Site icon Vistara News

Nonstick Pans: ನಾನ್‌ಸ್ಟಿಕ್‌ ಪಾತ್ರೆಗಳ ತಪ್ಪು ಬಳಕೆಯಿಂದಲೂ ಜ್ವರ ಬಾಧಿಸುತ್ತದೆ!

Nonstick Pans

ಟೆಫ್ಲಾನ್‌ ಫ್ಲೂ ಎಂಬ ಹೆಸರನ್ನು ಕೇಳಿದ್ದೀರಾ? ಜಗತ್ತಿನೆಲ್ಲೆಡೆ ಹರಡುತ್ತಿರುವ ಲೆಕ್ಕವಿಲ್ಲದಷ್ಟು ರೋಗಗಳ ಪೈಕಿ ಇದೂ ಒಂದು; ಯಾವುದೋ ಹೆಸರು ಕೇಳದ ಹೊಸ ವೈರಸ್‌ನಿಂದ ಬಂದಿದ್ದು ಎಂದು ಭಾವಿಸಬೇಡಿ. ಇದು ಯಾವುದೇ ರೋಗಾಣುವಿನಿಂದ ಬರುತ್ತಿರುವ ಫ್ಲೂ ಅಲ್ಲ, ನಾನ್‌ಸ್ಟಿಕ್‌ ಪಾತ್ರೆಗಳಿಂದ ಹೊಮ್ಮುತ್ತಿರುವ ವಿಷಯುಕ್ತ ಹೊಗೆಯಿಂದ ಬರುತ್ತಿರುವ ಆರೋಗ್ಯ ಸಮಸ್ಯೆಯಿದು. ಅಮೆರಿಕದಾದ್ಯಂತ ನೂರಾರು ಜನ ಈಗಾಗಲೇ ಈ ವಿಚಿತ್ರ ಸಮಸ್ಯೆಗೆ ತುತ್ತಾಗಿದ್ದಾರೆ. ಏನಿದು ಎನ್ನುವ ವಿವರಗಳು ಇಲ್ಲಿವೆ. ಟೆಫ್ಲಾನ್‌ ಫ್ಲೂ (Teflon flu) ಎನ್ನಲಾಗುವ ಈ ಸಮಸ್ಯೆಯನ್ನು ಪಾಲಿಮರ್‌ ಹೊಗೆಯ ಜ್ವರ (polymer fume fever) ಎಂದೂ ಕರೆಯಲಾಗುತ್ತದೆ. ನಾನ್‌ಸ್ಟಿಕ್‌ ಪಾತ್ರೆಗಳನ್ನು ಬಿಸಿ ಮಾಡಿದಾಗ, ಆ ಶಾಖಕ್ಕೆ ಆ ಪಾತ್ರೆಗಳಿಂದ ಬಿಡುಗಡೆಯಾಗುವ ಹೊಗೆಗೆ ಉಂಟಾಗುತ್ತಿರುವ ಆರೋಗ್ಯ ಸಮಸ್ಯೆಯಿದು. ಟೆಫ್ಲಾನ್‌ ಎಂಬುದು ಯಾವುದೇ ರಾಸಾಯನಿಕವಲ್ಲ, ಬದಲಿಗೆ ಪಾಲಿಟೆಟ್ರಾಫ್ಲೂರೊಈಥೈಲೀನ್‌ ಎಂಬ ರಾಸಾಯನಿಕ ಸಂಯುಕ್ತದ ಬ್ರಾಂಡ್‌ ಹೆಸರು. ಸಾಮಾನ್ಯವಾಗಿ ಟೆಫ್ಲಾನ್‌ ಮೇಲ್ಮೈ ಹೊಂದಿರುವ ಪಾತ್ರೆಗಳಲ್ಲಿ ಅಡುಗೆ ಮಾಡುವುದು ಸುರಕ್ಷಿತ ಎಂದೇ ಭಾವಿಸಲಾಗುತ್ತದೆ. ಆದರೆ ಅದರಲ್ಲೂ ಸಮಸ್ಯೆಗಳಿವೆ ಎಂಬುದಕ್ಕೆ ಈಗ (Nonstick Pans) ಕಾಣುತ್ತಿರುವ ಟೆಫ್ಲಾನ್‌ ಫ್ಲೂ ಉದಾಹರಣೆ.

Nonstick Frying Pan with Handle

ಲಕ್ಷಣಗಳೇನು?

ಈ ಹೊಸ ಬಗೆಯ ರೋಗದಲ್ಲಿ ಯಾವುದೇ ರೋಗಾಣುವಿನಿಂದ ಸೋಂಕು ಹರಡುವುದಿಲ್ಲ. ಬದಲಿಗೆ ವಿಷಯುಕ್ತ ಹೊಗೆಯಿಂದ ಫ್ಲೂ ಮಾದರಿಯಲ್ಲೇ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ತಲೆನೋವು, ಮೈಕೈ ನೋವು, ಜ್ವರ, ನಡುಕ ಮುಂತಾದ ಶೀತ-ಜ್ವರದ ಮಾದರಿಯಲ್ಲೇ ಅನಾರೋಗ್ಯ ಉಂಟಾಗುತ್ತದೆ. ಕಳೆದೊಂದು ವರ್ಷದಲ್ಲಿ ಸುಮಾರು 250ಕ್ಕೂ ಹೆಚ್ಚು ಮಂದಿ ಅಮೆರಿಕನ್ನರು ಇದೇ ಲಕ್ಷಣಗಳನ್ನು ಹೊತ್ತು ಆಸ್ಪತ್ರೆಗೆ ದೌಡಾಯಿಸಿದ್ದಾರೆ.

ಕಾರಣವೇನು?

ಇದು ಸಾಮಾನ್ಯವಾಗಿ ಬಳಕೆಗೆ ಸುರಕ್ಷಿತವಾಗ ರಾಸಾಯನಿಕ ಎಂದೇ ಹೇಳಲಾಗುತ್ತದೆ. ಆದರೆ ಈ ಹೊದಿಕೆಯನ್ನು ಹೊಂದಿದ ಪಾತ್ರೆಗಳನ್ನು ಬಳಸುವಾಗ ಕೆಲವು ಜಾಗ್ರತೆಗಳನ್ನು ಕಡ್ಡಾಯವಾಗಿ ಕೈಗೊಳ್ಳಬೇಕು. ಇವುಗಳನ್ನು ಕೆರೆದು ಗೆರೆಯಾದರೆ, ಹೊದಿಕೆ ಕಿತ್ತು ಹೋದರೆ, ಅಲ್ಲಿಂದ ರಾಸಾಯನಿಕಗಳು ಹೊರಗೆ ಸೋರುತ್ತವೆ. ಈ ಪಾತ್ರೆಗಳನ್ನು ಅತಿಯಾಗಿ ಬಿಸಿ ಮಾಡಿದಾಗ ಸೋರಿ ಹೊರಬಂದ ರಾಸಾಯನಿಕಗಳು ಆವಿಯಾಗಿ ಸುತ್ತಲಿನ ವಾತಾವರಣ ಸೇರುತ್ತವೆ. ಇದನ್ನು ಉಸಿರಾಡಿದಾಗ ಹೀಗೆ ಫ್ಲೂ ಮಾದರಿಯ ಜ್ವರ ಕಾಣಿಸಿಕೊಳ್ಳುತ್ತಿದೆ.

ಇದನ್ನೂ ಓದಿ: Ways to Prevent Gray Hair: 30 ದಾಟುವ ಮೊದಲೇ ಕೂದಲು ಬೆಳ್ಳಗಾಗುತ್ತಿದೆಯೇ? ಇದಕ್ಕಿದೆ ಸರಳ ಪರಿಹಾರ

ಸುರಕ್ಷತಾ ಕ್ರಮಗಳೇನು?

ನಾನ್‌ಸ್ಟಿಕ್‌ ಪಾತ್ರೆಗಳನ್ನು 500 ಡಿ. ಫ್ಯಾ. ಅಥವಾ 260 ಡಿ. ಸೆ. ಗಿಂತ ಹೆಚ್ಚಿನ ಉಷ್ಣತೆಯಲ್ಲಿ ಬಿಸಿ ಮಾಡಿದಾಗ ಇಂಥ ಪರಿಣಾಮಗಳು ಆಗುವ ಸಾಧ್ಯತೆ ಹೆಚ್ಚು. ಐಸಿಎಂಆರ್‌ ಪ್ರಕಾರ, ನಾನ್‌ಸ್ಟಿಕ್‌ ಪಾತ್ರೆಗಳನ್ನು 170 ಡಿ. ಸೆ.ಗಿಂತ ಹೆಚ್ಚು ಬಿಸಿ ಮಾಡಬಾರದು. ಅದಲ್ಲದೆ, ಟೆಫ್ಲಾನ್‌ ಫ್ಯಾನ್‌ಗಳನ್ನು ಒವನ್‌ನಲ್ಲಿ ಪ್ರೀಹೀಟ್‌ ಮಾಡಬೇಡಿ. ಉರಿಯಲ್ಲಿ ದೀರ್ಘಕಾಲ ಖಾಲಿ ಬಿಡಬೇಡಿ. ಇದರಿಂದ ಹೊಗೆಯೇಳುವುದು ಆರೋಗ್ಯಕ್ಕೆ ಒಳ್ಳೆಯದಲ್ಲ. ಮೇಲ್ಮೈ ಗೆರೆಯಾದ ಮತ್ತು ಕಿತ್ತುಹೋದ ಟೆಫ್ಲಾನ್‌ ಪಾತ್ರೆಗಳನ್ನು ಬಿಸಾಡಿ, ಬಳಸಬೇಡಿ. ನಾನ್‌ಸ್ಟಿಕ್‌ ಹೊದಿಕೆಯನ್ನು ʻಫಾರ್‌ಎವರ್‌ ಕೆಮಿಕಲ್ಸ್‌ʼ ಅಥವಾ ʻಎಂದೂ ಕರಗದ ರಾಸಾಯನಿಕʼಗಳೆಂದು ಕರೆಯುವ ಪಿಎಫ್‌ಎಎಸ್‌ಗಳಿಂದ ತಯಾರಿಸಲಾಗುತ್ತದೆ. per- and polyfluoroalkyl substances ಎನ್ನುವ ರಾಸಾಯನಿಕಗಳಿವು. ಸುಮಾರು 15000ರಷ್ಟು ಸಂಖ್ಯೆಯಲ್ಲಿರುವ ಈ ಸಂಕೀರ್ಣ ಸಿಂಥೆಟಿಕ್‌ ವಸ್ತುಗಳು, ವಾತಾವರಣದಲ್ಲೂ, ದೇಹದಲ್ಲೂ ಒಮ್ಮೆ ಸೇರಿದರೆ ದೀರ್ಘ ಕಾಲದವರೆಗೆ ಅವುಗಳನ್ನು ಅಲ್ಲಿಂದ ತೆಗೆಯುವುದಕ್ಕಾಗದು. ದೇಹದಲ್ಲಿಯೂ ಹೆಚ್ಚು ಸಮಯ ಇರಿಸಿಕೊಂಡರೆ, ಶರೀರವನ್ನು ವಿಷಮಯವಾಗಿಸುತ್ತವೆ ಇವು. 1950ರಿಂದಲೇ ಈ ರಾಸಾಯನಿಕಗಳು ಬಳಕೆಯಲ್ಲಿವೆ. ನೀರು, ತೈಲ, ಬಿಸಿ, ಕಲೆ ಮುಂತಾದವನ್ನು ತಡೆದುಕೊಳ್ಳಬಲ್ಲ ಮೇಲ್ಮೈ ನಿರ್ಮಾಣಕ್ಕೆ ಇದೇ ಗುಂಪಿನ ರಾಸಾಯನಿಕಗಳನ್ನು ಬಳಸಲಾಗುತ್ತದೆ. ಇವುಗಳನ್ನು ನಾನ್‌ಸ್ಟಿಕ್‌ ಪಾತ್ರೆಗಳಲ್ಲಿ ಮಾತ್ರವಲ್ಲ, ಬಟ್ಟೆ, ಪೀಠೋಪಕರಣಗಳು, ಅಂಟು, ಆಹಾರದ ಪ್ಯಾಕಿಂಗ್‌ ವಸ್ತುಗಳು, ಸೆಲ್‌ಫೋನು, ಐರನ್‌ ಬಾಕ್ಸ್‌, ಎಲೆಕ್ಟ್ರಿಕ್‌ ವಯರ್‌ಗಳ ಇನ್‌ಸುಲೇಶನ್…‌ ಹೀಗೆ ಹಲವಾರು ಕ್ಷೇತ್ರಗಳಲ್ಲಿ ಬಳಸಲಾಗುತ್ತದೆ.

Exit mobile version