Site icon Vistara News

Nutrients For The Human Body: ನಮ್ಮ ದೇಹವೆಂಬ ಕಾರ್ಯಾಲಯದಲ್ಲಿ ಕೆಲಸ ಮಾಡುವ 22 ಪೋಷಕಾಂಶಗಳ ಬಗ್ಗೆ ನಿಮಗೆ ಗೊತ್ತೇ?

Nutrients For The Human Body

ನಮ್ಮ ದೇಹವೆಂಬ ಕಾರ್ಯಾಲಯ ಸಮರ್ಪಕವಾಗಿ ಕೆಲಸ ಮಾಡಬೇಕಿದ್ದರೆ ಪೋಷಕಾಂಶಗಳು (nutrients for the human body) ಬೇಕೇ ಬೇಕು. ಬಗೆಬಗೆಯ ಪೋಷಕಾಂಶಗಳು ದೇಹದಲ್ಲಿ ಬಗೆಬಗೆಯ ಕಾರ್ಯನಿರ್ವಹಿಸಿ ಒಟ್ಟಾಗಿ ಒಂದು ವ್ಯವಸ್ಥೆಯನ್ನು ಅದ್ಭುತವಾಗಿ ನಿರ್ವಹಿಸುತ್ತವೆ. ಈ ಟೀಮ್‌ ವರ್ಕ್‌ನಲ್ಲಿ ಸ್ವಲ್ಪ ಹೆಚ್ಚು ಕಡಿಮೆಯಾದರೂ ವ್ಯವಸ್ಥೆಯಾಗಿ ದೇಹ ಸೋಲುತ್ತದೆ. ನಮ್ಮದೇ ದೇಹ ಹಗಲಿರುಳು ಹೀಗೆ ಕೆಲಸ ಮಾಡಲು 22 ಬಗೆಯ ಪೋಷಕಾಂಶಗಳು ಅವಶ್ಯವಾಗಿ ಬೇಕಂತೆ. ನಿಮಗೆ ಈ 22 ಪೋಷಕಾಂಶಗಳು ಯಾವುವೆಂದು ತಿಳಿದಿದೆಯೇ? ನಮ್ಮದೇ ದೇಹದ ಬಗ್ಗೆ ಇಷ್ಟಾದರೂ ನಾವು ತಿಳಿದುಕೊಳ್ಳದಿದ್ದರೆ ಹೇಗೆ ಹೇಳಿ. ಬನ್ನಿ, ನಮ್ಮ ದೇಹಕ್ಕೆ ಅವಶ್ಯವಾಗಿ ಬೇಕಾಗುವ 22 ಪೋಷಕಾಂಶಗಳ ಬಗ್ಗೆ ಮಾಹಿತಿ ತಿಳಿಯೋಣ.

ವಿಟಮಿನ್‌ ಎ

ವಿಟಮಿನ್‌ ಎ ಅತ್ಯಂತ ಅಗತ್ಯವಾದ ಜೀವಸತ್ವಗಳಲ್ಲಿ ಒಂದು. ನಮ್ಮ ಕಣ್ಣಿನ ಆರೋಗ್ಯಕ್ಕೆ ಅತ್ಯಂತ ಮುಖ್ಯವಾಗಿ ಬೇಕಾಗುವ ಪೋಷಕಾಂಶ ಇದು. ಸಿಹಿಗೆಣಸು, ಕ್ಯಾರೆಟ್‌, ಮಾವಿನಹಣ್ಣು ಇತ್ಯಾದಿಗಳಲ್ಲಿ ಅಧಿಕ ಪ್ರಮಾಣದಲ್ಲಿ ವಿಟಮಿನ್‌ ಎ ಇದೆ. ಉಳಿದಂತೆ ನಿತ್ಯ ಸೇವಿಸುವ ಹಲವು ಆಹಾರಗಳಲ್ಲಿ ವಿಟಮಿನ್‌ ಎಯನ್ನು ಸ್ವಲ್ಪ ಪ್ರಮಾಣದಲ್ಲಿ ಪಡೆಯಬಹುದು.

ವಿಟಮಿನ್‌ ಬಿ

ನಮ್ಮ ದೇಹ ಪಡೆದ ಆಹಾರವನ್ನು ಶಕ್ತಿಯಾಗಿ ಪರಿವರ್ತಿಸುವಲ್ಲಿ ಸಹಾಯ ಮಾಡುತ್ತದೆ. ಕಲ್ಲಂಗಡಿ ಹಣ್ಣಿನಲ್ಲಿ ವಿಟಮಿನ್‌ ಬಿ ಹೇರಳವಾಗಿದೆ.

ವಿಟಮಿನ್‌ ಸಿ

ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಅತ್ಯಂತ ಅಗತ್ಯ ಈ ವಿಟಮಿನ್‌ ಸಿ. ಸಿಟ್ರಸ್‌ ಹಣ್ಣುಗಳಲ್ಲಿ, ಬ್ರೊಕೋಲಿ, ಕ್ಯಾರೆಟ್‌ ಇತ್ಯಾದಿಗಳಲ್ಲಿ ಹೇರಳವಾಗಿ ಪಡೆಯಬಹುದು.

ವಿಟಮಿನ್‌ ಡಿ

ಎಲುಬಿನ ಸದೃಢತೆಗೆ ಹಾಗೂ ಹಲ್ಲಿನ ಆರೋಗ್ಯಕ್ಕೆ ವಿಟಮಿನ್‌ ಡಿ ಬೇಕೇಬೇಕು. ದೇಹ ಕ್ಯಾಲ್ಶಿಯಂ ಹೀರಿಕೊಳ್ಳಬೇಕಾದರೆ, ಇದರ ಅವಶ್ಯಕತೆ ಇದೆ. ಸೂರ್ಯನ ಬೆಳಕಿನಲ್ಲಿ ಹೇರಳವಾಗಿರುವ ಇದನ್ನು ಅಣಬೆ, ಸೋಯಾ ಹಾಲು, ಮೀನು ಇತ್ಯಾದಿಗಳಲ್ಲೂ ಪಡೆಯಬಹುದು.

ವಿಟಮಿನ್‌ ಇ

ಇದು ದೇಹಕ್ಕೆ ಬೇಕಾದ ಆಂಟಿ ಆಕ್ಸಿಡೆಂಟ್‌. ಎಲ್ಲ ಹಸಿರು ತರಕಾರಿಗಳಲ್ಲಿ ಇದು ಹೇರಳವಾಗಿದೆ.

ವಿಟಮಿನ್‌ ಎಫ್

ಇದು ಪಾಲಿ ಅನ್‌ಸ್ಯಾಚುರೇಟೆಡ್‌ ಫ್ಯಾಟಿ ಆಸಿಡ್‌ ಆಗಿದ್ದು, ಇದು ಗಾಯಗಳು ಗುಣವಾಗಲು, ಒಣಗಲು ಅತ್ಯಂತ ಅಗತ್ಯ. ಎಣ್ಣೆಗಳು, ಬೀಜಗಳು, ಮೀನು ಇತ್ಯಾದಿಗಳ ಮೂಲಕ ಪಡೆಯಬಹುದು.

ಕ್ಯಾಲ್ಶಿಯಂ

ಮೂಳೆಗಳ ಆರೋಗ್ಯ, ಹಾರ್ಮೋನುಗಳ ಉತ್ಪಾದನೆಗೆ ಕ್ಯಾಲ್ಶಿಯಂ ಬೇಕೇ ಬೇಕು. ಹಾಲು, ಬ್ರೊಕೋಲಿ, ರಾಗಿ, ಬಸಳೆ ಇತ್ಯಾದಿಗಳಲ್ಲಿ ಇದು ಅಧಿಕವಾಗಿದೆ.

ಪೊಟಾಶಿಯಂ

ಇದು ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ. ದೇಹದಲ್ಲಿ ನೀರಿನ ಪ್ರಮಾಣವನ್ನು ಕಾಯ್ದುಕೊಳ್ಳುವಲ್ಲಿ ಮುಖ್ಯ ಪಾತ್ರ ವಹಿಸುತ್ತದೆ. ಬಾಳೆಹಣ್ಣಿನಲ್ಲಿ, ರಾಜ್ಮಾದಂತಹ ಕಾಳುಗಳಲ್ಲಿ ಪೊಟಾಶಿಯಂ ಪಡೆಯಬಹುದು.

ಮೆಗ್ನೀಶಿಯಂ

ದೇಹದಲ್ಲಿ ರಾಸಾಯನಿಕ ಕ್ರಿಯೆ ನಡೆಯಲು ಮೆಗ್ನೀಶಿಯಂ ಬೇಕೇ ಬೇಕು. ಎಲುಬನ್ನು ಗಟ್ಟಿಗೊಳಿಸುವಲ್ಲಿಯೂ ಇದು ನೆರವಾಗುತ್ತದೆ. ಕುಂಬಳಕಾಯಿ ಬೀಜ, ಬಸಳೆ ಇತ್ಯಾದಿಗಳಲ್ಲಿ ಇದನ್ನು ಪಡೆಯಬಹುದು.

ಕಬ್ಬಿಣಾಂಶ

ರಕ್ತದಲ್ಲಿ ಹಿಮೋಗ್ಲೋಬಿನ್‌ ಹೆಚ್ಚಿಸಲು ಕಬ್ಬಿಣಾಂಶ ಬೇಕೇಬೇಕು. ಬಸಳೆ, ಬೀಜಗಳು, ಬೆಲ್ಲ, ಚಿಯಾ ಬೀಜಗಳು ಇತ್ಯಾದಿಗಳ ಮೂಲಕ ಕಬ್ಬಿಣಾಂಶ ಪಡೆಯಬಹುದು.

ಇದನ್ನೂ ಓದಿ: Thyroid Health Formulas: ನಿಮ್ಮ ಥೈರಾಯ್ಡ್‌ ನಿಮ್ಮ ಕೈಯಲ್ಲಿ! ಥೈರಾಯ್ಡ್‌ ಆರೋಗ್ಯಕ್ಕೆ ಇಲ್ಲಿವೆ ಆರು ಸೂತ್ರಗಳು

ವಿಟಮಿನ್‌ ಬಿ1 (ಥೈಮೀನ್)

ಕೂದಲು ಹಾಗೂ ಮಿದುಳಿನ ಆರೋಗ್ಯಕ್ಕೆ ಇದು ಅತ್ಯಂತ ಅವಶ್ಯಕ. ಸೋಯಾ ಹಾಲಿನಲ್ಲಿ ಇದು ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿದೆ.

ವಿಟಮಿನ್‌ ಬಿ 6 (ಪೈರಿಡಾಕ್ಸಿನ್)

ಹೃದ್ರೋಗ ಬರದಂತೆ ಕಾಪಾಡುವಲ್ಲಿ ಈ ವಿಟಮಿನ್‌ ಸಹಾಯ ಮಾಡುತ್ತದೆ. ಬಾಳೆಹಣ್ಣು, ಕಲ್ಲಂಗಡಿ ಹಣ್ಣಿನಲ್ಲಿ ಇದು ಹೇರಳವಾಗಿದೆ.

ವಿಟಮಿನ್‌ ಬಿ 12(ಕೊಬಾಲಾಮಿನ್):

ಹೊಸ ಅಂಗಾಂಶಗಳ ಸೃಷ್ಠಿಗೆ, ಅಮೈನೋ ಆಸಿಡ್‌ ಅನ್ನು ವಿಘಟಿಸಲು ಇದು ಬೇಕೇ ಬೇಕು. ಮೊಟ್ಟೆ, ಮೀನಿನಲ್ಲಿ ಇದು ಹೇರಳವಾಗಿದೆ.

ರೈಬೋಫ್ಲೇವಿನ್:

ವಿಟಮಿನ್‌ ಬಿ2 ಎಂದೂ ಕರೆಯಲ್ಪಡುವ ಇದು ಮೈಗ್ರೇನ್‌ ಅನ್ನು ತಡೆಯುವಲ್ಲಿ ಬಹಳ ಮುಖ್ಯ ಪಾತ್ರ ವಹಿಸುತ್ತದೆ. ಮೊಟ್ಟೆ, ಮಾಂಸ, ಮೊಳಕೆ ಕಾಳುಗಳು ಬೀನ್ಸ್‌ನಲ್ಲಿ ಇದು ಅಧಿಕವಾಗಿದೆ.

ಬಯೋಟಿನ್

ಗ್ಲುಕೋಸ್‌ನ ಸಂಶ್ಲೇಷಣೆಗೆ ಅತ್ಯಂತ ಅಗತ್ಯವಾಗಿರುವ ಬಯೋಟಿನ್‌ ಅನ್ ಧಾನ್ಯಗಳಿಂದ ಪಡೆಯಬಹುದು.

ಖೋಲಿನ್

ಮಿದುಳಿನ ಚಟುವಟಿಕೆಗೆ, ಚುರುಕುತನಕ್ಕೆ ಇದು ಬೇಕೇ ಬೇಕು. ನೆಲಗಡಲೆಯಲ್ಲಿ ಖೋಲಿನ್‌ ಹೇರಳವಾಗಿದೆ.

ಫೋಲಿಕ್‌ ಆಸಿಡ್‌

ಮಹಿಳೆಯರಿಗೆ ಅತ್ಯಂತ ಅಗತ್ಯವಾಗಿ ಬೇಕಾಗುವ ಪೋಷಕಾಂಶವಿದು. ಗರ್ಭಿಣಿಯರು ಸೇವಿಸಲೇಬೇಕಾದ್ದು. ಮಗುವಿನ ಹೆರಿಗೆಗೆ ಈ ಪೋಷಕಾಂಶ ನೆರವಾಗುತ್ತದೆ. ಟೊಮೇಟೋ, ಕಿತ್ತಳೆ, ಮೊಟ್ಟೆ ಇತ್ಯಾದಿಗಳಲ್ಲಿ ಇದನ್ನು ಪಡೆಯಬಹುದು.

ವಿಟಮಿನ್‌ ಕೆ

ಮೂಳೆ ಮುರಿತವನ್ನು ಇದು ತಡೆಯುತ್ತದೆ. ಮುಖ್ಯವಾಗಿ ಸೊಂಟದ ಮೂಳೆಗೆ ಅತ್ಯಗತ್ಯವಾಗಿ ಬೇಕಾಗುವ ಪೋಷಕಾಂಶವಿದು. ಕ್ಯಾಬೇಜ್‌ ಹಾಗೂ ಬ್ರೊಕೊಲಿಯಲ್ಲಿ ಹೇರಳವಾಗಿದೆ.

ತಾಮ್ರ

ಕೆಂಪು ರಕ್ತ ಕಣಗಳ ಅಭಿವೃದ್ಧಿಗೆ ಇದು ಬೇಕು. ಧಾನ್ಯಗಳು, ಬೀನ್ಸ್‌, ಬೀಜಗಳು, ಆಲೂಗಡ್ಡೆ ಇತ್ಯಾದಿಗಳ ಮೂಲಕ ತಾಮ್ರವನ್ನು ಪಡೆಯಬಹುದು.

ಕ್ಲೋರೈಡ್‌

ಪಚನಕ್ರಿಯೆಗೆ ಈ ಪೋಷಕಾಂಶ ಬೇಕೇ ಬೇಕು. ಉಪ್ಪು, ಟೊಮೆಟೋ, ಲೆಟ್ಯೂಸ್‌, ಸೆಲೆರಿಯಂತಹುಗಳಲ್ಲಿ ಕ್ಲೋರೈಡ್‌ ಇದೆ.

ಪಾಸ್ಪರಸ್‌

ನಮ್ಮ ಅಂಗಾಂಶಗಳಿಗೆ ಪೋಷಕಾಂಷವನ್ನು ಒದಗಿಸುವುದಕ್ಕೆ ಇದು ಬೇಕು. ಇದು ಡಿಎನ್‌ಎಯ ಒಂದು ಭಾಗವಾಗಿದೆ ಕೂಡಾ. ಬಟಾಣಿಯಲ್ಲಿ ಇದನ್ನು ಹೇರಳವಾಗಿ ಪಡೆಯಬಹುದು.

ಇದನ್ನೂ ಓದಿ: Ear Infections During Monsoon: ಮಳೆಗಾಲದಲ್ಲಿ ಕಾಡುವ ಕಿವಿನೋವಿನಿಂದ ಮುಕ್ತರಾಗಲು ಸರಳ ಉಪಾಯ ಇಲ್ಲಿದೆ

ಝಿಂಕ್‌

ನಮ್ಮ ಇಂದ್ರಿಯಗಳು ಕಾರ್ಯನಿರ್ವಹಿಸಬೇಕಾದರೆ ಝಿಂಕ್‌ ಬೇಕೇ ಬೇಕು. ಸೀಫುಡ್‌, ಬೀನ್ಸ್‌, ಬೀಜಗಳು, ಚಿಕನ್‌ ಇತ್ಯಾದಿಗಳ ಮೂಲಕ ಇದನ್ನು ಪಡೆಯಬಹುದು.

Exit mobile version