಯ ಮಾಡುತ್ತವೆ. ಈ ಬಗ್ಗೆ ಗಮನ ಕೊಡದಿದ್ದರೆ ಗರ್ಭಾವಸ್ಥೆಯಲ್ಲಿ ರಕ್ತದೊತ್ತಡ, ಮಧುಮೇಹಗಳು ಕಾಡುವ ಸಾಧ್ಯತೆ ಹೆಚ್ಚುತ್ತದೆ.

ವ್ಯಾಯಾಮ

ನಿಯಮಿತವಾದ ವ್ಯಾಯಾಮಗಳು ಗರ್ಭಿಣಿಯರಿಗೆ ಅಗತ್ಯವಾಗಿ ಬೇಕಾದವು. ಯಾವುದನ್ನೆಲ್ಲ ಮಾಡಬಹುದು ಎಂಬ ಬಗ್ಗೆ ವೈದ್ಯರಲ್ಲೆ ಚರ್ಚಿಸುವುದು ಒಳಿತು. ಆದರೆ ನಡಿಗೆ, ಈಜು, ಪ್ರಿನೇಟಲ್‌ ಯೋಗ, ಕಡಿಮೆ ತೀವ್ರತೆಯ ಏರೋಬಿಕ್‌ ವ್ಯಾಯಾಮಗಳು ಗರ್ಭಿಣಿಯರಿಗೆ ಹಿತವಾಗುವಂಥವು. ಇದರಿಂದ ಶರೀರ ಹಗುರವಾಗಿದ್ದು, ಹೆರಿಗೆಗೆ ಬೇಕಾದ ಸಿದ್ಧತೆಗಳನ್ನು ದೇಹ ತಂತಾನೇ ಮಾಡಿಕೊಳ್ಳಲು ಅನುಕೂಲವಾಗುತ್ತದೆ.

ನಿದ್ದೆ, ವಿಶ್ರಾಂತಿ

ಎಷ್ಟೋ ಗರ್ಭಿಣಿಯರಿಗೆ ರಾತ್ರಿಯ ನಿದ್ದೆ ಕಷ್ಟವಾಗುತ್ತದೆ. ಕಡೆಯ ಮೂರು ತಿಂಗಳಲ್ಲಂತೂ ಹೇಗೆ ಮಲಗಿದರೂ ಸರಿಯಾಗುವುದಿಲ್ಲ ಎನ್ನುವಂಥ ಸಮಸ್ಯೆ ಅವರದ್ದು. ಅಂಥ ದಿನಗಳಲ್ಲಿ ರೆಕ್ಲೈನರ್‌ ಮಾದರಿಯ ಹಾಸಿಗೆಗಳು ವಿಶ್ರಾಂತಿಗೆ ನೆರವಾಗುತ್ತವೆ. ದಿನದಲ್ಲೂ ಕೆಲಕಾಲ ನಿದ್ದೆಯಲ್ಲದಿದ್ದರೆ, ವಿಶ್ರಾಂತಿಯನ್ನಂತೂ ತೆಗೆದುಕೊಳ್ಳಬೇಕು. ದಿನಕ್ಕೆ ಹತ್ತು ತಾಸುಗಳ ನಿದ್ದೆಯಿಂದ ಮಗುವಿನ ಬೆಳವಣಿಗೆಗೂ ಸಹಾಯ ದೊರೆಯುತ್ತದೆ. ಈ ಬಗ್ಗೆ ಪ್ರತಿಯೊಬ್ಬರ ದೇಹವೂ ತನ್ನ ಅಗತ್ಯಗಳನ್ನು ತಾನೇ ಸೂಚಿಸುತ್ತದೆ, ಅದನ್ನು ಕೇಳಿ.

ಆಹಾರ

ಮೊದಲನೆಯದಾಗಿ, ಗರ್ಭಾವಸ್ಥೆಯಲ್ಲಿ ಇಬ್ಬರಿಗಾಗಿ ತಿನ್ನುವ ಅಗತ್ಯವಿಲ್ಲ. ನಿತ್ಯದ ಆಹಾರಕ್ಕಿಂತ ೩೦೦ ಕ್ಯಾಲರಿಯಷ್ಟು ಮಾತ್ರವೇ ಹೆಚ್ಚಿಗೆ ಆಹಾರ ತೆಗೆದುಕೊಂಡರೆ ಸಾಕಾಗುತ್ತದೆ. ಅತಿಯಾಗಿ ತಿನ್ನುವುದು, ಸಿಹಿ, ಖಾರ, ಕರಿದಿದ್ದು, ಐಸ್‌ಕ್ರೀಂನಂಥವು, ಚಿಪ್ಸ್‌, ಸೋಡಾ ಮುಂತಾದ ಯಾವುದೇ ಗುಜರಿ ಆಹಾರಗಳು ಭ್ರೂಣದ ಬೆಳವಣಿಗೆಗೆ ಪೂರಕವಲ್ಲ. ಆಹಾರದಲ್ಲಿ ಋತುಮಾನದ ಹಣ್ಣು-ತರಕಾರಿಗಳು, ಧಾರಾಳವಾಗಿ ನೀರು, ಡೇರಿ ಉತ್ಪನ್ನಗಳು, ಹಸಿರು ಸೊಪ್ಪುಗಳು, ಇಡೀ ಧಾನ್ಯಗಳು, ಕಾಯಿ-ಬೀಜಗಳು, ಮೊಟ್ಟೆ-ಮೀನಿನಂಥವು ಇರಬೇಕು. ಕೆಫೇನ್‌ ಸೇವನೆಯನ್ನು ಕಡಿಮೆ ಮಾಡಿ. ಇದರಿಂದ ಇಬ್ಬರ ಸ್ವಾಸ್ಥ್ಯಕ್ಕೂ ಹಿತ.

ತಪಾಸಣೆ

35ರ ನಂತರದ ಗರ್ಭಧಾರಣೆಯಲ್ಲಿ ಮಧುಮೇಹ, ಬಿಪಿ, ಅವಧಿಪೂರ್ವ ಪ್ರಸವ, ಕಡಿಮೆ ತೂಕ ಶಿಶು ಜನಿಸುವುದು, ಶಿಶುವಿಗೆ ಡೌನ್ಸ್‌ ಸಿಂಡ್ರೋಮ್‌ನಂಥ ಆನುವಂಶಿನ ಕಾಯಿಲೆಗಳು ಬರುವಂಥ ಎಷ್ಟೋ ಸಮಸ್ಯೆಗಳು ಎದುರಾಗುತ್ತವೆ. ಹಾಗಾಗಿ ತಜ್ಞ ವೈದ್ಯರಿಂದ ಕಾಲಕಾಲಕ್ಕೆ ತಪಾಸಣೆ ಮಾಡಿಸಿಕೊಳ್ಳುವುದು ಅಗತ್ಯ. ಅವಶ್ಯವಾದಂಥ ರಕ್ತಪರೀಕ್ಷೆಗಳು ಸಹ ಈ ತಪಾಸಣೆಯ ಭಾಗವೇ ಆಗಿದೆ. ಭ್ರೂಣದ ಬೆಳವಣಿಗೆ ಮತ್ತು ಗರ್ಭಿಣಿಯ ಆರೋಗ್ಯ ಒಂದಕ್ಕೊಂದು ತೀರಾ ಭಿನ್ನವಲ್ಲ; ಯಾವುದು ಸರಿಯಿಲ್ಲದಿದ್ದರೂ ಇಬ್ಬರಿಗೂ ಅಪಾಯ.

ಇದನ್ನೂ ಓದಿ: Balancing Hormones Naturally: ಹಾರ್ಮೋನು ಸಮತೋಲನಕ್ಕೆ ಬೇಕು ಇಂಥ ಆಹಾರಗಳು

Exit mobile version