ದಾಲ್ ಅಥವಾ ಬೇಳೆಕಾಳುಗಳು (Pulses Benefits) ನಮ್ಮ ನಿತ್ಯ ಬಳಕೆಯಲ್ಲಿ ಬಳಸಲ್ಪಡುವ ಆಹಾರಗಳು. ತರಕಾರಿ ಇಲ್ಲದಿದ್ದರೂ, ಬೇಳೆಕಾಳುಗಳಲ್ಲಿಯೇ ಏನಾದರೊಂದು ರುಚಿಕರ ಅಡುಗೆ ಮಾಡಿಕೊಂಡು ತಿನ್ನಲು ಸಾಧ್ಯವಿದೆ. ತರಕಾರಿ, ಮಾಂಸ ಇತ್ಯಾದಿಗಳ ಅಡುಗೆ ಮಾಡಿದಾಗಲೂ ಬೇಕಾಗುವ ಆಹಾರ ಸಾಮಗ್ರಿಗಳ ಪೈಕಿ ಈ ಬೇಳೆಕಾಳುಗಳೂ ಇರುತ್ತವೆ. ನಮ್ಮ ಅಡುಗೆಯ ರುಚಿ ಹೆಚ್ಚಿಸಿ, ಪೋಷಕಾಂಶವನ್ನೂ ನಮ್ಮ ದೇಹಕ್ಕೆ ನೀಡುವ ಶಕ್ತಿ ಸಾಮರ್ಥ್ಯ ಹೆಚ್ಚಿಸುವ ಆಹಾರಗಳ ಪೈಕಿ ಇವು ಪ್ರಮುಖವಾದವು. ಬೆಳಗಿನ ತಿಂಡಿಯಿಂದ ಹಿಡಿದು ರಾತ್ರಿಯೂಟದವರೆಗೆ ಹಲವು ಬಗೆಯಲ್ಲಿ ಇಡೀ ದಿನ ಒಂದಲ್ಲ ಒಂದು ರೂಪದಲ್ಲಿ ಇವು ಹೊಟ್ಟೆಗಿಳಿಯುತ್ತವೆ. ಐಸಿಎಂಆರ್ (ICMR) ವರದಿಯ ಪ್ರಕಾರ, ಈ ಬೇಳೆಕಾಳುಗಳನ್ನು ನಾವು ಅತಿಯಾಗಿ ಬೇಯಿಸುವ ಮೂಲಕ ಇದರಲ್ಲಿರುವ ಪೋಷಕಾಂಶಗಳನ್ನು ಬಹುತೇಕ ಮಂದಿ ನಷ್ಟ ಮಾಡುವುದೇ ಹೆಚ್ಚು ಎಂದಿದೆ. ಅಗತ್ಯಕ್ಕಿಂತ ಹೆಚ್ಚು ಕಾಲ ಬೇಳೆಯನ್ನು ಬೇಯಿಸುವುದರಿಂದ ಇದರಲ್ಲಿರುವ ಪೋಷಕಾಂಶಗಳ್ನು ನಷ್ಟಮಾಡುತ್ತದೆ. ಮುಖ್ಯವಾಗಿ ಲೈಸೀನ್ ಎಂಬ ಅಂಶ ನಷ್ಟವಾಗುತ್ತದೆ. ಅಗತ್ಯಕ್ಕಿಂತ ಹೆಚ್ಚು ನೀರನ್ನು ಹಾಕಿ ಬೇಯಿಸುವುದೂ ಕೂಡಾ ಒಳ್ಲೆಯದಲ್ಲ. ಬನ್ನಿ, ಬೇಳೆಕಾಳುಗಳನ್ನು ಅತಿಯಾಗಿ ಬೇಯಿಸುವುದರಿಂದಾಗುವ ಅಡ್ಡ ಪರಿಣಾಮಗಳೇನು ಎಂಬುದನ್ನು ನೋಡೋಣ.
ಪ್ರೊಟೀನ್ ನಷ್ಟವಾಗುತ್ತವೆ
ಬೇಳೆಕಾಳುಗಳಲ್ಲಿ ಪ್ರೊಟೀನ್‌ಗಳು ಹೆಚ್ಚಿವೆ. ಇವು ನಮ್ಮ ದೇಹದಲ್ಲಿ ಬಿಲ್ಡಿಂಗ್ ಬ್ಲಾಕ್‌ನಂತೆ ಕೆಲಸ ಮಾಡುತ್ತವೆ. ಆದರೆ ಇದು ಸರಿಯಾಗಿ ಇದ್ದಾಗ, ಪೂರೈಕೆಯಾದಾಗ ಮಾತ್ರ ಹೀಗಾಗುತ್ತದೆ. ಇಲ್ಲವಾದರೆ, ಅತಿಯಾಗಿ ಬೇಳೆಗಳು ಬೆಂದಾಗ ಇದರಲ್ಲಿರುವ ಪ್ರೊಟೀನ್‌ನ ರಚನೆಯಲ್ಲೇ ವ್ಯತ್ಯಾಸವಾಗಿ ಇದರ ಪರಿಣಾಮದಲ್ಲೂ ವ್ಯತ್ಯಾಸವಾಗುತ್ತದೆ.
ವಿಟಮಿನ್‌ಗಳೂ ನಷ್ಟವಾಗುತ್ತವೆ
ಬೇಳೆಕಾಳುಗಳಲ್ಲಿ ವಿಟಮಿನ್ ಬಿ ಹಾಗೂ ಸಿ ಹೇರಳವಾಗಿ ಇದ್ದು, ಇವು ಉಷ್ಣತೆಗೆ ಒಳಪಟ್ಟರೆ ಅವುಗಳ ನಿಜವಾದ ಶಕ್ತಿಯನ್ನು ಕಳೆದುಕೊಳ್ಳುತ್ತವೆ. ಹಾಗಾಗಿ, ಒಂದು ಮಿತಿಗಿಂತ ಹೆಚ್ಚು ಬೇಯಿಸುವುದರಿಂದ ಇವುಗಳೂ ಕೂಡಾ ನಷ್ಟವೇ ಆಗುತ್ತವೆ. ಇವುಗಳ ನಿಜವಾದ ಲಾಭ ಸಿಗುವುದಿಲ್ಲ.
ರುಚಿಯ ಮೇಲೆ ಪರಿಣಾಮ ಬೀರುತ್ತವೆ
ಅತಿಯಾಗಿ ಬೇಳೆಕಾಳುಗಳ್ನು ಬೇಯಿಸಿದಾಗ ಅದು ಖಂಡಿತವಾಗಿ ರುಚಿಯ ಮೇಲೆ ಪರಿಣಾಮ ಬೀರುತ್ತದೆ. ಅತಿಯಾಗಿ ಬೆಂದಾಗ ಅವು ಕರಿದಂತಾಗಿ ಬೇಳೆಯ ಸ್ವಾದ ಕೆಡುತ್ತದೆ.
ಫೈಟಿಕ್ ಆಸಿಡ್‌ನ ಅಂಶ ಇಳಿಕೆಯಾಗುತ್ತದೆ
ಐಸಿಎಂಆರ್ ಮಾರ್ಗಸೂಚಿಯಲ್ಲಿ ವಿವರಿಸಿರುವಂತೆ ಬೇಳೆಕಾಳುಗಳನ್ನು ಸರಿಯಾದ ಹದದಲ್ಲಿ ಬೇಯಿಸಿದಾಗ ಅದರಲ್ಲಿರುವ ಫೈಟಿಕ್ ಆಸಿಡ್‌ನ ಅಂಶ ಇಳಿಕೆಯಾಗುತ್ತದೆ. ಆದರೆ, ಅಗತ್ಯಕ್ಕಿಂತ ಹೆಚ್ಚು ಬೆಂದರೆ, ಫೈಟಿಕ್ ಆಸಿಡ್ ಹೆಚ್ಚಾಗಿ ವಿರುದ್ಧ ಪರಿಣಾಮಗಳನ್ನು ನೀಡಬಹುದು. ಇದರಿಂದ ಕಬ್ಬಿಣಾಂಶ, ಝಿಂಕ್, ಮೆಗ್ನೀಶಿಯಂ ಹಾಗೂ ಕ್ಯಾಲ್ಶಿಯಂನ ಹೀರುವಿಕೆಯ ಶಕ್ತಿಯೂ ಕಡಿಮೆಯಾಗುತ್ತದೆ. ಹೆಚ್ಚಾದ ಫೈಟಿಕ್ ಆಸಿಡ್‌ನಿಂದ ಗ್ಯಾಸ್ ಹಾಗೂ ಹೊಟ್ಟೆಯುಬ್ಬರದ ಸಮಸ್ಯೆಗಳೂ ಬರಬಹುದು.
ಇದನ್ನೂ ಓದಿ: Uric Acid: ಆರೋಗ್ಯ ಹದಗೆಡಿಸುವ ಯೂರಿಕ್ ಆಮ್ಲವನ್ನು ನಿಯಂತ್ರಿಸುವ ನೈಸರ್ಗಿಕ ವಿಧಾನಗಳಿವು
ಬೇಯಿಸುವ ಸರಿಯಾದ ಕ್ರಮ
ಹಾಗಾದರೆ, ಬೇಳೆಕಾಳುಗಳನ್ನು ಬೇಯಿಸುವ ಸರಿಯಾದ ಕ್ರಮ ಯಾವುದು ಎಂದರೆ ಅದಕ್ಕೆ ಐಸಿಎಂಆರ್ ಹೀಗೆ ವಿವರಿಸುತ್ತದೆ. ಬೇಳೆಕಾಳುಗಳನ್ನು ಮೊದಲು ಸರಿಯಾಗಿ ಎರಡು ಮೂರು ಬಾರಿ ನೀರಿನಲ್ಲಿ ತೊಳೆಯಿರಿ. ತೊಳೆದ ನೀರು ಸ್ವಚ್ಛವಾಗಿ ಕಾಣುವಂತಾದರೆ, ಸರಿಯಾಗಿ ತೊಳೆದಿದ್ದೀರಿ ಎಂದರ್ಥ. ಈ ಬೇಳೆಕಾಳುಗಳನ್ನು ಮೂರರಿಂದ ನಾಲ್ಕು ಗಂಟೆಗಳ ಕಾಲ ನೆನೆ ಹಾಕಿ. ಹೀಗೆ ನೆನೆ ಹಾಕುವುದರಿಂದ ಇದು ಸರಿಯಾಗಿ ಜೀರ್ಣವಾಗುತ್ತವೆ. ಜೊತೆಗೆ ಹೊಟ್ಟೆಯುಬ್ಬರ ಹಾಗೂ ಗ್ಯಾಸ್ ಆಗುವ ಸಮಸ್ಯೆಯೂ ತಪ್ಪುತ್ತದೆ. ಅಗತ್ಯವಿದ್ದಷ್ಟೇ ನೀರು ಹಾಕಿ ಬೇಯಿಸಿ. ಪ್ರೆಷರ್ ಕುಕ್ಕರ್‌ನಲ್ಲಿಯೂ ಬೇಯಿಸಬಹುದು. ಪಾತ್ರೆಯ ಮುಚ್ಚಳ ಮುಚ್ಚಿ ಬೇಯಿಸಿ. ಆಗ ಹೆಚ್ಚಾದ ನೀರನ್ನು ಚೆಲ್ಲುವ ಪ್ರಮೇಯ ಬರುವುದಿಲ್ಲ. ಬೇಯಿಸುವಾಗ ಒಂದೆರಡು ಹನಿ ಎಣ್ಣೆ ಹಾಕಿ. ಉಪ್ಪು ಹಾಕಬೇಡಿ. ಇದರಿಂದ ಬೇಳೆಕಾಳುಗಳಲ್ಲಿರುವ ಪೋಷಕಾಂಶಗಳು ಸರಿಯಾಗಿ ಹೊರಬಂದು, ನಮ್ಮ ದೇಹಕ್ಕೆ ಸೇರಲು ತಯಾರಾಗುತ್ತದೆ.