ಚಳಿಗಾಲವಿರಲಿ, ಮಳೆಗಾಲವಿರಲಿ ಎಲ್ಲರ ಮನೆಗಳಲ್ಲೂ ಒಂದು ಕಫ್ ಸಿರಪ್ ಗ್ಯಾರಂಟಿ. ಮಕ್ಕಳಿರುವ ಮನೆಗಳಲ್ಲಿ, ಆಗಾಗ ಶೀತ, ನೆಗಡಿ ಕಫಗಳು ದಾಳಿಯಿಡುತ್ತಲೇ ಇರುವವರ ಬಳಿಯಷ್ಟೇ ಅಲ್ಲ, ಸಾಮಾನ್ಯವಾಗಿ ಎಲ್ಲರ ಮನೆಗಳಲ್ಲೂ ಆಪದ್ಭಾಂದವನ ಹಾಗೆ ಕಫ್ ಸಿರಪ್‌ಗಳು ಇದ್ದೇ ಇರುತ್ತವೆ. ಸ್ವಲ್ಪ ನೆಗಡಿಯಾಗಿ ಎರಡು ಬಾರಿ ಕೆಮ್ಮಿದರೆ ಸಾಕು ಮಕ್ಕಳಿಗೆ ಕಫ್ ಸಿರಪ್ ಕೊಟ್ಟುಬಿಡುವವರಿಗೇನೂ ಕೊರತೆಯಿಲ್ಲ. ಆದರೆ, ಹೀಗೆ ಯದ್ವಾತದ್ವಾ ಕಫ್ ಸಿರಪ್ (Cough syrup side effects) ಬಳಕೆ ಒಳ್ಳೆಯದೇ ಎಂಬ ಬಗ್ಗೆ ಬಹುತೇಕರು ಯೋಚಿಸಿರುವುದೇ ಇಲ್ಲ.
ತಜ್ಞರ ಪ್ರಕಾರ, ಕಫ್ ಸಿರಪ್ ಯಾವಾಗ ತೆಗೆದುಕೊಳ್ಳಬೇಕು ಎಂದರೆ, ಅತಿಯಾದ ಶೀತ ಅಥವಾ ನೆಗಡಿಯಾಘಿ ಕಫ ಕಟ್ಟಿದಂತಾಗಿ, ಶ್ವಾಸನಾಳದಿಂದ ಸರಿಯಾಗಿ ಉಸಿರಾಟ ಸಾಧ್ಯವಾಗುತ್ತಿಲ್ಲ ಎಂದಾಗ, ಕೆಮ್ಮಿನ ಮೂಲಕ ತೆಳು ಹಳದಿ ಬಣ್ಣದ ಅಂಟಿನಂತಹ ಕಫ ಹೊರಗೆ ಬಂದರೆ, ಶ್ವಾಸ ಕಟ್ಟಿದಂತಾಗ ಬಳಸಬಹುದು. ವೈದ್ಯರನ್ನು ಸಂಪರ್ಕಿಸಿದಾಗ ಅವರೇ ಈ ಬಗ್ಗೆ ಸೂಕ್ತ ಸಲಹೆ ಸೂಚನೆಗಳನ್ನು ನೀಡುತ್ತಾರೆ. ಆದರೆ, ಆತಿಯಾಗಿ ಕಫ್ ಸಿರಪ್ ಸೇವಿಸುವುದರಿಂದ, ಓವರ್‌ಡೋಸ್ ಆಗುವುದರಿಂದ ಸಾಕಷ್ಟು ಅಡ್ಡ ಪರಿಣಾಮಗಳೂ ನಮ್ಮ ದೇಹದ ಮೇಲೆ ಆಗುತ್ತದೆ ಎಂಬುದನ್ನು ನಾವು ನೆನಪಿನಲ್ಲಿಟ್ಟುಕೊಳ್ಳಬೇಕು.
ವೈದ್ಯರು ಕಫ ಆದಾಗ ನೀಡುವ ಡಿಎಕ್ಸ್‌ಎಂ ಎಂಬ ಕಫ್ ಸಿರಪ್‌ಗಳನ್ನು ಸಾಮಾನ್ಯವಾಗಿ, ವೈದ್ಯರ ಬಳಿ ಹೋಗದೆಯೂ, ಅವರ ಶಿಫಾರಸ್ಸು ಪಡೆಯದೇ, ತಾವೇ ವೈದ್ಯರಂತೆ ಅಗತ್ಯ ಸಂದರ್ಭಗಳಲ್ಲಿ ಆಗಾಗ ಕುಡಿಯುತ್ತಾರೆ. ಸಣ್ಣಗೆ ಶೀತ ನೆಗಡಿ, ಕೆಮ್ಮು ಆರಂಭವಾದಾಗ ಕಫ್ ಸಿರಪ್‌ಗಳನ್ನು ದಿವ್ಯೌಷಧಿಯಂತೆ ಸೇವಿಸುವವರ ಪ್ರಮಾಣ ಹೆಚ್ಚು. ಆದರೆ, ಅನಗತ್ಯ ಸಂದರ್ಭಗಳಲ್ಲಿ ಬಳಸದೆ ಇರುವುದನ್ನೂ ಕಲಿಯಬೇಕು ಎಂದು ವೈದ್ಯರೇ ಹೇಳುತ್ತಾರೆ.
ಕಫ್ ಸಿರಪ್ ಹೆಚ್ಚು ಕುಡಿಯುವುದರಿಂದ, ಅಥವಾ ಅನಗತ್ಯವಾಗಿ ಸೇವಿಸುವುದರಿಂದ ಮಾನಸಿಕವಾಗಿ ಹೆಚ್ಚು ಜಾಗೃತರಾಗಿರುವುದು ಸೇರಿದಂತೆ ಮಾನಸಿಕವಾಗಿ ಕೆಲವು ಆಘಾತಕಾರಿ ನಡವಳಿಕೆಗಳು ಕಂಡುಬರಬಹುದು. ಇದರ ಸೇವನೆ ಚಟವಾಗಿಯೂ ಪರಿಣಮಿಸಿ, ಆಗಾಗ ಮತ್ತೆ ಮತ್ತೆ ಕಫ್ ಸಿರಪ್ ಸೇವಿಸಬೇಕೆನಿಸುವಂತೆ ಮಾಡಬಹುದು. ಅಮಲಿನ ಅನುಭವ ಹಿತವಾದ ಭಾವವನ್ನು ನೀಡಿ ಇದನ್ನು ಚಟವಾಗಿಸುವ ಸಾಧ್ಯತೆ ಹೆಚ್ಚಿದೆ.
ಇಷ್ಟೇ ಅಲ್ಲ, ಕೆಲವೊಮ್ಮೆ ಈ ಕಫ್ ಸಿರಪ್‌ನ ಹೆಚ್ಚಾದ ಸೇವನೆಯಿಂದ ಫಿಟ್ಸ್ ಮತ್ತಿತರ ಆತಂಕಕಾರಿ ಆರೋಗ್ಯ ಸಮಸ್ಯೆಗಳೂ ಕಾಡಬಹುದು. ಹೆಚ್ಚಾಗುವ ಹೃದಯ ಬಡಿತ, ಆತಂಕದಂತಹ ಮಾನಸಿಕ ಸಮಸ್ಯೆಗಳು, ಉಸಿರುಕಟ್ಟಿದಂತಾಗುವುದು, ಏರುಪೇರಾಗುವ ರಕ್ತದೊತ್ತಡ, ಒಂದು ಕಡೆಗೆ ಗಮನ ಕೊಡಲು ಸಾಧ್ಯವಾಗದ ಏಕಾಗ್ರತೆಯ ಕೊರತೆ ಮತ್ತಿತರ ಸಮಸ್ಯೆಗಳೂ ಬರಬಹುದು. ಕೆಲವು ಮಂದಿಗೆ ಇದು ಮುಂದೊಂದು ದಿನ ಕಿಡ್ನಿ ಸಮಸ್ಯೆಯನ್ನೂ ತಂದೊಡ್ಡಬಹುದು!
ಹೆಚ್ಚು ದಿನಗಳ ಕಾಲ ಕಫ್ ಸಿರಪ್ ಬಳಸುವುದರಿಂದ, ವೃಥಾ ಕಫ್ ಸಿರಪ್ ಸೇವಿಸುವುದನ್ನೇ ಅಭ್ಯಾಸ ಮಾಡಿಕೊಂಡ, ಅಥವಾ ಚಟವಾಗಿಸಿಕೊಂಡ, ಅಗತ್ಯವಿಲ್ಲದೆಯೂ ಆಗಾಗ ಕಫ್ ಸಿರಪ್ ಸೇವಿಸುವ ಮಂದಿಗೆ ಇಂಥ ಸಮಸ್ಯೆಗಳ ಅಪಾಯವಿದೆ. ಹಾಗಾಗಿ, ಅನಗತ್ಯವಾಗಿ ಕಫ್ ಸಿರಪ್ ಸೇವನೆಯನ್ನು ಬಿಟ್ಟು, ಅಗತ್ಯ ಸಂದರ್ಭಗಳಲ್ಲಿ ಮಾತ್ರ ಔಷಧಿಯಾಗಿ ಬಳಕೆ ಮಾಡುವುದನ್ನು ರೂಢಿ ಮಾಡಿಕೊಳ್ಳಬೇಕು ಎಂದು ಸ್ವತಃ ತಜ್ಞವೈದ್ಯರೇ ಹೇಳುತ್ತಾರೆ.
ಇಷ್ಟೇ ಅಲ್ಲದೆ, ಕಫ್ ಸಿರಪ್ ಜೊತೆಯಲ್ಲಿ ಅಲ್ಕೋಹಾಲ್ ಮತ್ತು ಇತರ ಯಾವುದೇ ಉದ್ದೀಪಕಗಳನ್ನು ಸೇವಿಸುವುದರಿಂದ ಇವುಗಳ ಅಡ್ಡ ಪರಿಣಾಮ ಇನ್ನೂ ಹೆಚ್ಚಾಗುತ್ತದೆ. ಹಾಗಾಗಿ, ಕಫ್ ಸಿರಪ್‌ನ ಅಡ್ಡ ಪರಿಣಾಮಗಳನ್ನು ಗಮನಿಸಿ, ಸೂಕ್ತ ಕ್ರಮ ಕೂಡಲೇ ಕೈಗೊಳ್ಳುವುದೂ ಕೂಡಾ ಅತ್ಯಂತ ಅಗತ್ಯವಾಗಿದೆ.
ಇದನ್ನೂ ಓದಿ: Different Types of Seeds with Health Benefits: ಆರೋಗ್ಯ ವೃದ್ಧಿಗೆ ಬೇಕಾದ ಪೌಷ್ಟಿಕ ಬೀಜಗಳಿವು