ನವ ದೆಹಲಿ: ವ್ಯಾಪಕವಾಗಿ ಬಳಕೆಯಲ್ಲಿರುವ ಪ್ಯಾರಸಿಟಮಲ್ ಸೇರಿದಂತೆ 127 ಔಷಧಗಳ (Medicine price) ದರದಲ್ಲಿ ಇಳಿಕೆಯಾಗಲಿದೆ. ರಾಷ್ಟ್ರೀಯ ಔಷಧ ದರ ಪ್ರಾಧಿಕಾರ (National Pharmaceutical Pricing Authority) ಮಂಗಳವಾರ 127 ಔಷಧಗಳ ದರಗಳಿಗೆ ಮಿತಿಯನ್ನು ವಿಧಿಸಿದೆ. ಈ ವರ್ಷ ಒಟ್ಟು ಐದು ಸಲ ದರ ಮಿತಿ ವಿಧಿಸಿದಂತಾಗಿದೆ. ಕೆಲ ಔಷಧಗಳಿಗೆ ಎರಡು ಸಲ ದರ ಮಿತಿಯನ್ನು ನಿಗದಿಪಡಿಸಲಾಗಿದೆ.
ಯಾವ ಔಷಧಗಳು ಅಗ್ಗವಾಗಲಿದೆ?
ಪ್ಯಾರಸಿಟಮಲ್, ಅಮೋಕ್ಸಿಲಿನ್, ರೆಬೆಪ್ರಜೋಲ್ ಮತ್ತು ಮೆಟ್‌ಫೋರ್ಮಿನ್ ದರ ಇಳಿಕೆಯಾಗಲಿದೆ. ರೋಗಿಗಳು ಹೆಚ್ಚಾಗಿ ಬಳಸುವ ಔಷಧಗಳಿವು. ಪ್ಯಾರಸಿಟಮಲ್‌ನ 650 ಎಂಜಿಯ ಪ್ರತಿ ಮಾತ್ರೆ ದರ 2.3 ರೂ. ಇತ್ತು. ಅದನ್ನು ಇದೀಗ 1.8 ರೂ.ಗೆ ಮಿತಿಗೊಳಿಸಲಾಗಿದೆ. ಅಮೋಕ್ಸಿಲಿನ್ ಮತ್ತು ಪೊಟಾಷಿಯಂ ಕ್ಲೌವ್ಲನೇಟ್ ಮಾತ್ರೆಯ ದರ 22.2 ರೂ.ಗಳಿಂದ 16.8 ರೂ.ಗೆ ಇಳಿಯಲಿದೆ. ಮೋಕ್ಸಿಫ್ಲೊಕ್ಸಿನ್ (400 ಎಂಜಿ) ಮಾತ್ರೆಗೆ ದರ 31.5 ರೂ.ಗಳಿಂದ 22.8 ರೂ.ಗೆ ತಗ್ಗಿದೆ.
ಇದು ಸ್ವಾಗತಾರ್ಹ ನಡೆ. ಹೀಗಿದ್ದರೂ, ಕೆಲ ಪ್ಯಾರಸಿಟಮಲ್ ಮಾತ್ರೆಗಳ ದರ ಈಗಾಗಲೇ ಕೆಳಮಟ್ಟದಲ್ಲಿದೆ ಎಂದು ಆಲ್ ಇಂಡಿಯಾ ಆರ್ಗನೈಸೇಶನ್ ಆಫ್ ಕೆಮಿಸ್ಟ್ಸ್ & ಡ್ರಗ್ಗಿಸ್ಟ್ಸ್‌ನ ಕಾರ್ಯದರ್ಶಿ ರಾಜೀವ್ ಸಿಂಘಾಲ್ ತಿಳಿಸಿದ್ದಾರೆ. ಪರಿಷ್ಕೃತ ದರದ ಔಷಧಗಳು ಮಾರುಕಟ್ಟೆಯಲ್ಲಿ ಸಿಗಲು ಸಾಮಾನ್ಯವಾಗಿ ಒಂದು ತಿಂಗಳಿನ ಕಾಲಾವಕಾಶ ಬೇಕಾಗುತ್ತದೆ.