Site icon Vistara News

Oats or Quinoa: ಓಟ್ಸ್‌, ಕಿನೊವಾ- ಇವೆರೆಡರಲ್ಲಿ ಯಾವುದು ಬೆಸ್ಟ್?

Oats or Quinoa

ಆರೋಗ್ಯಕರ ಸ್ಪರ್ಧೆ ಒಳ್ಳೆಯದು; ಆರೋಗ್ಯಕ್ಕಾಗಿ ಸ್ಪರ್ಧೆ ಇನ್ನೂ ಒಳ್ಳೆಯದು; ಆರೋಗ್ಯಕರ ತಿನಿಸುಗಳಲ್ಲೇ ಸ್ಪರ್ಧೆ ಏರ್ಪಟ್ಟರೆ ತಿನ್ನುವವರಿಗೆಲ್ಲ ಒಳ್ಳೆಯದು! ಇದೇನೋ ಒಗಟು ಅಂದುಕೊಳ್ಳಬೇಡಿ, ಎರಡು ಆರೋಗ್ಯಕರ ತಿನಿಸುಗಳ ನಡುವೆ ʻಯಾವುದು ಹೆಚ್ಚು ಒಳ್ಳೆಯದು?ʼ ಎನ್ನುವ ಸ್ಪರ್ಧೆ ಏರ್ಪಟ್ಟರೆ ಹೇಗಿರುತ್ತದೆಂಬ ಕುತೂಹಲ ಇರುವುದಿಲ್ಲವೇ? ಉದಾ, ಓಟ್ಸ್‌ ಮತ್ತು ಕಿನೊವಾ ನಡುವೆ ಯಾವುದನ್ನೂ ನಂಬರ್‌ 1 ಎಂದು ನಿರ್ಧರಿಸುವುದು ಹೇಗೆ? ಇವೆರಡರಲ್ಲಿ ಗೆಲ್ಲುವವರು ಯಾರು? ಇದನ್ನು ನಿರ್ಧರಿಸುವ ಮುನ್ನ, ಯಾವುದರ ಗುಣಗಳು ಏನೇನು (Oats or Quinoa) ಎಂಬುದನ್ನು ಅರ್ಥ ಮಾಡಿಕೊಳ್ಳೋಣ.

ಓಟ್ಸ್‌

ಬೀಟಾ ಗ್ಲೂಕನ್‌ ಎಂಬ ಉತ್ಕೃಷ್ಟವಾದ ಕರಗಬಲ್ಲ ನಾರಿನ ಆಗರವಿದು. ದೇಹದಲ್ಲಿ ಜಮೆಯಾಗಿರುವ ಕೊಲೆಸ್ಟ್ರಾಲ್‌ ಕಡಿಮೆ ಮಾಡಿ, ಹೃದಯದ ಆರೋಗ್ಯ ಚೆನ್ನಾಗಿರಿಸುವಲ್ಲಿ ಇದು ಮಹತ್ವದ ಪಾತ್ರ ವಹಿಸುತ್ತದೆ. ನಾರು ಮಾತ್ರವಲ್ಲ, ಮೆಗ್ನೀಶಿಯಂ, ಮ್ಯಾಂಗನೀಸ್‌, ಫಾಸ್ಫರಸ್‌, ಕಬ್ಬಿಣದಂಥ ಅಗತ್ಯ ಖನಿಜಗಳು ಇದರಲ್ಲಿ ಭರಪೂರ ಇವೆ. ಗ್ಲೂಟೆನ್‌ ರಹಿತವಾದ ಆಹಾರವಾದ್ದರಿಂದ, ಗೋದಿಯಂಥ ಧಾನ್ಯಗಳ ಅಲರ್ಜಿ ಇರುವವರಿಗೆ ಇದು ಸೂಕ್ತವಾದ ಆಹಾರ. ಬೆಳಗಿನ ತಿಂಡಿಗೆ, ಬೇಕ್‌ ಮಾಡುವಾಗ, ಸ್ಮೂದಿಗಳಲ್ಲಿ, ಗ್ರನೋಲಾ ಬಾರ್‌ಗಳಲ್ಲಿ- ಹೀಗೆ ಹಲವು ಬಗೆಯ ಅಡುಗೆಗಳಲ್ಲಿ ಇದನ್ನು ಉಪಯೋಗಿಸಲು ಸಾಧ್ಯವಿದೆ. ಇದು ಹೃದಯದ ಆರೋಗ್ಯಕ್ಕೆ ಪೂರಕ ಮಾತ್ರವಲ್ಲ, ತನ್ನ ನಾರಿನಂಶದಿಂದಾಗಿ ಮಧುಮೇಹ ನಿಯಂತ್ರಣಕ್ಕೂ ಸೂಕ್ತವಾದ ಆಹಾರವಿದು. ಜೀರ್ಣವಾಗಲು ದೀರ್ಘಕಾಲ ತೆಗೆದುಕೊಂಡು, ರಕ್ತದಲ್ಲಿ ಸಕ್ಕರೆಯಂಶ ಏರಿಳಿಯದಂತೆ ನೋಡಿಕೊಳ್ಳುತ್ತದೆ. ಜೀರ್ಣವಾಗಲು ಹೆಚ್ಚು ಸಮಯ ಬೇಕು ಎನ್ನುವ ಕಾರಣಕ್ಕಾಗಿಯೇ ತೂಕ ಇಳಿಸುವವರಿಗೆ ಇದು ಅಚ್ಚುಮೆಚ್ಚು. ಹೆಚ್ಚು ಸಮಯದವರೆಗೆ ಹೊಟ್ಟೆ ತುಂಬಿದ ಅನುಭವವನ್ನೇ ನೀಡುತ್ತದೆ. ಹೆಚ್ಚು ನಾರಿನಂಶ ಇರುವ ಆಹಾರಗಳೆಲ್ಲವೂ ಜೀರ್ಣಾಂಗಗದ ಆರೋಗ್ಯವನ್ನು ಚೆನ್ನಾಗಿ ಇಡುವಂಥವು. ಇದರಲ್ಲಿರುವ ಉತ್ಕರ್ಷಣ ನಿರೋಧಕಗಳು ದೇಹದಲ್ಲಿನ ಉರಿಯೂತ ಕಡಿಮೆ ಮಾಡುವ ಸಾಮರ್ಥ್ಯವನ್ನು ಹೊಂದಿವೆ. ಹಾಗಾಗಿ ಬೆಳಗಿನ ಹೊತ್ತು ಒಂದು ಬೌಲ್‌ ತುಂಬಾ ಬಿಸಿಯಾದ ಓಟ್‌ಮೀಲ್‌ ಸವಿಯುವುದಕ್ಕೆ ಯಾವ ತಡೆಯೂ ಇರಲಾರದು.

Quinoa

ಕಿನೊವಾ

ಎಲ್ಲಾ ಒಂಬತ್ತು ಪ್ರಮುಖ ಅಮೈನೋ ಆಮ್ಲಗಳನ್ನು ಹೊಂದಿರುವ ಸಂಪೂರ್ಣ ಪ್ರೊಟೀನ್‌ ಇದರಲ್ಲಿದೆ. ಹಾಗಾಗಿ ಸಸ್ಯಾಹಾರಿಗಳು ಮತ್ತು ವೇಗನ್‌ಗಳು ಅಧಿಕ ಪ್ರೊಟೀನ್‌ ಆಹಾರಗಳಲ್ಲಿ ಇದನ್ನು ನಿಶ್ಚಿತವಾಗಿ ಪರಿಗಣಿಸಬಹುದು. ಇದರಲ್ಲಿ ಕರಗದಿರುವ ಹಾಗೂ ಕರಗಬಲ್ಲ- ಈ ಎರಡೂ ರೀತಿಯ ನಾರುಗಳಿವೆ. ಕರಗದಿರುವ ನಾರುಗಳು ಜೀರ್ಣಾಂಗಗಳನ್ನು ಸಶಕ್ತ ಮಾಡಿ, ಮಲಬದ್ಧತೆಯನ್ನು ದೂರ ಮಾಡುತ್ತವೆ. ಕರಗಬಲ್ಲ ನಾರುಗಳು ದೇಹದಲ್ಲಿ ಜಮೆಯಾಗಿರುವ ಕೊಬ್ಬಿನಂಶವನ್ನು ಖಾಲಿ ಮಾಡಿಸುತ್ತವೆ. ಮೆಗ್ನೀಶಿಯಂ, ಪೊಟಾಶಿಯಂ, ಕಬ್ಬಿಣ, ಹಲವು ರೀತಿಯ ಬಿ ವಿಟಮಿನ್‌ಗಳು ಮತ್ತು ಉತ್ಕರ್ಷಣ ನಿರೋಧಕಗಳನ್ನು ಇದು ಹೊಂದಿದೆ.
ಪ್ರೋಟನ್‌ ಮತ್ತು ನಾರು- ಈ ಎರಡೂ ಸತ್ವಗಳು ಹೆಚ್ಚಿರುವ ಆಹಾರಗಳು ಬಹುವಿಧಗಳಲ್ಲಿ ನಮ್ಮ ಆರೋಗ್ಯ ಸುಧಾರಣೆಯನ್ನು ಮಾಡಬಲ್ಲವು. ಮಧುಮೇಹ ನಿಯಂತ್ರಣಕ್ಕೆ ಇದು ಸೂಕ್ತವಾದ ಆಹಾರ. ತೂಕ ಇಳಿಸುವವರಿಗಂತೂ ಇದೇ ನಂಬರ್‌ 1. ಗ್ಲೂಟೆನ್‌ ಅಂಶ ಲವಲೇಶವೂ ಇಲ್ಲದಿರುವುದಕ್ಕೆ ಅಲರ್ಜಿಗಳ ರಗಳೆ ಇದರಿಂದ ಕಾಡುವುದಿಲ್ಲ. ಕ್ವೆರ್ಸೆಟಿನ್‌, ಕೆಂಫೆರಾಲ್‌ನಂಥ ಉತ್ಕರ್ಷಣ ನಿರೋಧಕಗಳು ದೇಹದಲ್ಲಿನ ಉರಿಯೂತ ಶಮನ ಮಾಡಿ, ಸ್ವಾಸ್ಥ್ಯ ಕಾಪಾಡುತ್ತವೆ. ಇಂಥ ಒಳ್ಳೆಯ ಆಹಾರವನ್ನು ಬಳಸುವುದು ಹೇಗೆ ಎಂಬ ಸಮಸ್ಯೆ ಹಲವರಿಗೆ ಇರಬಹುದು. ನೋಡುವುದಕ್ಕೆ ಸಿರಿಧಾನ್ಯಗಳ ಅಣ್ಣ-ತಮ್ಮನಂತೆ ಕಾಣುವ ಇದನ್ನು ಹಲವು ರೀತಿಯ ಭಾರತೀಯ ಅಡುಗೆಗಳಲ್ಲಿ ಬಳಸಬಹುದು. ಸಲಾಡ್‌, ಸ್ಮೂದಿಗಳಿಂದ ಹಿಡಿದು, ಉಪ್ಪಿಟ್ಟು, ಅವಲಕ್ಕಿಗಳವರೆಗೆ ಇದನ್ನು ಉಪಯೋಗಿಸಬಹುದು. ಅನ್ನದಂತೆ ಸಾರು, ಪಲ್ಯಗಳೊಂದಿಗೆ ಊಟ ಮಾಡಬಹುದು. ಕಿಚಡಿ, ಬಿಸಿಬೇಳೆಭಾತ್‌, ಪಲಾವಿಗೂ ಇದು ಒದಗಿ ಬರುತ್ತದೆ.

ಇದನ್ನೂ ಓದಿ: Foods For Weight Loss: ಈ ಆಹಾರಗಳನ್ನು ಸೇವಿಸಿ; ಸಲೀಸಾಗಿ ತೂಕ ಇಳಿಸಿ!

ಗೆದ್ದವರು ಯಾರು?

ಇವೆರಡರ ಪ್ರವರಗಳನ್ನೆಲ್ಲ ನೋಡಿದ್ದಾಯಿತು. ಈಗ ವಿಜೇತರನ್ನು ಘೋಷಿಸುವ ಸಮಯ… ಇವೆರಡರಲ್ಲಿ ಯಾವುದನ್ನೇ ತಿಂದರೂ ಅಥವಾ ಎರಡನ್ನೂ ತಿಂದರೂ, ಗೆಲ್ಲುವುದು ಮಾತ್ರ ತಿಂದವರು! ಕಾರಣ, ಆರೋಗ್ಯ ಸುಧಾರಿಸುವುದು ಅವರದ್ದೇ ತಾನೆ?

Exit mobile version