Site icon Vistara News

Oregano Benefits: ಪಿಜ್ಜಾ ಟಾಪಿಂಗ್‌ ʻಓರಿಗಾನೋʼ ಘಮದಲ್ಲಷ್ಟೇ ಅಲ್ಲ, ಗುಣದಲ್ಲೂ ಮೇಲು!

oregano benefits

ಇಟಾಲಿಯನ್‌ ಆಹಾರದಲ್ಲಿ ಮುಖ್ಯವಾಗಿ ಆಕರ್ಷಿಸುವ ಘಮ ಎಂದರೆ ಅದು ಓರಿಗಾನೋ! ಪಿಜ್ಜಾ, ಪಾಸ್ತಾ ತಿನ್ನುವಾಗ ಮೇಲಿನಿಂದ ಈ ಓರಿಗಾನೋ ಹಾಕಿ ಆಹಾ ಎಂದು ಬಾಯಿ ಚಪ್ಪರಿಸುತ್ತೇವೆ. ನಮ್ಮ ನೆಲದ ಮಸಾಲೆ ಪದಾರ್ಥಗಳಿಗಿಂತ ಕೊಂಚ ಭಿನ್ನ ಘಮದ ಈ ಮಸಾಲೆ, ತಾನು ಹೋದಲ್ಲೆಲ್ಲ ತನ್ನ ಇರುವನ್ನು ಉಳಿಸಿಯೇ ಹೋಗುತ್ತದೆ. ರುಚಿಗೆ ಹೆಚ್ಚುವ ಈ ಘಮವನ್ನು ಮರೆಯುವುದು ಅಸಾಧ್ಯವಾದ್ದರಿಂದಲೇ, ಭಾಯಿ ಚಪ್ಪರಿಸುವ ಪಿಜ್ಜಾದತ್ತ ಮತ್ತೆ ಮತ್ತೆ ಸೆಳೆಯಲ್ಪಡುತ್ತೇವೆ. ಪಿಜ್ಜಾ ಅತಿಯಾಗಿ ಆಗಾಗ ತಿನ್ನುವುದರಿಂದ ಸಾಕಷ್ಟು ಅಡ್ಡ ಪರಿಣಾಮಗಳೇನೋ ಇರಬಹುದು ನಿಜ, ಆದರೆ, ಈ ಓರಿಗಾನೋ ಎಂಬ ಪರಿಮಳಭರಿತ ಎಲೆಯಿಂದ ನಮ್ಮ ಆರೋಗ್ಯಕ್ಕೆ ಸಾಕಷ್ಟು ಉಪಯೋಗಗಳೂ ಇವೆ ಎಂದರೆ ನಂಬುತ್ತೀರಾ?

ಹೌದು, ಎಲ್ಲ ಭಾರತೀಯ ಮಸಾಲೆ ಪದಾರ್ಥಗಳಂತೆ ಓರಿಗಾನೋ ಎಂಬ ಇಟಾಲಿಯನ್‌ ಮಸಾಲೆ ಪದಾರ್ಥವೂ ಹಲವಾರು ಆರೋಗ್ಯಕರ ಲಾಭಗಳನ್ನು ಹೊತ್ತು ತಂದಿದೆ. ಅದು ಈ ಎಲೆಯ ಒಣಗಿಸಿದ ಪುಡಿ ರೂಪದಲ್ಲಾಗಿರಬಹುದು ಅಥವಾ ತಾಜಾ ಎಲೆಯಾಗಿರಬಹುದು ಅಥವಾ ಎಣ್ಣೆಯ ರೂಪದಲ್ಲಾದರೂ ಆಗಿರಬಹುದು.

೧. ಓರಿಗಾನೋ ತಾಜಾ ಎಲೆಗಳನ್ನು ನಮ್ಮ ನಿತ್ಯದ ಆಹಾರದಲ್ಲಿ ಸೇರಿಸುವುದರಿಂದ ದೇಹದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಾಗುತ್ತದಂತೆ. ಕೇವಲ ಒಂದು ಗ್ರಾಂ ಓರಿಗಾನೋ ಎಲೆಯಲ್ಲಿ ಸೇಬಿಗಿಂತ ೪೨ ಪಟ್ಟು ಹೆಚ್ಚು ಆಂಟಿ ಆಕ್ಸಿಡೆಂಟ್‌ ಗುಣವಿದೆಯಂತೆ. ಓರಿಗಾನೋ ವಿಟಮಿನ್‌ ಸಿ ಹಾಗೂ ಎ ಯಿಂದ ಸಂಪದ್ಭರಿತವಾಗಿರುವುದರಿಂದ ಇದರ ಉಪಯೋಗ ಒಳ್ಳೆಯದು.

೨. ಇದು ಜೀರ್ಣಕ್ರಿಯೆಯನ್ನು ಉದ್ದೀಪಿಸುತ್ತದೆ. ಒರಿಗಾನೋ ಎಲೆಗಳಲ್ಲಿ ಸಾಕಷ್ಟು ನಾರಿನಂಶ ಇರುವುದರಿಂದ ಇದು ಜೀರ್ಣಕ್ರಿಯೆಯನ್ನು ಚುರುಕಾಗಿಸುತ್ತದೆ. ಆರೋಗ್ಯಕರ ಜೀರ್ಣಕ್ರಿಯೆಗೆ ಓರಿಗಾನೋ ಒಳ್ಳೆಯದು. ನಮ್ಮ ದೇಹದ ಜೀರ್ಣಕ್ರಿಯೆಗೆ ಹಾಗೂ ಬೇಡವಾದ ಕಲ್ಮಶಗಳನ್ನು ದೇಹದಿಂದ ಹೊರಕ್ಕೆ ಸಾಗಿಸಲು ನಾರಿನಂಶದ ಪಾತ್ರ ದೊಡ್ಡದು. ಹೀಗಾಗಿ ಈ ಕೆಲಸದಲ್ಲಿ ಓರಿಗಾನೋ ಮುಖ್ಯ ಪಾತ್ರ ವಹಿಸುತ್ತದೆ.ಇದು ಸಕ್ಕರೆಯ ಪ್ರಮಾಣದನ್ನು ಸಮತೋಲನದಲ್ಲಿ ಕಾಯ್ದುಕೊಂಡು ಆರೋಗ್ಯವಾಗಿರಿಸುತ್ತದೆ. ಪ್ರತಿಯೊಬ್ಬ ಮನುಷ್ಯನಿಗೂ ಪ್ರತಿದಿನಕ್ಕೆ ಅತ್ಯುತ್ತಮ ಜೀರ್ಣಕ್ರಿಯೆಗೆ ೧೫ ಗ್ರಾಂಗಳಷ್ಟು ನಾರು ಬೇಕು.

೩. ಎಲುಬಿನ ಆರೋಗ್ಯ ಹೆಚ್ಚಿಸುತ್ತದೆ. ವಯಸ್ಸಾಗುತ್ತಿದ್ದಂತೆ ಎಲುವಿನ ಆರೋಗ್ಯವೂ ಕ್ಷೀಣಿಸುತ್ತಾ ಬರುತ್ತದೆ. ಅದಕ್ಕಾಗಿ, ವಯಸ್ಸಾದ ಮೇಲೆ ಜೀವಸತ್ವಗಳು ಹಾಗೂ ಖನಿಜಾಂಶಯುಕ್ತ ಆಹಾರ ಸೇವನೆ ಅತ್ಯಂತ ಅಗತ್ಯ. ಒರಿಗಾನೋನಲ್ಲಿ ಕ್ಯಾಲ್ಶಿಯಂ, ಕಬ್ಬಿಣಾಂಶ, ಮ್ಯಾಂಗನೀಸ್‌ ಹಾಗೂ ಎಲುಬಿಗೆ ಬೇಕಾದ ಎಲ್ಲ ರೀತಿಯ ಖನಿಜಾಂಶಗಳೂ ಇವೆ. ವಿಟಮಿನ್‌ ಡಿ ಇದರಲ್ಲಿರುವ ಕ್ಯಾಲ್ಶಿಯಂ ಸಂಪೂರ್ಣವಾಗಿ ಹೀರುವಲ್ಲಿ ಸಹಾಯ ಮಾಡುತ್ತದೆ. ಎಲುಬಿನ ಸವೆತ, ಎಲುಬು ಸಂಬಂಧೀ ನೋವು ಇರುವ ಮಂದಿಗೆ ಓರಿಗಾನೋ ಸೇವನೆ ಅತ್ಯಂತ ಉಪಯುಕ್ತ.

ಇದನ್ನೂ ಓದಿ: Lemon benefits: ನಿಂಬೆಹಣ್ಣು ಒಳ್ಳೆಯದೆಂದು ಹೆಚ್ಚು ಸೇವಿಸಿದರೆ ಏನಾಗಬಹುದು ಗೊತ್ತೇ?

೪. ಮಧುಮೇಹವನ್ನು ಸಮತೋಲನದಲ್ಲಿಡಲು ಇದು ಸಹಾಯ ಮಾಡುತ್ತದೆ. ಒರಿಗಾನೋ ಮಧುಮೇಹಕ್ಕೆ ಒಳ್ಳೆಯ ಪರಿಹಾರ. ಈಗಾಗಲೇ ಈ ಬಗ್ಗೆ ಹೆಚ್ಚಿನ ಸಂಶೋಧನೆಗಳೂ ನಡೆಯುತ್ತಿದ್ದು, ಮುಂದೊಂದು ದಿನ ಮಧುಮೇಹದ ಚಿಕಿತ್ಸೆಯಲ್ಲಿ ಒರಿಗಾನೋ ಕೂಡಾ ಸ್ಥಾನ ಪಡೆಯಬಹುದು.

೫. ಓರಿಗಾನೋ ಎಲೆಯು ಶಕ್ತಿವರ್ಧಕವಾಗಿಯೂ ಕೆಲಸ ಮಾಡುತ್ತದೆ. ಇದು ರಕ್ರಪೂರಣವನ್ನು ಚುರುಕುಗೊಳಿಸಿ ಶರೀರದ ಮಾಂಶಖಂಡಗಳಿಗೆ ಕಬ್ಬಿಣಾಂಶ ಹಾಗೂ ಇತರ ಎಲ್ಲ ಪೋಷಕಾಂಶಗಳೂ ಸರಿಯಾಗಿ ತಲುಪುವಂತೆ ಮಾಡುತ್ತದೆ.

ಇವೆಲ್ಲವುಗಳ ಹೊರತಾಗಿ ಓರಿಗಾನೋ ಒಂದು ಅತ್ಯುತ್ತಮ ನೋವುನಿವಾರಕ ಕೂಡಾ. ಇದು ದೇಹದ ನೋವುಗಳನ್ನು ಬಹುಬೇಗ ಕಡಿಮೆ ಮಾಡುವ ಶಕ್ತಿಯನ್ನು ಹೊಂದಿದೆ. ಮಹಿಳೆಯರ ಋತುಚಕ್ರದ ದಿನಗಳಲ್ಲಿ ಕಂಡುಬರುವ ಹೊಟ್ಟೆ ಹಾಗೂ ಸೊಂಟನೋವುಗಳನ್ನು ಕಡಿಮೆ ಮಾಡಿ ರಿಲ್ಯಾಕ್ಸ್‌ ಮಾಡುವ ಶಕ್ತಿಯನ್ನೂ ಹೊಂದಿದೆ. ಇವಲ್ಲದೆ, ಶೀತ, ತಲೆನೋವು, ನೆಗಡಿಯಂತಹ ತೊಂದರೆಗಳಿಗೂ ಓರಿಗಾನೋ ಎಲೆಗಳು ಉತ್ತಮ ಔಷಧಿ. ಉಸಿರಾಟ ಸಂಬಂಧೀ ಸಮಸ್ಯೆಗಳಿಗೂ ಇದು ಪರಿಹಾರ ನೀಡುತ್ತದೆ.

ಇದನ್ನೂ ಓದಿ: Chilli story | ಸ್ವರ್ಗಕ್ಕೆ ಕಿಚ್ಚು ಹಚ್ಚುವ ಮೆಣಸಿನ ಕಾಯಿಯ ಪುರಾಣ

Exit mobile version