ಚಳಿಗಾಲದಲ್ಲಿ ಬಿಸಿಲಿಗೆ ಒಡ್ಡಿಕೊಳ್ಳಬೇಕೆಂಬ ಬಯಕೆ ಆಗುವುದು ಸಹಜ. ಇದಕ್ಕೆ ಪೂರಕವಾಗಿ, ಚಳಿಗಾಲದ ಜಡತೆಯನ್ನು ಓಡಿಸಲು ದಿನವೂ ಸ್ವಲ್ಪ ಹೊತ್ತು ಗಾಳಿ, ಬಿಸಿಲು ಮೈಮೇಲೆ ಬೀಳುವುದು ಅಗತ್ಯ ಎನ್ನುತ್ತದೆ ವಿಜ್ಞಾನ. ಅದಕ್ಕಿಂತ ಮುಖ್ಯವಾಗಿ ನಮ್ಮ ಶರೀರಕ್ಕೆ ಅಗತ್ಯವಾದ ಬೇಕಾದ ವಿಟಮಿನ್ ಡಿ ಸಮೃದ್ಧವಾಗಿ ದೊರೆಯುವುದೇ ಸೂರ್ಯನ ಬಿಸಿಲಿನಲ್ಲಿ. ಹಾಗಾಗಿ ಬಿಸಿಲಿಗೆ ಒಡ್ಡಿಕೊಳ್ಳುವುದು ಅಗತ್ಯ ಸಂಗತಿಗಳಲ್ಲಿ ಒಂದು. ಆದರೆ ಸೂರ್ಯನ ಕಿರಣಗಳು ಹಾನಿಯನ್ನೂ ಮಾಡುತ್ತದೆಂದು ತಜ್ಞರು ಎಚ್ಚರಿಕೆ ಕೊಡುತ್ತಾರಲ್ಲ. ಪದೇಪದೆ ಸನ್‌ಬ್ಲಾಕ್ ಹಚ್ಚುವ ಸಲಹೆಯನ್ನು ಸೌಂದರ್ಯೋಪಾಸಕರು ನೀಡುತ್ತಾರಲ್ಲ. ಹಾಗಾದರೆ ಯಾವುದು ಸರಿ, ಎಷ್ಟು ಸರಿ?
ಸೂರ್ಯನ ಬೆಳಕು ಅಗತ್ಯವೇಕೆ?
ದೇಹದ ರೋಗ ನಿರೋಧಕ ಶಕ್ತಿ ಜಾಗೃತವಾಗುವುದಕ್ಕೆ, ಮೂಳೆಗಳು ಗಟ್ಟಿ ಇರುವುದಕ್ಕೆ ಮತ್ತು ದೇಹ ಸ್ವಾಸ್ಥ್ಯ ಚೆನ್ನಾಗಿರುವುದಕ್ಕೆ ಸೂರ್ಯನ ರಶ್ಮಿ ನಮಗೆ ಅಗತ್ಯವಾಗಿ ಬೇಕು. ಇದಲ್ಲದೆ, ನಮ್ಮ ಸಂತೋಷವನ್ನು ವೃದ್ಧಿಸುವಂಥ ಸೆರೊಟೋನಿನ್ ಚೋದಕಗಳ ಉತ್ಪಾದನೆಗೆ ಬಿಸಿಲು ಪ್ರೋತ್ಸಾಹ ನೀಡುತ್ತದೆ. ಮೆದುಳು ಮತ್ತು ದೇಹಗಳಲ್ಲಿನ ಸಂಕೇತಗಳನ್ನು ರವಾನಿಸುವ ಕೆಲಸವೂ ಈ ಸೆರೊಟೋನಿನ್ ರಾಸಾಯನಿಕಕ್ಕಿದೆ. ಇದರಿಂದ ನಮ್ಮ ಮೂಡ್ ಸಹ ಸುಧಾರಿಸುತ್ತದೆ.
ಜೊತೆಗೆ, ದೇಹದ ಆಂತರಿಕ ಗಡಿಯಾರಕ್ಕೆ ಜೀವ ತುಂಬುವ ಕೆಲಸವನ್ನು ಸಹ ಬಿಸಿಲು ಮಾಡುತ್ತದೆ. ಅಂದರೆ, ದೇಹದ ಹಗಲು-ರಾತ್ರಿಗಳನ್ನು ನಿರ್ಧರಿಸುವ ಸರ್ಕಾಡಿಯನ್ ಲಯವನ್ನು ಇದು ನಿರ್ವಹಿಸುತ್ತವೆ. ಇದು ಸರಿಯಿಲ್ಲದಿದ್ದರೆ ನಿದ್ರೆ ಸೇರಿದಂತೆ ದೇಹದ ಬಹಳಷ್ಟು ಕೆಲಸಗಳು ಸರಿಯಾಗಿ ನಡೆಯುವುದಿಲ್ಲ. ಹಾಗಾಗಿ ಸೂರ್ಯನ ಬೆಳಕೆಂದು ಉಪೇಕ್ಷೆ ಮಾಡುವ, ʻಹಾಳಾದ ಬಿಸಿಲುʼ ಎಂದು ಬೈಯುವ ಹಾಗೂ ಇಲ್ಲ!
ಹೆಚ್ಚಾದರೇನಾಗುತ್ತದೆ?
ಅಮೃತವೂ ಹೆಚ್ಚಾದರೆ ವಿಷವೇ! ಬಿಸಿಲಿನಲ್ಲಿ ಇರುವ ಹಾನಿಕಾರರ ಅತಿನೇರಳೆ ಕಿರಣಗಳು ಚರ್ಮಕ್ಕೆ ಹಾನಿ ಮಾಡಬಹುದು. ದೀರ್ಘಕಾಲದವರೆಗೆ ಬಿಸಿಲಿನಲ್ಲಿದ್ದರೆ ನಿರ್ಜಲೀಕರಣ, ಸುಸ್ತು, ಆಯಾಸ, ಚರ್ಮ ಒಣಗುವುದು, ಸುಕ್ಕಾಗುವುದು, ವಯಸ್ಸಾದಂತೆ ಕಾಣುವುದು, ಸುಟ್ಟಂತಾಗುವುದು, ಕಪ್ಪು ಕಲೆಗಳು ಮುಂತಾದವು ಬಾಧಿಸಬಹುದು. ಕೆಲವೊಮ್ಮೆ ಚರ್ಮದ ಕ್ಯಾನ್ಸರ್ ಸಹ ಬೆನ್ನು ಬೀಳಬಹುದು. ವಿಶ್ವದಲ್ಲಿ ಸುಮಾರು 30 ಲಕ್ಷ ಮಂದಿ ಇದರಿಂದ ತೊಂದರೆಗೀಡಾಗಿದ್ದಾರೆ ಎನ್ನುತ್ತದೆ ವಿಶ್ವ ಆರೋಗ್ಯ ಸಂಸ್ಥೆ.
ಇದಿಷ್ಟೇ ಅಲ್ಲ. ಬಿಸಿಲಲ್ಲಿರುವ ಅತಿನೇರಳೆ ಕಿರಣಗಳಿಂದ ಕಣ್ಣುಗಳಿಗೂ ಸಂಕಷ್ಟ. ಕ್ಯಾಟರ್ಯಾಕ್ಟ್‌ನಂಥ ಸಮಸ್ಯೆಗಳು ಅವಧಿಗೆ ಮುಂಚಿತವಾಗಿಯೇ ವಕ್ಕರಿಸಿಕೊಳ್ಳುತ್ತವೆ. ಅದರಲ್ಲೂ ಬಿಸಿಲಿಗೆ ಎದುರಾಗಿ ದೀರ್ಘ ಸಮಯ ಕುಳಿತಿದ್ದರೆ ಸಮಸ್ಯೆಗಳು ಇನ್ನೂ ಹೆಚ್ಚು.
ಸಮತೋಲನ ಹೇಗೆ?
ಬಿಸಿಲು ಇಲ್ಲದಿದ್ದರೂ ಕಷ್ಟ; ಹೆಚ್ಚಾದರೂ ಕಷ್ಟ. ಹಾಗಾದರೇನು ಮಾಡಬೇಕು? ಸಮತೋಲ ತರುವುದು ಹೇಗೆ? ಯಾವ ಚರ್ಮಕ್ಕೆ ಎಷ್ಟು ಬಿಸಿಲು ಸುರಕ್ಷಿತ ಎಂದು ತಿಳಿಯುವುದು ಹೇಗೆ? ಕೆಲವರ ಚರ್ಮ ಬಿಸಿಲಿಗೆ ಬೇಗನೇ ಕೆಂಪಾಗುತ್ತದಲ್ಲ… ಆಗ? ಬಿಸಿಲಲ್ಲಿ ಎಷ್ಟು ನೀರು ಕುಡಿದರೂ ದಾಹವೇ ಹೋಗುವುದಿಲ್ಲವಲ್ಲ?
ಸಾಮಾನ್ಯವಾಗಿ, ದಿನಕ್ಕೆ 10-30 ನಿಮಿಷಗಳವರೆಗೆ ಬಿಸಿಲಲ್ಲಿದ್ದರೆ ಸಮಸ್ಯೆಗಳಿಲ್ಲ ಎನ್ನುತ್ತಾರೆ ತಜ್ಞರು. ವಾರದ ಅಷ್ಟೂ ದಿನಗಳು ಹೀಗೆ ಅಲ್ಪ ಕಾಲ ಬಿಸಿಲಿಗೆ ಬೀಳಬಹುದು. ಸಾಧ್ಯವಾದಷ್ಟೂ ಬೆಳಗಿನ ಹೊತ್ತು ಅಥವಾ ಸಂಜೆಯ ಹೊತ್ತು ಬಿಸಿಲಿಗೆ ಒಡ್ಡಿಕೊಳ್ಳಿ. ಅಂದರೆ ಬಿಸಿಲು ನೇರವಾಗಿ ಬೀಳುವಾಗ ಹೆಚ್ಚು ತೀಕ್ಷ್ಣವಾಗಿರುತ್ತದೆ. ಓರೆಯಾಗಿ ಬೀಳುವಾಗ ಸೌಮ್ಯವಾಗಿರುತ್ತದೆ. ಎಳೆ ಮಕ್ಕಳನ್ನು ಬಿಸಿಲಿಗೆ ಹಿಡಿಯುವಾಗಲೂ ಎಳೆ ಬಿಸಿಲು ಅಥವಾ ಇಳಿ ಬಿಸಿಲು ಸೂಕ್ತ.
ತ್ವಚೆಯ ಕಾಳಜಿ
ಬಿಸಿಲಿಗೆ ಹೋದಾಗ ಚರ್ಮ ಮೇಲೆ ಕೆಂಪಾಗುತ್ತದೆ, ಉರಿಯಾಗುತ್ತದೆ, ಸುಟ್ಟಂತೆ ಕಾಣುತ್ತದೆ ಎಂದಾದರೆ ಅಂಥವರ ಚರ್ಮ ಹೆಚ್ಚು ಸೂಕ್ಷ್ಮ. ಅದರಲ್ಲೂ ತಿಳಿ ಬಣ್ಣದ ಚರ್ಮ ಬಿಸಿಲಿಗೆ ಸುಡುವುದು ಬೇಗ. ಅಂಥವರು ಬಿಸಿಲಿಗೆ ಹೋಗುವಾಗ ತುಂಬು ತೋಳಿನ ಬಟ್ಟೆಗಳನ್ನು ಧರಿಸಿ. ತಲೆಗೆ ಬಿಸಿಲು ಟೋಪಿ ಇರಲಿ. ಬಿಸಿಲಿಗೆ ನೇರ ಒಡ್ಡಿಕೊಳ್ಳುವುದು ಅನಿವಾರ್ಯ ಎಂದಾಗ ಕಣ್ಣಿಗೆ ತಂಪು ಕನ್ನಡಕ ಇರಲಿ. ಇದರಿಂದ ಬಿಸಿಲಲ್ಲಿ ಸುಡದೆಯೇ ವಿಟಮಿನ್ ಡಿ ಪಡೆಯಬಹುದು.
ಕನಿಷ್ಠ 30 ಎಸ್‌ಪಿಎಫ್ (ಸನ್ ಪ್ರೊಟೆಕ್ಷನ್ ಫ್ಯಾಕ್ಟರ್) ಸಾಮರ್ಥ್ಯ ಇರುವ ಸನ್‌ಸ್ಕ್ರೀನ್ ಬಳಸಿ. ಏನು ಹಾಗೆಂದರೆ, ಇದರಿಂದ ಏನಾಗುತ್ತದೆ? ಉದಾ, ನಿಮ್ಮ ಚರ್ಮ ಸೂಕ್ಷ್ಮವಾಗಿದ್ದು, ಬಿಸಿಲಿನಲ್ಲಿ ಸುಡುವುದಕ್ಕೆ ಒಂದು ನಿಮಿಷ ಸಾಕಾಗುತ್ತದೆ ಎಂದಿಟ್ಟುಕೊಳ್ಳಿ. 30 ಎಸ್‌ಪಿಎಫ್ ಸನ್‌ಸ್ಕ್ರೀನ್ ಬಳಸಿದರೆ, ಸುಡುವ ಸಮಯವನ್ನು 30 ಪಟ್ಟು ಹಿಗ್ಗಿಸಬಹುದು. ಅಂದರೆ ನಿಮ್ಮ ಚರ್ಮ ಸುಡುವುದಕ್ಕೆ 30 ನಿಮಿಷ ಬೇಕಾಗುತ್ತದೆ. ಅದಷ್ಟು ಹೊತ್ತು ನೀವು ಬಿಸಿಲಿನಲ್ಲಿ ಇರಬಹುದು ಎಂದರ್ಥ.
ಇದನ್ನೂ ಓದಿ: Health Tips for Winter: ಚಳಿಗಾಲದಲ್ಲಿ ನ್ಯುಮೋನಿಯಾ, ಶ್ವಾಸಕೋಶದ ಸಮಸ್ಯೆಗಳಿಂದ ದೂರ ಇರಲು ಹೀಗೆ ಮಾಡಿ…