Site icon Vistara News

Deep Sleep: ಗಾಢ ನಿದ್ದೆ ಮಾಡಬೇಕೆ? ಭಾರದ ಹೊದಿಕೆಯಲ್ಲಿ ಮಲಗಿ!

Deep Sleep Blanket

#image_title

ನಿದ್ದೆಯನ್ನು ಉತ್ತಮಗೊಳಿಸಲು ಸರಳ ತಂತ್ರಗಳೂ ಕೆಲವೊಮ್ಮೆ ಉಪಕಾರಿಯಾಗುತ್ತವೆ. ಕಾಫಿ, ಚಹಾ ಕಡಿಮೆ ಮಾಡುವುದು, ಹಗಲಿನ ನಿದ್ದೆ ಬಿಡುವುದು, ಮಲಗುವ ಮೊದಲಿನ ಸ್ಕ್ರೀನ್‌ ಸಮಯ ನಿಲ್ಲಿಸುವುದು ಇಂಥ ಕೆಲವು ಯಾವುದು ಮಾಡಬಾರದು ಎಂಬಂಥ ಪಟ್ಟಿಗಳಿವೆ. ಇನ್ನೊಂದಿಷ್ಟು ಯಾವುದು ಮಾಡಬೇಕು ಎಂಬುದೂ ಮುಖ್ಯವಾಗುತ್ತದೆ. ಉದಾ: ಮಲಗುವ ಮುನ್ನ ಏನಾದರೂ ಬೋರಿಂಗ್‌ ಇರುವುದನ್ನು ಓದುವುದು, ಕಥೆ ಕೇಳುವುದು ಇತ್ಯಾದಿಗಳನ್ನು ಮಾಡುವುದರಿಂದಲೂ ನಿದ್ರಾಂಗನೆಯನ್ನು ಒಲಿಸಿಕೊಳ್ಳಲು ಸಾಧ್ಯ. ಇಷ್ಟೇ ಅಲ್ಲ, ಚಳಿಗಾಲದಲ್ಲಿ ಬೆಚ್ಚಗೆ, ಭಾರ ಹೊದ್ದು ಮಲಗುವುದರಿಂದಲೂ ಗಡದ್ದು (Deep Sleep) ನಿದ್ದೆ ಬರುವುದಕ್ಕೆ ಸಾಧ್ಯವಂತೆ.

ಬೆಚ್ಚಗೆ, ಭಾರ ಹೊದ್ದು ಎನ್ನುತ್ತಿದ್ದಂತೆ ಏನೇನೋ ಯೋಚಿಸಬೇಡಿ. ನಿದ್ದೆಯ ಗುಣಮಟ್ಟವನ್ನು ವೃದ್ಧಿಸಬೇಕೆಂದರೆ ಭಾರದ ಹೊದಿಕೆಯನ್ನು ಹಾಕಿಕೊಳ್ಳುವುದು ಉಪಯುಕ್ತ ಎಂದಷ್ಟೇ ಹೇಳಿದ್ದು. ಬರೀ ನಿದ್ದೆಯನ್ನು ವೃದ್ಧಿಸುವುದು ಮಾತ್ರವಲ್ಲ, ದೇಹದ ಒಟ್ಟಾರೆ ಆರೋಗ್ಯಕ್ಕೆ ಬೆಚ್ಚನೆಯ, ಭಾರದ ಹೊದಿಕೆಗಳಿಂದ ಲಾಭವೂ ಇದೆ ಎನ್ನುತ್ತದೆ ವಿಜ್ಞಾನ. ನಿಜ, ಚಳಿಯಲ್ಲಿ ದೇಹದೆಲ್ಲೆಡೆ ಹೆಚ್ಚುವ ನೋವುಗಳನ್ನು ಶಮನ ಮಾಡುವುದರಿಂದ ಪ್ರಾರಂಭಿಸಿ, ನಾನಾ ರೀತಿಯ ಲಾಭಗಳನ್ನು ತಜ್ಞರು ಹೀಗೆ ಪಟ್ಟಿ ಮಾಡಿದ್ದಾರೆ.

ಒತ್ತಡ ನಿವಾರಣೆ

ಮೈ ಮೇಲೆ ಆರಾಮ ಎನಿಸುವಷ್ಟು ಭಾರ ಬೀಳುತ್ತಿದ್ದಂತೆಯೇ, ದೀರ್ಘ ಉಸಿರಾಟದ ಮಾದರಿಯಲ್ಲಿ ಮೆದುಳಿಗೆ ಸಂದೇಶ ರವಾನೆಯಾಗುತ್ತದಂತೆ. ಅಂದರೆ, ಎಲ್ಲ ಸರಿಯಾಗಿದೆ- ಈಗ ನಿರುಮ್ಮಳವಾಗಿ ಇರಬಹುದು ಎಂಬಂತೆ ಚುರುಕು ಉಸಿರಾಟ, ಏರಿದ ಎದಬಡಿತ ಎಲ್ಲವೂ ತಹಬಂದಿಗೆ ಬರುತ್ತದೆ. ಇದರಿಂದ ಮೈ-ಮನಗಳ ಮೇಲಿನ ಆಯಾಸ, ಒತ್ತಡ ತಾನೇತಾನಾಗಿ ನಿವಾರಣೆಯಾಗುತ್ತದೆ. ವಿಶ್ರಾಂತ ಸ್ಥಿತಿಯತ್ತ ದೇಹ ಹೊರಳುತ್ತದೆ.

ಗಾಢ ನಿದ್ದೆ

ನಿದ್ದೆ ಮಾಡಿದಾಗಲೂ ಅದು ಗಾಢವಾಗಿರಬೇಕು. ಪದೇಪದೆ ಎಚ್ಚರಾಗುವುದು, ಕ್ಷಣಕ್ಕೊಮ್ಮೆ ಗಡಿಯಾರ ನೋಡುವುದು ಇಂಥದ್ದೆಲ್ಲಾ ಮಾಡುತ್ತಿದ್ದರೆ ನಿದ್ದೆಯ ಗುಣಮಟ್ಟ ಚನ್ನಾಗಿಲ್ಲ ಎಂದೇ ಅರ್ಥ. ಮೈಮೇಲೆ ಬೆಚ್ಚಗೆ ಹದವಾಗಿ ಬೀಳುವ ಈ ಭಾರದಿಂದ ವಿಶ್ರಾಂತ ಸ್ಥಿತಿಗೆ ತಲುಪುವ ಶರೀರದಲ್ಲಿ ಮೆಲಟೋನಿನ್‌ ಉತ್ಪಾದನೆಯೂ ಏರುತ್ತದೆ. ಇದರಿಂದ ನಿದ್ದೆಯೂ ಗಾಢವಾಗುತ್ತದೆ.

ನೋವು ಶಮನ

ಚಳಿಗಾಲದಲ್ಲಿ ನೋವುಗಳು ಕೆಣಕುವುದು ತುಸು ಹೆಚ್ಚು. ಅದರಲ್ಲೂ ಹಗಲಿಗೆ ಓಡಾಡಿಕೊಂಡಿದ್ದಾಗ ಕಾಣದ ನೋವು, ರಾತ್ರಿ ಅಡ್ಡಾಗುತ್ತಿದ್ದಂತೆ ಅಟಕಾಯಿಸಿಕೊಳ್ಳುತ್ತದೆ. ಹೀಗೆ ಮೈಮೇಲೆ ಹದವಾದ ಭಾರ ಹಾಕಿಕೊಳ್ಳುವುದರಿಂದ ನೋವುಗಳು ಸಹ ಶಮನವಾಗುತ್ತವೆ. ಸಾಧಾರಣವಾಗಿ ನಾಲ್ಕಾರು ಕೆಜಿಯವರೆಗೆ ಭಾರ ಹಾಕಿಕೊಂಡು ಗೊರೆದು ನಿದ್ರಿಸುವವರೂ ಇದ್ದಾರೆ.

ಎಪಿಲೆಪ್ಸಿ ತಗ್ಗಿಸುತ್ತದೆ

ಮೆದುಳಿನ ನರಗಳ ಸಮಸ್ಯೆ ಎಪಿಲೆಪ್ಸಿಯಿಂದ ಬಳಲುತ್ತಿರುವವರಿಗೂ ಭಾರದ ಹೊದಿಕೆಗಳು ನೆರವಾಗಬಲ್ಲವು. ಮುಖ್ಯವಾಗಿ, ಇಂಥ ವ್ಯಕ್ತಿಗಳ ನರಗಳ ಮೇಲಿನ ಒತ್ತಡ ಕಡಿಮೆಯಾಗಿ, ವಿಶ್ರಾಂತ ಸ್ಥಿತಿಯಲ್ಲಿದ್ದರೆ ಎಚ್ಚರ ತಪ್ಪುವ ಘಟನೆಗಳನ್ನು ಕಡಿಮೆ ಮಾಡಬಹುದು. ಹಾಗಾಗಿ ಮಾಮೂಲಿಯಾಗಿ ಸೇವಿಸುವ ಔಷಧಗಳ ಜೊತೆಯಲ್ಲಿ, ಮೈಮನಗಳನ್ನು ರಿಲ್ಯಾಕ್ಸ್‌ ಮಾಡುವಂಥ ಈ ರೀತಿಯ ಯಾವುದೇ ತಂತ್ರಗಳು ಅವರಿಗೆ ಪೂರಕವಾಗಬಲ್ಲವು.

ಕಾರ್ಟಿಸೋಲ್‌ ಕಡಿತ

ಒತ್ತಡದ ಸಂದರ್ಭದಲ್ಲಿ ಬಿಡುಗಡೆಯಾಗುವ ಕಾರ್ಟಿಸೋಲ್‌ ಚೋದಕವನ್ನು ಕಡಿಮೆ ಮಾಡುವುದಕ್ಕೂ ಭಾರದ ಹೊದಿಕೆಗಳು ಸಮರ್ಥವಾಗಿವೆ. ರಕ್ತದಲ್ಲಿ ಕಾರ್ಟಿಸೋಲ್‌ ಪ್ರಮಾಣ ಹೆಚ್ಚುವುದರಿಂದ ತೂಕ ಹೆಚ್ಚಳ, ಮಧುಮೇಹ, ಹೃದ್ರೋಗದಂಥ ಹಲವಾರು ಸಮಸ್ಯೆಗಳು ಅಮರಿಕೊಳ್ಳುತ್ತವೆ. ಹಾಗಾಗಿ ದೇಹವನ್ನು ಗಾಢವಾದ ವಿಶ್ರಾಂತ ಸ್ಥಿತಿಗೆ ಒಯ್ಯುವುದರಿಂದ ಕಾರ್ಟಿಸೋಲ್‌ ಸ್ರವಿಸುವುದನ್ನು ಕಡಿತ ಮಾಡಬಹುದು.

ಇದನ್ನೂ ಓದಿ: Bruxism: ನಿದ್ದೆಯಲ್ಲಿ ಹಲ್ಲು ಕಡಿಯುತ್ತೀರಾ? ಇದಕ್ಕಿದೆ ಪರಿಹಾರ!

Exit mobile version