Site icon Vistara News

Quitting Smoking: ಈ ಆಹಾರ ಸೇವಿಸುವ ಮೂಲಕ ಸಿಗರೇಟು, ಗುಟ್ಕಾ ಚಟದಿಂದ ದೂರ ಆಗಬಹುದು!

Quitting Smoking

ವಿಶ್ವದೆಲ್ಲೆಡೆ ತಂಬಾಕು ರಹಿತ ದಿನವನ್ನು (ಮೇ 31) ಆಚರಿಸಲಾಗುತ್ತಿದೆ. ಒಮ್ಮೆ ಹೇಗೋ ಅಂಟಿಕೊಂಡ ತಂಬಾಕು ವ್ಯಸನವನ್ನು ಬಿಡುವುದಕ್ಕೆ ಮಾನಸಿಕ ಸ್ಥಿರತೆಯ ಅಗತ್ಯವಿದೆ. ಜೊತೆಗೆ ಹೊರಗಿನಿಂದ ದೊರೆಯುವ ನೆರವು ಸಹ ಗುರಿ ತಲುಪಲು ಸಹಾಯ ಮಾಡುತ್ತದೆ. ಈ ಹಿನ್ನೆಲೆಯಲ್ಲಿ, ನಿಕೋಟಿನ್‌ ಬೇಕು ಎನ್ನುವ ಬಯಕೆಗೆ ಕಡಿವಾಣ ಹಾಕುವುದಕ್ಕೆ ಕೆಲವು ಆಹಾರಗಳು ನೆರವಾಗುತ್ತವೆ. ಯಾವುದು ಆ ಆಹಾರಗಳು ಮತ್ತು ನಿಕೋಟಿನ್‌/ತಂಬಾಕು ಬೇಕೆನ್ನುವ ಬಯಕೆಯನ್ನು ಹತ್ತಿಕ್ಕಲು ಹೇಗೆ ನೆರವಾಗುತ್ತವೆ? ಈ ಕುರಿತ ವಿವರ ಇಲ್ಲಿದೆ.

ವ್ಯಸನ ಯಾವುದೇ ಆದರೂ, ಅದನ್ನು ದೂರ ಮಾಡುವುದು ಸವಾಲಿನದು. ಜೊತೆಗೆ, ವ್ಯಸನದಿಂದ ಹಿಂತೆಗೆಯುವಾಗ ಶರೀರ ಪ್ರತಿಕ್ರಿಯಿಸುವ ರೀತಿಯನ್ನು ನಿಭಾಯಿಸುವುದು ಬಹಳಷ್ಟು ಜನರಿಗೆ ಕಷ್ಟವಾಗಬಹುದು. ಒಮ್ಮೆ ಸಿಗರೇಟ್‌ ಅಥವಾ ಗುಟ್ಕಾ ಇಲ್ಲವೇ ನಿಕೋಟಿನ್‌ ಇರುವಂಥ ಇನ್ನೇನೋ ನೆನಪಾಗುತ್ತಿದ್ದಂತೆ, ಬೇಕೇಬೇಕು ಎನಿಸಲು ಆರಂಭಿಸಬಹುದು. ಇಂಥ ದಿನಗಳಲ್ಲಿ ಕೆಲವು ಆಹಾರಗಳು ವ್ಯಸನ ದೂರ ಮಾಡಲು ಹೆಚ್ಚುವರಿ ನೆರವನ್ನು ನೀಡುತ್ತವೆ.

ಡಾರ್ಕ್‌ ಚಾಕೊಲೇಟ್‌

ಅಂದರೆ ಶೇ. 70ಕ್ಕಿಂತ ಹೆಚ್ಚಿನ ಕೊಕೊ ಇರುವಂಥ ಈ ಚಾಕಲೇಟ್‌ಗಳು ರುಚಿಯಲ್ಲಿ ಕೊಂಚ ಕಹಿ ಇರುತ್ತವೆ. ಆದರೆ ಸಿಹಿ ಮತ್ತು ನಿಕೋಟಿನ್‌- ಈ ಎರಡೂ ಬೇಕು ಎನ್ನುವ ಬಯಕೆಯನ್ನು ಹತ್ತಿಕ್ಕುತ್ತವೆ. ಕಾರಣ, ಡಾರ್ಕ್‌ ಚಾಕಲೇಟ್‌ನಲ್ಲಿ ಸಾಂದ್ರವಾಗಿರುವ ಫ್ಲೆವನಾಯ್ಡ್‌ಗಳು ದೇಹದ ಡೋಪಮಿನ್‌ ಚೋದಕದ ಮಟ್ಟವನ್ನು ಹೆಚ್ಚಿಸುತ್ತವೆ. ಇದರಿಂದ ಶರೀರ ತನ್ನಷ್ಟಕ್ಕೇ ರಿಲಾಕ್ಸ್‌ ಆಗಿ, ನಿಕೋಟಿನ್‌ ಬೇಕು ಎನ್ನುವ ತುಡಿತವನ್ನು ತಾನಾಗಿ ಕಳೆದುಕೊಳ್ಳುತ್ತದೆ.

ಇಡೀ ಧಾನ್ಯಗಳು

ನಿಕೋಟಿನ್‌ ಬಿಡುತ್ತಿದ್ದಂತೆ ಸಕ್ಕರೆ ಮತ್ತು ಪಿಷ್ಟದ ವಸ್ತುಗಳನ್ನು ಹೆಚ್ಚು ಬೇಕೆಂದು ಶರೀರ ಬಯಸುತ್ತದೆ. ಇದರಿಂದ ದೇಹದಲ್ಲಿ ಸಕ್ಕರೆ ಮಟ್ಟ ಏರಿಳಿತ ಆಗಬಹುದು. ಇದನ್ನು ತಡೆಯುವುದಕ್ಕಾಗಿ, ಇಡೀ ಧಾನ್ಯಗಳ ಸೇವನೆ ಉಪಯುಕ್ತ. ಜವೆ ಗೋಧಿ, ಕೆಂಪಕ್ಕಿ, ಬಾರ್ಲಿ, ಓಟ್‌, ಕಿನೊವಾ, ಸಿರಿಧಾನ್ಯಗಳನ್ನು ಆಹಾರವಾಗಿ ಬಳಸಿದರೆ ದೇಹದಲ್ಲಿ ಸಕ್ಕರೆಯಂಶವನ್ನು ಸ್ಥಿರಗೊಳಿಸಬಹುದು. ಜೊತೆಗೆ ಇವುಗಳಲ್ಲಿರುವ ಸಂಕೀರ್ಣ ಪಿಷ್ಟಗಳು ಮತ್ತು ನಾರು ದೀರ್ಘ ಕಾಲ ಹೊಟ್ಟೆ ತುಂಬಿರುವ ಅನುಭವವನ್ನು ನೀಡುತ್ತವೆ.

ಹರ್ಬಲ್‌ ಚಹಾ

ನಿಕೋಟಿನ್‌ ಬಿಡುತ್ತಿದ್ದಂತೆ ಉಂಟಾಗುವ ಒತ್ತಡ, ಆಯಾಸಗಳನ್ನು ಕಡಿಮೆ ಮಾಡುವಲ್ಲಿ ಹರ್ಬಲ್‌ ಚಹಾಗಳು ನೆರವಾಗುತ್ತವೆ. ಉದಾ, ಕ್ಯಾಮೊಮೈಲ್‌ ಚಹಾ- ಒತ್ತಡ ನಿವಾರಣೆಯಲ್ಲಿ ಸಹಕಾರಿ. ಪೆಪ್ಪರ್‌ಮಿಂಟ್‌ ಚಹಾ ಮನಸ್ಸನ್ನು ಚೇತೋಹಾರಿಯಾಗಿ ಇರಿಸಬಲ್ಲದು. ಶುಂಠಿ ಚಹಾ ಉರಿಯೂತ ನಿವಾರಣೆಗೆ ನೆರವಾಗುತ್ತದೆ. ಗ್ರೀನ್‌ ಟೀಯಲ್ಲಿರುವ ಅಲ್ಪ ಪ್ರಮಾಣದ ಕೆಫೇನ್‌ ಮತ್ತು ಎಲ್‌-ಥಿಯಾನಿನ್‌ ಅಂಶಗಳು ಒತ್ತಡ ನಿವಾರಣೆಗೆ ನೆರವಾಗುತ್ತವೆ. ನಿಂಬೆ ಹುಲ್ಲಿನ ಚಹಾ ಸಹ ಇದೇ ಸಾಲಿಗೆ ಸೇರುವಂಥದ್ದು.

ಹಸಿ ತರಕಾರಿ ಮತ್ತು ಹಣ್ಣುಗಳು

ಹಸಿಯಾದ ಕ್ಯಾರೆಟ್‌, ಸೌತೇಕಾಯಿ, ಟೊಮೇಟೊ, ಕ್ಯಾಪ್ಸಿಕಂನಂಥವು ಬಾಯಿಯ ಬೇಡಿಕೆ ಕಡಿಮೆ ಮಾಡುತ್ತವೆ. ಯಾವುದೇ ಸಿಹಿ ಹಣ್ಣುಗಳ ಸಹ ಬಯಕೆಯನ್ನು ಹತ್ತಿಕ್ಕಲು ನೆರವಾಗುತ್ತವೆ. ಜೊತೆಗೆ ಉಪ್ಪಿಲ್ಲದ ಬಾದಾಮಿ, ಪಿಸ್ತಾ, ಗೋಡಂಬಿ, ವಾಲ್‌ನಟ್‌ಗಳು ಹಾಗೂ ಸಣ್ಣ ಬೀಜಗಳು ರಕ್ತದಲ್ಲಿನ ಸಕ್ಕರೆಯಂಶವನ್ನು ಸ್ಥಿರಗೊಳಿಸಲು ನೆರವಾಗುತ್ತವೆ. ಜೊತೆಗೆ, ಬಾಯಿಯ ಚಪಲವನ್ನು ಹತ್ತಿಕ್ಕಲು ಅನುಕೂಲವಾಗುವಂತೆ, ಅಗಿದು ತಿನ್ನುವಂಥ ಆಹಾರಗಳಿವು.

ಡೇರಿ ಉತ್ಪನ್ನಗಳು

ಕಾಟೇಜ್‌ ಚೀಸ್‌, ಗ್ರೀಕ್‌ ಯೋಗರ್ಟ್‌ನಂಥ ಹೆಚ್ಚು ಪ್ರೊಟೀನ್‌ ಇರುವಂಥ ಡೇರಿ ಉತ್ಪನ್ನಗಳು ಈ ಹಂತದಲ್ಲಿ ನೆರವು ನೀಡುತ್ತವೆ. ನಿಕೋಟಿನ್‌ನ ರುಚಿಗೆ ಬಾಯಿ ಒಗ್ಗಿದ್ದರೆ, ಅದನ್ನು ಬದಲಿಸಲು ಈ ವಸ್ತುಗಳು ಸಹಕಾರಿ. ಬಾಯಿ ಮತ್ತು ಹೊಟ್ಟೆಯಲ್ಲಿರುವ ಆರೋಗ್ಯಪೂರ್ಣ ಬ್ಯಾಕ್ಟೀರಿಯಗಳ ಸಂಖ್ಯೆಯನ್ನು ಇವು ಹೆಚ್ಚಿಸುತ್ತವೆ. ಇದರಿಂದ ನಿಕೋಟಿನ್‌ ಬೇಕು ಎನ್ನುವ ಭಾವನೆ ಕಡಿಮೆಯಾಗುತ್ತದೆ.

Exit mobile version