Site icon Vistara News

Potato Diet: ಆಲೂಗಡ್ಡೆ ಆರೋಗ್ಯಕರ! ತೂಕ ಇಳಿಸಲು ಯತ್ನಿಸುತ್ತಿರುವವರೂ ಇದನ್ನು ತಿನ್ನಬಹುದು!

Potato Diet

ಆಲೂಗಡ್ಡೆ (Potato Diet) ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ. ಮನೆಯಲ್ಲಿ ತರಕಾರಿ ಖಾಲಿಯಾದಾಗ ಸದಾ ಆಪದ್ಬಾಂಧವನಂತೆ ನಮ್ಮ ಕೈಹಿಡಿದು ಸಲಹುವ ಆಲೂಗಡ್ಡೆಯಿಂದ ಏನು ಮಾಡಿದರೂ ರುಚಿಯೇ. ಮಳೆ ಬಂದಾಗ ಮಾಡಬಹುದಾದ ಪಕೋಡಾ, ಬಜ್ಜಿ, ಬೋಂಡಾ, ಫ್ರೆಂಚ್‌ ಫ್ರೈಸ್‌ ಸೇರಿದಂತೆ ರುಚಿರುಚಿಯಾದ ಬಿಸಿಬಿಸಿಯಾದ ತಿನಿಸುಗಳನ್ನು ಮಾಡಲು ಆಲೂಗಡ್ಡೆ ಬೇಕೇಬೇಕು. ಆದರೆ, ತೂಕ ಇಳಿಸುವ ಮಂದಿಗೆ ಆಲೂಗಡ್ಡೆ ಎಂದರೆ ದೂರವಿಡಲೇಬೇಕಾದ ಪರಿಸ್ಥಿತಿ. ಎಷ್ಟೇ ಇಷ್ಟವಿರಲಿ, ಆಲೂಗಡ್ಡೆ ತೂಕ ಏರಿಸುವ ಪಟ್ಟಿಯಲ್ಲಿ ಮುಂಚೂಣಿಯಲ್ಲಿ ಸ್ಥಾನ ಪಡೆಯುವ ಕಾರಣ, ಜೊತೆಗೆ ಇದಕ್ಕೆ ಹಲವು ಆರೋಗ್ಯ ಸಮಸ್ಯೆಗಳೂ ಸಂಬಂಧವಿರುವುದರಿಂದ ಇದನ್ನು ದೂರವಿಡಬೇಕಾದ ಅನಿವಾರ್ಯತೆ ಸಹಜವೇ. ಅಧಿಕ ರಕ್ತದೊತ್ತಡ, ಮಧುಮೇಹ, ಹೃದಯದ ಸಮಸ್ಯೆ ಇತ್ಯಾದಿ ಇರುವ ಮಂದಿಗೆ ಇದು ಒಳ್ಳೆಯದಲ್ಲ. ವೈದ್ಯರೂ ಇದನ್ನೇ ಹೇಳುತ್ತಾರೆ ನಿಜ. ಹಾಗಂತ ನಿಮ್ಮ ಪ್ರೀತಿಪಾತ್ರವಾದ ಆಲೂಗಡ್ಡೆಯನ್ನು ಸಂಪೂರ್ಣ ತ್ಯಜಿಸಬೇಕಾದ ಅನಿವಾರ್ಯತೆ ಇಲ್ಲ. ಆಲೂಗಡ್ಡೆಯನ್ನು ಸರಿಯಾದ ಕ್ರಮದಲ್ಲಿ ಅಡುಗೆ ಮಾಡುವಿದರಿಂದ ಹಿತಮಿತವಾಗಿ ತಿಂದುಂಡು ಆರೋಗ್ಯದಿಂದಿರಬಹುದು. ತೂಕವನ್ನೂ ಇಳಿಸಬಹುದು.
ಹೌದು. ನಿಮಗೆ ಆಶ್ಚರ್ಯವೆನಿಸಿದರೂ ಸತ್ಯ. ಆಲೂಗಡ್ಡೆಯನ್ನು ತಿನ್ನುವ ಮೂಲಕ ತೂಕವನ್ನು ಇಳಿಸಬಹುದು. ಯಾಕೆಂದರೆ ಇದರಲ್ಲಿ ಅನೇಕ ಪೋಷಕ ತತ್ವಗಳಿವೆ.

ನಾರಿನಂಶ

ಆಲೂಗಡ್ಡೆಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ನಾರಿನಂಶವಿದೆ. ನಾರಿನಂಶ ಉತ್ತಮ ಜೀರ್ಣಕ್ರಿಯೆಗೆ ಬೇಕೇಬೇಕು. ಅಷ್ಟೇ ಅಲ್ಲ, ನಾರಿನಂಶ ಸಮೃದ್ಧವಾಗಿದ್ದರೆ ಬಹಳ ಹೊತ್ತಿನವರೆಗೆ ಹೊಟ್ಟೆ ಫುಲ್‌ ಇದ್ದ ಅನುಭವವಾಗುತ್ತದೆ. ಹೀಗಾಗಿ ಆಗಾಗ ಮತ್ತೆ ತಿನ್ನಬೇಕೆನಿಸುವುದಿಲ್ಲ. ಒಂದು ಸಾಮಾನ್ಯ ಗಾತ್ರದ ಆಲೂಗಡ್ಡೆಯಲ್ಲಿ ಅಂದರೆ ನೂರು ಗ್ರಾಂ ಆಲೂಗಡ್ಡೆಯಲ್ಲಿ ೮೦ ಕ್ಯಾಲರಿಯಿದೆ.

ಪೋಷಕಾಂಶಗಳು

ವಿಟಮಿನ್‌ ಸಿ ಯೂ ಸೇರಿದಂತೆ ಪೊಟಾಶಿಯಂ, ವಿಟಮಿನ್‌ ಬಿ6 ಇತ್ಯಾದಿಗಳೆಲ್ಲ ಇರುವ ಆಲೂಗಡ್ಡೆಯಲ್ಲಿಯೂ ಸಾಕಷ್ಟು ಪೋಷಕಾಂಶಗಳಿವೆ. ಇದರಲ್ಲಿರುವ ವಿಟಮಿನ್‌ ಸಿ ದೇಹದ ಬೆಳವಣಿಗೆ, ರೋಗನಿರೋಧಕತೆಗೆ, ಅಂಗಾಂಶಗಳ ಮರುರಚನೆಗೆ ಸಹಾಯ ಮಾಡಿದರೆ, ಪೊಟಾಶಿಯಂ ಮಾಂಸಖಂಡಗಳ ಹಿಗ್ಗು ಕುಗ್ಗುವಿಕೆಗೆ, ದೇಹದಲ್ಲಿರುವ ನೀರಿನಂಶವನ್ನು ಹಾಗೆಯೇ ಸಮತೋಲನದಲ್ಲಿ ಕಾಪಾಡಲು, ವಿಟಮಿನ್‌ ಬಿ೬ ಮಿದುಳಿನ ಬೆಳವಣಿಗೆಗೆ ಅತ್ಯಂತ ಅಗತ್ಯವಾಗಿವೆ.

ಆರೋಗ್ಯಕರ ಕಾರ್ಬೋಹೈಡ್ರೇಟ್‌ಗಳು

ಶಕ್ತಿಯ ಉತ್ಪಾದನೆಗೆ ಕಾರ್ಬೋಹೈಡ್ರೇಟ್‌ ಬೇಕೇ ಬೇಕು. ಆಲೂಗಡ್ಡೆಯಲ್ಲಿ ಇಂತಹ ಕಾರ್ಬೋಹೈಡ್ರೇಟ್‌ ಇದ್ದು ಇದು ಬಹಳ ಹೊತ್ತಿಗೆ ನಮಗೆ ಬೇಕಾದ ಶಕ್ತಿ, ಚೈತನ್ಯ ನೀಡುತ್ತದೆ.

ಇದನ್ನೂ ಓದಿ: Monsoon Skincare: ಮಳೆಗಾಲದಲ್ಲಿ ಚರ್ಮದ ಆರೈಕೆ ಹೇಗಿರಬೇಕು?

ಕಡಿಮೆ ಕ್ಯಾಲರಿ

ಇದನ್ನು ಕೇಳಿದರೆ ನಿಮಗೆ ಶಾಕ್‌ ಆಗಬಹುದು. ಆದರೆ, ಸತ್ಯ. ಆಲೂಗಡ್ಡೆಯಲ್ಲಿ ಕಡಿಮೆ ಕ್ಯಾಲರಿ ಇದೆ. ಅಂದಾಜು 100 ಗ್ರಾಂ ಆಲೂಗಡ್ಡೆಯಲ್ಲಿ 77 ಕ್ಯಾಲರಿ ಇರುತ್ತದೆ. ಇದರಲ್ಲಿ ಎರಡು ಗ್ರಾಂ ಪ್ರೊಟೀನ್‌ ಹಾಗೂ 2 ಗ್ರಾಂನಷ್ಟು ನಾರಿನಂಶ ಇದೆ. ಹಾಗಾದರೆ ಆಲೂಗಡ್ಡೆಯನ್ನು ಎಷ್ಟು ತಿನ್ನಬಹುದು ಎಂಬುದು ನಿಮ್ಮ ಮುಂದಿನ ಪ್ರಶ್ನೆಯಲ್ಲವೇ. ಅದಕ್ಕೂ ಉತ್ತರ ಇಲ್ಲಿದೆ. ಆಲೂಗಡ್ಡೆಯನ್ನು ಎಣ್ಣೆಯಲ್ಲಿ ಫ್ರೈ ಮಾಡುವುದರಿಂದ ಖಂಡಿತ ತೂಕ ಹೆಚ್ಚಬಹುದು. ಆದರೆ, ಬೇಯಿಸಿ ತಿಂದರೆ ಈ ಪರಿಣಾಮ ಆಗದು. ಅಡುಗೆ ಮಾಡುವ ಮುನ್ನ 6-7 ಗಂಟೆಗಳ ಮೊದಲೇ ಆಲೂಗಡ್ಡೆತನ್ನು ಬೇಯಿಸಿ ತಣಿಯಲು ಬಿಡಿ. ತೂಕ ಇಳಿಸುವ ಮಂದಿ ನೀವಗಿದ್ದರೆ ಹೀಗೆ ಮಾಡಿ. ಅಷ್ಟೇ ಅಲ್ಲ, ಸ್ನ್ಯಾಕ್‌ ಸಮಯದಲ್ಲಿ ಆಲೂಗಡ್ಡೆಯನ್ನು ಬೇಯಿಸಿ ಮಾಡಿದ ಅಡುಗೆಯನ್ನು ಸೇವಿಸಬಹುದು. ಅಥವಾ ಅನ್ನ, ಚಪಾತಿ, ಬ್ರೆಡ್‌ ಇತ್ಯಾದಿಗಳ ಜೊತೆ ಸೇರಿಸಿ ಆಲೂಗಡ್ಡೆ ತಿನ್ನಬಹುದು. ಹಾಗಾಗಿ, ಎಲ್ಲ ತರಕಾರಿಗಳಂತೆ ಆಲೂಗಡ್ಡೆಯನ್ನೂ ಆಗಾಗ ಹಿತಮಿತಾಗಿ ತಿನ್ನಬಹುದು. ತಿನ್ನಬೇಕು ಕೂಡಾ. ಆದರೆ, ಆಲೂಗಡ್ಡೆಯಿಂದ ತಯಾರಿಸಿದ ಹೆಚ್ಚು ಸಂಸ್ಕರಿಸಿದ ಪದಾರ್ಥಗಳಿಂದ ದೂರುವಿರಿ. ಎಣ್ಣೆಯಲ್ಲಿ ಫ್ರೈ ಮಾಡಿ ತಿನ್ನುವುದರಿಂದ ದೂರವಿರಿ. ತಿನ್ನಲು ಆಸೆಯಾದರೆ, ಎಣ್ಣೆಯಲ್ಲಿ ಕರಿಯುವ ಬದಲು ಏರ್‌ ಫ್ರೈ ಮಾಡಿ ಅಥವಾ ಬೇಕ್‌ ಮಾಡಿ ತಿನ್ನಬಹುದು.

Exit mobile version