Site icon Vistara News

Oats For Weight Loss: ಓಟ್ಸ್‌ ತಿನ್ನುವುದರಿಂದ ತೂಕ ಇಳಿಯುತ್ತದೆಯೇ? ಉತ್ತರ ಇಲ್ಲಿದೆ

Oats For Weight Loss

ಎಲ್ಲರಿಗೂ ಒಂದಲ್ಲ ಒಂದು ಹಂತದಲ್ಲಿ ತಾವು ತೂಕ ಇಳಿಸಿಕೊಂಡು ಫಿಟ್‌ ಆಗಬೇಕು ಎಂಬ ಬಯಕೆ ಬಂದೇ ಬರುತ್ತದೆ. ಕಾರಣ ಇಂದಿನ ಒತ್ತಡದ ಜೀವನಕ್ರಮದಲ್ಲಿ, ಗೊತ್ತೇ ಆಗದಂತೆ ತೂಕ ಏರಿಸಿಕೊಂಡು ಒಂದು ದಿನ, ಅಯ್ಯೋ ಹೆಂಗಿದ್ದ ನಾನು ಹೆಂಗಾಗಿಬಿಟ್ಟೆ ಎಂಬ ಮರುಕ ಬಂದೇ ಬರುತ್ತದೆ. ಜ್ಞಾನೋದಯವಾಗುವ ಆ ಹಂತದಲ್ಲಿ, ಒಂದಿಷ್ಟು ಆರೋಗ್ಯಕರ ಅಭ್ಯಾಸಗಳು, ನಡಿಗೆ, ವ್ಯಾಯಾಮ ಸೇರಿದಂತೆ ತೂಕ ಇಳಿಸಿಕೊಳ್ಳುವ ಕಾರ್ಯಕ್ರಮ ಶುರುಹಚ್ಚಿಕೊಳ್ಳುತ್ತೇವೆ. ಅವರಿವರಿಂಧ ಕೇಳಿ, ಓದಿ ಪಡೆದುಕೊಂಡ ಮಾಹಿತಿಗಳ ಆಧಾರದಲ್ಲಿ ತೂಕ ಇಳಿಕೆಗೆ ತೊಡಗುವುದೇ ಹೆಚ್ಚು. ಹೀಗೆ ತೂಕ ಇಳಿಕೆಗೆ ಹೊರಟ ಪ್ರತಿಯೊಬ್ಬರೂ ಓಟ್ಸ್‌ ಕಡೆಗೆ ಒಂದಲ್ಲ ಒಂದು ದಿನ ಮುಖ ಮಾಡುತ್ತಾರೆ. ಓಟ್ಸ್‌ ಎಂಬುದು ಅತ್ಯಂತ ಹಳೆಯ ದವಸ ಧಾನ್ಯಗಳ ಪೈಕಿ ಒಂದು. ಇದರಲ್ಲಿ ನಮ್ಮ ದೇಹಕ್ಕೆ ಬೇಕಾಗುವ ಸಾಕಷ್ಟು ಮೈಕ್ರೋ ಹಾಗೂ ಮ್ಯಾಕ್ರೋ ಪೋಷಕಾಂಶಗಳಿವೆ. ಇವುಗಳಲ್ಲಿ ಪ್ರೊಟೀನ್‌ ಹೆಚ್ಚಿದ್ದು, ಇತರ ಧಾನ್ಯಗಳಿಂದ ಹೆಚ್ಚಿನ ಪ್ರಮಾಣದಲ್ಲಿ ನಾರಿನಂಶವೂ, ಪೋಷಕಾಂಶಗಳೂ ಇರುತ್ತವೆ. ಪೋಷಕಾಂಶ ತಜ್ಞರ ಪ್ರಕಾರ, ಓಟ್ಸ್‌ನಲ್ಲಿ ಸಾಕಷ್ಟು ಕರಗಬಲ್ಲ ನಾರಿನಂಶವಿರುವುದರಿಂದ ಇದು ಕೊಲೆಸ್ಟೆರಾಲ್‌ ಮಟ್ಟವನ್ನು ತಗ್ಗಿಸಲು ನೆರವಾಗುತ್ತದೆ. ಅಷ್ಟೇ ಅಲ್ಲ, ದೇಹಕ್ಕೆ ಗ್ಲುಕೋಸ್‌ ಬೇಗನೆ ಸೇರದಂತೆಯೂ ಇವು ಮಾಡುತ್ತದೆ. ಕರುಳಿನಲ್ಲಿ ಆಹಾರ ಸುಲಭವಾಗಿ ಪ್ರವಹಿಸಲು ಕೂಡಾ ಇದು ನೆರವಾಗುತ್ತದೆ. ಇದರಲ್ಲಿರುವ ಆಂಟಿ ಆಕ್ಸಿಡೆಂಟ್‌ಗಳು ದೇಹದಲ್ಲಿ ಅಧಿಕ ರಕ್ತದೊತ್ತಡವನ್ನು ಕಡಿಮೆ ಮಾಡಲು ನೆರವಾಗುತ್ತದೆ. ಇವೆಲ್ಲ ನಿಜವೇ ಆದರೂ, ಓಟ್ಸ್‌ನ ನಿತ್ಯದ ಸೇವನೆಯಿಂದ ತೂಕ (Oats For Weight Loss) ಇಳಿಸಬಹುದಾ? ಇದರ ಸೇವನೆ ಒಳ್ಳೆಯದಾ ಎಂದು ಪ್ರಶ್ನಿಸಿದರೆ ಖಂಡಿತವಾಗಿಯೂ ಗೊಂದಲ ಹುಟ್ಟಿಸದೆ ಇರದು.

ತೂಕ ಇಳಿಸುತ್ತದೆಯೆ?

ಈ ಓಟ್ಸ್‌ ಸೇವನೆಯಿಂದ ನಿಜವಾಗಿಯೂ ತೂಕ ಇಳಿಯುತ್ತದೆಯೇ ಎಂಬುದು ಎಲ್ಲರ ಪ್ರಶ್ನೆ. ಈ ಪ್ರಶ್ನೆ ಹೊಸತೇನಲ್ಲ. ಯಾಕೆಂದರೆ ಓಟ್ಸ್‌ನಲ್ಲಿ ಸಾಕಷ್ಟು ಪೋಷಕಾಂಶಗಳೂ, ನಾರಿನಂಶವೂ ಇರುವುದರಿಂದ ಇದರಿಂದ ತೂಕ ಇಳಿಯಬಹುದು ಎಂಬುದು ನಿಜವೇ ಆದರೂ, ಸರಿಯಾಗಿ ಹಿತಮಿತವಾಗಿ ಸೇವನೆ ಮಾಡಿದರೆ ಮಾತ್ರ ಇದು ಸಾಧಯ ಎಂಬುದೂ ಸತ್ಯವೇ. ಯಾಕೆಂದರೆ ಓಟ್ಸ್‌ನಲ್ಲಿ ಸ್ಟಾರ್ಚ್‌ ಕೂಡಾ ಇರುವುದರಿಂದ ಹಾಗೂ ಹೆಚ್ಚು ಕಾರ್ಬೋಹೈಡ್ರೇಟ್‌ ಇರುವ ಕಾರಣದಿಂದ ಹೆಚ್ಚು ಗ್ಲಿಸೆಮಿಕ್‌ ಇಂಡೆಕ್ಸ್‌ ಹೊಂದಿರುತ್ತದೆ. ಹಾಗಾಗಿ ದೇಹದಲ್ಲಿ ಸಕ್ಕರೆಯ ಪ್ರಮಾಣ ಏರುವ ಅಪಾಯವೂ ಇದೆ. ಹಿತಮಿತವಾಗಿ ಸೇವಿಸಿದರೆ ಮಾತ್ರ ಪ್ರಯೋಜನ ಪಡೆಯಬಹುದು ಎನ್ನುತ್ತಾರೆ.

ಇದನ್ನೂ ಓದಿ: Monsoon Hair care: ಮಳೆಗಾಲದಲ್ಲಿ ಕೂದಲಿನ ಆರೈಕೆಗೆ ಈ ಸಲಹೆ ಪಾಲಿಸಿ

ಇನ್‌ಸ್ಟ್ಯಾಂಟ್‌ ಓಟ್ಸ್‌ ಬೇಡ

ಓಟ್ಸ್‌ನನ್ನು ನಾವು ಹೇಗೆ ಬಳಸುತ್ತೇವೆ ಎಂಬುದರಲ್ಲಿ ಸತ್ಯ ಅಡಗಿದೆ ಎನ್ನುತ್ತಾರೆ ತಜ್ಞರು. ಯಾಕೆಂದರೆ ಓಟ್ಸ್‌ನಿಂದ ಲಾಭ ಇರುವಷ್ಟೇ ಅಪಾಯವೂ ಇದೆ. ಮಾರುಕಟ್ಟೆಯಲ್ಲಿ ಈಗ ಸುಲಭವಾಗಿ ಬಗೆಬಗೆಯ ಫ್ಲೇವರ್‌ಗಳ ಮಸಾಲೆಗಳ ಜೊತೆಗೆ ಲಭ್ಯವಾಗುವ ಇನ್‌ಸ್ಟ್ಯಾಂಟ್‌- ದಿಢೀರ್‌ ಓಟ್ಸ್‌ಗಳಲ್ಲಿ ಗ್ಲಿಸೆಮಿಕ್‌ ಇಂಡೆಕ್ಸ್‌ ಹೆಚ್ಚಿರುತ್ತದೆ. ಹಣ್ಣುಗಳನ್ನು ಸೇರಿಸಿ, ಇನ್‌ಸ್ಟ್ಯಾಂಟ್‌ ಓಟ್ಸ್‌ ಮಾಡಿ ತಿನ್ನುವುದರಿಂದ ರಕ್ತದಲ್ಲಿ ಸಕ್ಕರೆ ದಿಢೀರ್‌ ಹೆಚ್ಚಾಗುವ ಸಾಧ್ಯತೆ ಹೆಚ್ಚಿದೆ ಎನ್ನುತ್ತಾರೆ ತಜ್ಞರು.
ಹಾಗಾದರೆ, ತೂಕ ಇಳಿಸುವ ಉದ್ದೇಶದಿಂದ ಓಟ್ಸ್‌ ತಿನ್ನಲು ಬಯಸುವ ಮಂದಿ ಯಾವ ಕ್ರಮದಲ್ಲಿ ತಿಂದರೆ ಲಾಭ ಪಡೆಯಬಹುದು ಎಂಬ ಪ್ರಶ್ನೆ ನಿಮ್ಮದಾಗಿದ್ದರೆ, ಉತ್ತರ ಇಲ್ಲಿದೆ. ಇನ್‌ಸ್ಟ್ಯಾಂಟ್‌ಗಳ ಬದಲಾಗಿ ಸ್ಟೀಲ್‌ ಕಟ್‌ ಓಟ್ಸ್‌ಗಳ ಬಳಕೆ ಮಾಡುವುದು ಒಳ್ಳೆಯದು. ಇದು ನಿಧಾನವಾಗಿ ಶಕ್ತಿ ನೀಡುತ್ತದೆ. ಹಾಗೂ ತೂಕ ಇಳಿಕೆಗೆ ಸಹಾಯ ಮಾಡುತ್ತದೆ. ಓಟ್ಸ್‌ ಒಳ್ಳೆಯದೆಂದು ಅಂದುಕೊಂಡು ಅತಿಯಾಗಿ ಓಟ್ಸನ್ನೇ ನಿತ್ಯವೂ ತಿನ್ನುವುದೂ ಕೂಡಾ ಒಳ್ಳೆಯದಲ್ಲ. ಹಿತಮಿತವಾಗಿ ತಿಂದರೆ ಮಾತ್ರ ಅವುಗಳ ನಿಜವಾದ ಪ್ರಯೋಜನ ಪಡೆಯಲು ಸಾಧ್ಯವಾಗಬಹುದು.

Exit mobile version