ಮುಟ್ಟಿನ ದಿನಗಳಲ್ಲಿ ಬಹಳಷ್ಟು ಮಹಿಳೆಯರಿಗೆ ಆಸಿಡಿಟಿ, ಹೊಟ್ಟೆಯುಬ್ಬರ, ಎದೆಯುರಿ, ಡಯರಿಯಾದಂಥ ಸಮಸ್ಯೆಗಳು ಕಾಣುವುದು ಅಪರೂಪವಲ್ಲ. ಉಳಿದೆಲ್ಲಾ ದಿನಗಳಲ್ಲಿ ಸರಿಯಾಗಿರುವ ಹೊಟ್ಟೆ, ತಿಂಗಳಿನ ಆ ದಿನಗಳಲ್ಲೇ (Remedies for period problems) ಎಡವಟ್ಟಾಗಿ, ಈಗಾಗಲೇ ಇರುವ ತೊಂದರೆಗೆ ಮತ್ತಿಷ್ಟು ಸೇರಿಸಿದಂತಾಗುತ್ತದೆ. ಹೆಚ್ಚಿನ ಬಾರಿ ಹಾರ್ಮೋನುಗಳ, ಅದರಲ್ಲೂ ಪ್ರೊಜೆಸ್ಟಿರಾನ್ ಅಂಶ ದೇಹದಲ್ಲಿ ಹೆಚ್ಚುವುದರಿಂದ ಆಗುವುದಿದು. ಕೆಲವೊಮ್ಮೆ ಶರೀರದಲ್ಲಿ ಸೆರೊಟೋನಿನ್ ಪ್ರಮಾಣ ಹೆಚ್ಚುವುದರಿಂದ ಹೀಗಾಗಬಹುದು.
ಇದೇನು ಎಲ್ಲರಿಗೂ, ಎಲ್ಲಾ ಸಾರಿಯೂ ಹೀಗಾಗುತ್ತದೆಂದಲ್ಲ. ಆದರೆ ಒಂದಲ್ಲೊಂದು ಬಾರಿ ಇಂಥ ಸಮಸ್ಯೆಗಳು ಹೆಚ್ಚಿನ ಮಹಿಳೆಯರಿಗೆ ಕಂಡುಬರುವುದು ಸತ್ಯ ಮತ್ತು ಸಾಮಾನ್ಯ. ಅದರಲ್ಲೂ ಕೆಲಸದ ಒತ್ತಡದಿಂದ ಮನಸ್ಸು ಮತ್ತು ದೇಹದ ಬಳಲಿಕೆ ಹೆಚ್ಚಾಗಿದ್ದರೆ, ನಿದ್ದೆ ಸಾಕಾಗದಿದ್ದರೆ (health tips), ಆಹಾರ ಕ್ರಮವಾಗಿ ಇರದಿದ್ದರೆ, ಸೋಂಕಿಗೆ ತುತ್ತಾಗಿದ್ದರೆ, ಹಾರ್ಮೋನುಗಳ ಅಸಮತೋಲನ ಹೆಚ್ಚಾದರೆ ಇಂಥ ಸಮಸ್ಯೆಗಳು ಬರಬಹುದು. ಇವು ಬಾರದಂತೆ ತಡೆಯುವುದು ಸಾಧ್ಯವಿಲ್ಲವೇ?
ಆಹಾರ
ತಿನ್ನುವ ಆಹಾರದಲ್ಲಿ ಕೆಲವು ಬದಲಾವಣೆಗಳು ಅಗತ್ಯವಾಗಬಹುದು. ಭೂರಿ ಭೋಜನದ ಬದಲು, ಹಗುರವಾದ ಸೌಮ್ಯ ಆಹಾರದ ಸೇವನೆ ಅನುಕೂಲಕರ. ಇಡೀ ಧಾನ್ಯಗಳು, ಹಣ್ಣು-ತರಕಾರಿಗಳು ಮತ್ತು ಲೀನ್-ಪ್ರೊಟೀನ್ ಇದ್ದರೆ ಅನುಕೂಲ. ಹಣ್ಣುಗಳಲ್ಲಿ ಹುಳಿ ಹಣ್ಣುಗಳನ್ನು (ಸಿಟ್ರಸ್) ದೂರ ಇಡಿ. ಒಮ್ಮೆಲೇ ಹೊಟ್ಟೆ ತುಂಬಿಸಿಕೊಳ್ಳುವ ಬದಲು, ಸ್ವಲ್ಪವೇ ಆಹಾರವನ್ನು ಆಗಾಗ ತೆಗೆದುಕೊಳ್ಳುವುದು ನೆರವಾಗಬಹುದು. ಇದರಿಂದ ಜೀರ್ಣಾಂಗಗಳ ಮೇಲೆ ಒತ್ತಡ ಹೆಚ್ಚುವುದನ್ನು ತಪ್ಪಿಸಬಹುದು.
ತಕ್ಷಣ ಮಲಗಬೇಡಿ
ಸುಸ್ತು, ಆಯಾಸ ಹೆಚ್ಚಿದ್ದಾಗ ಯಾವಾಗ ದಿಂಬಿಗೆ ತಲೆ ಇಡುತ್ತೇವೆ ಎಂದು ಕಾಯುವಂತಾಗುವುದು ಸಹಜ. ಹಾಗೆಂದು ಆಹಾರ ಸೇವಿಸಿ ಕೂಡಲೇ ಹಾಸಿಗೆಯಲ್ಲಿ ಮೈಚಾಚಬೇಡಿ. ಊಟದ ನಂತರ ಹತ್ತಾರು ನಿಮಿಷಗಳ ಕಾಲ ನಡೆಯುವುದು ಒಳ್ಳೆಯದು. ಊಟಕ್ಕೂ ನಿದ್ದೆಗೂ ಎರಡು ತಾಸುಗಳ ಅಂತರ ಅಪೇಕ್ಷಣೀಯ. ಊಟ ಮಾಡುವಾಗ ಚೆನ್ನಾಗಿ ಅಗಿದು ತಿನ್ನುವುದು ಮತ್ತು ಊಟದ ನಡುವೆ ಅನಗತ್ಯವಾಗಿ ನೀರು ಕುಡಿಯದೆ ಇರುವುದು ಸಹ ಜೀರ್ಣಕ್ರಿಯೆಗೆ ಅನುಕೂಲಕರ. ಇದರರ್ಥ ನೀರು ಕುಡಿಯಬಾರದೆಂದಲ್ಲ.
ನೀರು ಬೇಕು
ಊಟದ ಅರ್ಧ ಗಂಟೆಯ ನಂತರ ನೀರು ಕುಡಿಯುವುದು ಸೂಕ್ತ. ಆದರೆ ಇಡೀ ದಿನದಲ್ಲಿ ಮೂರು ಲೀ. ನೀರು ದೇಹಕ್ಕೆ ಅಗತ್ಯ. ಇದರಿಂದ ಎದೆಯುರಿ, ಆಸಿಡಿಟಿಯನ್ನು ಕಡಿಮೆ ಮಾಡಬಹುದು. ಜೊತೆಗೆ ಈ ದಿನಗಳಲ್ಲಿ ನಿರ್ಜಲೀಕರಣಕ್ಕೆ ಒಳಗಾಗದಂತೆ ಕಾಪಾಡಿಕೊಳ್ಳುವುದು ಅತಿ ಮುಖ್ಯ.
ಒತ್ತಡ ನಿವಾರಿಸಿ
ಇದೂ ಮಹತ್ವದ್ದು. ಒತ್ತಡ ಹೆಚ್ಚುತ್ತಿದ್ದಂತೆ ದೇಹದಲ್ಲಿ ಸ್ಟ್ರೆಸ್ ಹಾರ್ಮೋನುಗಳ ಮಟ್ಟವೂ ಹೆಚ್ಚುತ್ತದೆ. ಜೀರ್ಣಾಂಗಗಳ ತೊಂದರೆ ಮತ್ತೂ ಹೆಚ್ಚಾಗುತ್ತದೆ. ಹಾಗಾಗಿ ಧ್ಯಾನ, ಪ್ರಾಣಾಯಾಮ, ಸಂಗೀತ ಕೇಳುವುದು, ಯೋಗ ಮುಂತಾದ ಯಾವುದೇ ಕ್ರಮದ ಮೂಲಕ ಮಾನಸಿಕ ಒತ್ತಡ ಕಡಿಮೆ ಮಾಡಿಕೊಳ್ಳಿ. ನಿದ್ದೆಗೆಟ್ಟರಂತೂ ಬಾಣಲೆಯಿಂದ ಬೆಂಕಿಗೇ ಬಿದ್ದ ಅನುಭವವಾಗುತ್ತದೆ. ಅದಕ್ಕಾಗಿ ಕಣ್ತುಂಬಾ ನಿದ್ದೆ ಮಾಡಿ.
ಇವು ಬೇಡ
ಅತಿಯಾದ ಖಾರದ, ಮಸಾಲೆಭರಿತ, ಹುಳಿ ಹೆಚ್ಚಿರುವ, ಕರಿದ ಮತ್ತು ಕೊಬ್ಬಿನ ತಿನಿಸುಗಳು ಇರುವ ಸಮಸ್ಯೆಯ ತೀವ್ರತೆಯನ್ನು ಹೆಚ್ಚಿಸುತ್ತವೆ. ಆಹಾರ ಸೌಮ್ಯವಾಗಿರಲಿ, ತಾಜಾ ಇರಲಿ. ಕೆಫೇನ್ ಮತ್ತು ಆಲ್ಕೋಹಾಲ್ ದೂರ ಮಾಡುವುದೇ ಒಳ್ಳೆಯದು. ಸಿಗರೇಟ್ ಜೊತೆಗೇ ಇದ್ದರೆ ಎದೆಯುರಿಯನ್ನು ಕಡಿಮೆ ಮಾಡುವುದು ಸಾಧ್ಯವಿಲ್ಲ. ಬಿಗಿಯಾದ ಉಡುಪುಗಳು ಸಹ ತೊಂದರೆಯನ್ನು ಹೆಚ್ಚಿಸುತ್ತವೆ. ಆರಾಮದಾಯಕವಾದ ಬಟ್ಟೆಗಳನ್ನು ಧರಿಸಿ.
ಜಾಗ್ರತೆ ಮಾಡಿ
ಇವೆಲ್ಲಾ ಕ್ರಮಗಳ ನಂತರವೂ ಆ ದಿನಗಳಲ್ಲಿ ತೊಂದರೆ ಹೆಚ್ಚುತ್ತಲೇ ಇದ್ದರೆ ಅಥವಾ ಸಮಸ್ಯೆಗಳು ಕಡಿಮೆಯಾಗದಿದ್ದರೆ ಸ್ತ್ರೀರೋಗ ತಜ್ಞರನ್ನು ಭೇಟಿ ಮಾಡುವುದು ಸೂಕ್ತ. ಔಷಧಿ ಅಂಗಡಿಗಳಲ್ಲಿ ದೊರೆಯುವುದನ್ನು ತಿಂದು ಸ್ವಯಂವೈದ್ಯ ಮಾಡಿಕೊಳ್ಳುವುದು ಸಲ್ಲದು. ಎಣಿಸಿದ್ದಕ್ಕಿಂತ ಹೆಚ್ಚಿನ ಅಥವಾ ಗಂಭೀರ ಸಮಸ್ಯೆಗಳು ಇದ್ದಲ್ಲಿ ಅದನ್ನು ವೈದ್ಯರೇ ಪರಿಹರಿಸಿಕೊಡಬೇಕಾಗುತ್ತದೆ.
FAQ
ಒತ್ತಡ ಹೆಚ್ಚಿದ್ದಾಗ ಮುಟ್ಟಿನ ದಿನಗಳಲ್ಲಿ ಆಸಿಡಿಟಿಯೂ ಹೆಚ್ಚಿದ ಅನುಭವ ಆಗುತ್ತದೆ, ಹೌದೇ?
ಹೀಗಾಗಲು ಸಾಧ್ಯವಿದೆ. ಅಧ್ಯಯನಗಳ ಪ್ರಕಾರ, ಮಾನಸಿಕ ಒತ್ತಡ ಹೆಚ್ಚಿದಾಗ ಪ್ರಿ-ಮೆನ್ಟ್ರಿವಲ್ ದಿನಗಳಲ್ಲೂ ಜೀರ್ಣಾಂಗಗಳ ತೊಂದರೆ ಕಾಡಬಹುದು. ಹಾಗಾಗಿ ಒತ್ತಡ ನಿವಾರಣೆ ಅಗತ್ಯ
ಆಹಾರ ಹೇಗಿದ್ದರೆ ಸೂಕ್ತ?
ಸೌಮ್ಯವಾದ ತಾಜಾ ಆಹಾರ ಸೂಕ್ತ. ಒಮ್ಮೆಲೇ ತಿನ್ನುವ ಬದಲು, ಸಣ್ಣ ಭಾಗಗಳನ್ನಾಗಿ ಮಾಡಿ ಆಗಾಗ ಸೇವಿಸಬಹುದು.
ಇದನ್ನೂ ಓದಿ: Different Types of Seeds with Health Benefits: ಆರೋಗ್ಯ ವೃದ್ಧಿಗೆ ಬೇಕಾದ ಪೌಷ್ಟಿಕ ಬೀಜಗಳಿವು