Site icon Vistara News

No Diet Day: ಬೇಕಾಬಿಟ್ಟಿ ಡಯಟ್‌ ಮಾಡಿದರೆ ಏನಾಗುತ್ತದೆ? ಈ ಸಂಗತಿ ತಿಳಿದಿರಲಿ

No Diet Day

ಡಯಟ್‌ ಎಂಬುದು ಇಂದಿನ ಜೀವನಶೈಲಿಯ ಭಾಗವಾಗಿ ಮಾರ್ಪಟ್ಟಿದೆ. ಏನು ತಿನ್ನಬೇಕು? ಏಷ್ಟು ತಿನ್ನಬೇಕು..? ಎಂಬುದರ ಕುರಿತಂತೆ ತರಹೇವಾರಿ ಪುಕ್ಕಟೆ ಸಲಹೆಗಳು ಇಂಟರ್‌ನೆಟ್‌ ತುಂಬಾ ಹರದಾಡುತ್ತವೆ. ಇಂಥ ಸಮಯದಲ್ಲಿ ಹಲವರು ತಪ್ಪು ಸಲಹೆಗಳಿಂದ ಬೇಗ ತೂಕ ಇಳಿಸಿಕೊಳ್ಳುವ ಆಹಾರ ಕ್ರಮಗಳನ್ನು ಅನುಸರಿಸುತ್ತಾರೆ, ಇದರಿಂದ ತೂಕ ಕಡಿಮೆಯಾಗುವ ಬದಲು ಆಸ್ಪತ್ರೆಗೆ ಸೇರಬೇಕಾದ ಪರಿಸ್ಥಿತಿ ಎದುರಾಗುತ್ತದೆ. ಡಯಟ್ ಮಾಡುವುದು ಮುಖ್ಯ, ಆದರೆ ಪರಿಶೀಲಿಸದೆ ವಾಟ್ಸಾಪ್ ಅಥವಾ ಬೇರೆ ಎಲ್ಲೋ ಕೇಳಿದ ಮಾಹಿತಿಯನ್ನು ಅನುಸರಿಸುವುದಕ್ಕಿಂತ, ನಿಪುಣ ಆಹಾರ ತಜ್ಞರು ಅಥವಾ ವೈದ್ಯರ ಶಿಫಾರಸ್ಸುಗಳನ್ನು ಪಾಲಿಸುವುದು (No Diet Day) ಮುಖ್ಯವಾಗಿರುತ್ತದೆ.

ಪ್ರತಿ ವರ್ಷ ಮೇ 6 ರಂದು ಅಂತಾರಾಷ್ಟ್ರೀಯ ನೋ ಡಯಟ್ ದಿನವನ್ನು ಆಚರಿಸಲಾಗುತ್ತದೆ. ಈ ಮೂಲಕ ಉತ್ತಮ ಆಹಾರ ಸೇವನೆಯೊಂದಿಗೆ ಆರೋಗ್ಯಕರ ಜೀವನಶೈಲಿಯನ್ನು ರೂಢಿಸಿಕೊಳ್ಳಲು ಪ್ರೇರಣೆ ನೀಡುವುದಾಗಿದೆ. ಈ ಕುರಿತಂತೆ ಕಿಂಡರ್‌ ಆಸ್ಪತ್ರೆಯ ಡಯಟಿಷಿಯನ್ ತಜ್ಞೆ ಆಗಿರುವ ಡಾ. ಸಂಜನಾ ಪ್ರೇಮಲಾಲ್‌ ಮಾತನಾಡಿ, ಎಲ್ಲದಕ್ಕೂ ಡಯಟ್‌ ನೆಪವೊಡ್ಡಿ ನಿರಾಕರಿಸುವುದಕ್ಕಿಂತ ಸಮತೋಲಿತ ಪೋಷಣೆಯುಳ್ಳ ಆಹಾರ ಸೇವನೆಯ ಬಗ್ಗೆ ಈ ದಿನ ಅರಿವು ಮೂಡಿಸುವುದಾಗಿದೆ.
ಸಾಮಾನ್ಯವಾಗಿ ಬಹುಪಾಲು ಜನರ ಡಯಟ್‌ ಕೆಲ ದಿನ, ತಿಂಗಳು ಅವಧಿಗೆ ಮಾತ್ರ ಸೀಮಿತವಾಗಿರುತ್ತದೆ. ತೂಕ ಇಳಿಸಿಕೊಳ್ಳಲು ಅಥವಾ ಸಮಾಜದಲ್ಲಿ ದೈಹಿಕ ಸೌಂದರ್ಯಕ್ಕೆ ಪ್ರಾಧಾನ್ಯತೆ ನೀಡಲಾಗುತ್ತದೆ ಎಂಬ ಕಾರಣಕ್ಕೆ. ಆದ್ರೆ ನೋ ಡಯಟ್‌ ಡೇ ದೈಹಿಕ ಕ್ಷಮತೆ ಕಾಪಾಡಿಕೊಳ್ಳುವುದರ ಜೊತೆಗೆ ಕೆಟ್ಟ ಡಯಟ್‌ ಪದ್ಧತಿಗಳನ್ನ ತಿರಸ್ಕರಿಸುವ ಕುರಿತಂತೆ ಜಾಗೃತಿ ಮೂಡಿಸುತ್ತದೆ ಎಂದವರು ಹೇಳುತ್ತಾರೆ.

ಅಸಂಬದ್ಧ ಡಯಟ್‌ನಿಂದ ಆಸ್ಪತ್ರೆ ಸೇರಬಹುದು

ಹಲವು ಕಾರಣಗಳಿಗಾಗಿ ಆರೋಗ್ಯಕರವಲ್ಲದ ಡಯಟ್‌ ಮಾಡಿ ಜನರು ಆಸ್ಪತ್ರೆಗೆ ದಾಖಲಾಗುತ್ತಾರೆ. ಸಾಮಾನ್ಯ ಸನ್ನಿವೇಶಗಳಲ್ಲಿ ಅಗತ್ಯ ಪೋಷಕಾಂಶಗಳನ್ನ ಸೇವಿಸದೆ, ಕ್ಯಾಲೋರಿಗಳುಳ್ಳ ಆಹಾರದಿಂದ ದೂರ ಉಳಿಯುವ ಮೂಲಕ ಅಪೌಷ್ಟಿಕತೆಗೆ ತುತ್ತಾಗುತ್ತಾರೆ. ಇದಲ್ಲದೆ, ಬಹುಅಂಗಾಂಗ ವೈಫಲ್ಯ ಉಂಟಾಗಬಹುದು. ಎಲೆಕ್ಟ್ರೋಲೈಟ್‌ ಅಸಮತೋಲನ, ಹೃದಯಾಘಾತ ಹಾಗೂ ಮೂತ್ರಪಿಂಡದ ಸಮಸ್ಯೆಗಳು ಕೂಡ ಎದುರಾಗುತ್ತವೆ. ಅಗತ್ಯ ಆಹಾರ ಪದಾರ್ಥಗಳನ್ನು ಸೇವಿಸದಿದ್ದರೆ, ನಿರ್ಜಲೀಕರಣ, ದೌರ್ಬಲ್ಯ, ವಾಕರಿಕೆ, ಮಲಬದ್ಧತೆ ಜೊತೆಗೆ ವಿಟಮಿನ್ಸ್‌ ಹಾಗೂ ಖನಿಜಗಳ ಅಸರ್ಮಕ ಸೇವನೆಯಿಂದ ಪೋಷಕಾಂಶಗಳ ಕೊರತೆ ಉಂಟಾಗುತ್ತದೆ. ಉತ್ತಮ ಆಹಾರ ಸೇವನೆಯನ್ನು ಬಿಡುವುದು ಎಂದರೆ ದೇಹದ ರಕ್ಷಣಾ ವ್ಯವಸ್ಥೆಗೆ ಹಾನಿ ಮಾಡುವುದಾಗಿದೆ. ಉತ್ತಮ ಆಹಾರ ಪದ್ದತಿ ದೀರ್ಘಕಾಲ ಪರಿಣಾಮಕಾರಿಯಾಗುವುದರ ಜೊತೆಗೆ ಸಮತೋಲಿತ ಆಹಾರ ಕ್ರಮವನ್ನು ಅಳವಡಿಸಿಕೊಳ್ಳುವ ಅಗತ್ಯವನ್ನು ಎತ್ತಿ ತೋರಿಸುತ್ತದೆ ಎಂದು ಡಾ. ಸಂಜನಾ ಪ್ರೇಮ್‌ಲಾಲ್‌ ಹೇಳಿದರು.

ಸೇವನೆಯಲ್ಲಿ ತಪ್ಪಾದ ಕ್ರಮಗಳು

ಅತಿಯಾದ ಡಯಟ್‌ನಿಂದಾಗಿ ಅನೋರೆಕ್ಸಿಯಾ ನರ್ವೋಸಾ ಅಥವಾ ಬುಲಿಮಿಯಾ ನರ್ವೋಸಾದಂತಹ ಸೇವನೆಯ ಅಸ್ವಸ್ಥತೆ ಉಂಟಾಗುತ್ತದೆ. ಇದರಿಂದ ಗಂಭೀರವಾದ ದೈಹಿಕ ಮತ್ತು ಮಾನಸಿಕ ಪರಿಣಾಮಗಳು ಉಂಟಾಗುತ್ತವೆ. ಆಗ ವೈದ್ಯರ ಸಲಹೆ ಹಾಗೂ ಚಿಕಿತ್ಸೆಯ ಮೊರೆ ಹೋಗುವುದು ಅನಿವಾರ್ಯವಾಗುತ್ತದೆ. ಕೆಲ ಸಂದರ್ಭಗಳಲ್ಲಿ ಅಸಮರ್ಪಕ ಪೋಷಣೆಯೊಂದಿಗೆ ಅತಿಯಾದ ವ್ಯಾಯಾಮದಿಂದ ಗಾಯಗಳು, ನಿರ್ಜಲೀಕರಣ ಮತ್ತು ಎಲೆಕ್ಟ್ರೋಲೈಟ್ ಅಸಮತೋಲನ ಕೂಡ ಉಂಟಾಗುತ್ತದೆ. ಆಗ ವೈದ್ಯರನ್ನ ಕಾಣಬೇಕಾಗುತ್ತದೆ. ತಪ್ಪಾದ ಡಯಟ್ನಿಂದ ಆಸ್ಪತ್ರೆಗೆ ದಾಖಲಾಗುವುದನ್ನು ತಪ್ಪಿಸಲು ನಿಪುಣ ಆರೋಗ್ಯ ತಜ್ಞರಿಂದ ಮಾಗರ್ದರ್ಶನ ಪಡೆದುಕೊಳ್ಳುವುದು ಮುಖ್ಯವಾಗಿರುತ್ತದೆ. ಜೊತೆಗೆ ಪೋಷಣೆ ಹಾಗೂ ತೂಕ ನಿರ್ವಹಣೆಗೆ ಸಮತೋಲಿತ ಆಹಾರ ಸೇವನೆಯ ವಿಧಾನಗಳನ್ನು ಅಳವಡಿಸಿಕೊಳ್ಳಬೇಕು ಎಂದು ಡಾ. ಸಂಜನಾ ಪ್ರೇಮ್‌ಲಾಲ್ ಸಲಹೆ ನೀಡುತ್ತಾರೆ.

ಋಣಾತ್ಮಕ ಪರಿಣಾಮಗಳು

ತಪ್ಪಾದ ಡಯಟ್‌ ಅನುಸರಿಸುವುದು ಹಾಗೂ ಕಡಿಮೆ ಕ್ಯಾಲೋರಿ ಆಹಾರ ಸೇವನೆಯಿಂದ ದೈಹಿಕ ಹಾಗೂ ಮಾನಸಿಕ ಆರೋಗ್ಯದ ಮೇಲೆ ನೆಗೆಟಿವ್ ಪರಿಣಾಮಗಳು ಉಂಟಾಗುತ್ತವೆ. ಅತೃಪ್ತಿ, ಸ್ವಗೌರವ ಕಡಿಮೆ ಆಗುವುದು, ತಿನ್ನುವ ಅಸ್ವಸ್ಥತೆ, ಮಾಂಸಖಂಡಗಳು ಬಲಹೀನವಾಗುವುದು, ಮೂಳೆಗಳು ದುರ್ಬಲಗೊಳ್ಳುವುದು, ಹೃದ್ರೋಗ ಹಾಗೂ ಹಾರ್ಮೋನ್‌ಗಳ ಅಸಮತೋಲನದಂತಹ ಹಾನಿಕಾರಕ ಅಡ್ಡಪರಿಣಾಮಗಳು ಎದುರಾಗುತ್ತವೆ. ಇವುಗಳನ್ನು ತಡೆಗಟ್ಟಲು ಕೆಟೋಜೆನಿಕ್‌ ಆಹಾರವನ್ನು ಸೇವಿಸುವುದು ಉತ್ತಮ ಪರಿಣಾಮಗಳನ್ನು ಉಂಟು ಮಾಡುತ್ತದೆ. ಆದರೆ ತುಂಬಾ ದಿನಗಳ ಕಾಲ ಸೇವಿಸುವುದರಿಂದ ಹೆಪಾಟಿಕ್ ಸ್ಟೀಟೋಸಿಸ್, ಮೂತ್ರಪಿಂಡದ ಕಲ್ಲುಗಳು, ಹೈಪೋಪ್ರೋಟೀನೆಮಿಯಾ ಮತ್ತು ವಿಟಮಿನ್ ಕೊರತೆಯಂತಹ ದೀರ್ಘಕಾಲಿಕ ಪರಿಣಾಮಗಳು ಎದುರಾಗುತ್ತವೆ. ಆಗ ಕೆಟೋಜೆನಿಕ್‌ ಆಹಾರ ಸೇವಿಸುವುದನ್ನು ನಿಲ್ಲಿಸಬೇಕಾಗುತ್ತದೆ ಎಂದು ಡಾ.. ಸಂಜನಾ ಪ್ರೇಮ್‌ಲಾಲ್‌ ಹೇಳುತ್ತಾರೆ

ಇದನ್ನೂ ಓದಿ: Pain Relievers: ಸೈಡ್‌ ಎಫೆಕ್ಟ್‌ ಇಲ್ಲದ ಪ್ರಕೃತಿದತ್ತ ನೋವು ನಿವಾರಕಗಳಿವು

ಪರಿಪೂರ್ಣ ಆರೋಗ್ಯ

ತಪ್ಪಾದ ಡಯಟ್ ಆರೋಗ್ಯ ಮತ್ತು ದೈಹಿಕ ಕ್ಷಮತೆಯ ಮೇಲೆ ದುಷ್ಪಾರಿಣಾಮವನ್ನು ಬೀರುತ್ತದೆ. ಹೀಗಾಗಿ ಜೀವಶೈಲಿಗೆ ಅನುಗುಣವಾಗಿ ಪೋಷಣೆಗೆ ಬೇಕಾದಂತಹ ಸಮತೋಲಿತ ಆಹಾರ ಸೇವಿಸುವ ವಿಧಾನಕ್ಕೆ ಆದ್ಯತೆ ನೀಡಿದರೆ ಹಲವು ಆರೋಗ್ಯಕರ ಪ್ರಯೋಜನಗಳನ್ನ ಪಡೆದುಕೊಳ್ಳಬಹುದು ಎನ್ನುತ್ತಾರೆ ಡಾ. ಸಂಜನಾ ಪ್ರೇಮ್‌ಲಾಲ್‌.

Exit mobile version