Site icon Vistara News

Red Spinach Benefits: ಕೆಂಪು ಹರಿವೆ; ಇದು ಕೇವಲ ಸೊಪ್ಪಲ್ಲ, ಪೋಷಕಾಂಶಗಳ ಪವರ್‌ಹೌಸ್‌!

Red Spinach Benefits

ಭಾರತೀಯರ ಮನೆಗಳಲ್ಲಿ ಸೊಪ್ಪಿನಡುಗೆಗೆ ವಿಶೇಷವಾದ ಸ್ಥಾನವಿದೆ. ಚಳಿಗಾಲ ಬಂದರೆ, ಸೊಪ್ಪಿನದೇ ಸಾಮ್ರಾಜ್ಯ. ಚಳಿಗಾಲವನ್ನು ಹೊರತಾಗಿಯೂ ಎಲ್ಲ ಕಾಲಗಳಲ್ಲೂ ದೊರೆಯುವ ಕೆಲವು ಸೊಪ್ಪುಗಳಿಗೆ ನಿರಂತರವಾಗಿ ಸ್ಥಾನ ಇದ್ದೇ ಇರುತ್ತದೆ. ಅಂತಹ ಸೊಪ್ಪುಗಳ ಪೈಕಿ ಹರಿವೆ ಸೊಪ್ಪೂ ಒಂದು. ಹರಿವೆ ಸೊಪ್ಪಿನಲ್ಲಿ ಹಲವು ಬಗೆಗಳಿದ್ದರೂ ಕೆಂಪು ಹರಿವೆಗೆ ವಿಶೇಷ ಸ್ಥಾನ. ಪೋಷಕಾಂಶದ ವಿಷಯದಲ್ಲೂ ಇದೇ ನಂಬರ್‌ ವನ್‌. ಕೆಂಪು ಹರಿವೆ (Red Spinach Benefits) ಕೇವಲ ಬಣ್ಣದಿಂದ ಮಾತ್ರ ಕೆಂಪಲ್ಲ. ಬಣ್ಣದಿಂದ ಯಾವ ಬದಲಾವಣೆಯೂ ಇಲ್ಲ ಎಂದುಕೊಳ್ಳಬೇಡಿ. ಕೆಂಬಣ್ಣದ ಹರಿವೆಯಲ್ಲಿ ಸಾಮಾನ್ಯ ಹರಿವೆಗಿಂತ ಹೆಚ್ಚು ಪೋಷಕಾಂಶಗಳಿವೆ. ಇದು ಆರೋಗ್ಯದ ವಿಚಾರದಲ್ಲಿ ಅಪ್ಪಟ ಚಿನ್ನ. ಇದರಲ್ಲಿ ವಿಟಮಿನ್‌ ಇ, ಸಿ ಮತ್ತು ಕೆ ಹೇರಳವಾಗಿದ್ದು, ಕಬ್ಬಿಣಾಂಶ ಹಾಗೂ ಕ್ಯಾಲ್ಶಿಯಂನಂತಹ ಅತ್ಯಗತ್ಯ ಖನಿಜಾಂಶಗಳೂ ಹೇರಳವಾಗಿವೆ. ಆಂಟಿ ಆಕ್ಸಿಡೆಂಟ್‌ಗಳಿಂದ ಶ್ರೀಮಂತವಾಗಿದ್ದು, ಇದು ಒಟ್ಟು ಆರೋಗ್ಯದ ಮೇಲೆ ಉತ್ತಮ ಪರಿಣಾಮ ಬೀರುತ್ತದೆ.

ತೂಕ ಇಳಿಕೆಗೆ

ಯಾರಾದರೂ, ತೂಕ ಇಳಿಸಬೇಕೆಂಬ ಯೋಚನೆಯಲ್ಲಿದ್ದರೆ ಅಂಥವರಿಗೆ ಇದು ಅತ್ಯಂತ ಉತ್ತಮವಾದ ಆಹಾರ. ಯಾಕೆಂದರೆ, ಇದರಲ್ಲಿ ಕಡಿಮೆ ಕ್ಯಾಲರಿಯಿದ್ದು, ನಾರಿನಂಶವೂ ಹೇರಳವಾಗಿದೆ. ಜೊತೆಗೆ ಬೇಕಾದ ಎಲ್ಲ ಪೋಷಕಾಂಶಗಳೂ ಭರಪೂರ ಇವೆ. ಫಿಟ್‌ನೆಸ್‌ ಕಾಪಾಡಿಕೊಳ್ಳಲು ಬೇಕಾದ ಎಲ್ಲವೂ ಇದರಲ್ಲಿದೆ. ಹೆಚ್ಚು ಹೊತ್ತು ಹೊಟ್ಟೆ ಫುಲ್‌ ಆದ ಅನುಭವ ನೀಡುವ ಕಾರಣ ಬೇರೆ ಆಗಾಗ ಏನಾದರೂ ತಿನ್ನಲು ಅನವಶ್ಯಕ ಪ್ರಚೋದನೆಯಾಗದು.

ಮಲಬದ್ಧತೆ ನಿವಾರಣೆಗೆ

ತೂಕದ ವಿಚಾರವನ್ನು ಹೊರತುಪಡಿಸಿದರೆ, ಮಲಬದ್ಧತೆಯ ಸಮಸ್ಯೆಯಿರುವ ಮಂದಿಗೂ ಇದು ಒಳ್ಳೆಯದು. ಜೀರ್ಣಕ್ರಿಯೆಗೆ ಇದು ಅತ್ಯಂತ ಒಳ್ಳೆಯದು. ಇದರಲ್ಲಿರುವ ನಾರಿನಂಶ, ಮಲಬದ್ಧತೆಯ ಸಮಸ್ಯೆಯನ್ನು ದೂರ ಓಡಿಸುತ್ತದೆ. ಇದನ್ನು ಸೇವಿಸಿದರೆ, ಬೆಳಗ್ಗೆ ಎದ್ದ ಕೂಡಲೇ ಖಂಡುತವಾಗಿಯೂ ಆರಾಮವಾಗಿ ಸುಖವಾಗಿ ಶೌಚ ಮುಗಿಸಿಕೊಳ್ಳುವಿರಿ. ಹೊಟ್ಟೆ ಹಗುರವಾಗಿ, ದೇಹ ಚುರುಕಾಗಿ ಇರಲು ಇದು ಅತ್ಯಂತ ಸೂಕ್ತವಾದ ಆಹಾರ. ಯಾವ ಔಷಧಿಗಳ ಸಹಾಯವೂ ಇಲ್ಲದೆ ಮಲಬದ್ಧತೆಯ ವಿರುದ್ಧ ಜಯ ಸಾಧಿಸಬಹುದು. ಈ ಕೆಂಪು ಹರಿವೆ ಸೊಪ್ಪಿನ ಇನ್ನೊಂದು ಪ್ರಮುಖ ಲಾಭವೆಂದರೆ ಇದು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಇದರಲ್ಲಿ ಪ್ರೊಟೀನ್‌ ಹಾಗೂ ವಿಟಮಿನ್‌ ಕೆ ಇರುವುದರಿಂದ, ಋತುಮಾನಕ್ಕೆ ಅನುಸಾರವಾಗಿ ಬರುವ ಆರೋಗ್ಯ ಸಮಸ್ಯೆಗಳನ್ನು ದೂರ ಓಡಿಸುತ್ತದೆ. ಅವುಗಳು ಬರದಂತೆ ದೇಹದಲ್ಲಿ ರೋಗ ನಿರೋಧಕ ಶಕ್ತಿಯ ಭದ್ರ ಕೋಟೆಯನ್ನು ಬೆಳೆಸುತ್ತದೆ.

ಇದನ್ನೂ ಓದಿ: Nutrients For The Human Body: ನಮ್ಮ ದೇಹವೆಂಬ ಕಾರ್ಯಾಲಯದಲ್ಲಿ ಕೆಲಸ ಮಾಡುವ 22 ಪೋಷಕಾಂಶಗಳ ಬಗ್ಗೆ ನಿಮಗೆ ಗೊತ್ತೇ?

ಎಲುಬಿನ ಸದೃಢತೆಗೆ

ಎಲುಬು ಗಟ್ಟಿಯಾಗಬೇಕು ಎಂದರೆ ನೀವು ಖಂಡಿತವಾಗಿಯೂ ಈ ಕೆಂಪು ಹರಿವೆ ಸೊಪ್ಪನ್ನು ಕಂಡಾಗಲೆಲ್ಲ ಖರೀದಿಸಿ ತಂದೇ ತರುವಿರಿ. ಸೊಪ್ಪನ್ನು ಶುಚಿಗೊಳಿಸಿ ಅಡುಗೆ ಮಾಡುವ ಕೆಲಸ ಸ್ವಲ್ಪ ತ್ರಾಸದಾಯಕವಾದರೂ, ಇದರ ಲಾಭ ಕೇಳಿದರೆ, ಅಂತಹ ತೊಂದರೆ ತೆಗೆದುಕೊಳ್ಳುವುದರಲ್ಲಿ ತಪ್ಪಿಲ್ಲ ಎಂದು ನಿಮೇ ಅನಿಸುತ್ತದೆ. ಕೆಂಪು ಹರಿವೆಯಲ್ಲಿ ಹೇರಳವಾಗಿ ಕ್ಯಾಲ್ಶಿಯಂ, ಕಬ್ಬಿಣಾಂಶ ಹಾಗೂ ಪ್ರೊಟೀನ್‌ ಇರುವುದರಿಂದ ಮೂಳೆ ಗಟ್ಟಿಯಾಗಲು, ರಕ್ತ ದೇಹದಲ್ಲಿ ತುಂಬಿಕೊಳ್ಳಲು ಬಹಳಷ್ಟು ಸಹಾಯ ಮಾಡುತ್ತದೆ. ಕೆಂಪು ಹರಿವೆ ಸೊಪ್ಪನ್ನು ಅಡುಗೆ ಮಾಡಲು ಕಷ್ಟವೇನಿಲ್ಲ. ನೀವು ಮಾಡುವ ದಾಲ್‌ನಲ್ಲಿ ಇದರ ಸೊಪ್ಪನ್ನು ಕತ್ತರಿಸಿ ಹಾಕಬಹುದು. ಅಥವಾ ಸೊಪ್ಪಿನ ಸಾರು ಮಾಡಬಹುದು. ಸೊಪ್ಪು ತುಂಬ ಇದ್ದರೆ ಅದನ್ನು ಪಲ್ಯ ಮಾಡಬಹುದು. ಚಪಾತಿ ಹಿಟ್ಟಿನ ಜೊತೆಗೆ ಕಲಸಿಕೊಂಡು ಸೊಪ್ಪಿನ ಪರಾಠಾ ಮಾಡಬಹುದು. ಅಥವಾ ಇನ್ನೂ ಹಲವಾರು ಆಯ್ಕೆಗಳಿವೆ. ಯಾವುದಾದರೊಂದು ಬಗೆಯ ಅಡುಗೆ ಮೂಲಕ ಆಗಾಗ ಇದನ್ನು ನಮ್ಮ ದೇಹ ಸೇರುವಂತೆ ನೋಡಿಕೊಳ್ಳಬಹುದು. ಹಾಗಾಗಿ, ಮಾರುಕಟ್ಟೆಯಲ್ಲಿ ಹರಿವೆ ಸೊಪ್ಪು ಕಂಡಾಗ ಬಿಟ್ಟು ಬರಬೇಡಿ.

Exit mobile version