Site icon Vistara News

Painkillers Side Effects: ನೋವು ನಿವಾರಕಗಳನ್ನು ನುಂಗುತ್ತೀರಾ? ಹಾಗಾದರೆ ಈ ಮಾಹಿತಿ ತಿಳಿದಿರಲಿ!

Painkillers Side Effects

ʻಯಾಕೋ ತಲೆ ನೋವುʼ ಎನ್ನುತ್ತಾ ಒಂದು ಮಾಮೂಲಿ ಮಾತ್ರೆ (Painkillers Side Effects) ನುಂಗುತ್ತೀರಿ. ಅವತ್ತಿಗೆ ಸ್ವಲ್ಪ ಕಡಿಮೆಯಾಗುತ್ತದೆ. ಮಾರನೇ ದಿನಕ್ಕೆ ಪುನಃ ತಲೆ ಸಿಡಿಯುವ ಅನುಭವ! ಮತ್ತೆ ಮಾತ್ರೆ ಗುಳುಂ; ನಾಲ್ಕಾರು ದಿನಗಳಲ್ಲಿ ಮತ್ತೆ ತಲೆನೋವು… ಮಾತ್ರೆ… ಇದೇ ಚಕ್ರ ಮುಂದುವರಿಯುತ್ತದೆ. ತಲೆ ನೋವು ಬಿಡುವುದಿಲ್ಲ, ಮಾತ್ರೆ ತಿನ್ನದೆ ನೀವೂ ಬಿಡುವುದಿಲ್ಲ, ಈ ಸರಣಿ ತುಂಡರಿಯುವುದೇ ಇಲ್ಲ. ಏನು ಮಾಡುವುದು ಇದಕ್ಕೆ? ಯಾಕೆ ಹೀಗಾಗುತ್ತದೆ? ನೋವು ಕಡಿಮೆ ಮಾಡಲೆಂದು ತಿನ್ನುವ ಮಾತ್ರೆಯೇ ನೋವಿನ ಮೂಲವಾಗಬಹುದೇ? ಹೌದೆನ್ನುತ್ತಾರೆ ಆರೋಗ್ಯ ತಜ್ಞರು. ನೋವು ನಿವಾರಕಗಳನ್ನು ಅತಿಯಾಗಿ ಸೇವಿಸುವುದರ ಅಡ್ಡ ಪರಿಣಾಮಗಳಲ್ಲಿ ತಲೆನೋವೂ ಒಂದು. ಯಾವುದೇ ನೋವು ನಿವಾರಕಗಳೂ ಅಡ್ಡ ಪರಿಣಾಮಗಳಿಂದ ಸಂಪೂರ್ಣ ಮುಕ್ತವಲ್ಲ. ತೀರಾ ನೋವು ಬಾಧಿಸುವಾಗ ಅಪರೂಪಕ್ಕೆ ಅವುಗಳನ್ನು ತೆಗೆದುಕೊಳ್ಳಬಹುದೇ ಹೊರತು, ಅದನ್ನೇ ಅಭ್ಯಾಸ ಮಾಡಿಕೊಳ್ಳುವುದು ಖಂಡಿತಾ ಸರಿಯಲ್ಲ. ಒಂದಿಲ್ಲೊಂದು ರೀತಿಯಲ್ಲಿ ಅದು ಆರೋಗ್ಯದ ಮೇಲೆ ದುಷ್ಪರಿಣಾಮವನ್ನು ಬೀರಬಹುದು. ತಿನ್ನುವ ನೋವು ನಿವಾರಕಗಳ ಪ್ರಮಾಣ ಹೆಚ್ಚಾದಾಗ, ಅದರ ಅಡ್ಡ ಪರಿಣಾಮವಾಗಿಯೇ ತಲೆ ನೋವು ಬರುವ ಸಾಧ್ಯತೆಗಳಿವೆ. ಇದನ್ನು ʻಮದ್ದು ಮಿತಿ ಮೀರಿದಾಗಿನ ತಲೆನೋವುʼ medication overuse headache (MOH) ಎಂದು ಕರೆಯಲಾಗುತ್ತದೆ. ತಲೆನೋವಿನಿಂದ ಮುಕ್ತಿ ಪಡೆಯುವುದಕ್ಕಾಗಿ ನುಂಗಿದ ಮಾತ್ರೆಯೇ ತಲೆಶೂಲೆಯನ್ನು ಹೆಚ್ಚಿಸಿ, ಅದಕ್ಕೂ ಮಾತ್ರೆ ನುಂಗಿ… ಪರಿಸ್ಥಿತಿ ವಿಕೋಪಕ್ಕೇ ತಿರುಗಬಹುದು. ಇದರಿಂದ ತಲೆನೋವು ಬರುವ ಪ್ರಮಾಣ ಹೆಚ್ಚುತ್ತದೆ, ನೋವಿನ ತೀವ್ರತೆಯೂ ಅಧಿಕವಾಗುತ್ತದೆ.

ಇದರ ಬಗ್ಗೆ ಇನ್ನಷ್ಟು ವಿವರಗಳನ್ನು ಹೇಳುವುದಾದರೆ

ವಾರದಲ್ಲಿ ಎರಡು-ಮೂರು ಬಾರಿಗೂ ಹೆಚ್ಚು ಸಾರಿ ನೋವು ನಿವಾರಕಗಳನ್ನು ನುಂಗುತ್ತಿದ್ದೀರಿ ಎಂದಾದರೆ, ನೋವು ನಿವಾರಕಗಳ ತಲೆಶೂಲೆಯನ್ನು ಅಂಟಿಸಿಕೊಳ್ಳುವ ಎಲ್ಲಾ ಸಾಧ್ಯತೆಗಳಿವೆ. ಅದರಲ್ಲೂ ಆಸ್ಪಿರಿನ್‌, ಐಬೂಪ್ರೊಫೆನ್‌, ಅಸೆಟೊಮೆನೊಫೆನ್‌ ಮುಂತಾದ ವೈದ್ಯರ ಚೀಟಿ ಇಲ್ಲದೆಯೂ ದೊರೆಯುವ ಮಾತ್ರೆಗಳು ಈ ತೊಂದರೆಯನ್ನು ಹೆಚ್ಚಿಸಬಲ್ಲವು. ಹಾಗಾಗಿ ಇಂಥ ಮಾತ್ರೆಗಳನ್ನು ತೀರಾ ಅಗತ್ಯ ಇರುವಾಗ ಮಾತ್ರವೇ ಉಪಯೋಗಿಸಿ, ಅತಿ ಮಾಡಿದರೆ ಮದ್ದೇ ರೋಗವಾಗಬಲ್ಲದು! ಈಗಾಗಲೇ ತೀವ್ರ ಮೈಗ್ರೇನ್‌ನಂಥ ತೊಂದರೆಗಳಿದ್ದರೆ ಈ ರೀತಿಯ ಓವರ್‌ ದ ಕೌಂಟರ್‌ ಮಾತ್ರೆಗಳಿಂದ ಹೆಚ್ಚಿನ ಪ್ರಯೋಜನ ಆಗುವುದಿಲ್ಲ. ಅದಕ್ಕೆ ವೈದ್ಯರಲ್ಲಿಯೇ ಮಾತಾಡಬೇಕು. ಕೆಲವರಿಗೆ ಇಂಥ ಮಾತ್ರೆಗಳನ್ನು ಸಹಿಸಿಕೊಳ್ಳುವ ಸಾಮರ್ಥ್ಯ ಕಡಿಮೆಯಿದ್ದರೆ, ಅಡ್ಡ ಪರಿಣಾಮಗಳು ಬೇಗನೇ ಮತ್ತು ಹೆಚ್ಚು ತೀವ್ರವಾಗಿ ಕಾಣಬಹುದು. ಹಾಗಾಗಿ ನೋವಿಗೆ ಸ್ವಯಂ ವೈದ್ಯ ಮಾಡುವ ಮುನ್ನ ಎಚ್ಚರಿಕೆ ತೆಗೆದುಕೊಳ್ಳುವುದು ಸೂಕ್ತ.

ಏನಾಗುತ್ತದೆ?

ಹೀಗೆ ನೋವು ನಿವಾರಕಗಳಿಂದ ಬರುವ ತಲೆ ನೋವುಗಳಿಂದ ಏನಾಗುತ್ತದೆ ಎನ್ನುವುದನ್ನೂ ಅರ್ಥ ಮಾಡಿಕೊಳ್ಳೋಣ. ತಲೆ ನೋವು ಪುನರಾವರ್ತನೆಯಾಗುತ್ತದೆ ಮತ್ತು ತೀವ್ರತೆಯೂ ಹೆಚ್ಚುತ್ತದೆ. ಈ ದಿನದಿನದ ನೋವಿನಿಂದಾಗಿ ಬದುಕಿನ ಗುಣಮಟ್ಟ ಕುಸಿಯುತ್ತದೆ. ಸದಾ ಕಾಲ ನೋವಿನ ಚಿಂತೆಯೇ ಬಾಧಿಸುವಂತಾಗಿ, ನನಗೇನೋ ಆಗಿದೆ ಎಂದು ಹೆದರುವಂತಾಗುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ ನೋವು ನಿವಾರಕಗಳು ಇಲ್ಲದಿದ್ದರೆ ನಡೆಯುವುದೇ ಇಲ್ಲ ಎನ್ನುವ ಮನಸ್ಥಿತಿ ತಲೆದೋರುತ್ತದೆ.

ಇದನ್ನೂ ಓದಿ: Myths About Asthma: ಇವು ಅಸ್ತಮಾ ಕುರಿತು ಇರುವ 9 ಸುಳ್ಳುಗಳು!

ಏನು ಮಾಡಬೇಕು?

ಇದರಿಂದ ಬಿಡುಗಡೆ ಪಡೆಯುವುದು ಮುಖ್ಯ. ಮೊದಲಿಗೆ, ಶರೀರದಲ್ಲಿ ನೋವು ಯಾಕಾಗಿ ಬರುತ್ತಿದೆ ಎಂಬುದನ್ನು ವೈದ್ಯರಲ್ಲಿ ಹೋಗಿಯೇ ತಿಳಿಯಬೇಕು. ಆ ಕಾರಣ ತಿಳಿದ ಮೇಲೆಯೇ ಔಷಧಿ ಮಾಡುವುದಕ್ಕೆ ಸಾಧ್ಯವಾಗುತ್ತದೆ. ತಲೆನೋವು ಪದೇಪದೆ ಬರುತ್ತಿದ್ದರೆ ನರರೋಗ ತಜ್ಞರನ್ನು ಕಾಣುವುದು ಅಗತ್ಯವೇ ಹೊರತು ಅಂಗಡಿಯಲ್ಲಿ ದೊರೆಯುವ ಮಾತ್ರೆ ನುಂಗುವುದಲ್ಲ. ನೋವು ನಿವಾರಣೆಗೆ ಪರ್ಯಾಯ ಮಾರ್ಗಗಳು ಇವೆಯೇ ಎಂಬುದನ್ನು ಶೋಧಿಸಿ. ಉದಾ, ಕೆಲವು ಅಕ್ಯುಪ್ರೆಶರ್‌ ಅಥವಾ ಮೆಡಿಟೇಶನ್‌ ಥೆರಪಿಗಳು ಕೆಲವರ ಪಾಲಿಗೆ ವರವಾಗಿ ಪರಿಣಮಿಸಬಲ್ಲವು. ಜೀವನಶೈಲಿಯಲ್ಲಿನ ಕೆಲವು ಬದಲಾವಣೆಗಳು, ನಿದ್ದೆ, ವ್ಯಾಯಾಮಗಳನ್ನು ಸರಿಪಡಿಸಿಕೊಳ್ಳುವುದು ಸಹ ಎಷ್ಟೋ ನೋವಿಗೆ ಮದ್ದಾಗಬಲ್ಲದು.

Exit mobile version