ಕಳೆದ ಕೆಲವು ದಶಕಗಳಿಂದ ತೂಕ ಏರಿಕೆ ಎನ್ನುವುದೇ ಬಹುತೇಕ ಎಲ್ಲರ ಸಮಸ್ಯೆಯಾಗಿದೆ. ವೃತ್ತಿಯಲ್ಲಿನ ಒತ್ತಡ, ನಗರ ಜೀವನ, ವ್ಯಾಯಾಮದ ಕೊರತೆ, ಆಹಾರ ಪದ್ಧತಿ, ಜೀವನಕ್ರಮದಲ್ಲಿ ಬದಲಾವಣೆ ಇತ್ಯಾದಿಗಳೇ ತೂಕದ ಸಮಸ್ಯೆಯನ್ನೂ ಹಲವು ಆರೋಗ್ಯದ ಸಮಸ್ಯೆಗಳನ್ನೂ ಸಣ್ಣ ವಯಸ್ಸಿನಲ್ಲಿಯೇ ಹಲವರಿಗೆ ತಂದೊಡ್ಡಿದೆ ನಿಜ. ಸಣ್ಣ ವಯಸ್ಸಿನಲ್ಲಿಯೇ ಮಧುಮೇಹ, ಅಧಿಕ ರಕ್ತದೊತ್ತಡ, ಕೊಲೆಸ್ಟೆರಾಲ್ ಸಮಸ್ಯೆ, ಬೊಜ್ಜು ಇತ್ಯಾದಿ ಸಮಸ್ಯೆಗಳೆಲ್ಲ ಕಾಣಿಸಿಕೊಳ್ಳಲು ಆರಂಭವಾಗುತ್ತದೆ. ಹಲವು ಪೋಷಕಾಂಶಗಳ ಕೊರತೆ ಇತ್ಯಾದಿಗಳ ಸಮಸ್ಯೆಯೂ ಜೊತೆಗೆ ಸೇರಿಕೊಂಡು ಅನಾರೋಗ್ಯ, ಶಕ್ತಿಹೀನತೆಯಂಥ ಒಂದಿಲ್ಲೊಂದು ಸಮಸ್ಯೆಗಳು ಎಡತಾಕುತ್ತವೆ. ಇಂತಹ ಸಂದರ್ಭ ಇತ್ತೀಚೆಗಿನ ದಿನಗಳಲ್ಲಿ ಸಪ್ಲಿಮೆಂಟ್‌ಗಳ ಸೇವನೆಯೂ ಹೆಚ್ಚುತ್ತಿದೆ. ಹಲವು ಸಪ್ಲಿಮೆಂಟ್‌ಗಳನ್ನು ಜೊತೆಗೆ ಸೇವಿಸುವುದರಿಂದ ನಮ್ಮ ದೇಹಕ್ಕೆ ಬೇಕಾದ ಹೆಚ್ಚುವರಿ, ಅಗತ್ಯ ಪೋಷಕಾಂಶಗಳು ಲಭ್ಯವಾಗಿ ಖಂಡಿತವಾಗಿಯೂ ಆರೋಗ್ಯ ವೃದ್ಧಿಯಾಗಿ, ತೂಕ ಹಿತಮಿತವಾಗಿರಿಸಿಕೊಳ್ಳುವಲ್ಲಿ ಸಹಾಯವಾಗಬಹುದು. ವಿಟಮಿನ್ ಸಪ್ಲಿಮೆಂಟ್‌ಗಳ ಸೇವನೆಯಿಂದ ದೇಹದ ಪಚನಕ್ರಿಯೆಯೂ ವೃದ್ಧಿಯಾಗಿ ಆ ಮೂಲಕ ಶಕ್ತಿ ಸರಿಯಾಗಿ ದೇಹಕ್ಕೆ ಲಭ್ಯವಾಗಿ, ದೇಹ ಚುರುಕಾಗಿ, ಎಲ್ಲ ಕೆಲಸ ಕಾರ್ಯಗಳು ಸಹಜವಾಗಿ ಆಗುತ್ತದೆ. ಆದರೆ, ಅತಿಯಾಗಿ ಸಪ್ಲಿಮೆಂಟ್‌ಗಳ ಸೇವನೆ (Nutritional Supplements), ಸರಿಯಾದ ಸಪ್ಲಿಮೆಂಟ್ ಸೇವಿಸದೆ ಇರುವುದು, ಅಗತ್ಯವಿಲ್ಲದಿದ್ದರೂ ಸಪ್ಲಿಮೆಂಟ್ ಸೇವನೆ ಮಾಡುವುದು, ಅಥವಾ ತಪ್ಪುತಪ್ಪಾಗಿ ಸೇವಿಸುವುದು ಇತ್ಯಾದಿ ಮಾಡುವುದರಿಂದ ಅಡ್ಡ ಪರಿಣಾಮಗಳೂ ಆಗಬಹುದು. ಈಗ ಸಪ್ಲಿಮೆಂಟ್‌ಗಳ ಹೆಸರಿನಲ್ಲಿ ಮಾರುಕಟ್ಟೆಗೆ ಬಂದಿರುವ ಅನೇಕ ಫೇಕ್ ಸಪ್ಲಿಮೆಂಟ್‌ಗಳ ಬಗ್ಗೆಯೂ ಎಚ್ಚರಿಕೆ ವಹಿಸಬೇಕಾಗಿದೆ. ಹೀಗಾಗಿ, ಸಪ್ಲಿಮೆಂಟ್ ವರವಾಗುವ ಜೊತೆಗೆ ಕೆಲವೊಮ್ಮೆ ಶಾಪವಾಗಿಯೂ ಪರಿಣಮಿಸಬಹುದು. ಕೆಲವೊಮ್ಮೆ ಇದರಿಂದ ದೇಹಕ್ಕೆ ತೊಂದರೆಯೂ ಆಗಬಹುದು. ತೂಕ ಇಳಿಕೆಗೆಂದೇ ಸೇವಿಸುವ ಸಪ್ಲಿಮೆಂಟ್‌ಗಳು, ದಿಢೀರ್ ತೂಕ ಇಳಿಸಬಹುದೆಂದು ಹೇಳಿಕೊಳ್ಳುವ ಮಾತ್ರೆಗಳು, ಪುಡಿಗಳು ಇತ್ಯಾದಿಗಳ ಬಗ್ಗೆ ಸದಾ ಎಚ್ಚರಿಕೆ ಇರುವುದು ಒಳ್ಲೆಯದು. ಸಪ್ಲಿಮೆಂಟ್‌ಗಳ ಹೆಸರಿನಲ್ಲಿ ಇವು ದೇಹಕ್ಕೆ ಒಳ್ಳೆಯದು ಮಾಡುವ ಬದಲು ಹಾನಿಯನ್ನೇ ಮಾಡುವುದು ಹೆಚ್ಚು.
ಎಚ್ಚರಿಕೆ ವಹಿಸಬೇಕಾದ್ದೇನು?
ಹಾಗಾದರೆ, ಸಪ್ಲಿಮೆಂಟ್ ಸೇವನೆಯ ಸಂದರ್ಭ ಎಚ್ಚರಿಕೆ ವಹಿಸಬೇಕಾದ್ದೇನು ಎಂಬ ಗೊಂದಲ ನಿಮಗಾಗಿರಬಹುದು. ಯಾವಾಗಲೂ ಸಮಸ್ಯೆಯ ಮೂಲವನ್ನು ಕಂಡು ಹಿಡಿಯದೆ, ನೀವೇ ವೈದ್ಯರಾಗಲು ಹೊರಡಬೇಡಿ. ನಿಮ್ಮ ಆರೋಗ್ಯದ ಸಮಸ್ಯೆಗೆ, ತೂಕ ಹೆಚ್ಚಳಕ್ಕೆ ಕಾರಣವೇನು ಎಂಬುದನ್ನು ಪತ್ತೆ ಹಚ್ಚಿ. ವೈದ್ಯರ, ಪೋಷಕಾಂಶ ತಜ್ಞರ ಸಲಹೆ ಪಡೆಯಿರಿ. ದೇಹಕ್ಕೆ ಯಾವ ಪೋಷಕಾಂಶದ ಕೊರತೆಯಾಗಿದೆ ಎಂದು ಅವರ ಸಲಹೆಯ ಮೇರೆಗೆ ಪರೀಕ್ಷೆ ಮಾಡಿಸಿಕೊಂಡು, ಅವರ ಸಲಹೆಯ ಮೇರೆಗೆ ಸಪ್ಲಿಮೆಂಟ್ ತೆಗೆದುಕೊಳ್ಳಿ. ನೀವೇ ನೇರವಾಗಿ ಸಪ್ಲಿಮೆಂಟ್‌ಗಳ ಸೇವನೆಗೆ ಇಳಿಯಬೇಡಿ. ವೈದ್ಯರ ಅನುಮತಿಯ ಮೇರೆಗೆ ಸಂಬಂಧಿಸಿದ ಸಪ್ಲಿಮೆಂಟ್ ಸೇವಿಸಿ.
ಇದನ್ನೂ ಓದಿ: Mint Leaf Water: ಪುದಿನ ಎಲೆಗಳ ನೀರನ್ನು ನಿತ್ಯವೂ ಕುಡಿಯಿರಿ, ಈ ಲಾಭಗಳನ್ನು ಪಡೆಯಿರಿ!
ಜೀವನಕ್ರಮವನ್ನು ರೂಢಿಸಿಕೊಳ್ಳುವುದು ಮುಖ್ಯ
ಎಲ್ಲಕ್ಕಿಂತ ಹೆಚ್ಚಾಗಿ ಆರೋಗ್ಯಕರ ಜೀವನಕ್ರಮವನ್ನು ರೂಢಿಸಿಕೊಳ್ಳುವುದು ಮುಖ್ಯ. ಸಪ್ಲಿಮೆಂಟ್‌ಗಳನ್ನು ತಿನ್ನುತ್ತೇನಲ್ಲ, ಇನ್ನು ಪೋಷಕಾಂಶಗಳ ಬಗ್ಗೆ ನಾನು ತಿನ್ನುವ ಆಹಾರದ ನಿಗಾ ಇರಿಸಿಕೊಳ್ಳುವ ಅಗತ್ಯವಿಲ್ಲ ಎಂದು ಬೇಕಾಬಿಟ್ಟಿ, ನಾಲಿಗೆಗೆ ಹಿತವೆನಿಸಿದ್ದನ್ನೆಲ್ಲ ತಿನ್ನಲು ಹೊರಡಬೇಡಿ. ನಾಲಿಗೆ ಬಯಸಿದ್ದನ್ನೆಲ್ಲ ನಾಲಿಗೆಗೆ ಕೊಡುವ ಮೊದಲು ಯೋಚಿಸಿ. ದೇಹಕ್ಕೆ ಒಳ್ಳೆಯದನ್ನು ಬಯಸುವ ಆಹಾರಗಳನ್ನು ಸೇವಿಸುವುದನ್ನು ಅಭ್ಯಾಸ ಮಾಡಿ. ದೇಹವನ್ನು ಚುರುಕಾಗಿರಿಸುವುದನ್ನು, ಅಭ್ಯಾಸ ಮಾಡಿ. ವ್ಯಾಯಾಮ, ಯೋಗ, ವಾಕಿಂಗ್, ಉತ್ತಮ ಆಹಾರಭ್ಯಾಸಗಳೇ ಇದರಲ್ಲಿ ಬಹುಮುಖ್ಯ ಪಾತ್ರ ವಹಿಸುತ್ತದೆ ಎಂಬುದನ್ನು ಮರೆಯಬೇಡಿ.