Site icon Vistara News

Processed Food | ಸಂಸ್ಕರಿಸಿದ ಆಹಾರ ವಸ್ತುಗಳಿಂದ ಸಣ್ಣ ವಯಸ್ಸಿಗೇ ಕ್ಯಾನ್ಸರ್‌, ಹೃದ್ರೋಗ!

processed food side effects

ಮಕ್ಕಳಿಗೆ ಇಷ್ಟವೆಂದು ಯಾವಾಗಲೂ ಚಿಪ್ಸ್‌, ಕ್ಯಾಂಡಿ, ಐಸ್‌ಕ್ರೀಂ ಕೊಡಿಸುತ್ತೀರಾ? ರುಚಿಯಾಗಿದೆ ಎಂದು ಪ್ರತಿನಿತ್ಯ ಏನಾದರೊಂದು ಪ್ಯಾಕೆಟ್‌ ಹಿಡಿದು ಮೆಲ್ಲುತ್ತಿರುತ್ತೀರಾ? ಅಡುಗೆ ಕಷ್ಟವೆಂದು ರೆಡಿ ಟು ಈಟ್‌ ತಂದು ಬಿಸಿ ಮಾಡಿ ಹೊಟ್ಟೆ ತುಂಬಿಸುತ್ತೀರಾ? ಸುಲಭದಲ್ಲಿ ಅಡುಗೆ ಮಾಡಬಹುದಾದ ಪ್ಯಾಕ್ಡ್‌ ಆಹಾರಗಳನ್ನೇ ತಂದು ಅಡುಗೆ ಮಾಡುತ್ತೀರಾ? ಹಾಗಿದ್ದಲ್ಲಿ ನೀವು ಖಂಡಿತವಾಗಿಯೂ ನಿಮ್ಮ ಹಾಗೂ ನಿಮ್ಮ ಪ್ರೀತಿಪಾತ್ರರ ಆರೋಗ್ಯದ ಬಗ್ಗೆ ತುಸು ಯೋಚಿಸಬೇಕು. ಯಾಕೆಂದರೆ, ಸಂಸ್ಕರಿಸಿದ ಆಹಾರ ಹೆಚ್ಚು ತಿನ್ನುವುದರಿಂದ ಸಣ್ಣ ವಯಸ್ಸಿನಲ್ಲಿಯೇ ಕ್ಯಾನ್ಸರ್‌ ಹಾಗೂ ಹೃದಯ ಸಂಬಂಧೀ ರೋಗಗಳು ಹೆಚ್ಚು ಬರುತ್ತದೆ ಎಂದು ಇದೀಗ ಸಂಶೋಧನೆಯಿಂದ ಬಹಿರಂಗವಾಗಿದೆ. ಇಟಲಿ ಹಾಗೂ ಯುಎಸ್‌ಗಳಲ್ಲಿ ಬಹಳ ದೊಡ್ಡ ಮಟ್ಟದಲ್ಲಿ ನಡೆದ ಸಮೀಕ್ಷೆಯಲ್ಲಿ ಇದು ಬೆಳಕಿಗೆ ಬಂದಿದ್ದು, ಈ ವರದಿ ಬ್ರಿಟೀಷ್‌ ಮೆಡಿಕಲ್‌ ಜರ್ನಲ್‌ನಲ್ಲಿ ಪ್ರಕಟವಾಗಿದೆ.

ಮೊದಲೇ ಪ್ಯಾಕ್‌ ಮಾಡಿಟ್ಟ, ಸುಲಭವಾಗಿ ಮಾಡಬಹುದಾದ ಸೂಪ್‌ಗಳು, ಸಾಸ್‌/ಕೆಚಪ್‌ಗಳು, ಫ್ರೋಜನ್‌ ಪಿಜ್ಜಾ, ರೆಡಿ ಟು ಈಟ್‌ ಆಹಾರ ವಸ್ತುಗಳು, ಫ್ರೆಂಚ್‌ ಫ್ರೈ, ಸೋಡಾ, ಕುಕ್ಕೀಗಳು, ಕೇಕ್‌, ಕ್ಯಾಂಡಿ, ಡೋನಟ್‌, ಐಸ್‌ಕ್ರೀಂ ಹಾಗೂ ಇನ್ನೂ ಹತ್ತು ಹಲವು ದಿನನಿತ್ಯ ಬಳಸುವ ಆಹಾರ ವಸ್ತುಗಳೆಲ್ಲ, ಈ ಸಂಸ್ಕರಿಸಿದ ಆಹಾರ ವಸ್ತುಗಳ ವಿಭಾಗದಲ್ಲೇ ಬರುತ್ತಿದ್ದು, ಇವೆಲ್ಲವೂ ಆರೋಗ್ಯಕ್ಕೆ ಮಾರಕ ಎಂದು ವರದಿ ಹೇಳಿದೆ.

ಈಗಾಗಲೇ ಈ ಬಗ್ಗೆ ಹಲವು ವರದಿಗಳು ಬಂದಿದ್ದು, ಎಲ್ಲವೂ ಸಂಸ್ಕರಿಸಿದ ಆಹಾರ ವಸ್ತುಗಳಿಂದ ಬದಲಾದ ಜೀವನಕ್ರಮದಿಂದ ಬೊಜ್ಜು, ರಕ್ತದೊತ್ತಡ, ಮಧುಮೇಹ, ಹೃದಯದ ಸಮಸ್ಯೆಗಳೂ ಸೇರಿದಂತೆ ಸಣ್ಣ ವಯಸ್ಸಿನಲ್ಲೇ ಆರೋಗ್ಯದ ಏರುಪೇರಾಗಲು ಕಾರಣವೆಂದು ವರದಿ ಮಾಡಿವೆ. ಆದರೆ, ಈ ಸಮೀಕ್ಷೆ ದೊಡ್ಡ ಮಟ್ಟದಲ್ಲಿ ನಡೆದಿದ್ದು, ೨೮ ವರ್ಷಗಳೊಳಗಿನ ಸುಮಾರು ಎರಡು ಲಕ್ಷ ಮಹಿಳೆಯರು ಹಾಗೂ ಪುರುಷರ ಆಹಾರ ಕ್ರಮ ಹಾಗೂ ಅವರ ಆರೋಗ್ಯವನ್ನವಲಂಬಿಸಿ ನಡೆಸಲಾಗಿದೆ.

ಸಂಸ್ಕರಿಸಿ ಹಾಗೂ ಹೆಚ್ಚಿ ಸಂಸ್ಕರಿಸಲ್ಪಟ್ಟ ಆಹಾರ ಪದಾರ್ಥ ಮಾಂಸದ ತಿಂಡಿಗಳೂ ಸೇರಿದಂತೆ ಎಲ್ಲ ತಿನಿಸುಗಳ ನಿರಂತರ ಬಳಕೆ ಮಾಡುವ ಮಂದಿಗೆ ಹೊಟ್ಟೆ ಸಂಬಂಧಿ ಕ್ಯಾನ್ಸರ್‌ ಸಾಧ್ಯತೆಗಳು ಹೆಚ್ಚು ಎಂದು ವಿಶ್ವ ಆರೋಗ್ಯ ಸಂಸ್ಥೆ, ಅಮೆರಿಕನ್‌ ಕ್ಯಾನ್ಸರ್‌ ಸೊಸೈಟಿ ಹಾಗೂ ಅಮೆರಿಕನ್‌ ಇನ್ಸ್‌ಟಿಟ್ಯೂಟ್‌ ಫಾರ್‌ ಕ್ಯಾನ್ಸರ್‌ ರೀಸರ್ಚ್‌ ಹೇಳಿದೆ.

ಇವುಗಳಲ್ಲಿ ಮಹಿಳೆಯರಿಗಿಂತಲೂ ಪುರುಷರಲ್ಲಿ ಈ ಸಾಧ್ಯತೆಗಳು ಹೆಚ್ಚು ಗಮನಕ್ಕೆ ಬಂದಿದೆ. ಆದರೆ ಮಹಿಳೆಯರಲ್ಲಿ ಯಾಕೆ ಕಡಿಮೆ ಇದೆ ಎಂಬುದಕ್ಕೆ ಸರಿಯಾದ ಆಧಾರಗಳಿಲ್ಲ. ಬಹುಶಃ ಇದು ಸೆಕ್ಸ್‌ ಹಾರ್ಮೋನು ಬೇರೆ ಇರುವ ಕಾರಣವೂ ಇರಬಹುದು. ಅಥವಾ ಮಹಿಳೆಯರು, ಸಂಸ್ಕರಿಸಿದ ಆಹಾರಗಳಲ್ಲಿ ಮಾಡಿದ ಆಯ್ಕೆಗಳು ಪುರುಷರಿಗಿಂತ ಭಿನ್ನವಾಗಿರಬಹುದು. ಆದರೂ, ಇಬ್ಬರಿಗೂ ಇದು ಆರೋಗ್ಯದ ದೃಷ್ಟಿಯಿಂದ ಮಾರಕವೇ ಆಗಿದೆ ಎಂದೂ ಆದು ಹೇಳಿದೆ.

ಇದನ್ನೂ ಓದಿ | Diabetes Diet | ಮಧುಮೇಹ ನಿಯಂತ್ರಣಕ್ಕೆ ಇದೊಂದು ಸೂತ್ರ ನೆನಪಿಟ್ಟುಕೊಳ್ಳಿ

ಆದರೆ ಮೊಸರಿನ ಸಂಸ್ಕರಿಸಿದ ಆಹಾರಗಳನ್ನು ತಿಂದ ಮಹಿಳೆಯರಲ್ಲಿ ಕ್ಯಾನ್ಸರಿನ ರಿಸ್ಕು ಕಡಿಮೆಯಾಗಿ ಕಂಡಿದೆ. ಇದು ಮಾಂಸಾಧಾರಿತ ಸಂಸ್ಕರಿಸಿದ ಆಹಾರಗಳಲ್ಲಿ ಹೆಚ್ಚು ಅಪಾಯಕಾರಿಯಾಗಿ ಕಂಡಿದೆ. ಅಮೆರಿಕನ್ನರು, ದಿನನಿತ್ಯದ ಬದುಕಿನಲ್ಲಿ ಹೆಚ್ಚು ಸಂಸ್ಕರಿಸಿದ ಆಹಾರ ವಸ್ತುಗಳಿಗೇ ಮೊರೆಹೋಗುವುದು ಅಧಿಕವಾಗಿದೆ. ಮಕ್ಕಳು ತಮ್ಮ ಸೇವನೆಯ ಶೇ.೬೮ರಷ್ಟು ಸಂಸ್ಕರಿಸಿದ ಆಹಾರವನ್ನೇ ತಿಂದರೆ, ವಯಸ್ಕರು ಶೇ. ೫೮ರಷ್ಟು ಸಂಸ್ಕರಿಸಿದ ಆಹಾರ ತಿನ್ನುತ್ತಾರೆ. ಇದೆಲ್ಲವೂ ನಮ್ಮ ದೇಹದ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಎಂದು ಅದು ಹೇಳಿದೆ.

ಇಟಲಿಯ ಮೊಲೀಸ್‌ ಪಟ್ಟಣದ ಸುಮಾರು ೨೨,೦೦೦ ಮಂದಿಯನ್ನು ಮಾರ್ಚ್‌ ೨೦೦೫ರಿಂದ ದಶಕಗಳಿಗೂ ಹೆಚ್ಚು ಕಾಲ ಸಮೀಕ್ಷೆಗೆ ಒಳಪಡಿಸಿದ ಇನ್ನೊಂದು ವರದಿಯಲ್ಲಿ ಕ್ಯಾನ್ಸರ್‌ ಹಾಗೂ ಮಿದುಳಿಗೆ ಸಂಬಂಧಪಟ್ಟ ರೋಗಗಳು ಬರುವ ಸಂಭವ ಹೆಚ್ಚು ಎಂದಿದೆ,

ಸಂಸ್ಕರಿಸಿದ ಆಹಾರಗಳ ಮೂಲಕ ಪೋಷಕಾಂಶವಿಲ್ಲದ ಹೆಚ್ಚು ಟ್ರಾನ್ಸ್‌ ಫ್ಯಾಟ್‌ ಹೊಂದಿರುವ ಆಹಾರವೇ ಹೊಟ್ಟೆಗಿಳಿಯುವುದರಿಂದ ಸಣ್ಣ ವಯಸ್ಸಿನಲ್ಲಿ ಅಕಾಲಿಕ ರೋಗಗಳು ಹಾಗೂ ಮೃತ್ಯು ಸಾಮಾನ್ಯವಾಗಿದೆ ಎಂದು ಹೇಳಿದೆ.

ಮಾರುಕಟ್ಟೆಯಲ್ಲಿ ಇಂದು ಲಭ್ಯವಿರುವ ಸಂಸ್ಕರಿಸಿದ ಆಹಾರಗಳ ಪೈಕಿ ಶೇ.೮೦ರಷ್ಟು ಆಹಾರ ಪದಾರ್ಥಗಳು ಅನಾರೋಗ್ಯಕರ ಹಾಗೂ ಇವುಗಳಲ್ಲಿ ಅನಗತ್ಯ, ಸಕ್ಕರೆ, ಉಪ್ಪು ಹಾಗೂ ಪೋಷಕಾಂಶರಹಿತ ಕ್ಯಾಲರಿ ಇರುತ್ತದೆ. ಹಾಗಾಗಿ, ಆರೋಗ್ಯದ ಹೆಸರಿನಲ್ಲಿ ಬರುವ ಪ್ಯಾಕೇಜ್ಡ್‌ ತಿನಿಸುಗಳನ್ನು ಹಾಗೂ ಸುಲಭದಲ್ಲಿ ಅಡುಗೆ ಮಾಡಬಹುದಾದ ಸಮಯ ಉಳಿತಾಯ ಮಾಡುವ ಹೆಸರಿನಡಿ ಬರುವ ಬಹುತೇಕ ಎಲ್ಲ ಆಹಾರ ವಸ್ತುಗಳೂ ಆರೋಗ್ಯಕರವಲ್ಲ. ಇವುಗಳ ಹೆಚ್ಚು ಉಪಯೋಗ ಖಂಡಿತ ದೇಹಕ್ಕೆ ಒಳ್ಳೆಯದನ್ನು ಮಾಡುವುದಿಲ್ಲ.

ಇದನ್ನೂ ಓದಿ | National nutrition week | ಊಟ, ತಿಂಡಿಗೆ ಮೊದಲು ಅರಗಿಸಿಕೊಳ್ಳಿ ಈ ಸಂಗತಿ!

Exit mobile version