Site icon Vistara News

Nipah virus: ನಿಪಾ ವೈರಸ್‌ ಬಗ್ಗೆ ನಿಗಾ ಇರಲಿ! ಇದರ ಲಕ್ಷಣವೇನು? ಕೋವಿಡ್‌ಗೂ ಅದಕ್ಕೂ ವ್ಯತ್ಯಾಸವೇನು? ಇಲ್ಲಿದೆ ವಿವರ

Nipah Virus

One more Nipah virus case confirmed in Kerala, Governmets Shuts Shools

ಬೆಂಗಳೂರು: ಕೇರಳದಲ್ಲಿ ನಿಪಾ ವೈರಸ್‌ (Nipah virus) ಪೀಡಿತವಾಗಿರುವ 5ನೇ ಪ್ರಕರಣ ಪತ್ತೆಯಾಗಿದೆ. ನಿಪಾ ರೋಗಿಯೊಂದಿಗೆ ನಿಕಟ ಸಂಪರ್ಕಕ್ಕೆ ಬಂದ 24 ವರ್ಷದ ಆರೋಗ್ಯ ಕಾರ್ಯಕರ್ತರಿಗೂ ಇದು ಅಂಟಿಕೊಂಡಿದ್ದು, ರಾಜ್ಯದಲ್ಲಿ ಒಟ್ಟು ಪಾಸಿಟಿವ್ (nipah positive) ಪ್ರಕರಣಗಳ ಸಂಖ್ಯೆ ಐದಾಗಿದೆ.

ನಿಪಾ ವೈರಸ್ ಹರಡುವುದನ್ನು ತಡೆಯಲು ಕೇರಳ ರಾಜ್ಯ ಸರ್ಕಾರ ಕಂಟೈನ್‌ಮೆಂಟ್ ಝೋನ್‌ಗಳು ಮತ್ತು ನಿರ್ಬಂಧಗಳನ್ನು ಘೋಷಿಸಿದೆ. ಸುಮಾರು 700 ಜನರು ರೋಗಿಗಳ ಸಂಪರ್ಕಕ್ಕೆ ಬಂದಿದ್ದು, ಇವರನ್ನು ಟ್ರ್ಯಾಕಿಂಗ್‌ ಮಾಡಲಾಗುತ್ತಿದೆ. ಈ 700 ಮಂದಿಯಲ್ಲಿ ಸುಮಾರು 77 ಮಂದಿ ಹೈರಿಸ್ಕ್ ವಿಭಾಗದಲ್ಲಿದ್ದಾರೆ ಎಂದು ಕೇರಳ ಆರೋಗ್ಯ ಸಚಿವೆ ವೀಣಾ ಜಾರ್ಜ್ ಹೇಳಿದ್ದಾರೆ.

ಏನಿದು ನಿಪಾ ವೈರಸ್?

ನಿಪಾ ವೈರಸ್ (NiV) ಅನ್ನು ಝೂನೋಟಿಕ್ ವೈರಸ್ (Zoonotic virus) ಎಂದು ವಿವರಿಸಬಹುದು. ಹಣ್ಣಿನ ಬಾವಲಿಗಳು (Fruit bats) ಇದರ ಮೂಲ. ಇದು ಪ್ರಾಣಿಗಳ ಮೂಲಕ ಮನುಷ್ಯರಿಗೆ ಹರಡುತ್ತದೆ. ಬಾವಲಿಗಳು ಮತ್ತು ಹಂದಿಗಳಿಂದ ಹರಡುತ್ತದೆ. ಇದು ಮನುಷ್ಯರಿಗೆ ಮಾತ್ರವಲ್ಲ ಪ್ರಾಣಿಗಳಿಗೂ ಮಾರಕ. ಕಲುಷಿತ ಆಹಾರದ ಮೂಲಕ ಅಥವಾ ನೇರ ಸಂಪರ್ಕದ ಮೂಲಕ ಜನರ ನಡುವೆ ಹರಡಬಹುದು. ಇದರ ಸೋಂಕಿಗೆ ಒಳಗಾದವರು ತೀವ್ರವಾದ ಉಸಿರಾಟದ ಸಮಸ್ಯೆ ಎದುರಿಸಬಹುದು. ಮಾರಣಾಂತಿಕ ಎನ್ಸೆಫಲೈಟಿಸ್‌ನಂತಹ ತೀವ್ರ ಸಮಸ್ಯೆಗಳನ್ನು ಎದುರಿಸಬಹುದು. ಇದು ವಾಯುವಿನ ಮೂಲಕ ಹರಡುವ ಸೋಕು ಅಲ್ಲ.

ನಿಪಾ ವೈರಸ್‌ನ ಲಕ್ಷಣಗಳು

ನಿಪಾ ವೈರಸ್ ಸೋಂಕಿತರು ಕೋವಿಡ್ (covid- 19 virus) ತರಹದ ರೋಗಲಕ್ಷಣಗಳನ್ನು (Nipah virus symptoms) ಪ್ರದರ್ಶಿಸಬಹುದು. ನಿಪಾ ವೈರಸ್‌ನ ಸಾಮಾನ್ಯ ಲಕ್ಷಣಗಳೆಂದರೆ ಕೆಮ್ಮು, ನೋಯುತ್ತಿರುವ ಗಂಟಲು, ತಲೆತಿರುಗುವಿಕೆ, ಅರೆಮಂಪರು, ಸ್ನಾಯು ನೋವು, ದಣಿವು. ಮೆದುಳಿನ ಊತದ ಪರಿಣಾಮ ತಲೆನೋವು, ಕುತ್ತಿಗೆ ಬಿಗಿತ, ಬೆಳಕಿಗೆ ಕಿರಿಕಿರಿ, ಮಾನಸಿಕ ಗೊಂದಲ ಮತ್ತು ಸುಸ್ತು ಕಾಣಿಸಿಕೊಳ್ಳಬಹುದು. ಇದು ಗಂಭೀರ ಸ್ಥಿತಿಗೆ ಹೋದಾಗ ಪ್ರಜ್ಞಾಹೀನರಾಗಬಹುದು; ಅಂತಿಮವಾಗಿ ಸಾವಿಗೂ ಕಾರಣವಾಗಬಹುದು. ಆದರೆ ಕೋವಿಡ್‌ನಂತೆ ಇದರಲ್ಲಿ ವ್ಯಕ್ತಿ ವಾಸನೆ, ರುಚಿ ಕಳೆದುಕೊಳ್ಳುವುದಿಲ್ಲ. ಆದರೆ ಜ್ವರ ತೀವ್ರಗೊಂಡಾಗ ಸಹಜವಾಗಿಯೇ ರುಚಿಶಕ್ತಿ ಹಾಗೂ ಘ್ರಾಣಶಕ್ತಿ ಕಡಿಮೆಯಾಗಬಹುದು.

ಚಿಕಿತ್ಸೆ ಏನು?

ಈ ವೈರಸ್‌ಗೆ ಯಾವುದೇ ಯಶಸ್ವಿ ನಿರ್ದಿಷ್ಟ ಚಿಕಿತ್ಸೆ ಲಭ್ಯವಿಲ್ಲ. ಯಾವುದೇ ಲಸಿಕೆಯನ್ನೂ ಇನ್ನೂ ಕಂಡುಹಿಡಿದಿಲ್ಲ. ಮೇಲಿನ ರೋಗಲಕ್ಷಣಗಳನ್ನು ಗುರುತಿಸಿದರೆ ವೈದ್ಯರನ್ನು ತಕ್ಷಣ ಸಂಪರ್ಕಿಸಬೇಕು. ಎನ್ಸೆಫಲೈಟಿಸ್ ಮತ್ತು ಇತರ ರೋಗಲಕ್ಷಣಗಳ ಚಿಕಿತ್ಸೆಗೆ ವೈದ್ಯರು ಔಷಧಿಗಳನ್ನು ಸಹ ಶಿಫಾರಸು ಮಾಡುತ್ತಾರೆ. ಸ್ವಯಂ-ಔಷಧಿ ಮಾಡಬೇಡಿ. ಅದು ಅಪಾಯಕಾರಿ ಮತ್ತು ಸ್ಥಿತಿಯನ್ನು ಇನ್ನಷ್ಟು ಹದಗೆಡಿಸಬಹುದು.

ಮುನ್ನೆಚ್ಚರಿಕೆ ಏನು?

ನೆಲದ ಮೇಲೆ ಬಿದ್ದಿರುವ ಪೇರಳೆ ಮುಂತಾದ ಹಣ್ಣುಗಳನ್ನು ತಿನ್ನುವುದನ್ನು ತಪ್ಪಿಸಿ. ಏಕೆಂದರೆ ಅವು ಕಲುಷಿತವಾಗಿರಬಹುದು. ವೈರಸ್‌ ಹೊಂದಿರುವ ಬಾವಲಿ ಅದನ್ನು ಕಚ್ಚಿರಬಹುದು. ಸೋಂಕಿತ ಪ್ರಾಣಿಗಳು ಮತ್ತು ಮನುಷ್ಯರ ಸಂಪರ್ಕಕ್ಕೆ ಬರುವುದನ್ನು ತಪ್ಪಿಸಿ. ಹಣ್ಣಿನ ಬಾವಲಿಗಳನ್ನು ನಿಮ್ಮಿಂದ ದೂರವಿಡಿ. ಹಂದಿ ಮಾಂಸ ಸೇವನೆಯನ್ನೂ ದೂರವಿಡಿ. ರೋಗಲಕ್ಷಣಗಳ ಬಗ್ಗೆ ಅನುಮಾನ ಹೊಂದಿದ್ದರೆ ವೈದ್ಯರನ್ನು ಸಂಪರ್ಕಿಸಿ.

ಇದನ್ನೂ ಓದಿ: Nipah Virus: ಕೇರಳದಲ್ಲಿ ನಿಫಾ ವೈರಸ್‌ ಹಾವಳಿ; ಸೋಂಕಿತರ ಸಂಖ್ಯೆ 5ಕ್ಕೆ ಏರಿಕೆ, ಲಾಕ್‌ಡೌನ್ ಜಾರಿ?

Exit mobile version