ಶುದ್ಧ ಆಹಾರವನ್ನೇ ಸೇವಿಸಬೇಕೆಂಬುದು ಎಲ್ಲರ ಆಸೆ. ಆದರೆ ʻಶುದ್ಧʼ ಎಂಬ ಹಣೆಪಟ್ಟಿಯನ್ನು ಹೊತ್ತು ಬರುವುದರಲ್ಲಿ ಅರ್ಧಕ್ಕರ್ಧ ಕಲಬೆರಕೆಯ ಆಹಾರಗಳೇ. ಉದಾ, ತುಪ್ಪದ ಬಗ್ಗೆಯೇ ಹೇಳುವುದಾದರೆ, ಹಾಲಿನಿಂದ ತುಪ್ಪದವರೆಗಿನ ಪ್ರಕ್ರಿಯೆಯನ್ನು ಮನೆಯಲ್ಲೇ ನೀವೇ ಮಾಡಿಕೊಂಡರೆ ತುಪ್ಪ ಅಶುದ್ಧ ಎನ್ನುವ ರಗಳೆಯಿಲ್ಲ. ಇನ್ನು ಹಾಲಿನ ಗುಣಮಟ್ಟವೇ ಸರಿಯಿಲ್ಲದಿದ್ದರೆ, ಹಸು ಸಾಕಬೇಕಷ್ಟೇ! ಹಾಗಲ್ಲದೆ, ಅಂಗಡಿಯಿಂದ ಖರೀದಿಸಿ ತರುವ ತುಪ್ಪವೇ (Purity Check of Ghee) ಆಗಿದ್ದರೆ, ಅದರ ಗುಣಮಟ್ಟವನ್ನು ಖಾತ್ರಿ ಪಡಿಸಿಕೊಳ್ಳುವುದು ಹೇಗೆ? ತುಪ್ಪದಲ್ಲಿ ಏನೇನೋ ಜಿಡ್ಡು ಅಥವಾ ಪಿಷ್ಟಗಳು ಸೇರಿಲ್ಲವೆಂದು ನಂಬುವುದು ಹೇಗೆ? ಶುದ್ಧ ತುಪ್ಪವು ಮೇಲ್ನೋಟಕ್ಕೆ ತನ್ನ ಘಮ, ಬಣ್ಣ ಮತ್ತು ರುಚಿಯಲ್ಲಿ ಎಲ್ಲಕ್ಕಿಂತ ಭಿನ್ನವೇ ಆಗಿರುತ್ತದೆ. ಯಾವುದೇ ಗಾಢ ಬಣ್ಣವಿಲ್ಲದೆ, ಕಟುವಾಗ ಘಮವಿಲ್ಲದೆ, ಅಂಟಾದ ರುಚಿಯಿಲ್ಲದ ತುಪ್ಪವನ್ನು ಶುದ್ಧವೆಂದು ನಂಬಬಹುದು. ಆದರೆ ಈಗ ಕಲಬೆರಕೆ ವ್ಯವಹಾರಸ್ಥರು ಎಷ್ಟು ಚತುರರೆಂದರೆ, ಅನುಭವಿಗಳನ್ನೂ ಯಾಮಾರಿಸಿ ಬಿಡುತ್ತಾರೆ. ಇನ್ನು ಗುಣಮಟ್ಟ ಖಾತ್ರಿಯಲ್ಲಿ ಅನುಭವ ಇಲ್ಲದವರ ಪಾಡೇನು? ತುಪ್ಪದ ಗುಣಮಟ್ಟದ ಖಾತ್ರಿಗಾಗಿ ಕೆಲವು ಸರಳ ಉಪಾಯಗಳನ್ನು ಇಲ್ಲಿ ವಿವರಿಸಲಾಗಿದೆ. ಇವೆಲ್ಲವೂ ನೂರಕ್ಕೆ ನೂರರಷ್ಟು ಫಲಿತಾಂಶ ನೀಡುತ್ತವೆ ಎಂದಲ್ಲ, ಆದರೆ ಕಲಬೆರಕೆ ಪತ್ತೆ ಮಾಡುವಲ್ಲಿ ಸಹಾಯವನ್ನಂತೂ ಖಂಡಿತ ಮಾಡುತ್ತವೆ.
ಫ್ರೀಜಿಂಗ್ ಪರೀಕ್ಷೆ
ಅಂಗಡಿಯಿಂದ ತಂದ ಬಾಟಲಿ ಅಥವಾ ಪ್ಯಾಕ್‌ನಿಂದ ಕೊಂಚ ತೆಳುವಾದ ತುಪ್ಪವನ್ನು ತೆಗೆದು ಗಾಜಿನ ಸಣ್ಣ ಪಾತ್ರೆಗೆ ಹಾಕಿ. ಇದನ್ನು ಕೆಲ ಸಮಯ ಫ್ರಿಜ್‌ನಲ್ಲಿಡಿ. ನಾಲ್ಕಾರು ತಾಸಿನಲ್ಲಿ ಈ ತುಪ್ಪ ಸಂಪೂರ್ಣ ಗಟ್ಟಿಯಾಗುತ್ತದೆ. ಇದು ಹೀಗೆ ಗಟ್ಟಿಯಾಗುವಾಗ ಸಂಪೂರ್ಣ ಒಂದೇ ತೆರನಾಗಿ, ಸಮನಾಗಿ ಗಟ್ಟಿಯಾಗಬೇಕು. ಮೇಲ್ಮೈ ಸಮತಟ್ಟಾಗಿ ಇಲ್ಲದಿದ್ದರೆ, ನಡುವೆ ಎಲ್ಲಾದರೂ ಪದರಗಳು ಬಿಟ್ಟಿದ್ದರೆ ಗಾಜಿನ ಪಾತ್ರೆಯನ್ನು ಸುತ್ತಲೂ ಪರಿಶೀಲಿಸಿದಾಗ ಗೋಚರಿಸುತ್ತದೆ. ಕೊಬ್ಬರಿ, ಸೋಯಾ ಅಥವಾ ಸೂರ್ಯಕಾಂತಿ ಎಣ್ಣೆಗಳನ್ನು ಮಿಶ್ರ ಮಾಡಿದ್ದರ ಪರಿಣಾಮ ಇದಾಗಿರಬಹುದು.
ಬಿಸಿ ಪರೀಕ್ಷೆ
ಸಣ್ಣ ಪ್ಯಾನ್‌ನಲ್ಲಿ ಒಂದು ದೊಡ್ಡ ಚಮಚ ತುಪ್ಪವನ್ನು ಹಾಕಿ ಸಣ್ಣ ಉರಿಯಲ್ಲಿ ಕರಗಿಸಿ. ತುಪ್ಪ ಶುದ್ಧವೇ ಆಗಿದ್ದರೆ ಒಂದೆರಡು ಕ್ಷಣಗಳಲ್ಲಿ ಅದು ಕರಗಿ, ನೀರಿನಂಥ ತಿಳಿಯಾದ ದ್ರವ ಮಾತ್ರವೇ ಕಾಣುತ್ತದೆ. ಒಂದೊಮ್ಮೆ ಬೇರೇನಾದರೂ ಅದಕ್ಕೆ ಸೇರಿದ್ದರೆ ಕರಗುವುದು ನಿಧಾನವಾಗಬಹುದು ಅಥವಾ ಕರಗಿದ ನಂತರ ಶೇಷವೇನಾದರೂ ಕಾಣಬಹುದು ಅಲ್ಲಿ.
ಅಯೋಡಿನ್ ಪರೀಕ್ಷೆ
ಒಂದು ದೊಡ್ಡ ಚಮಚ ತೆಳುವಾದ ತುಪ್ಪಕ್ಕೆ ಕೆಲವು ಹನಿ ಅಯೋಡಿನ್ ದ್ರಾವಣವನ್ನು ಸೇರಿಸಿ ಕಲಕಿ. ಈ ಮಿಶ್ರಣ ನಿಧಾನಕ್ಕೆ ನೀಲಿ ಬಣ್ಣಕ್ಕೆ ತಿರುಗಿದರೆ, ಆ ತುಪ್ಪದಲ್ಲಿ ಯಾವುದೋ ಪಿಷ್ಟದಂಥ ವಸ್ತುವನ್ನು ಮಿಶ್ರ ಮಾಡಲಾಗಿದೆ ಎಂಬುದು ಸ್ಪಷ್ಟ. ಮಿಶ್ರಣದಲ್ಲಿ ಯಾವುದೇ ಬಣ್ಣದ ಬದಲಾವಣೆ ಕಾಣದಿದ್ದರೆ ಸ್ಟಾರ್ಚ್ ಮಿಶ್ರಣ ಇಲ್ಲ, ಆದರೆ ಬೇರಾವುದೇ ಜಿಡ್ಡು ಇದ್ದರೆ ಅದು ತಿಳಿಯುವುದಿಲ್ಲ ಈ ಪರೀಕ್ಷೆಯಲ್ಲಿ.
ನೀರಿನ ಪರೀಕ್ಷೆ
ಒಂದು ಗಾಜಿನ ಗ್ಲಾಸ್‌ನಲ್ಲಿ ಮುಕ್ಕಾಲರಷ್ಟು ಶುದ್ಧ ನೀರನ್ನು ಇರಿಸಿಕೊಳ್ಳಿ. ಇದಕ್ಕೆ ಒಂದು ಸಣ್ಣ ಚಮಚ ತುಪ್ಪ ಹಾಕಿ. ಶುದ್ಧ ತುಪ್ಪ ನೀರಿನ ಮೇಲೆ ತೇಲುತ್ತಿರುತ್ತದೆ. ತುಪ್ಪ ಮಂದವಾಗಿಲ್ಲದೆ ತೆಳುವಾಗಿದ್ದರೂ ಅದು ನೀರಿನ ಮೇಲೆಯೇ ಇರಬೇಕು. ಹಾಗಲ್ಲದೆ, ನೀರಿನೊಂದಿಗೆ ಬೆರೆಯಿತು ಅಥವಾ ಅಡಿಯಲ್ಲಿ ಹೋಗಿ ಕುಳಿತಿತು ಎಂದಾದರೆ, ಅದಕ್ಕೇನೋ ಬೇರೆ ವಸ್ತುವನ್ನು ಮಿಶ್ರ ಮಾಡಲಾಗಿದೆ.
ಇದನ್ನೂ ಓದಿ: Health Tips: ನೋವು ನಿವಾರಿಸುವ ಅಪಾಯರಹಿತ ನೈಸರ್ಗಿಕ ಮೂಲಿಕೆಗಳಿವು!
ಪೇಪರ್ ಪರೀಕ್ಷೆ
ಸಾಮಾನ್ಯವಾದ ಖಾಲಿ ಪೇಪರ್ ಮೇಲೆ ಒಂದೆರಡು ಹನಿ ತುಪ್ಪ ಹಾಕಿ. ಹತ್ತಾರು ನಿಮಿಷಗಳ ಕಾಲ ಹಾಗೆಯೇ ಬಿಡಿ ಅದನ್ನು, ಅಲ್ಲಾಡಿಸಲೂಬೇಡಿ. ಶುದ್ಧ ತುಪ್ಪ ಮೊದಲಿಗೆ ಕಾಗದಕ್ಕೆ ಹೀರಿಕೊಂಡು ಕೇವಲ ಜಿಡ್ಡಿನ ಗುರುತನ್ನು ಉಳಿಸುತ್ತದೆ. ಕ್ರಮೇಣ ಅದೂ ಮಾಯವಾಗಿ, ಪೇಪರ್‌ಗೆ ಹಾಕಿದ್ದ ತುಪ್ಪದ ಗುರುತು ಗೋಚರಿಸುವುದಿಲ್ಲ. ಕಲಬೆರಕೆ ತುಪ್ಪವಾದರೆ ಜಿಡ್ಡಿನ ಕಲೆ ಹಾಗೆಯೇ ಉಳಿಯುತ್ತದೆ. ಅದಕ್ಕೆ ಬೇರೆ ಬಣ್ಣವೂ ಬರಬಹುದು. ಮಾತ್ರವಲ್ಲ, ತುಪ್ಪದ ಗುರುತು ಸಂಪೂರ್ಣ ಮಾಯವಾಗದೆ ಅಂಟಾಗಿ ಕಾಣುತ್ತದೆ.