ಇತ್ತೀಚೆಗಷ್ಟೇ ದೀಪಾವಳಿಯ ಸಂದರ್ಭದಲ್ಲಿ ಅಭ್ಯಂಗ ಸ್ನಾನದ (Massage oil) ಮಹತ್ವದ ಬಗ್ಗೆ ಒಂದಿಷ್ಟು ಕೇಳಿರುತ್ತೇವೆ. ದೇಹಕ್ಕೆ ಹದವಾಗಿ ಎಣ್ಣೆ ತಿಕ್ಕಿ, ಬಿಸಿ ನೀರಿನ ಸ್ನಾನವು ತರುವ ಸುಖ ಮತ್ತು ಲಾಭಗಳ ಬಗ್ಗೆಯೂ ಕೇಳಿರಬಹುದು. ಈಗಂತೂ ಚಳಿಗಾಲ. ಅಭ್ಯಂಗ ಸ್ನಾನವು ಆರೋಗ್ಯಕ್ಕೆ ಹಲವು ರೀತಿಯಲ್ಲಿ ಲಾಭಗಳನ್ನು ತರಬಲ್ಲದು. ಮಾನಸಿಕ ಆರೋಗ್ಯದ ಜೊತೆಗೆ ದೇಹಕ್ಕೂ ಆರಾಮ ನೀಡಬಲ್ಲದು. ಚಳಿಗೆ ಸುಕ್ಕಾಗಿ, ಬಿರಿಯುವ ಚರ್ಮವನ್ನು ನುಣುಪಾಗಿಸಬಲ್ಲದು. ಆದರೆ ಎಲ್ಲರಿಗೂ ಒಂದೇ ರೀತಿಯ ಎಣ್ಣೆಯನ್ನು ಉಪಯೋಗಿಸಬಹುದೇ? ಯಾವ ರೀತಿಯ ಚರ್ಮಕ್ಕೆ ಎಂಥ ಎಣ್ಣೆ ಸೂಕ್ತ? ಈ ಬಗ್ಗೆ ಒಂದಿಷ್ಟು ಮಾಹಿತಿ.
ಕೊಬ್ಬರಿ ಎಣ್ಣೆ (Coconut Oil)
ಎಲ್ಲರಿಗೂ ಕೈಗೆಟುವಂಥ ಈ ಎಣ್ಣೆ ಚರ್ಮದ ಮೇಲೆ ಅಪಾರವಾದ ಧನಾತ್ಮಕ ಪರಿಣಾಮವನ್ನು ಬೀರುತ್ತದೆ. ತೀರಾ ಜಿಡ್ಡೂ ಅಲ್ಲದ ಈ ತೈಲ ಹಗುರವಾಗಿದ್ದು ಚರ್ಮವು ಬೇಗನೇ ಹೀರಿಕೊಳ್ಳಲು ಸೂಕ್ತವಾಗಿದೆ. ಮೈ ಮೇಲೆ ಕೆಂಪಾಗಿ ತುರಿಕೆಯಿದ್ದರೆ, ಸಣ್ಣ ಗುಳ್ಳೆಗಳಿದ್ದರೆ ಅವೆಲ್ಲವನ್ನೂ ಈ ಎಣ್ಣೆ ಕಡಿಮೆ ಮಾಡಬಲ್ಲದು.
ಎಂಥಾ ಚರ್ಮಕ್ಕೆ?
ಕೊಬ್ಬರಿ ಎಣ್ಣೆ ಸಾಮಾನ್ಯವಾಗಿ ಎಲ್ಲ ಬಗೆಯ ಚರ್ಮಕ್ಕೂ ಒಗ್ಗುವಂಥದ್‌ದು. ಒಣ ಚರ್ಮಕ್ಕಂತೂ ಇದು ಹೇಳಿ ಮಾಡಿಸಿದ್ದು. ಇದರಲ್ಲಿ ಸಾಂದ್ರವಾಗಿರುವ ಉತ್ತಮ ಕೊಬ್ಬಿನಂಶವು ಚರ್ಮದ ರೂಕ್ಷತೆಯನ್ನು ಕಡಿಮೆ ಮಾಡುತ್ತದೆ. ಸಾಮಾನ್ಯ ಚರ್ಮಕ್ಕೆ ಅತಿಯಾಗಿ ಜಿಡ್ಡು ಮಾಡದೆಯೇ ತೇವವನ್ನು ನೀಡುತ್ತದೆ. ಹಾಗಾಗಿ ಸಾಮಾನ್ಯ ತ್ವಚೆಯವರಿಗೂ ಇದು ಸೂಕ್ತ. ಸೂಕ್ಷ್ಮ ಚರ್ಮದವರಿಗೂ ಇದು ಒಗ್ಗುತ್ತದೆ. ಆದರೆ ಸೂಕ್ಷ್ಮ ಚರ್ಮ ಹೊಂದಿದವರು ಒಮ್ಮೆ ಪರಿಕ್ಷಾರ್ಥವಾಗಿ ಚರ್ಮದ ಒಂದು ಭಾಗಕ್ಕೆ ಬಳಸಿ ನೋಡುವುದು ಉತ್ತಮ. ಆಗ ಯಾವುದೇ ಸಮಸ್ಯೆ ಕಾಣದಿದ್ದರೆ ಮೈಗೆಲ್ಲ ಹಚ್ಚಿಕೊಳ್ಳಬಹುದು. ಮೊಡವೆ ಇರುವಂಥವರು ಆ ಭಾಗಕ್ಕೆ ಎಣ್ಣೆ ಲೇಪಿಸದೆ ಇರುವುದು ಸೂಕ್ತ.
ಚರ್ಮದ ಲೇಪಕ್ಕಾಗಿ ರಿಫೈನ್ ಮಾಡಿದ ಎಣ್ಣೆಗಳನ್ನು ಎಂದಿಗೂ ಬಳಸಬೇಡಿ. ಆದಷ್ಟೂ ಶುದ್ಧ ಕೊಬ್ಬರಿ ಎಣ್ಣೆಯೇ ಶ್ರೇಷ್ಠ. ಇದರಲ್ಲಿರುವ ಉತ್ಕರ್ಷಣ ನಿರೋಧಕಗಳು ಚರ್ಮ ಸುಕ್ಕಾಗುವುದನ್ನು ಮುಂದೂಡುತ್ತವೆ. ನಿಯಮಿತವಾಗಿ ಕೊಬ್ಬರಿ ಎಣ್ಣೆ ಲೇಪಿಸುವುದರಿಂದ ತಾರುಣ್ಯಭರಿತ ತ್ವಚೆಯನ್ನು ಹೊಂದುವುದಕ್ಕೆ ಸಾಧ್ಯವಿದೆ.
ಆಲಿವ್ ಎಣ್ಣೆ (Olive Oil)
ಇದರಲ್ಲಿ ಜಿಡ್ಡು ಹೆಚ್ಚಿದ್ದರೂ, ಲೇಪಿಸಿದಾಗ ಲಘುವಾಗಿಯೇ ಇರುತ್ತದೆ. ಗರ್ಭಿಣಿಯರು ಹೊಟ್ಟೆಯ ಮೇಲಿನ ಸ್ಟ್ರೆಚ್ ಮಾರ್ಕ್ ತಡೆಯುವುದಕ್ಕೆ ಇದನ್ನು ಲೇಪಿಸುವ ಕ್ರಮ ಪಶ್ಚಿಮ ದೇಶಗಳಲ್ಲಿದೆ. ಇದರಲ್ಲಿ ಒಮೇಗಾ ೩ ಕೊಬ್ಬಿನಾಮ್ಲ ಸಾಂದ್ರವಾಗಿದ್ದು ಚರ್ಮದ ಆರೋಗ್ಯವನ್ನು ಸುಧಾರಿಸುತ್ತದೆ. ಸುಕ್ಕುಗಳನ್ನು ನಿವಾರಿಸಿ, ಹೊಳೆಯುವ ತ್ವಚೆಯನ್ನು ನೀಡುತ್ತದೆ.
ಎಂಥಾ ಚರ್ಮಕ್ಕೆ?
ಮೊಡವೆ ಇರುವಂಥ ಚರ್ಮಕ್ಕೆ ಇದು ತೀರಾ ಜಿಡ್ಡೆನಿಸಬಹುದು. ಇದರಿಂದ ಮೊಡವೆಯ ಸಮಸ್ಯೆ ಹೆಚ್ಚಿದರೂ ಅಚ್ಚರಿಯಿಲ್ಲ. ಹಾಗಾಗಿ ಅಂಥವರು ಜಿಡ್ಡು ಕಡಿಮೆಯಿರುವ ಎಣ್ಣೆಗಳನ್ನು ಬಳಸುವುದು ಸೂಕ್ತ. ಉಳಿದಂತೆ ಸಾಮಾನ್ಯ ಚರ್ಮಕ್ಕೆ ಇದರಿಂದ ಸಮಸ್ಯೆಯಾಗುವುದಿಲ್ಲ. ಒಣ ಚರ್ಮದವರಿಗೆ ಇದು ಒಳ್ಳೆಯದು. ಸೂಕ್ಷ್ಮ ಚರ್ಮಕ್ಕೂ ಇದು ಸಮಸ್ಯೆ ಕೊಡುವುದು ಅಪರೂಪ. ಆದರೆ ಒಮ್ಮೆ ಪರೀಕ್ಷಾರ್ಥವಾಗಿ ಸಣ್ಣ ಭಾಗಕ್ಕೆ ಲೇಪಿಸಿ ನೋಡುವುದು ಸೂಕ್ತ.
ಎಳ್ಳೆಣ್ಣೆ (Sesame Oil)
ಆಯುರ್ವೇದದಲ್ಲಿ ಅಭ್ಯಂಗಕ್ಕೆ ಸಾಮಾನ್ಯವಾಗಿ ಬಳಸುವ ತೈಲವಿದು. ಇದರಲ್ಲಿರುವ ಸತ್ವಗಳು ಬಹಳಷ್ಟು ಲಾಭಗಳನ್ನು ಬಳಸುವವರಿಗೆ ಒದಗಿಸುತ್ತವೆ. ಕೊಬ್ಬರಿ ಎಣ್ಣೆಗೆ ಹೋಲಿಸಿದಲ್ಲಿ ಸ್ವಲ್ಪ ಜಿಡ್ಡು ಹೆಚ್ಚೇ ಎನ್ನಬಹುದಾದರೂ, ಲಾಭಗಳು ಸಹ ಹೆಚ್ಚೆ ಎನ್ನಬಹುದು.
ಎಂಥಾ ಚರ್ಮಕ್ಕೆ?
ಸಾಮಾನ್ಯ ಚರ್ಮಕ್ಕೆ ಅಗತ್ಯವಾದ ನೆಯವನ್ನು ತುಂಬಿ, ಒರಟುತನವನ್ನು ಮಾಯವಾಗಿಸುತ್ತದೆ ಈ ತೈಲ. ಒಣ ಚರ್ಮದ ಸಮಸ್ಯೆಗೆ ಇದು ಪರಿಹಾರ ನೀಡಬಲ್ಲದು. ನಿಯಮಿತ ಬಳಕೆಯಿಂದ ತ್ವಚೆಯ ಶುಷ್ಕತೆ ಮತ್ತು ಕಿರಿಕಿರಿಯನ್ನು ಕಡಿಮೆ ಮಾಡಿಕೊಳ್ಳುವುದಕ್ಕೆ ಸಾಧ್ಯ. ಸೂಕ್ಷ್ಮ ಚರ್ಮದವರಿಗೆ ಇದೇನೂ ತೊಂದರೆ ಮಾಡುವುದಿಲ್ಲ. ಮೊಡವೆ ಇರುವಂಥ ಚರ್ಮಕ್ಕೂ ಇದು ಸಮಸ್ಯೆ ನೀಡದು. ಸಾಮಾನ್ಯವಾಗಿ ಎಲ್ಲ ರೀತಿಯ ಚರ್ಮಕ್ಕೂ ಹೊಂದಿಕೊಳ್ಳುವಂಥ ತೈಲವಿದು.
ಸಾಸಿವೆ ಎಣ್ಣೆ (Mustard Oil)
ಉಳಿದೆಲ್ಲ ಎಣ್ಣೆಗಳಿಗೆ ಹೋಲಿಸಿದಲ್ಲಿ ಅಭ್ಯಂಗಕ್ಕಾಗಿ ಇದರ ಬಳಕೆ ಕಡಿಮೆ. ಆದರೆ ಬಳಸುವುದರಿಂದ ಆಗುವ ಪ್ರಯೋಜನ ಕಡಿಮೆಯೇನಲ್ಲ. ಮೊಡವೆ ಇರುವಂಥವರಿಗೆ ಇದು ಹೇಳಿಸಿದಂಥ ಎಣ್ಣೆ. ಇದರಲ್ಲಿರುವ ಉತ್ಕರ್ಷಣ ನಿರೋಧಕಗಳು ಮತ್ತು ಬ್ಯಾಕ್ಟೀರಿಯ ಪ್ರತಿರೋಧಕ ತತ್ವಗಳು ಮೊಡವೆಯನ್ನು ನಿಯಂತ್ರಿಸಲು ನೆರವಾಗುತ್ತವೆ. ಸಾಮಾನ್ಯ, ಸೂಕ್ಷ್ಮ ಮತ್ತು ಒಣ ತ್ವಚೆಗಳೆಲ್ಲರಿಗೂ ಇದು ಬಳಸಲು ಯೋಗ್ಯವಾದ ತೈಲ. ತ್ವಚೆಯ ಮೇಲಿನ ಸುಕ್ಕುಗಳನ್ನು ನಿವಾರಿಸಿ, ಚರ್ಮಕ್ಕೆ ಜೀವಕಳೆಯನ್ನು ತರುತ್ತದೆ. ಒಣ ತ್ವಚೆಗೆ ತೇವ ತುಂಬಿ ತುರಿಕೆಯನ್ನು ಕಡಿಮೆ ಮಾಡುತ್ತದೆ.
ಬಾದಾಮಿ ಎಣ್ಣೆ (Almond Oil)
ಪುಟ್ಟ ಮಕ್ಕಳಿಗೆ ಕೊಬ್ಬರಿ ಎಣ್ಣೆಯನ್ನು ಬಿಟ್ಟರೆ ಬಾದಾಮಿ ಎಣ್ಣೆಯನ್ನೇ ಮಸಾಜ್‌ಗಾಗಿ ಬಳಸುವ ಸಂಪ್ರದಾಯ ಹೆಚ್ಚಿನ ಕಡೆಗಳಲ್ಲಿದೆ. ಎಲ್ಲಾ ರೀತಿಯ ಚರ್ಮಕ್ಕೂ ಹೊಂದುವಂಥ ಹಗುರವಾದ, ಹೆಚ್ಚು ಜಿಡ್ಡಿಲ್ಲದ ಆದರೆ ಚರ್ಮಕ್ಕೆ ಅತ್ತ್ಯುತ್ತಮ ಪೋಷಕಾಂಶಗಳನ್ನು ಒದಗಿಸುವ ಎಣ್ಣೆಯಿದು.
ಸಾಮಾನ್ಯ ಮತ್ತು ಒಣ ಚರ್ಮಗಳಿಗೆ ಇದು ಒಳ್ಳೆಯ ಆಯ್ಕೆ. ಹೆಚ್ಚು ಜಿಡ್ಡಿಲ್ಲದಿದ್ದರೂ, ತ್ವಚೆಯ ತೇವ ಹೆಚ್ಚಿಸಿ, ಚರ್ಮವನ್ನು ಮೃದುವಾಗಿಸುತ್ತದೆ. ಇದರಲ್ಲಿರುವ ವಿಟಮಿನ್ ಇ ಅಂಶವು ಚರ್ಮದ ಹೊಳಪು, ತಾರುಣ್ಯ ಹೆಚ್ಚಿಸುತ್ತದೆ. ಸೂಕ್ಷ್ಮ ಚರ್ಮದವರೂ ಇದನ್ನು ಬಳಸಬಹುದು. ಚರ್ಮದ ಕೊಲಾಜಿನ್ ಹೆಚ್ಚಿಸಿ, ತ್ವಚೆಯ ಮೇಲಿನ ಸುಕ್ಕುಗಳನ್ನು ತೆಗೆಯುತ್ತದೆ. ಮೊಡವೆ ಇರುವವರು ಚರ್ಮ ಕೆಂಪಾಗಿ ಊದಿಕೊಂಡ ಭಾಗಗಳಿಗೆ ಹಚ್ಚುವ ಮುನ್ನ ಎಚ್ಚರ ವಹಿಸುವುದು ಒಳ್ಳೆಯದು.
ಇದನ್ನೂ ಓದಿ: Medicinal Leaves: Medicinal Leaves With Their Health Benefits
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ