ಪನೀರ್ ಮಂಚೂರಿಯನ್, ಪನೀರ್ ಟಿಕ್ಕಾ, ಪನೀರ್ ಬುರ್ಜಿ, ಪನೀರ್ ಮಖನಿ, ಪನೀರ್ ಪರಾಠಾ ಹೀಗೆ ಪನೀರ್ ಹಾಕಿದ ತಿನಿಸುಗಳನ್ನು ಬಹುತೇಕ ಎಲ್ಲರೂ ಇಷ್ಟಪಡುತ್ತಾರೆ. ಮಕ್ಕಳಾದಿಯಾಗಿ ದೊಡ್ಡವರೂ ಇಷ್ಟಪಡುವ ಒಳ್ಳೆಯ ಆಹಾರವಿದು. ಫಿಟ್‌ನೆಸ್ ಪ್ರಿಯರೂ ಕೂಡಾ ಪ್ರೊಟೀನ್‌ಗಾಗಿ ತಿನ್ನುವ ನಿತ್ಯಾಹಾರಗಳಲ್ಲಿ ಪನೀರ್ ಕೂಡ ಒಂದು. ಬಹಳ ರುಚಿಯಾಗಿಯೂ ಮಾಡಬಹುದಾದ, ಆರೋಗ್ಯಕರವೂ ಆದ, ದೇಹಕ್ಕೆ ಅಗತ್ಯ ಪೋಷಕಾಂಶಗಳನ್ನೂ ನೀಡುವ ಈ ಪನೀರನ್ನು ಸಸ್ಯಾಹಾರಿಗಳೂ, ಮಾಂಸಾಹಾರಿಗಳೂ ಎಲ್ಲರೂ ಇಷ್ಟಪಟ್ಟು ತಿನ್ನುತ್ತಾರೆ. ಮಾರುಕಟ್ಟೆಯಲ್ಲಿ ಪ್ಯಾಕೆಟ್‌ಗಳಲ್ಲಿ, ಡೈರಿ ಉತ್ಪನ್ನಗಳ ಅಂಗಡಿಗಳಲ್ಲಿ ದೊರೆಯುವ ಈ ಪನೀರ್ ಅನ್ನು ಬಹುತೇಕರು ಮನೆಯಲ್ಲೇ ತಯಾರಿಸುವ ಬದಲು ಮಾರುಕಟ್ಟೆಯಿಂದ ಖರೀದಿಸಿ ಮಾಡುವವರೇ ಹೆಚ್ಚು. ಆದರೆ, ಪನೀರ್ ಹೆಸರಿನಲ್ಲಿ ಸಾಕಷ್ಟು ಕಲಬೆರಕೆಗಳೂ ನಡೆಯುತ್ತಿವೆ. ಇತ್ತೀಚೆಗಿನ ದಿನಗಳಲ್ಲಿ ಮಾರುಕಟ್ಟೆಯಲ್ಲಿ ಹಲವೆಡೆ ಕಲಬೆರಕೆ ಪನೀರ್‌ನ ಮಾರಾಟದ ಕೇಂದ್ರಗಳನ್ನು ಆಹಾರ ಅಧಿಕಾರಿಗಳು ಪತ್ತೆಹಚ್ಚುವ ಪ್ರಕರಣಗಳೂ ನಡೆದಿವೆ. ಕಲಬೆರಕೆ ವ್ಯಾಪಕವಾಗಿ ನಡೆಯುವ ಇಂತಹ ಕಾಲಘಟ್ಟದಲ್ಲಿ ನಮ್ಮ ಆಹಾರದ ಕಾಳಜಿಯನ್ನು ನಾವು ಮಾಡಲೇಬೇಕು. ಒಳ್ಳೆಯ ಪನೀರ್ ಎಂದು ಭಾವಿಸಿ ಕೊಂಡು ತಂದ ಪನೀರ್ ಆರೋಗ್ಯಕ್ಕೆ ಕೆಟ್ಟ ಪರಿಣಾಮವನ್ನು ಬೀರುವಂಥದ್ದೂ ಆಗಿರಬಹುದ್ದರಿಂದ ಕೆಲವು ಸಾಮಾನ್ಯ ತಿಳಿವಳಿಕೆಗಳನ್ನು ಕೊಳ್ಳುವ ಮುನ್ನ ಹೊಂದಿರುವುದು ಬಹಳ ಒಳ್ಳೆಯದು. ಆದರೆ, ಇದು ತಿಳಿಯುವುದು ಹೇಗೆ ಎಂಬ ಪ್ರಶ್ನೆ ಹಲವರಲ್ಲಿರಬಹುದು. ತಾನು ಕೊಂಡುಕೊಂಡಿದ್ದು ಒಳ್ಳೆಯ ಪನೀರೋ, ಕಲಬೆರಕೆಯಾದುದೋ (Paneer Test) ಎಂದು ಕಂಡುಹಿಡಿಯುವ ಕೆಲವು ಸರಳ ವಿಧಾನಗಳು ಇಲ್ಲಿವೆ. ಆ ಮೂಲಕ ಕೆಟ್ಟ ಆಹಾರ ಸೇವನೆಯಿಂದ ನೀವು ದೂರವಿರಬಹುದು.
ಬಣ್ಣ ಕೂಡ ಮುಖ್ಯ
ಸಾಮಾನ್ಯವಾಗಿ ಒಳ್ಳೆಯ ಪನೀರ್‌ನ ಬಣ್ಣ ಒಂದೇ ತೆರನಾಗಿರುತ್ತದೆ. ಬಿಳಿ ಅಥವಾ ಕೆನೆಬಣ್ಣದ ಬಿಳಿಯನ್ನು ಹೊಂದಿರುವ ಪನೀರ್ ಮುಟ್ಟಲು ನುಣುಪಾಗಿರುತ್ತದೆ. ಅದರ ಮೇಲ್ಮೈಯಲ್ಲಿ ಬಣ್ಣದ ಅಥವಾ ಶೇಡ್‌ನಲ್ಲಿ ಸ್ವಲ್ಪವೂ ವ್ಯತ್ಯಾಸವಿರುವುದಿಲ್ಲ. ಬಣ್ಣದಲ್ಲಿ ವ್ಯತ್ಯಾಸ ಕಂಡರೆ ಅದು ಒಳ್ಳೆಯ ಪನೀರ್ ಅಲ್ಲ.
ಪೇಸ್ಟ್‌ನಂತಾಗುತ್ತದೆಯಾ ನೋಡಿ
ಸ್ವಲ್ಪ ಪನೀರನ್ನು ಕೈಯಿಂದ ಹಿಸುಕಿ ನೋಡಿ. ಹಿಸುಕಿದಾಗ ತರಿತರಿಯಾದಂತೆ ಅನಿಸಿದರೆ ಅದು ಒಳ್ಳೆಯ ಪನೀರ್. ಹಿಸುಕಿದಾಗಲೂ ನುಣುಪಾಗಿ ಪೇಸ್ಟ್‌ನಂತೆ ಇರುವುದಿಲ್ಲ.
ಮೂಸಿ ನೀಡಿ ಗ್ರಹಿಸಬಹುದು
ಒಳ್ಳೆಯ ಶುದ್ಧವಾದ ಪನೀರನ್ನು ನೀವು ಮೂಸಿ ನೋಡಿ. ಅದರ ಪರಿಮಳ ಹಾಲಿನ ಹಾಗೆ ಮೆದುವಾದ ಘಮವನ್ನು ಹೊಂದಿರುತ್ತದೆ. ಕಲಬೆರಕೆಯಾಗಿದ್ದರೆ, ಇದರ ಪರಿಮಳ ಹೀಗಿರುವುದಿಲ್ಲ. ಹೆಚ್ಚು ಹುಳಿಯಾಗಿಯೋ ಅಥವಾ ಪರಿಮಳದಲ್ಲಿ ವ್ಯತ್ಯಾಸವನ್ನು ಹೊಂದಿರುತ್ತದೆ.
ನೀರಿಗೆ ಹಾಕಿ ನೋಡಿ
ಪನೀರ್‌ನ ಸಣ್ಣ ತುಣುಕೊಂದನ್ನು ನೀರಿಗೆ ಹಾಕಿ ನೋಡಿ. ಶುದ್ಧ ಪನೀರ್ ಆಗಿದ್ದರೆ ನೀರಲ್ಲಿ ಮುಳುಗುತ್ತದೆ. ಕಲಬೆರಕೆಯದಾಗಿದ್ದರೆ ಅದು ಅರೆಬರೆ ಕರಗಿಬಿಡಬಹುದು ಅಥವಾ ಇನ್ನಷ್ಟು ಸಣ್ಣ ಸಣ್ಣ ತುಣುಕುಗಳಾಗಿ ಒಡೆಯಬಹುದು.
ಆಕಾರ ಬದಲಾಗುತ್ತದೆ
ಒಂದು ಪ್ಯಾನ್‌ನಲ್ಲಿ ಒಂದು ಸಣ್ಣ ತುಂಡು ಪನೀರ್ ಅನ್ನು ಯಾವುದೇ ನೀರು ಅಥವಾ ಎಣ್ಣೆಯನ್ನು ಹಾಕದೆ ಹಾಗೆಯೇ ಬಿಡಿ. ಉರಿಯ ತಾಪಕ್ಕೆ ಪ್ಯಾನ್‌ನಲ್ಲಿ ಅದು ನೀರು ಬಿಡಲಾರಂಭಿಸುತ್ತದೆ. ಆದರೆ, ತನ್ನ ಆಕಾರವನ್ನು ಹಾಗೆಯೇ ಉಳಿಸಿಕೊಳ್ಳುತ್ತದೆ. ಕಲಬೆರಕೆಯ ಪನೀರ್ ಹೆಚ್ಚು ಕರಗಿ ಹೆಚ್ಚು ನೀರು ಬಿಡಬಹುದು. ಹಾಗೂ ಅದರ ಆಕಾರ ಬದಲಾಗಬಹುದು.
ಅಯೋಡಿನ್ ಟಿಂಚರ್ ಟೆಸ್ಟ್
ಒಂದು ಸಣ್ಣ ಪಾತ್ರೆಯಲ್ಲಿ ನೀರು ತೆಗೆದುಕೊಂಡು ಪನೀರ್‌ನ ಸಣ್ಣ ತುಂಡನ್ನು ಹಾಕಿ ಅದನ್ನು ಕುದಿಸಿ. ನಂತರ ಅದಕ್ಕೆ ಕೆಲವು ಹನಿ ಅಯೋಡಿನ್ ಟಿಂಚರ್ ಅನ್ನು ಹಾಕಿ. ಅದು ನೀಲಿಯಾಗಿ ಬದಲಾದರೆ ಅದರಲ್ಲಿ ಸ್ಟಾರ್ಚ್ ಅಥವಾ ಬೇರೇನೋ ಮಿಕ್ಸ್ ಮಾಡಲಾಗಿದೆ ಎಂದರ್ಥ.
ಇದನ್ನೂ ಓದಿ: Drinks for Summer: ಬೇಸಿಗೆಯಲ್ಲಿ ತಂಪಾಗಿರಬೇಕೆ? ಈ ಪೇಯಗಳನ್ನು ತಪ್ಪದೇ ಕುಡಿಯಿರಿ