Site icon Vistara News

Omega 3 Foods: ಈ ಸಮಸ್ಯೆಗಳು ನಿಮಗಿದ್ದರೆ ಅದಕ್ಕೆ ಒಮೆಗಾ 3 ಕೊರತೆಯೂ ಕಾರಣವಿರಬಹುದು!

omega 3 fatty acid foods

ಬಹಳಷ್ಟು ಸಾರಿ ನಾವು ನಮ್ಮ ಆಹಾರದಲ್ಲಿ ಎಲ್ಲ ವಿಟಮಿನ್ನುಗಳೂ, ಖನಿಜಾಂಶಗಳೂ ಇರುವುದು ಮುಖ್ಯ ಎಂಬ ವಿಚಾರದ ಬಗ್ಗೆ ಅರಿವಿದ್ದರೂ, ಒಮೆಗಾ 3 ಫ್ಯಾಟಿ ಆಸಿಡ್‌ಗಳ (Omega 3 Fatty acid) ಬಗ್ಗೆ ನಿರ್ಲಕ್ಷ್ಯ ಧೋರಣೆ ತೋರುತ್ತೇವೆ. ನಮ್ಮ ನಿತ್ಯದ ಆಹಾರದಲ್ಲಿ ಇರುವ ಪೋಷಕಾಂಶಗಳ ಪೈಕಿ ಒಮೆಗಾ 3 (Omega 3 food) ಇರುವುದು ಅತ್ಯಂತ ಮುಖ್ಯ. ಇವುಗಳ ಕೊರತೆಯಾದರೆ, (Omega 3 scarcity) ಅದು ಆರೋಗ್ಯದ ಮೇಲೆ ಪರಿಣಾಮವನ್ನೂ ಬೀರುತ್ತದೆ. ನಮ್ಮ ಮಿದುಳು, ಹೃದಯ ಸೇರಿದಂತೆ ದೇಹ ಮಾಡುವ ಕೆಲಸಗಳಿಗೆ ಚುರುಕನ್ನು ನೀಡಲು, ಶಕ್ತಿ ನೀಡಲು, ಒಮೆಗಾ 3 ಫ್ಯಾಟಿ ಆಸಿಡ್‌ಗಳು ನೆರವಾಗುತ್ತವೆ. ಇವುಗಳ ಕೊರತೆಯಾದ ತಕ್ಷಣ ಅದು ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಬಹಳ ಸಾರಿ ಒಮೆಗಾ 3ಯ ಕೊರತೆ ನಮಗೆ ಗೊತ್ತೇ ಆಗುವುದಿಲ್ಲ. ಹಾಗಾದರೆ ಬನ್ನಿ, ಯಾವೆಲ್ಲ ತೊಂದರೆಗಳು ಕಾಣಿಸಿಕೊಂಡರೆ ಅದು ಒಮೆಗಾ 3ಯ ಕೊರತೆಯಿಂದಲೂ ಇರಬಹುದು ಎಂದು ಕಂಡು ಹಿಡಿಯಬಹುದು ಎಂಬುದನ್ನು (health tips) ನೋಡೋಣ.

1. ಗಂಟು ನೋವು: ಗಂಟು ಗಂಟುಗಳಲ್ಲಿ ನೋವು ಕಾಣಿಸಿಕೊಂಡರೆ ಸಾಮಾನ್ಯವಾಗಿ ಕ್ಯಾಲ್ಶಿಯಂ ಕೊರತೆಯಿದೆ ಎಂದೇ ಭಾವಿಸಲಾಗುತ್ತದೆ. ಆದರೆ, ಇದು ಕ್ಯಾಲ್ಶಿಯಂ ಕೊರತೆಯೇ ಆಗಿರಬೇಕಿಲ್ಲ. ಸಂಶೋಧನೆಯ ಪ್ರಕಾರ ಇದು ಒಮೆಗಾ 3 ಮಟ್ಟದ ಇಳಿಕೆಯೂ ಆಗಿರಬಹುದು. ಯಾಕೆಂದರೆ, ಒಮೆಗಾ 3 ಎಲುಬಿನ ಆರೋಗ್ಯಕ್ಕೆ ಅತ್ಯಂತ ಮುಖ್ಯವಾದುದು. ಮೂಳೆಸವೆತ, ಸಂಧಿವಾತ, ಮೂಳೆ ಮುರಿತದಂತಹ ಸಂದರ್ಭಗಳಲ್ಲಿ ಒಮೆಗಾ 3 ನಮ್ಮ ಎಲುಬಿಗೆ ಅತ್ಯಂತ ಅವಶ್ಯಕ.

2. ತಲೆಸುತ್ತು: ಆಗಾಗ ತಲೆಸುತ್ತು ಬರುತ್ತದೆಯೇ? ಮೊದಲು ಸುಲಭವಾಗಿ ಮಾಡಿ ಮುಗಿಸುತ್ತಿದ್ದ ಕೆಲಸವನ್ನು ಈಗ ಅಷ್ಟು ಸುಲಭವಾಗಿ ಮಾಡಿ ಮುಗಿಸಲಾಗುತ್ತಿಲ್ಲವೇ? ಇದಕ್ಕೆ ಬಹಳ ಕಾರಣಗಳಿರುವ ಸಾಧ್ಯತೆಗಳಿವೆ. ಅವುಗಳ ಪೈಕಿ ಒಮೆಗಾ 3 ಕೊರತೆಯಿಂದಲೂ ಆಗಿರಬಹುದು. ಒಮೆಗಾ 3 ಫ್ಯಾಟಿ ಆಸಿಡ್‌ಗಳು ಅಡೆನೋಸೈನ್‌ ಟ್ರೈಪೋಸ್ಪೇಟ್‌ (ಎಟಿಪಿ) ಉತ್ಪತ್ತಿ ಮಾಡುವ ಮೂಲಕ ಶಕ್ತಿ ಉತ್ಪಾದನೆಯಲ್ಲಿ ಸಹಾಯ ಮಾಡುತ್ತದೆ.

3. ದುರ್ಬಲ ಉಗುರು: ನಿಮ್ಮ ಉಗುರು ಬಹುಬೇಗನೆ ಮುರಿಯುತ್ತಿದೆಯೇ? ಮೊದಲಿಗಿಂತ ದುರ್ಬಲವಾಗಿದೆ ಅನಿಸುತ್ತಿದೆಯಾ? ಹಾಗಿದ್ದರೆ ಇದಕ್ಕೆ ಕಾರಣ ಒಮೆಗಾ 3 ಕೊರತೆಯೂ ಆಗಿರಬಹುದು. ಯಾಕೆಂದರೆ ಒಮೆಗಾ 3 ಉಗುರನ್ನು ಗಟ್ಟಿಗೊಳಿಸುವಲ್ಲಿ ಸಹಾಯ ಮಾಡುತ್ತದೆ. ಜೊತೆಗೆ ಅದನ್ನು ಆರೋಗ್ಯದಿಂದ ಹೊಳೆಯುವಂತೆ ಮಾಡುತ್ತದೆ. ಆದ್ದರಿಂದ ಇದರ ಕೊರತೆಯು ಉಗುರಿನ ಆರೋಗ್ಯದ ಮೇಲೆಯೂ ಪರಿಣಾಮ ಬೀರುತ್ತದೆ.

ಇದನ್ನೂ ಓದಿ: Clove benefits: ಲವಂಗದ ಎರಡು ಎಸಳು ನಿತ್ಯ ಬಳಸಿದರೆ ಹಲವು ಕಾಯಿಲೆ ದೂರ!

4. ಒಣ ಚರ್ಮ: ಪ್ರತಿಯೊಬ್ಬರಿಗೂ ಅವರವರ ಚರ್ಮ ಆರೋಗ್ಯದಿಂದ ನಳನಳಿಸುತ್ತಿರಬೇಕು ಎಂಬ ಬಯಕೆಯಿರುವುದು ಸಾಮಾನ್ಯ. ಆದರೆ ಚರ್ಮ ಒಣಗಿದಂತಾದಾಗ ನಾವು ಸಾಮಾನ್ಯವಾಗಿ ಹವಾಮಾನವನ್ನು, ಚಳಿಗಾಲವನ್ನು ಬೈಯುವುದು ಸಹಜ. ಅದರಿಂದಾಗಿಯೇ ಚರ್ಮ ಹೀಗಾಗಿದೆ ಎಂದುಕೊಂಡು ಚರ್ಮದ ಹೊರಗಿನ ಕಾಳಜಿಯನ್ನೇ ಮಾಡುತ್ತೇವೆ. ಆದರೆ, ಇದಕ್ಕೆ ಕಾರಣ ಒಮೆಗಾ 3ಯ ಕೊರತೆಯೂ ಆಗಿರಬಹುದು ಎಂಬುದನ್ನು ಅರಿಯುವುದೂ ಕೂಡಾ ಮುಖ್ಯ. ಚರ್ಮದಲ್ಲಿ ಅಲ್ಲಲ್ಲಿ ಒಣಗಿದಂತಾಗುವುದು, ತುರಿಕೆ, ಚರ್ಮ ಕೆಂಪಾಗುವುದು ಇತ್ಯಾದಿ ಸಮಸ್ಯೆಗಳುಂಟಾದರೆ ಅದಕ್ಕೆ ಒಮೆಗಾ 3 ಕೊರತೆಯೂ ಕಾರಣವಾಗಿರಬಹುದು.

5. ಮರೆವು: ಕೆಲವೊಮ್ಮೆ ಮರೆವು ಹೆಚ್ಚಾಗುತ್ತಿದೆ ಎಂದನಿಸಿದೆಯೇ? ವಿಷಯಗಳನ್ನು ಸರಿಯಾಗಿ ಯೋಚಿಸಲು ಅರ್ಥ ಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಅನಿಸುತ್ತಿದೆಯೇ? ಹಾಗಾದರೆ ಇದಕ್ಕೆ ಕಾರಣ ಒಮೆಗಾ 3 ಕೊರತೆಯೂ ಕಾರಣವಾಗಿರಬಹುದು. ಮಿದುಳಿನ ಆರೋಗ್ಯಕ್ಕೆ ಒಮೆಗಾ 3 ಬಹಳ ಮುಖ್ಯ. ಖಿನ್ನತೆ ಒತ್ತಡದಂತಹ ಸಮಸ್ಯೆಗಳು ಬರದಂತೆ ಕಾಪಾಡಲು ಒಮೆಗಾ 3 ಸೇವನೆ ಅತ್ಯಂತ ಅಗತ್ಯ.

ಇದನ್ನು ಸೇವಿಸಿ: ಹಾಗಿದ್ದರೆ ಈ ಕೊರತೆ ತುಂಬಿಸಿಕೊಳ್ಳಲು ಯಾವ ಆಹಾರ ಸೇವಿಸಬೇಕು? ಮೀನು ಮತ್ತು ಇತರ ಸಮುದ್ರಾಹಾರ, ಅಗಸೆಬೀಜ, ಚಿಯಾ ಬೀಜಗಳು ಮತ್ತು ವಾಲ್‌ನಟ್ಸ್‌ನಂತಹ ಬೀಜಗಳು, ಅಗಸೆಬೀಜದ ಎಣ್ಣೆ, ಸೋಯಾಬೀನ್ ಎಣ್ಣೆ, ತೆಂಗಿನೆಣ್ಣೆಯಂತಹ ಸಸ್ಯಮೂಲ ತೈಲಗಳು, ಬಾದಾಮಿ, ಕಡಲೆ, ಪಾಲಕ್‌ ಸೊಪ್ಪು ಇತ್ಯಾದಿಗಳಲ್ಲಿ ಒಮೆಗಾ 3 ದಂಡಿಯಾಗಿದೆ.

ಇದನ್ನೂ ಓದಿ: Skin Care Foods: 40ರ ನಂತರವೂ ಚರ್ಮ ಹೊಳೆಯಬೇಕೇ? ಹಾಗಾದರೆ ಇವಿಷ್ಟು ನೆನಪಿರಲಿ!

Exit mobile version