Site icon Vistara News

Year Ender 2023: ಈ ವರ್ಷ ಗಮನ ಸೆಳೆದ ಹೊಸ ಫಿಟ್ನೆಸ್‌ ತಂತ್ರಗಳಿವು

fitness techniques

ಎಲ್ಲೆಡೆ ಜನ ಫಿಟ್ನೆಸ್‌ ಮಂತ್ರ ಜಪಿಸುತ್ತಿರುವ ದಿನಗಳಿವು. ಬದುಕಿನ ಉಳಿದೆಲ್ಲಾ ರಂಗಗಳಲ್ಲಿ ಆದಂತೆಯೇ ಫಿಟ್ನೆಸ್‌ ಕ್ಷೇತ್ರದಲ್ಲೂ ಕೆಲವು ಆಸಕ್ತಿಕರ ಬದಲಾವಣೆಗಳನ್ನು 2023ನೇ ಸಾಲಿನಲ್ಲಿ (Year Ender 2023) ಗುರುತಿಸಬಹುದು. ಎಂದಿನಂತೆ ಹೊಸ ಅಲೆಗಳೇನೇ ಇದ್ದರೂ ಅವೆಲ್ಲ ಸಾಮಾಜಿಕ ಮಾಧ್ಯಮಗಳಲ್ಲಿ ಗದ್ದಲ ಮಾಡಿದ್ದು, ಈ ಮೂಲಕ ಬಹಳಷ್ಟು ಕುತೂಹಲಿಗಳನ್ನು ತಲುಪಿವೆ. ಸರಿಯುತ್ತಿರುವ ಈ ಸಾಲಿನಲ್ಲಿ ಗಮನ ಸೆಳೆದಂಥ ಫಿಟ್ನೆಸ್‌ ವಿಷಯಗಳೇನು ಎಂಬ ಮಾಹಿತಿಯಿದು.

ಚುಟುಕು ವರ್ಕೌಟ್‌

ಪ್ರತಿದಿನ ವ್ಯಾಯಾಮ ಮಾಡಬೇಕು, ಖರೆ. ಆದರೆ ಬೆಳಗ್ಗೆ ಅಥವಾ ಸಂಜೆ ಒಂದೊಂದು ತಾಸು ಸಮಯ ಕೊಡಲಾಗದು ಎನ್ನುವವರೇ ಹೆಚ್ಚು. ಅಂಥವರಿಗಾಗಿ ಚುಟುಕು ವರ್ಕೌಟ್‌ಗಳು ಹೆಚ್ಚು ಪ್ರಚಾರ ಪಡೆಯುತ್ತಿವೆ. ಒಮ್ಮೆಗೆ ಒಂದು ತಾಸು ಸಮಯ ನೀಡಲಾಗದಿದ್ದರೆ, 10 ಅಥವಾ 15 ನಿಮಿಷಗಳ ವ್ಯಾಯಾಮವನ್ನು ದಿನಕ್ಕೆ ನಾಲ್ಕಾರು ಬಾರಿ ಮಾಡುವುದು. ಮನೆಯಲ್ಲಿ ಇದ್ದಾಗ, ಆಫೀಸ್‌ನಲ್ಲಿದ್ದಾಗ, ಎಲ್ಲೋ ಪ್ರಯಾಣ ಮಾಡುತ್ತಿದ್ದರೆ… ಹೀಗೆ ಎಲ್ಲಾದರೂ ಸೈ. ಆಗಾಗ ಹತ್ತು ನಿಮಿಷದ ಸಮಯ ಕೂಡಿಸಿಕೊಂಡು, ದಿನದ ಕೊನೆಗೆ ಒಂದು ತಾಸಿನ ವ್ಯಾಯಾಮದ ಕೋಟಾ ಮುಗಿಸುವುದು ಬಹಳಷ್ಟು ಮಂದಿಯನ್ನು ಆಕರ್ಷಿಸಿದೆ. ಒಮ್ಮೆ ದೇಹದ ಮೇಲ್ಭಾಗಕ್ಕೆ, ಇನ್ನೊಮ್ಮೆ ಕೆಳಭಾಗಕ್ಕೆ, ಮತ್ತೆ ಬೆನ್ನಿಗೆ, ಮತ್ತೊಮ್ಮೆ ಕೀಲುಗಳಿಗೆ- ಹೀಗೂ ವ್ಯಾಯಾಮ ಮಾಡುವವರಿದ್ದಾರೆ. ಒಟ್ಟಿಗೆ ಹೆಚ್ಚು ಸಮಯ ಕೇಳದಿರುವ ಈ ಕಿರು ವ್ಯಾಯಾಮಗಳು ಹೊರೆಯೆನ್ನಿಸದೆ ಜನರನ್ನು ಚಟುವಟಿಕೆಯಲ್ಲಿ ಇರಿಸುತ್ತಿವೆ.

ಗೇಮ್‌-ಫಿಟ್ನೆಸ್‌

ಒಂದಿಷ್ಟು ವಿಡಿಯೊ ಗೇಮ್‌ಗಳ ನೆವದಲ್ಲಿ ಆಟದೊಟ್ಟಿಗೆ ಓಟ! ಆಡುತ್ತಾ ಹೆಚ್ಚಿನ ಅಂಕ ಅಥವಾ ಪದಕಗಳಿಗಾಗಿ ಓಡಬೇಕು, ಹಾರಿ-ಕುಣಿದು-ಕುಪ್ಪಳಿಸಿ-ಎದ್ದು-ಕೂತು ಇಂಥವೆಲ್ಲಾ ಮಾಡಬೇಕು. ಇವೆಲ್ಲಾ ಗೇಮ್‌ ನೆವದಲ್ಲಿ ಮೂಡಿಬಂದ ಫಿಟ್ನೆಸ್‌ ತಂತ್ರಗಳು. ಜೊತೆಗೆ ಫಿಟ್ನೆಸ್‌ ಟ್ರಾಕರ್‌ಗಳು ಸಹ ದಿನಕ್ಕಿಷ್ಟು ಹೆಜ್ಜೆ, ಇಷ್ಟು ನೀರು, ಇಷ್ಟು ನಿದ್ದೆ ಎನ್ನುತ್ತಾ ಆರೋಗ್ಯ ಸುಧಾರಣೆಗೆ ನೆರವು ನೀಡುತ್ತವೆ. ಇದಲ್ಲದೆ, ಬಳಕೆದಾರರದ್ದೇ ಗ್ರೂಪ್‌ಗಳಿದ್ದರೆ ಆ ಗುಂಪುಗಳ ಇತರ ಸದಸ್ಯರು ಅಥವಾ ಕುಟುಂಬದವರಲ್ಲಿ ಯಾರು ಹೆಚ್ಚು ಫಿಟ್ನೆಸ್‌ ಗುರಿಗಳನ್ನು ಮುಟ್ಟುತ್ತಾರೆಂಬ ಸ್ಪರ್ಧೆ ಒಡ್ಡಲೂ ಪ್ರೋತ್ಸಾಹಿಸುತ್ತವೆ ಈ ಆಪ್‌ಗಳು.

ವ್ಯಾಯಾಮದ ಗುಂಪುಗಳು

ಗ್ರೂಪ್‌ ಎಕ್ಸಸೈಜ್‌ ಕ್ಲಾಸ್‌ಗಳು ಹೊಸದೇನಲ್ಲ. ಬಹಳ ಕಾಲದಿಂದಲೂ ಅಲ್ಲಲ್ಲಿ ಚಾಲ್ತಿಯಲ್ಲಿದ್ದವು. ಇವೀಗ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ಜುಂಬಾ ಆಸಕ್ತರು, ಸೈಕ್ಲಿಂಗ್‌ ಗುಂಪುಗಳು, ಮ್ಯಾರಥಾನ್‌ ಪ್ರಿಯರು, ಚಾರಣದ ಉತ್ಸಾಹಿಗಳು… ಹೀಗೆ ಸಮಾನ ಮನಸ್ಕರ ಸಣ್ಣ-ದೊಡ್ಡ ಗುಂಪುಗಳು ನಿರ್ಮಾಣವಾಗುತ್ತಿವೆ. ಒಟ್ಟಿಗೆ ನಡೆಯುವುದು, ಓಡುವುದು, ಕುಣಿಯುವುದು ಇಂಥವೆಲ್ಲ ಆರೋಗ್ಯಕರ ಸಾಮಾಜಿಕ ಬದುಕನ್ನು ಕಲ್ಪಿಸುವುದರ ಜೊತೆಗೆ, ಗಟ್ಟಿಮುಟ್ಟಾದ ಆರೋಗ್ಯವನ್ನೂ ನೀಡುತ್ತಿವೆ.

ದೇಹ-ತೂಕದ ವ್ಯಾಯಾಮ

ತೂಕ ಎತ್ತಿ ವ್ಯಾಯಾಮ ಮಾಡುವುದು ಎಲ್ಲರಿಗೂ ಗೊತ್ತು. ಇದೇನು ದೇಹ-ತೂಕದ ವ್ಯಾಯಾಮ ಎಂದರೆ, ಇದೀಗ ಇತ್ತೀಚಿನ ಹೊಸ ಅಲೆ. ತೂಕ ಎತ್ತುವ ವ್ಯಾಯಾಮಕ್ಕೆ ಅಂಥ ಉಪಕರಣಗಳು ಮನೆಯಲ್ಲಾದರೂ ಬೇಕು. ಇಲ್ಲವೇ ಜಿಮ್‌ಗೆ ಹೋಗಬೇಕು. ಆದರೆ ನಮ್ಮ ದೇಹವನ್ನೇ ತೂಕದ ಉಪಕರಣ ಎಂದು ಭಾವಿಸಿದರೆ? ಹೌದು! ಬೇರಾವುದೇ ತೂಕದ ಉಪಕರಣಗಳಿಲ್ಲದೆ, ರೆಸಿಸ್ಟೆನ್ಸ್‌ ಬ್ಯಾಂಡ್‌ಗಳಿಲ್ಲದೆ ನಮ್ಮ ದೇಹವನ್ನೇ ನಮ್ಮ ವ್ಯಾಯಾಮದ ಉಪಕರಣವಾಗಿ ಬಳಸಿಕೊಂಡು ಹಲವಾರು ಬಗೆಯ ವ್ಯಾಯಾಮಗಳನ್ನು ಮಾಡಬಹುದು. ಇದರಿಂದಲೇ ಶಕ್ತಿ ಹೆಚ್ಚಿಸಿ, ಕ್ಯಾಲರಿ ದಹಿಸಿ, ಸಮತೋಲನವನ್ನೂ ವೃದ್ಧಿಸಿಕೊಳ್ಳಬಹುದು. ಇವೆಲ್ಲ ಒಂದು ರೀತಿಯಲ್ಲಿ ಐಸೋಮೆಟ್ರಿಕ್‌ ತಂತ್ರವನ್ನು ಅನುಸರಿಸುತ್ತವೆ. ಆದರೆ ನಮ್ಮ ದೇಹವನ್ನು ಬಳಸಿ ವ್ಯಾಯಾಮ ಮಾಡುವ ಕ್ರಮ ಪರಿಣಾಮಕಾರಿಯಾಗಿ ಇರುವುದಂತೂ ಹೌದು.

ಅಣಕು ವ್ಯಾಯಾಮಗಳು

ಅಂದರೆ ವ್ಯಾಯಾಮವನ್ನು ಅಣಕಿಸುವುದಲ್ಲ. ರಾಗಿ ಕಲ್ಲಿನಲ್ಲಿ ಬೀಸಿ, ಸೌದೆ ಒಡೆದು, ಒನಕೆಯಲ್ಲಿ ಕುಟ್ಟಿ… ಇಂಥ ಶ್ರಮದಾಯಕ ಕೆಲಸಗಳನ್ನು ಮಾಡದೆಯೇ ಅದರಂತೆ ಅಣಕು ಕ್ರಿಯೆಗಳ ಮೂಲಕ ವ್ಯಾಯಾಮ ಮಾಡುವುದು. ಇದು ಕೇವಲ ನಟಿಸುವುದಲ್ಲ, ಸೌದೆ ಒಡೆದಂತೆ ಮಾಡಿ ದೇಹವನ್ನು ದಂಡಿಸಿದಾಗ ಮೈಯಲ್ಲಿ ಬೆವರು ಹರಿಯಬೇಕು. ಇದರಿಂದ ಕೀಲುಗಳು ಆರೋಗ್ಯಯುತವಾಗಿ, ಮಾಂಸಖಂಡಗಳ ಬಲವನ್ನೂ ವೃದ್ಧಿಸಿಕೊಂಡವರಿದ್ದಾರೆ.

ಇದನ್ನೂ ಓದಿ: Health Tips for Winter: ಚಳಿಗಾಲದಲ್ಲಿ ನ್ಯುಮೋನಿಯಾ, ಶ್ವಾಸಕೋಶದ ಸಮಸ್ಯೆಗಳಿಂದ ದೂರ ಇರಲು ಹೀಗೆ ಮಾಡಿ…

Exit mobile version