Site icon Vistara News

Premature Babies: ಅವಧಿಪೂರ್ವ ಜನಿಸಿದ ಕೂಸುಗಳ ಆರೈಕೆ ಹೇಗೆ?

Premature Babies

Premature Babies

ಕಾಲ ಯಾವುದಾದರೇನು ಹುಟ್ಟುವುದಕ್ಕೆ! ಚಳಿಗಾಲವೆಂದ ಮಾತ್ರಕ್ಕೆ ಹುಟ್ಟುವುದನ್ನು ತಡೆಯಲು ಆಗದಿದ್ದರೂ, ಹುಟ್ಟಿದ ಕೂಸುಗಳ ಆರೈಕೆ ಸ್ವಲ್ಪ ಕಷ್ಟದ್ದು. ಅದರಲ್ಲೂ ಅವಧಿಪೂರ್ವ ಜನಿಸಿದ ಅಥವಾ ಪ್ರೀಮೆಚೂರ್‌ ಶಿಶುಗಳ (premature babies) ಆರೈಕೆ ಇನ್ನೂ ನಾಜೂಕು. ಗರ್ಭಾವಸ್ಥೆಯ 37 ವಾರಗಳಿಗಿಂತ ಮೊದಲೇ ಜನಿಸಿದ ಈ ಕೂಸುಗಳನ್ನು ಜೋಪಾನವಾಗಿ ಬೆಳೆಸಬೇಕಾಗುತ್ತದೆ. ಈ ಪುಟಾಣಿಗಳು ಉಳಿದೆಲ್ಲ ಮಕ್ಕಳಿಗಿಂತ ಕೊಂಚ ಭಿನ್ನವಾಗಿ ಬೆಳವಣಿಗೆಯ ಹಂತಗಳನ್ನು ದಾಟುತ್ತವೆ. ಅದರಲ್ಲೂ ಮೊದಲಿನ ಕೆಲವು ವಾರಗಳು ಅಥವಾ ತಿಂಗಳು ʻನಿಕ್ಯೂʼ (ನವಜಾತ ಶಿಶುಗಳ ತೀವ್ರ ನಿಗಾ ಘಟಕ)ದಲ್ಲಿ ಇರುವಂತಾದರೆ ಹೆತ್ತವರಿಗೆ ಅದೊಂದು ಹೆಚ್ಚುವರಿ ತಲೆ ಬಿಸಿ. ಹಾಗಾದರೆ ಅವಧಿಪೂರ್ವದಲ್ಲಿ ಜನಿಸಿದ ಶಿಶುಗಳ ಆರೈಕೆಯಲ್ಲಿ ಗಮನಿಸಬೇಕಾದ ಅಂಶಗಳೇನು?

ಬೆಳವಣಿಗೆಯ ಹಂತಗಳು

ಏಳು ತಿಂಗಳಿಗೆ ಹುಟ್ಟಿದ ಮಕ್ಕಳ ಬೆಳವಣಿಗೆ ಸರಿಯಾದ ಸಮಯಕ್ಕೆ ಹುಟ್ಟಿದ ಮಕ್ಕಳಿಗಿಂತ ಸಹಜವಾಗಿಯೇ ಹಿಂದಿರುತ್ತದೆ. ಆದರೆ ಇದು ಆರಂಭದ ಕೆಲವು ತಿಂಗಳುಗಳು ಮಾತ್ರ. ಸಾಮಾನ್ಯವಾಗಿ ಹೆಚ್ಚಿನ ಪ್ರಿಮೆಚೂರ್‌ ಶಿಶುಗಳು ಮೊದಲ ಒಂದು ವರ್ಷದಲ್ಲಿ ಉಳಿದೆಲ್ಲ ಮಕ್ಕಳ ಸಮಕ್ಕೇ ಬರುತ್ತವೆ. ಆದರೆ ಹುಟ್ಟುವಾಗ ಏನೆಲ್ಲಾ ಆರೋಗ್ಯ ಸಮಸ್ಯೆಗಳಿದ್ದವು ಎಂಬುದರ ಮೇಲೆ ಶಿಶುವಿನ ಬೆಳವಣಿಗೆ ಎಷ್ಟು ಚುರುಕಾಗಿದೆ ಎಂಬುದು ನಿರ್ಧಾರವಾಗುತ್ತದೆ. ಕಡಿಮೆ ಸಮಸ್ಯೆಗಳಿದ್ದ ಮಕ್ಕಳು ಬೇಗನೆ ಬೆಳವಣಿಗೆಯ ಹಂತಗಳನ್ನು ದಾಟಬಹುದು. ಉಳಿದವಕ್ಕೆ ಕೊಂಚ ನಿಧಾನವೇ ಆಗಬಹುದು. ಹಾಗಾಗಿ ಮಗುವಿನ ಬೆಳವಣಿಗೆಯ ವಿಷಯದಲ್ಲಿ ಮನೆಮಂದಿಗೆಲ್ಲ ತಾಳ್ಮೆ ಬೇಕು. ಉಳಿದ ಮಕ್ಕಳೊಂದಿಗೆ ಹೋಲಿಸುವುದು ಖಂಡಿತಾ ತಪ್ಪು.

ಹಾಲುಣಿಸುವುದು

ಗರ್ಭಾವಸ್ಥೆಯ 33 ವಾರಗಳಿಗಿಂತ ಮೊದಲೇ ಹುಟ್ಟಿದ ಮಕ್ಕಳಿಗೆ ನಿಕ್ಯೂದಲ್ಲಿ ಕೊಳವೆಗಳ ಮೂಲಕ ಆಹಾರ ನೀಡಬೇಕಾಗಬಹುದು. ಇನ್ಕ್ಯೂಬೇಟರ್‌ನಲ್ಲಿದ್ದು ಕೊಂಚ ಬೆಳವಣಿಗೆ ಹೊಂದಿದ ಮೇಲೆ, ತಾಯಿಯ ಹಾಲುಣಿಸುವುದನ್ನು ಅಭ್ಯಾಸ ಮಾಡುವಂತೆ ವೈದ್ಯರು ಹೇಳುತ್ತಾರೆ. ಇದಕ್ಕೂ ಬಹಳ ತಾಳ್ಮೆ ಬೇಕು. ಸೂಕ್ತ ಸಮಯಕ್ಕೆ ಹುಟ್ಟಿದ ಮಕ್ಕಳೇ ಕೆಲವೊಮ್ಮೆ ಹಾಲೂಡುವುದಕ್ಕೆ ಕಷ್ಟಪಡುವಾಗ, ಈ ಶಿಶುಗಳು ಆರಂಭದಲ್ಲಿ ತೊಂದರೆ ಅನುಭವಿಸುವುದು ಸಾಮಾನ್ಯ. ಆದರೆ ತಾಯಿಯ ಮೈ ಬಿಸಿ ಹೆಚ್ಚಾಗಿ ದೊರೆಯುತ್ತಿದ್ದಂತೆ ಮಗುವಿನ ಸ್ವಾಸ್ಥ್ಯವೂ ವೃದ್ಧಿಸುತ್ತದೆ.

ಕಾಂಗರೂ ಕೇರ್‌

ಇತ್ತೀಚಿನ ವರ್ಷಗಳಲ್ಲಿ ಈ ಪದ್ಧತಿ ವ್ಯಾಪಕವಾಗಿ ಪ್ರಚಲಿತಕ್ಕೆ ಬರುತ್ತಿದೆ. ಪ್ರತಿದಿನ ಕನಿಷ್ಠ ಒಂದು ತಾಸಿನ ಮಟ್ಟಿಗಾದರೂ ತಾಯಿ ಅಥವಾ ತಂದೆಯ ಬಿಸಿಯಪ್ಪುಗೆಯಲ್ಲಿ ಪುಟ್ಟ ಶಿಶು ಇರಬೇಕು. ಡೈಪರ್‌ ಹೊರತಾಗಿ ಬೇರೇನೂ ಇರದಂತೆ ಮಗುವನ್ನು ಎದೆಯ ಮೇಲಿಟ್ಟುಕೊಂಡು ಬೆಚ್ಚಗಿನ ಬಟ್ಟೆಯನ್ನು ತಾಯಿ-ಮಗುವಿಗೆ ಸೇರಿ ಸುತ್ತಬೇಕು. ಕಾಂಗರೂ ಅಮ್ಮನ ಹೊಟ್ಟೆಯ ಚೀಲದಲ್ಲಿ ಮರಿಯೊಂದು ಬೆಚ್ಚಗೆ ಬೆಳೆಯುವಂಥ ರೀತಿಯಿದು. ಇದು ಎಲ್ಲ ಶಿಶುಗಳಿಗೂ ಲಾಭದಾಯಕ ಹೌದಾದರೂ, ಪ್ರಿಮೆಚೂರ್‌ ಕೂಸುಗಳಿಗೆ ಅತ್ಯಂತ ಮಹತ್ವದ್ದು. ಈ ಚಳಿಗಾಲದಲ್ಲಿ ಎಳಗೂಸನ್ನು ಬೆಚ್ಚಗೆ ಇರಿಸುವುದು ಮುಖ್ಯ. ಹಾಗೆಂದು ಹೀಟರ್‌ ಹಾಕಿ ಸೆಕೆ ಮಾಡುವ ಅಗತ್ಯವಿಲ್ಲ. ಮಗುವನ್ನು ಇರಿಸುವ ಕೋಣೆಯ ತಾಪಮಾನವನ್ನು 26 ಡಿಗ್ರಿ ಸೆ.ಗೆ ಇರಿಸಿದರೆ ಅನುಕೂಲ ಹೆಚ್ಚು. ಚಳಿ ಅಥವಾ ಸೆಕೆಯ ಅನುಭವವನ್ನು ತಡೆದುಕೊಳ್ಳುವುದಕ್ಕೆ ಅವಧಿಪೂರ್ವ ಜನ್ಯ ಕೂಸುಗಳು ಶಕ್ತರಲ್ಲ. ಮಗುವಿನ ತೂಕ 2 ಕೆ.ಜಿ. ಆದ ಮೇಲಷ್ಟೇ ಅವಕ್ಕೆ ಉಗುರು ಬಿಸಿ ನೀರಿನ ಸ್ನಾನ ಸೂಕ್ತ.

ಸೋಂಕುಗಳಿಂದ ರಕ್ಷಣೆ

ಈ ಅವಧಿಯಲ್ಲಿ ಮಗುವಿಗೆ ರೋಗ ನಿರೋಧಕ ಶಕ್ತಿ ಬಹಳ ಕಡಿಮೆಯಿರುತ್ತದೆ. ಹಾಗಾಗಿ ಯಾವುದೇ ಸೋಂಕುಗಳು ಬಾಧಿಸದಂತೆ ಕಾಪಾಡಿಕೊಳ್ಳುವುದು ಮಹತ್ವದ್ದು. ಮಗುವನ್ನು ಮುಟ್ಟುವವರು ಕೈಗಳನ್ನು ಕಡ್ಡಾಯವಾಗಿ ಶುಚಿ ಮಾಡಿಕೊಳ್ಳಬೇಕು. ನೆಗಡಿ-ಕೆಮ್ಮು ಮುಂತಾದ ಲಕ್ಷಣಗಳಿದ್ದವರು ಮಗುವಿನಿಂದ ದೂರವೇ ಇರಬೇಕು. ಮನೆಗೆ ಬರುವ ಅತಿಥಿಗಳಲ್ಲಿ ಸೋಂಕಿದ್ದರೆ, ಅವರನ್ನೂ ಮಗುವಿನಿಂದ ದೂರ ಇರಿಸುವುದು ಅನಿವಾರ್ಯ. ಚಳಿಗಾಲದಲ್ಲಂತೂ ಸೋಂಕುಗಳ ಉಪಟಳ ಹೆಚ್ಚಿರುವುದರಿಂದ ಇನ್ನಷ್ಟು ಜಾಗ್ರತೆ ಅಗತ್ಯವಾಗುತ್ತದೆ.

ಇದನ್ನೂ ಓದಿ: Food Tips: ಇಲ್ಲಿವೆ ಬಗೆಬಗೆಯ ಉಪ್ಪು: ಯಾರು ಹಿತವರು ನಿಮಗೆ ಈ ಉಪ್ಪಿನೊಳಗೆ!

ಲಸಿಕೆಗಳು

ಯಾವುದೇ ಲಸಿಕೆಗಳನ್ನು ತಪ್ಪಿಸುವಂತಿಲ್ಲ. ಉಳಿದ ಮಕ್ಕಳಂತೆಯೇ, ಅವರ ಹುಟ್ಟಿದ ಕಾಲಮಾನಕ್ಕೆ ಅನುಸಾರವಾಗಿಯೇ ಚುಚ್ಚುಮದ್ದುಗಳನ್ನು ನೀಡಬೇಕಾಗುತ್ತದೆ. ಆಸ್ಪತ್ರೆಯಿಂದ ಮಗುವನ್ನು ಮನೆಗೆ ಕರೆತರುವಾಗ, ನವಜಾತ ಶಿಶುಗಳಿಗೆ ನೀಡಲಾಗುವ ಎಲ್ಲ ಲಸಿಕೆಗಳು ಪೂರ್ಣವಾಗಿವೆಯೇ ಎಂಬುದನ್ನು ಗಮನಿಸಿ.

ಪೋಷಕಾಂಶಗಳು

ಪೌಷ್ಟಿಕವಾದ ಆಹಾರವನ್ನು ತಾಯಿ ತಿನ್ನುವುದರಿಂದ ಮಗುವಿಗೆ ದೊರೆಯುವ ಹಾಲು ಪೌಷ್ಟಿಕವಾಗಿದ್ದು, ಸೋಂಕುಗಳಿಂದ ಹೋರಾಡುವ ಶಕ್ತಿಯನ್ನು ಕ್ರಮೇಣ ವೃದ್ಧಿಸುತ್ತದೆ. ಈ ಮಕ್ಕಳಿಗೆ ಸಾಧ್ಯವಾದಷ್ಟೂ ತಾಯಿಯ ಹಾಲೇ ಕುಡಿಸಿ. ಇದಕ್ಕಾಗಿ ಉತ್ತಮ ಆಹಾರಾಭ್ಯಾಸ ಮತ್ತು ವಿ‍ಶ್ರಾಂತಿ ಬಾಣಂತಿಗೆ ಅಗತ್ಯ. ತೂಕ ತೀರ ಕಡಿಮೆ ಇರುವ ಮಕ್ಕಳಿಗೆ ವೈದ್ಯರು ಹೆಚ್ಚುವರಿ ಪೋಷಣೆಯನ್ನು ಹೇಳಬಹುದು.

Exit mobile version